ಬೆಂಗಳೂರುಒನ್‌ನಿಂದ ಖಾಸಗಿ ಬಸ್ ಟಿಕೆಟಿಂಗ್ ಸೇವೆ ಆರಂಭ
ಬೆಂಗಳೂರು, ಫೆ.04 : ಸರ್ಕಾರಿ ಬಸ್ ಟಿಕೆಟ್ ಸಿಗದೇ ಖಾಸಗಿ ಬಸ್ ಸೀಟು ಕಾಯ್ದಿರಿಸಲು ಒಂದು ಏಜೆನ್ಸಿಯಿಂದ ಇನ್ನೊಂದು ಏಜೆನ್ಸಿಗೆ ಎಡತಾಕುವ ಕರ್ನಾಟಕ ನಾಗರಿಕರು ಇನ್ನು ನಿರುಮ್ಮಳವಾಗಿ ಪ್ರಯಾಣವನ್ನು ಬೆಳೆಸಬಹುದು.
ಬೆಂಗಳೂರುಒನ್ ಸಂಸ್ಥೆ ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಸೇವೆ ನೀಡುತ್ತಿರುವ ಬೆಂಗಳೂರು ಮೂಲದ www.redbus.in ಜೊತೆ ಖಾಸಗಿ ಬಸ್ ಟಿಕೆಟ್ ಸೇವೆ ಒದಗಿಸಲು ಒಡಂಬಡಿಕೆ ಮಾಡಿಕೊಂಡಿದೆ.
ರಾಜ್ಯಾಂದ್ಯಂತ ತೆರೆಯಲಾಗುತ್ತಿರುವ ಬೆಂಗಳೂರುಒನ್‌ನ 21 ಕೇಂದ್ರಗಳಲ್ಲಿ 700ಕ್ಕೂ ಹೆಚ್ಚಿನ ದಾರಿಗಳಲ್ಲಿ ಸಂಚರಿಸಲು ಟಿಕೆಟ್ ಕಾಯ್ದಿರಿಸಲು ಈ ಒಪ್ಪಂದ ಅನುವು ಮಾಡಿಕೊಡಲಿದೆ. ಬೆಂಗಳೂರುಒನ್‌ನ ಎಕ್ಸಿಕ್ಯೂಟೀವ್‌ಗಳು ವರ್ಷದ 365 ದಿನಗಳ ಕಾಲ ಹಗಲು ರಾತ್ರಿ ನಿರಂತರವಾಗಿ ಪ್ರಯಾಣಿಗರಿಗೆ ನೆರವಾಗಲಿದ್ದಾರೆ.
ತಾವಿರುವ ತಾಣ, ಹೋಗಬೇಕಾದ ಸ್ಥಳ ಮತ್ತು ದಿನಾಂಕದ ಮಾಹಿತಿ ನೀಡಿದರೆ ಸಾಕು ಟಿಕೆಟು ನಿಮ್ಮ ಜೇಬಲ್ಲಿ ಬಂದು ಬಿದ್ದಿರುತ್ತದೆ. ಶುಲ್ಕವನ್ನು ನಗದು ಮುಖಾಂತರ ಅಥವಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮುಖಾಂತರವೂ ಪಾವತಿಸಬಹುದಾಗಿದೆ. ಆದರೆ ಕಾರ್ಡ್‌ಗಳಿಗೆ ತೆರಿಗೆ ತೆತ್ತಬೇಕಾಗುತ್ತದೆ. ಟಿಕೆಟ್ ಕಾಯ್ದಿರಿಸಲು ಯಾವುದೇ ಚಾರ್ಜ್ ನೀಡುವ ಅಗತ್ಯವೂ ಇಲ್ಲ.
ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಪುಣೆ ಮತ್ತು ದೆಹಲಿಯಲ್ಲಿರುವ ರೆಡ್‌ಬಸ್ ಸಂಸ್ಥೆಯ ಕಾಲ್‌ಸೆಂಟರ್‌ನಲ್ಲಿಯೂ ಈ ಸೇವೆಯನ್ನು ಪಡೆಯಬಹುದಾಗಿದೆ.
ವಿಆರ್ಎಲ್, ಕಾಮತ್, ನ್ಯಾಶನಲ್, ಸುಗಮ, ಗೋಲ್ಡನ್, ಶರ್ಮಾ, ಕೆಜಿಎನ್, ಎಸ್ಎಸ್ ಟ್ರಾವೆಲ್ಸ್ ಮುಂತಾದ ಅನೇಕ ಖಾಸಗಿ ಬಸ್ ಏಜೆನ್ಸಿಯಲ್ಲಿ ಈ ಸೇವೆ ಪಡೆಯುವ ಮುಖಾಂತರ ಟಿಕೆಟ್ ಕಾಯ್ದಿರಿಸಬಹುದು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications