ಕಣ್ಣೆದುರೇ ಹೆಂಡತಿ ಪ್ರಾಣ ಹೋಯ್ತು: ಕೊಡಗಿನ ದುಬಾರೆ ಶಿಬಿರದ ಆನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆ ಸಾವು, ಕಣ್ಣೀರಿಟ್ಟ ಪತಿ

ಕೊಡಗು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕುಶಾಲನಗರದ ದುಬಾರೆ ಆನೆ ಶಿಬಿರದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಸಾರ್ವಜನಿಕವಾಗಿ ಆನೆಗಳಿಗೆ ಸ್ನಾನ ಮಾಡಿಸುವ ಪ್ರಕ್ರಿಯೆಯನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಆನೆಯೊಂದು ಮೈಮೇಲೆ ಬಿದ್ದ ಪರಿಣಾಮ ಚೆನ್ನೈ ಮೂಲದ ಮಹಿಳಾ ಪ್ರವಾಸಿಗರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ತಮಿಳುನಾಡಿನಿಂದ ತನ್ನ ಪತಿ ಮತ್ತು ಮಗುವಿನೊಂದಿಗೆ ಪ್ರವಾಸಕ್ಕೆ ಬಂದಿದ್ದ ಜಿನ್ಶು (ಜಿನ್ನು) ಎಂದು ಗುರುತಿಸಲಾಗಿದೆ. ಆನೆಗಳ ಕಾದಾಟದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನದಿ ತೀರದಲ್ಲಿ ಜಗಳ

ಪ್ರತ್ಯಕ್ಷದರ್ಶಿಗಳ ಪ್ರಕಾರ, ಸೋಮವಾರ ಕಾವೇರಿ ನದಿಯಲ್ಲಿ ನಡೆಯುವ ಆನೆಗಳ ಸ್ನಾನದ ಪ್ರಕ್ರಿಯೆಯನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಮಾಯಿಸಿದ್ದರು. ಈ ವೇಳೆ ಶಿಬಿರದ 'ಕಂಜನ್' ಮತ್ತು 'ಮಾರ್ತಾಂಡ' ಎಂಬ ಎರಡು ಆನೆಗಳ ನಡುವೆ ಹಠಾತ್ ಜಗಳ ಆರಂಭವಾಗಿದೆ. ನದಿಯಲ್ಲಿ ಎರಡು ಆನೆಗಳು ಪರಸ್ಪರ ಅತ್ಯಂತ ಆಕ್ರಮಣಕಾರಿಯಾಗಿ ತಳ್ಳಾಡಿಕೊಳ್ಳಲು ಆರಂಭಿಸಿದಾಗ ಪ್ರವಾಸಿಗರು ಮತ್ತು ಶಿಬಿರದ ಸಿಬ್ಬಂದಿಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಈ ಗೊಂದಲದ ನಡುವೆ, ಪರಸ್ಪರ ಡಿಕ್ಕಿ ಹೊಡೆದ ರಭಸಕ್ಕೆ ಒಂದು ಆನೆ ನಿಯಂತ್ರಣ ತಪ್ಪಿ ಹತ್ತಿರದಲ್ಲೇ ನಿಂತಿದ್ದ ಪ್ರವಾಸಿ ದಂಪತಿಯ ಮೇಲೆ ಬಿದ್ದಿದೆ.

Dubare Elephant Camp

'ಕಣ್ಣ ಮುಂದೆ ಹೆಂಡತಿ ಪ್ರಾಣ ಹೋಯ್ತು..'

ಆನೆಯ ಅಡಿಯಲ್ಲಿ ಸಿಲುಕಿದ ಜಿನ್ನು ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಾವುತರು ಅವರನ್ನು ರಕ್ಷಿಸಲು ತೀವ್ರ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಘಟನೆಯಲ್ಲಿ ಅವರ ಪತಿಗೂ ತೀವ್ರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಸಂದರ್ಭದಲ್ಲಿ ಪತಿ ಸಮಯಪ್ರಜ್ಞೆ ಮೆರೆದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಭೀಕರ ಘಟನೆಯನ್ನು ನೆನೆದು ಕಣ್ಣೀರಿಟ್ಟ ಮೃತರ ಪತಿ, "ನಾವು ತಮಿಳುನಾಡಿನಿಂದ ಕುಶಾಲನಗರಕ್ಕೆ ಕುಟುಂಬದೊಂದಿಗೆ ಪ್ರವಾಸ ಬಂದಿದ್ದೆವು. ಎಲ್ಲರಂತೆ ನಾವೂ ಆನೆಗಳನ್ನು ನೋಡಲು ಹೋಗಿದ್ದೆವು. ಹಠಾತ್ ಆಗಿ ಆನೆಗಳು ಕಾದಾಡಲು ಶುರುಮಾಡಿದವು, ಆ ಗೊಂದಲದಲ್ಲಿ ನನ್ನ ಕಣ್ಣೆದುರೇ ನನ್ನ ಪತ್ನಿ ಪ್ರಾಣ ಕಳೆದುಕೊಂಡಳು" ಎಂದು ಕಣ್ಣೀರಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರವಾಸಿಗರು ಮತ್ತು ಆನೆಗಳ ನಿಕಟ ಸಂಪರ್ಕದ ಇಂತಹ ಕಾರ್ಯಕ್ರಮಗಳ ಸಮಯದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಹಾಗೂ ಜನಸಂದಣಿ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ನಾಡಿದ್ದು ಬಸ್‌ ಸಂಚಾರ ಸಂಪೂರ್ಣ ಸ್ತಬ್ಧ ಸಾಧ್ಯತೆ: ಸಾರಿಗೆ ನಿಗಮ ನೌಕರರ ಮುಷ್ಕರದ ಬಗ್ಗೆ ನೀವು ತಿಳಿಯಬೇಕಾದ 10 ಪ್ರಮುಖಾಂಶಗಳು
ನಾಡಿದ್ದು ಬಸ್‌ ಸಂಚಾರ ಸಂಪೂರ್ಣ ಸ್ತಬ್ಧ ಸಾಧ್ಯತೆ: ಸಾರಿಗೆ ನಿಗಮ ನೌಕರರ ಮುಷ್ಕರದ ಬಗ್ಗೆ ನೀವು ತಿಳಿಯಬೇಕಾದ 10 ಪ್ರಮುಖಾಂಶಗಳು

ದುಬಾರೆ ಆನೆ ಶಿಬಿರವು ಕರ್ನಾಟಕದ ಅತ್ಯಂತ ಪ್ರಸಿದ್ಧ ಪರಿಸರ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ, ಶಿಬಿರದಲ್ಲಿ ತರಬೇತಿ ಪಡೆದ ಆನೆಗಳಾಗಿದ್ದರೂ ಸಹ, ಅವುಗಳೊಂದಿಗೆ ಪ್ರವಾಸಿಗರು ಇಷ್ಟೊಂದು ನಿಕಟವಾಗಿ ಒಡನಾಡುವಾಗ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಈ ಘಟನೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದಿನ ಪ್ರಕ್ರಿಯೆಗಳು ಜಾರಿಯಲ್ಲಿವೆ.

ಈಶ್ವರ್‌ ಖಂಡ್ರೆ ಹೇಳಿದ್ದೇನು?

ಘಟನೆಗೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಈ ಭರಿಸಲಾಗದ ನಷ್ಟವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ದುಬಾರೆ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಈ ಇಡೀ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸದಂತೆ ತಡೆಯಲು ತಕ್ಷಣವೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಶಿಬಿರಗಳಲ್ಲಿ ತರಬೇತಿ ಪಡೆದ ಆನೆಗಳಾಗಿದ್ದರೂ ಸಹ, ಪ್ರವಾಸಿಗರು ಅವುಗಳ ಅತ್ಯಂತ ನಿಕಟಕ್ಕೆ ಹೋಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಆನೆಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ, ದುಬಾರೆಯಂತಹ ಪರಿಸರ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಪ್ರವಾಸಿಗರ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಮರುಪರಿಶೀಲಿಸಿ, ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರಲು ಅರಣ್ಯ ಇಲಾಖೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+