ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಟಪರ್ತಿಯಲ್ಲಿ ನಾನು ಏನೇನ್ ಕಂಡೆ?

By * ಅಂಜಲಿ ರಾಮಣ್ಣ, ಬೆಂಗಳೂರು
|
Google Oneindia Kannada News

Bhagawan Sathya Sai Baba
ನನ್ನ "ಹುಡುಗಾಟದ ಹುಡುಗಿಯ ದಿನಗಳಲ್ಲಿ" ಪುಟ್ಟ್ಪರ್ತಿ ಸಾಯಿಬಾಬ ಹೇರ‍್ಸ್ಟೈಲ್‍ಗಾಗಿ ಎಲ್ಲರ ಬಾಯಲ್ಲೂ ಇದ್ದರು. ಶಿರಡಿ ಸಾಯಿಬಾಬಾ ಭಕ್ತರಿಗೆ ಇವರು ವರ್ಜ್ಯ. ಎಚ್‍ಎನ್ ಮತ್ತು ನನ್ನ ಪಪ್ಪನ ಲಾಜಿಕ್‍ಗಳಿಂದ ನಾನು ಕೂಡ ಅವರಿಂದ ದೂರ ಬಲು ದೂರ. ದೇವರು ಈಗಿನಂತೆ ನನ್ನೊಳಗೆ ನಿರಾಕಾರನಾಗುವ ಮೊದಲು ಒಂದು ಆಕಾರದಲ್ಲೆ ಪ್ರತಿಷ್ಠಾಪನೆಗೊಂಡಿದ್ದ, ಫೋಟೋಗಳ, ದೇವರಮನೆಯ, ದೇವಸ್ಥಾನದ ಮೂರ್ತಿಗಳ ನಕಲಾಗಿ! ಅವನು ಮನುಷ್ಯನಲ್ಲ. ಹಾಗಾಗಿ ಸಾಯಿಬಾಬಾರಂತವರನ್ನು ದೇವರು ಅನ್ನುವುದು ಅಪರಾಧ ಎನ್ನುವ ವಾತಾವರಣದಲ್ಲೇ ಬೆಳೆದೆ. ದೊಡ್ಡವಳಾದೆ. ಎಷ್ಟು ಅಂತ ಕೇಳಬೇಡಿ ಪ್ಲೀಸ್..:-)

ಒಂದೊಮ್ಮೆ ಅವರು ಬಾಯಿಂದ ಲಿಂಗ ಉಗುಳಿತ್ತಿದ್ದನ್ನು ಟಿವಿಯಲ್ಲಿ ಕಂಡು ವಾಕರಿಸಿಕೊಂಡಿದ್ದೆ. ಹುಟ್ಟಿದ ಹಬ್ಬದ ದಿನ ಅವರು ನಡೆದಾಡಿದ ಕೇಕ್ ತಿನ್ನುವ ಭಕ್ತರನ್ನು ಕಂಡು ಅಸಹ್ಯಿಸಿಕೊಂಡಿದ್ದೆ. ಸತ್ಯ ಹೇಳಬೇಕೆಂದರೆ ಅವರು ನನಗೆ ಎಂದೂ ಅಪಹಾಸ್ಯದ ವಸ್ತುವಾಗೇ ಕಂಡಿದ್ದರು. ಇಮೇಜ್ ಹಾಳಾಗಿಬಿಡುತ್ತೆ ಎನ್ನುವ ಕಾರಣವೂ ವಾತಾವರಣದಲ್ಲಿ ಇದ್ದುದ್ದರಿಂದ ನನ್ನ ಕುಟುಂಬದಿಂದಾದ ಈ ಸಮಾಜ ಅವರಿಂದ ನನ್ನನ್ನು ಮೈಲುಗಟ್ಟಲೆಗಳ ದೂರದಲ್ಲೇ ಇರಿಸಿತ್ತು. ಸಾಯಿಬಾಬ ಎಂದರೆ ದಿನಪತ್ರಿಕೆ, ಮ್ಯಾಗ್ಜೀನ್, ಟಿವಿ, ಚರ್ಚೆ, ಗಾಳಿಮಾತು, ಗುಟ್ಟಿನ ಭಯ ಇಷ್ಟೆ ಆಗಿದ್ದ ದಿನಗಳವು.

ಕಾಲಿಗೆ ಗೆಜ್ಜೆಯಂತೆ ಚಕ್ರಕಟ್ಟಿಕೊಂಡಿರುವ ಜನಕ್ಕೆ ಎಲ್ಲ ಜಾಗವೂ ಬೇಕು. ಟೈಂ ಪಾಸ್‍ಗಾಗಿ ಪುಟ್ಟ್ಪರ್ತಿಗೆ ಹೋದೆ. ಬೆಂಗಳೂರಿನಿಂದ ಹೋದಾಗ ಒಂದು ಪಾಯಿಂಟ್ನಲ್ಲಿ ಬಲಗಡೆಗೆ ಒಂದು ಕಮಾನು ಸಿಗುತ್ತೆ ಅದರೊಳಗಿನ ದಾರಿ ಸವೆಸಿದರೆ ಎದುರಾಗುತ್ತೆ ಪ್ರಶಾಂತಿ ಧಾಮ. ಅ ಕಮಾನಿನವರೆಗೂ ಆಂಧ್ರದ ಬಿಸಿಲು, ಬಿರುಸು,ಧಗೆ ಮತ್ತು ಕಂದು. ನೀರು ಎನ್ನುವ ಪದವೇ ನಿಘಂಟಿನಲ್ಲಿ ಇಲ್ಲವೇನೋ ಅನ್ನುವಷ್ಟು ಅನುಮಾನ. ಒಮ್ಮೆ ಬಲಕ್ಕೆ ತಿರುಗಿದರೆ ಏಕ್‍ದಂ ಎದುರಾಗುತ್ತೆ ಹಸಿರು, ಹಸಿರು ಎಲ್ಲೆಲ್ಲೂ ಹಸಿರು ಅಲ್ಲಿಂದಲೇ ಶುರು ಬಾಬಾ ಜಾದು!

ಸರಿ, ಊಟ ವಿಶ್ರಾಂತಿಗಳು ಮುಗಿದು ಆಶ್ರಮ ಭೇಟಿಯ ಸಮಯ. ನಾನು ಉಳಿದಿದ್ದ ಹೋಟೆಲ್‍ನ ಮಾಲೀಕನೊಡನೆ ಮಾತಿಗಿಳಿದೆ. ಬಾಬಾರ ಮೇಲಿದ್ದ ಭಕ್ತಿಯಿಂದ ಪವಾಡದವರೆಗೂ ಮಾತು ಹರಿಯಿತು. ಅವರ ಮೇಲಿದ್ದ ಅಪವಾದಗಳ ಎನ್ ಕ್ವೈರಿ ಮಾಡದೆ ಬಿಡುತ್ತೀನಾ ನಾನು ದುರುಳೆ? ಮಾತು ಮುಗಿಯಿತು. ಕೊನೆಯಲ್ಲಿ ಅವನು ಹೇಳಿದ "ಮೇಡಂ, ನಂಜತೆ ಮಾತ್ನಾಡಿದ ಹಾಗೆ ಇಲ್ಲಿ ಯಾರ ಬಳಿಯೂ ಮಾತಾಡ್ಬೇಡಿ. ಪ್ಲೀಸ್"........ಇದೊಂದೇ ಮಾತು ನನಗೆ ಬಾಬರ ಮೇಲಿದ್ದ ಅನುಮಾನ, ಕುತೂಹಲ, ಅಸಡ್ಡೆ, ಆಸಕ್ತಿ ಎಲ್ಲವನ್ನೂ ಹೆಚ್ಚಿಸಿಬಿಡ್ತು!

ಆಶ್ರಮಕ್ಕೆ ಕಾಲಿಡಲು ಏನೋ ಭಯ. ನನಗಂತೂ ಈ ಮಿಲೆನಿಯಂ‍ನ ದಿ ಬೆಸ್ಟ್ ಅವಿಷ್ಕಾರ ಚಪ್ಪಲಿ. ಗೇಟ್ನಲ್ಲೇ ಚಪ್ಪಲಿ ಬಿಚ್ಚಿ ಸಾಕಷ್ಟು ದೂರ ನಡೆಯಬೇಕೆಂದಾಗ ಮತ್ತಷ್ಟು ಕಿರಿಕಿರಿ. ಅನುಮಾನದಿಂದಲೇ ಸುತ್ತಾಟ ಪ್ರಾರಂಭಿಸಿದೆ. ಮೊಟ್ಟಮೊದಲ ಬಾರಿಗೆ ಸ್ವಚ್ಛತೆ ಎನ್ನುವ ಪದ ಅಲ್ಲಿ ಕಂಡಿದ್ದೆ! ನೆಲಮಾಳಿಗೆಯಲ್ಲಿ ಬಾಬಾರ ಬೆಡ್ರೂಂ ಅಂತ ಓದಿದ್ದೆ. ನೋಡಬೇಕು ಆಸೆ. ಭಯಭರಿತ ಕಳ್ಳತನದಲ್ಲಿ ಪ್ರಯತ್ನ ಪಟ್ಟೆ ಆದರೆ ಅಲ್ಲಿನ ಗೋಪ್ಯತೆ, ಸೆಕ್ಯೂರಿಟಿ ಊಹಾತೀತ. ಅಲ್ಲಿನ ಕಾವಲುಗಾರರಿಗೆ, ರಂಗೋಲಿಯೇನು, ಪಾತಾಳ ಲೋಕದ ನಾಗರಾಜನ ಸುರುಳಿಯಡಿಯಲ್ಲೂ ಛಕ್ ಅಂತ ಬಗ್ಗಿ ನೋಡುವ ಚತುರತೆ. ಕುತೂಹಲ ತಣಿಯಲಿಲ್ಲ.

ಇನ್ನೊಂದು ಗ್ರಹ : ನಂತರ ಸರ್ವಧರ್ಮ ಸಮನ್ವಯ ಸಾರುವ ಮ್ಯೂಸಿಯಂ ನೋಡಲು ಹೊರಟೆ. ಓಹ್, ಅದೊಂದು ಅತ್ಯಾಧುನಿಕವಾದ ಅದ್ಭುತ ಜಗತ್ತು. ರಾಮಾಯಣ, ಮಹಾಭಾರತ, ಬೈಬಲ್,ಕುರಾನ್, ಸಿಕ್ಖ್, ಪಾರ್ಸಿ, ಜೂಯಿಷ್, ಬುದ್ಧ, ಜೈನ ಎಲ್ಲರೂ ತಂತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೂ ಒಂದಾಗಿರುವ ತಾಂತ್ರಿಕ ಲೋಕ.ನನ್ನ ಗಮನವೆಲ್ಲಾ ಸ್ವಚ್ಛತೆಯ ಮೇಲೆ. ವಿದೇಶಿಯರೂ ದೇಶಿಯರೇ ಆಗಿರುವ ಏಕೈಕ ಗ್ರಹ ಪುಟ್ಟ್ಪರ್ತಿ ! ಅದನ್ನು ಜಗತ್ತು ಎನ್ಬೇಕೋ, ಲೋಕವೆಂದೆನ್ನಬೇಕೋ, ಸ್ಥಳ, ಜಾಗ,ಊರು ಇತ್ಯಾದಿ ಇತ್ಯಾದಿ ಅನ್ನಬಹುದೋ ಗೊತ್ತಿಲ್ಲ. ಅದು ಪುಟ್ಟ್ಪರ್ತಿ.

ಆಮೇಲೆ ನಾನು ನಡೆದದ್ದು ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಯ ಕಡೆಗೆ. ವಿನಾಕಾರಣ ಒಳಗ್ಬಿಡಲ್ಲ ಎನ್ನುವ ತಾಕೀತು. ನನಗೆ ಹಠ, ಕಾವಲುಗಾರನ ಬಳಿ ಹರಿದಿತ್ತು ನನ್ನ ಕಣ್ಣಿನ ಕೋಡಿ. ಉಹೂಂ, ಬಗ್ಗಲ್ಲ ಜಗಲ್ಲ. ವಾಪಸ್ಸು ಬಂದೆ. ದೂರ ನಿಂತೆ. ಬದಲಾಯ್ತು ಷಿಫ್ಟ್ ಮತ್ತು ನನ್ನ ನಸೀಬು. ಬರುವ ಮುರುಕು ಹರಕು ತೆಲುಗುವಿನಲ್ಲಿ ಸುಳ್ಳು ಖಾಯಿಲೆಗಳ ಸರಮಾಲೆ ಕಟ್ಟಿ ಆಗ ಬಂದಿದ್ದ ಕಾವಲುಗಾರನ ಮುಂದಿಟ್ಟೆ.. ಬರಿಗೈಯಲ್ಲಿ ಒಬ್ಬಳನ್ನೇ ಒಳಬಿಟ್ಟ. ನರಕಕ್ಕೆ ನನ್ನಲ್ಲಿ ಇದ್ದ ಸಮನಾರ್ಥಕ ಪದವೆಂದರೆ ಯಾವುದೇ ಆಸ್ಪತ್ರೆಯ ಸಾಮಾನ್ಯ ವಾರ್ಡ್. ಓಹ್, ದೇವರೇ! ಆದರೆ ಈ ಆಸ್ಪತ್ರೆಯಲ್ಲಿನ ಸ್ವಚ್ಛತೆ ಕನ್ನಡಿಗಿಂತಲೂ ಫಳ ಫಳ. ಮಾತಿಗೆ ಇರಲಿ ಕಲ್ಪನೆಗೂ ಸಿಗಲಾರದ್ದು. ಕಣ್ಣಳತೆಗೂ ಮೀರಿದ್ದು. ಅನುಭವವನ್ನೂ ದಾಟಿದ್ದು. "ಕೊಳಕಿಗೆ ಕಣ್ಣ್ಕತ್ತಲಿಟ್ಟಿತ್ತು" ಅಂದರೆ ಓದುಗರೂ, ಕೇಳುಗರು ಮೂಗು ಮುಚ್ಚಿಕೊಳ್ಳೋದು ಸಹಜ. ಆದರೆ ನಾನೀಗ ಅಲ್ಲಿನ ಸ್ವಚ್ಛತೆಗೆ ತಲೆ ಗಿರಗಿರನೆ ಸುತ್ತಿತ್ತು ಅಂದ್ರೆ ಊಹೆಗೆ ಏನು ನಿಲುಕುತ್ತೆ? ಆದಷ್ಟೇ ಅರ್ಥ! ಅಪ್ರತಿಭಳಾಗಿದ್ದೆ.

ಬೆಳಗ್ಗೆ ನಾಲ್ಕಕ್ಕೇ ಆಶ್ರಮಕ್ಕೆ ಹೋದರೆ ಬಾಬಾರ ದರ್ಶನವಾಗುತ್ತೆ ಅಂತ ಅಲ್ಲಿ ಯಾರೊ ಹೇಳಿದರು. ಸರಿರಾತ್ರಿವರೆವಿಗೂ ಬೀದಿ ಸುತ್ತಿ ಮೀನಖಂಡ ಮುನಿಸಿಕೊಂಡರೂ ನಿದ್ದೆಯ ಸುಳಿವಿಲ್ಲ. ನಾಲ್ಕಕ್ಕೆ ಎದ್ದೆ ಆದರೆ ಬಿಳಿಬಣ್ಣದ ಬಟ್ಟೆ ನನ್ನ ಬಳಿ ಇರಲಿಲ್ಲ. ಅಲ್ಲಿ ಬಾಬಾ ಭಕ್ತರೆಲ್ಲಾ ಬೆಳ್ಳಂಬಿಳಿ ಬಿಟ್ಟರೆ ಕೇಸರಿ ಬಟ್ಟೆನೇ ಹಾಕ್ಕೊಳ್ಳೋದು. ನನಗೆ ಹೇಗೂ ಅಪನಂಬಿಕೆ ಹಾಗಾಗಿ ಹಸಿರಾದರೂ ಏನಂತೆ ಅಂತ ಇದ್ದ ಒಂದು ಚೂಡಿದಾರ್ ಹಾಕಿಕೊಂಡು ಹೊರಟೆ. ಕೈಯಲ್ಲಿ ಕ್ಯಾಮೆರ ಹಿಡಿದ್ದಿದ್ದರೆ ಊರೆಲ್ಲಾ ಕ್ಷುದ್ರಗ್ರಹ ಜೀವಿಗಳನ್ನು ನೋಡುವಂತೆ ನೋಡುತ್ತಾರೆ ಮತ್ತು ಪ್ರಯೋಜನವೂ ಇಲ್ಲ. ಎಲ್ಲೂ ಫೋಟೋ ಕ್ಲಿಕ್ಕಿಸುವ ಹಾಗಿಲ್ಲ.

ಕೈಯಲ್ಲಿ ಒಂದು ಪರ್ಸ್, ನೀರಿನ ಬಾಟಲ್ ಹಿಡಿದು ಹೊರಟೆ. ಆಶ್ರಮದೊಳಗೊಂದು ಸಾಗರದಗಲದ ಭಜನಾ ಹಾಲ್. ಅದಾಗಲೇ ಅರ್ಧ ತುಂಬಿತ್ತು.. ಮತ್ತೆ ಅದೇ ಟೈಟ್ ಟೈಟ್ ಸೆಕ್ಯೂರಿಟಿ. ಹಾಕಿಕೊಂಡಿದ್ದ ಬಟ್ಟೆ ಸಮೇತವಾದ ಈ ಶರೀರವೊಂದನ್ನ ಬಿಟ್ಟು ಮತ್ತೇನನ್ನೂ ಒಳಬಿಡಲಿಲ್ಲ. ದುಡ್ಡು ಕಾಸು, ರೂಮಿನ ಕೀಲಿ ಕೈ ಎಲ್ಲದರ ಆಸೆ ಬಿಟ್ಟು ಆದದ್ದಾಗಲಿ ಅಂತ ಒಂಟಿ ದೇಹದೊಂದಿಗೆ ಒಳಗೆ ಹೋದೆ. ಸ್ವಯಂಸೇವಕರು ದಬ್ಬಿಕೊಂಡು ಹೋಗಿ ಕೂರಿಸಿದ ಕಡೆ ಕೂತೆ. ಬರೀ ನೆಲದ ಮೇಲೆ ಆಸನ. ಅಬ್ಬ, ಆ ಸ್ವಚ್ಛತೆಗೆ ವೈಕುಂಠದ ಕ್ಷೀರ ಸಾಗರದ ಮೇಲೆ ಕೂತಂತಹ ಭಾಸ.

ಲಕ್ಷಾಂತರ ಜನ. ಸ್ತರದಲ್ಲಿ ವೈವಿಧ್ಯತೆ. ನಡುವಳಿಕೆಗಳಲ್ಲಿ ವಿವಿಧತೆ ಆದರೆ ಸ್ವಚ್ಛತೆಯಲ್ಲಿ ಮಾತ್ರ ಏಕತೆ! ಕ್ಲೆಂಡ್ಲೀನೆಸ್ಸ್ ಕೂಡ ಒಂದು ಮಾಯೆಯಂತೆ ಅನ್ನಿಸಿತ್ತು. ಎದುರುಗಡೆ ಸಾಯಿಬಾಬಾರಿಗಾಗಿ ತಯಾರಾದ ವೇದಿಕೆ ಅದರ ಪಕ್ಕದಲ್ಲೊಂದು ಶ್ವೇತ ವಸ್ತ್ರ ಧರಿಸಿ ಭಜನೆ ಮಾಡುವ ಭಕ್ತ ವೃಂದ. ಹೆಂಗಸರು, ಮಕ್ಕಳು, ಗಂಡಸರು, ಮುದುಕರು, ಯುವಕರು, ಹಸುಗೂಸುಗಳು, ಮಲೆಯಾಳಿಗಳು, ಗುಜರಾತಿಗಳು,ಫ್ರೆಂಚರು, ಚೀನಿಯರು ಹೀಗೆ ಜನ ಜನ ಜನ. ತೆಲುಗು, ಹಿಂದಿ, ಸಂಸ್ಕೃತ ಭಾಷೆಗಳ ಭಜನೆಗಳು ತಾರಕ್ಕಕ್ಕೇರುತ್ತಿತ್ತು. ನನಗೆ ಅವರುಗಳು ಹಾಡುತ್ತಿದ್ದ ಒಂದು ಹಾಡೂ ಬಾರದು. ರಾಗವಂತೂ ನಾನು ಕೇಳಿಯೇ ಇಲ್ಲ ಹಾಗಾಗಿ ಅಪಶೃತಿಯೆನ್ನಿಸುತ್ತಿತ್ತು. ಕಮಂಗಿಯ ಹಾಗೆ ಅಲ್ಲಿ ಇಲ್ಲಿ ನೋಡುತ್ತಿದ್ದೆ. ಸ್ವಯಂಸೇವಕರು ನೀರು ಬೇಕೆಂದವರಿಗೆ ಕೊಡುತ್ತಿದ್ದರು. ಒಂದು ಹನಿ ಕೆಳಗೆ ಬೀಳಿಸುತ್ತಿದ್ದರೆ ನನ್ನಾಣೆ ನೋಡಿ!

ಅದೇನು ಅಚ್ಚುಕಟ್ಟುತನವಪ್ಪ ಪರಮಾತ್ಮ. ಊರೂರಿಂದ ಬಂದಿದ್ದ ಭಜನಾ ಮಂಡಳಿಗಳು ಒಬ್ಬರಾದ ಮೇಲೆ ಒಬ್ಬರು ಸರದಿಯಲ್ಲಿ ಗುಂಪಿನಲ್ಲಿ ಹಾಡುತ್ತಿದ್ದರು. ಹೀಗೆ ಅದೇಷ್ಟೋ ಹೊತ್ತು ನೆರೆದಿದ್ದವರೆಲ್ಲಾ ಭಕ್ತಿಪರವಶವಾದದ್ದು ನನಗೆ ಮಾತ್ರ ಮನೋರಂಜನೆಯಾಗಿತ್ತು. ಇದ್ದಕ್ಕಿದ್ದಂತೆ ಏಕತಾನತೆಯೊಳಗಿಂದ ಮಿಸುಕಾಟ. ಇನ್ನೇನು ಬಾಬಾ ಬರುತ್ತಾರೆ ಭಕ್ತ ಸಮೂಹದ ಮಧ್ಯದಿಂದ ನಡೆದು ಹೋಗುತ್ತಾರೆ. ಸಾವಿರಾರು ಜನರಲ್ಲಿ ಯಾರನ್ನು ಬೇಕಾದರೂ ಬೆಟ್ಟು ಮಾಡಿ ಕರೆಯುತ್ತಾರೆ. ಮುಟ್ಟಿ ಆಶೀರ್ವಾದ ನೀಡುತ್ತಾರೆ. ಎನ್ನುವ ವಿಷಯ ಆ ಸಂಚಲನಕ್ಕೆ ಕಾರಣ. ನನ್ನನ್ನು ಕರೆದರೆ ಮಾತ್ರ ಅವರು ದೇವರೇ ಸರಿ ಅಂತ ಮನದಲ್ಲಿ ನಿರ್ಧರಿಸಿದ್ದೆ.

ಬಂದರು ಸಾಯಿಬಾಬಾ : ಕೆಳಗೆ ಕಮಲದಂತೆ ಅರಳಿಕೊಂಡಿದ್ದ ಕೇಸರಿ ಬಣ್ಣದ ಗೌನ್ ಧರಿಸಿದ್ದಾರೆ. ಗಜಗಾಂಭೀರ್ಯದ ನಡಿಗೆ, ಮುಖದಲ್ಲಿ ಮಂದಹಾಸ ಹೊತ್ತು ಭಕ್ತರೆಡೆಗೆ ಕೈಯಾಡಿಸುತ್ತಾ ಇದ್ದರು. ಎಲ್ಲರೂ ಹೋ ಎನ್ನುತ್ತಿದ್ದದ್ದು ಎಷ್ಟು ಸುಶ್ರಾವ್ಯವಾಗಿಹೋಯ್ತು ಇದ್ದಕ್ಕಿದ್ದಂತೆ.. ಓಹ್, ನನಗೇನಾಯ್ತು? ಅರಿವಿಲ್ಲದಂತೆ ಹಸ್ತಗಳು ಅಂತರವಿಲ್ಲದೆ ಹತ್ತಿರವಾದವು. ನನ್ನ ತುಟಿಗಳಿಗೆ ನಗು ಯಾವಾಗ ಮೆತ್ತಿಕೊಂಡಿತು ಗೊತ್ತಾಗಲಿಲ್ಲ. ಅಲ್ಲಿಯವರೆಗೂ ಪಕ್ಕದ ಹೆಂಗಸಿನ ಬೆವರು ಚರ್ಮ ತಗುಲಿದ್ದಕ್ಕೆ ನನ್ನಲ್ಲಿ ಆಗಿದ್ದ ಹಿಂಸೆ ಎಲ್ಲಿ ಹೋಯ್ತು? ಆ ಘಳಿಗೆಯಲ್ಲಿ ಅಲ್ಲಿರುವ ಸಾವಿರಗಟ್ಟಲೆ ಜನರಲ್ಲಿ ಒಬ್ಬರೂ ಕಾಣುತ್ತಿಲ್ಲ. ಸಾಯಿಬಾಬಾ ನಡೆಯುತ್ತಿದ್ದಾರೆ ನಗುತ್ತಿದ್ದಾರೆ ಆಶೀರ್ವಾದ ಮಾಡುತ್ತಿದ್ದಾರೆ ಅಷ್ಟೇ ಕಾಣುತ್ತಿದೆ. ಹೊರಡುತ್ತಿದ್ದ ಶಬ್ದ ಕರ್ಕಶವಾಗಿರಲಿಲ್ಲ. ಶೃತಿಬದ್ಧವಾದ ಮೌನರಾಗ ಅನ್ನಿಸುತ್ತಿತ್ತು. ಪರಮಾನಂದದ ಸ್ಥಿತಿ ಅಂದರೆ ಇದೇ ಏನು? ಒಂದಷ್ಟು ನಿಮಿಷಗಳ ನಡಿಗೆಯ ನಂತರ ೧ ಗಂಟೆಯ ಕಾಲ ಸಿಂಹಾಸನದಲ್ಲಿ ಕುಳಿತು ಭಜನೆ ಕೇಳಿದರು ಮತ್ತೆ ಹಿಂತರುಗಿ ಹೊರಟರು. ಮುಗಿಯಿತು. ರೂಮಿಗೆ ಬಂದೆ. ಈಗ ನನ್ನಲ್ಲಿ ಅವರ ಬಗ್ಗೆ ಯಾವುದೇ ಅನುಮಾನವಿಲ್ಲ. ಅಸಡ್ಡೆಯಂತೂ ಖಂಡಿತಾ ಇಲ್ಲ. ಅಪಹಾಸ್ಯ ಒಂದೊಮ್ಮೆ ಮಾಡಿದ್ದಕ್ಕೆ ಮನದಲ್ಲೇ ಕ್ಷಮೆ ಯಾಚಿಸಿದೆ.

ಒಂದಷ್ಟೇ ಗಂಟೆಗಳ ಹಿಂದಿದ್ದ ನಾನು ಎಲ್ಲಿ ಹೋದೆ?! ನಾನು ಯಾವ ಪ್ರವಚನವನ್ನೂ ಕೇಳಲಿಲ್ಲ, ಭಜನೆ ರುಚಿಸಲಿಲ್ಲ. ಯಾವುದೇ ಪರ್ಯಾಯ ಥೆರಪಿ ತೆಗೆದುಕೊಂಡಿಲ್ಲ. ಸಾಯಿಬಾಬಾ ನನ್ನ ಕಡೆ ನೋಡಲೂ ಇಲ್ಲ. ಆದರೆ ನಾನು ನಿರ್ಮಲವಾದೆ. ಅವರು ನನ್ನನ್ನು ನೋಡದಿದ್ದರೇನಂತೆ ನನ್ನ ಕಣ್ಣು ತೆರೆದಿತ್ತಲ್ಲ! ಹಾಗಂತ ನನಗೆ ಅವರು ದೇವರಾಗಿ ಕಾಣಲಿಲ್ಲ. ಬೇಸಿಕ್ ಇನ್ಸ್ಟಿಂಕ್ಟ್ಸ್ ಮೀರಿದ ಅತಿಮಾನವನಾಗಿಯೂ ಅಲ್ಲ. ನಗೆಪಾಟಲಾಗುವ ಪವಾಡಪುರುಷನಾಗಿಯೂ ಅಲ್ಲ. ನನಗೆ ಬರಬಾರದ್ದು ಬಂದು ಅದನ್ನು ಪರಿಹಾರ ಮಾಡಿದವರಾಗಿಯೂ ಅಲ್ಲ. "ಏನೋ ಇಲ್ಲದೆ ಏನೂ ಆಗಲಾರದು " ಎನ್ನುವ ಒಂದು ಸತ್ಯವಾಗಿ ಮಾತ್ರ ಕಂಡಿದ್ದರು ಸಾಯಿಬಾಬಾ ನನಗೆ. ಆ ಘಳಿಗೆಯಲ್ಲಿ "Metaphysics" ನ ಮೂರ್ತರೂಪವಾಗಿ ಕಂಡರು ಬಾಬಾ. ಈಗಲೂ ನಾನು ಅವರ ಅನುಯಾಯಿಯಲ್ಲ. ನನ್ನ ಕಲ್ಪನೆಯ ದೇವರು ಅವರಲ್ಲ. ಆದರೆ ಮೀರಿ ಬೆಳೆಯಲು ಆಗುತ್ತಿಲ್ಲ.

ಆಶ್ರಮದೊಳಗೆ ಪುಸ್ತಕ ಮಳಿಗೆಯಿದೆ. ಭಕ್ತವೃಂದದಷ್ಟೇ ಸಂಖ್ಯೆಯ ಪುಸ್ತಕಗಳಿವೆ. ನಾನು ತೆಗೆದುಕೊಂಡಿದ್ದು ಮಾತ್ರ ಅವರ ಅನುಯಾಯಿಯೊಬ್ಬರು ಬರೆದಿರುವ "Life is the best Teacher" ಎನ್ನುವ ಪುಸ್ತಕ. ಓದಿ ಓದಿ ಓದಿದೆ. ಆ ಪುಸ್ತಕದಲ್ಲಿ ಯಾವುದೇ ಪವಾಡಗಳ ವರ್ಣನೆಯಿಲ್ಲ. ಇರುವುದೆಲ್ಲಾ ಬಾಬಾ ಮತ್ತು ಭಕ್ತರ ನಡುವಿನ ಮಾತು ಅದೂ ತೀರಾ ಸರಳ ಭಾಷೆಯಲ್ಲಿ. ಒಂದು ಮಾನವ ಮೆದುಳಿನಲ್ಲಿ ಇಷ್ಟೆಲ್ಲಾ ಆಲೋಚನೆಗಳು ಇರಲು ಸಾಧ್ಯವೆ? ಅದಕ್ಕಿರುವ ಶಕ್ತಿಗೆ ಇಷ್ಟೆಲ್ಲಾ ಯೋಜನೆಗಳನ್ನು ಹಾಕಿಕೊಳ್ಳುವುದು ಸಾಧ್ಯವೇ? ಒಬ್ಬ ಮನುಷ್ಯನಿಗೆ ಅಷ್ಟೂ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವೇ? ಹೀಗೆ ಏನೇ ಪ್ರಶ್ನೆ ಉದ್ಭವಿಸಿದರೂ ಹೌದು ಎನ್ನುವ ಉತ್ತರವಾಗಿ ನಿಲ್ಲುತ್ತಾರೆ ಸಾಯಿಬಾಬಾ. ವಿಶ್ವದ ಅತೀ ಇನ್ಫ್ಲುಯೆನ್ಷಿಯಲ್ ವ್ಯಕ್ತಿಗಳು, ಗಣ್ಯರು, ವಿಜ್ಞಾನಿಗಳು, ವೈದ್ಯರು, ಅವರು, ಇವರು ಎಲ್ಲರಿಗೂ "ಸಾಯಿಬಾಬಾ" ಒಂದು ಗುರುತ್ತ್ವಾಕರ್ಷಣೆ. ಅಬ್ಬ, ಇದೆಂತಹ ತರ್ಕಕ್ಕೆ ನಿಲುಕದ ತತ್ತ್ವ?!

ಮತ್ತೊಮ್ಮೆ ಪುಟ್ಟ್ಪರ್ತಿಗೆ ಹೋದೆ: ಸಾಯಿಬಾಬಾ ಈಗ ನಡೆದು ಬರುತ್ತಿರಲಿಲ್ಲ. ಸಿಂಹಾಸನಕ್ಕೆ ಗಾಲಿ ಅಳವಡಿಸಿ ಬ್ಯಾಟರಿ ಸಿಕ್ಕಿಸಿತ್ತು. ಅದರಲ್ಲಿ ಕೂತು ಬರುತ್ತಿದ್ದರು ಅವರು. ಚರ್ಮ ಸುಕ್ಕುಗಟ್ಟಿತ್ತು. ಬಾಯಿಯ ಒಸರಿಗೆ ಕರವಸ್ತ್ರ ಇರಲೇಬೇಕಿತ್ತು ಅವರ ಬಳಿ. ಎಂದೂ ಸಂಸ್ಕೃತ ಮಾತಾಡಿಲ್ಲವಂತೆ ಬಾಬಾ. ಆದರೆ "ಶರೀರ ಮಾಧ್ಯಂ ಕಲು ಧರ್ಮ ಸಾಧನಂ" ಉಕ್ತಿಯ ಜೀವಂತ ಉದಾಹರಣೆಯಾಗಿದ್ದರು. ಮತ್ತೇನೂ ಏನೂ ಬದಲಾಗಿರಲಿಲ್ಲ ಪುಟ್ಟ್ಪರ್ತಿಯಲ್ಲಿ.

ದೇವಸ್ಥಾನದ ಪ್ರದಕ್ಷಿಣೆ ಮಾಡಿ, ಹೂವು ಹಾಕಿ, ಗಂಧದ ಕಡ್ಡಿ ತೋರಿ, ಮಂತ್ರಾಕ್ಷತೆಯನ್ನು ಇರಿಸದ ನಾನು "ಸಾಮಾಜಿಕ ಪಾಪಿ". ಆದರೆ ನಾನು ನಾಸ್ತಿಕಳಲ್ಲ. ದೇವರು ನನ್ನೊಳಗೇ ಇದ್ದಾನೆ ಎನ್ನುವ ಉದ್ಧಟೆಯೂ ಹೌದು. ಸ್ವಚ್ಛತೆಯಲ್ಲಿ ದೇವರಿದ್ದಾನೆ. ಸೇವೆಯಲ್ಲಿ ದೇವರಿದ್ದಾನೆ ಎನ್ನುವ ನನ್ನ ನಂಬಿಕೆಯನ್ನೇ ವಿಶ್ವರೂಪ ಗಾತ್ರದಲ್ಲಿ ತೋರಿಸಿಕೊಟ್ಟ ಸಾಯಿಬಾಬಾ ನನಗೊಬ್ಬ ಶೇಷ್ಠ ಮಾನವನಾಗಿ ತೋರುತ್ತಾರೆ.

ಹೀಗೆಲ್ಲಾ ಅನ್ನಿಸುತ್ತಿರುವುದನ್ನು ಬರೆಯುತ್ತಿರುವಾಗ ನನಗೆ ನೆನಪಾಗಿದ್ದು ಕಾಲೇಜಿನ ಒಂದು ಪ್ರೇಮ ಪ್ರಸಂಗ. ನನ್ನ ಖಾಸ ಗೆಳತಿಯಾಗಿದ್ದ ಅವಳು ಕಾಗೆಗಿಂತ ಸ್ವಲ್ಪ ಕಪ್ಪು. ಹಂಚಿಕಡ್ಡಿಗಿಂತ ತುಸು ಸಣ್ಣ. ನಾಲ್ಕುವರಡಿ ಎತ್ತರ. ಕೊಂಚವೇ ಮೆಳ್ಳಗಣ್ಣು. ಅವಳ ಬಾಯ್‍ಫ್ರೆಂಡ್ ಹೇಗಿದ್ದ ಗೊತ್ತಾ? ಕೊಡಗಿನ ಸೌಂದರ್ಯವೆಲ್ಲಾ ಮೂರ್ತಿವೆತ್ತಂತೆ! ನಾನು ಅಮ್ಮನೊಡನೆ ಚರ್ಚಿಸುತ್ತಿದ್ದೆ ಇದು ಹೇಗೆ ಸಾಧ್ಯ ಅಂತ. ಅದಕ್ಕೆ ಅಮ್ಮ ಯಾವಾಗಲೂ ಹೇಳ್ತಿದ್ದಳು "ಕಣ್ಣಿಗೆ ಮೀರಿದ್ದು ತರ್ಕ. ತರ್ಕಕ್ಕೆ ಮೀರಿದ್ದು, ನಾಮಕರಣಗೊಳ್ಳದ್ದು ಕೆಲವಿವೆ. ಇದು ಅವುಗಳಲ್ಲೊಂದು". ಹಾಗೆಯೇ ಇರಬಹುದಾದ್ದದ್ದೇನು ಈ ಸಾಯಿಬಾಬಾ, ಅನುಕಂಪ ಮತ್ತು ಬೇಷರತ್ ಪ್ರೀತಿ! ಎಲ್ಲವೂ ಈಗ ಘಾಸಿಗೊಂಡಿವೆ. ಗುಣಮುಖವಾಗಲಿ. ಚೇತರಿಸಿಕೊಳ್ಳಲಿ.. ನನ್ನ ಆಸೆ ಮತ್ತು ಹಾರೈಕೆ.

English summary
Pilgrimage, travelogue to Puttaparthi (AP) the abode of Bhagavan Sathya Sai Baba by Anjali Ramanna in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X