ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾಜ ಪಾಟೀಲ ಯಾಕೆ ರಾಜೀನಾಮೆ ನೀಡಬೇಕು?

By * ಮೋಹನ್ ವಂಜೇರಿ, ಬೆಳಗಾವಿ
|
Google Oneindia Kannada News

Justice Shivaraj Patil
ಲೋಕಾಯುಕ್ತ ಎಂಬ ಬಲಿಷ್ಠ ಸಂಸ್ಥೆಯ ತನಿಖೆಗಳಿಂದಾಗಿ ಕರ್ನಾಟಕದಲ್ಲಿ ಅನೇಕ ರಾಜಕಾರಣಿಗಳ ಹಗರಣಗಳು ಬಯಲಿಗೆ ಬಿದ್ದಿವೆ. ಒಬ್ಬೊಬ್ಬರಾಗಿ ಸರತಿಯಂತೆ ಜೈಲಿನೆಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಕಟ್ಟಾ ಅಂಥವರು ಈಗಾಗಲೆ ಜೈಲಿನ ರುಚಿ ಕಂಡಿದ್ದರೆ, ಮಾಜಿ ಮುಖ್ಯಮಂತ್ರಿಗಳಿಬ್ಬರು ಜೈಲು ತಪ್ಪಿಸಿಕೊಳ್ಳಲು ನಾನಾ ಕಾರಣಗಳನ್ನು ಹುಡುಕುತ್ತಿದ್ದಾರೆ. ಹೀಗಾಗಿ, ಹೆಚ್ಚಿನ ಅಧಿಕಾರವಿಲ್ಲದಿದ್ದರೂ ಭ್ರಷ್ಟರನ್ನು ಮಟ್ಟಹಾಕುವಲ್ಲಿ ಲೋಕಾಯುಕ್ತ ಇನ್ನೂ ಶಕ್ತಿಶಾಲಿ ಎಂದು ತೋರಿಸಿದೆ.

ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯಂಥ ಪ್ರಾಮಾಣಿಕರು ಆ ಸ್ಥಾನವನ್ನು ಅಲಂಕರಿಸಿದ್ದರಿಂದಲೇ ಭ್ರಷ್ಟ ರಾಜಕಾರಣಿಗಳ, ಅಧಿಕಾರಿಗಳ ಬುಡ ಗಡಗಡ ನಡುಗುವಂತಾಗಿರುವುದು. ಈಗ ಅದೇ ಸ್ಥಾನಕ್ಕೆ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರು ಆಸೀನರಾಗಿದ್ದಾರೆ. ಭ್ರಷ್ಟರ ವಿರುದ್ಧ ಸಂತೋಷ್ ಹೆಗ್ಡೆ ಆರಂಭಿಸಿರುವ ಯುದ್ಧವನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯ ಈಗಿನ ಲೋಕಪಾಲರಲ್ಲಿದೆ. ಪಾಟೀಲರು ತಮ್ಮ ಸ್ಥಾನಕ್ಕೆ ನ್ಯಾಯ ಸಲ್ಲಿಸುತ್ತಾರೆಂಬ ನಂಬಿಕೆಯೂ ಇದೆ.

ಅವರು ಸಲ್ಲಿಸಿದ 2ಜಿ ತರಂಗಗುಚ್ಛ ಹಗರಣದ ವರದಿಯಿಂದಾಗಿ ಎ ರಾಜಾರಂಥ ಹಗಲು ದರೋಡೆಕೋರರು ಇಂದು ತಿಹಾರ್ ಜೈಲಿನಲ್ಲಿ ರಾಗಿ ಬೀಸುತ್ತಿದ್ದಾರೆ. ಪಾಟೀಲರ ದಕ್ಷತೆಯ ಬಗ್ಗೆ ಎರಡು ಮಾತೇ ಇಲ್ಲ. ಆ ಕಾರಣದಿಂದಾಗಿಯೇ ರಾಯಚೂರಿನ ಮಣ್ಣಿನ ಮಗ ಶಿವರಾಜ ಪಾಟೀಲರು ಲೋಕಾಯುಕ್ತರಾಗಿ ನೇಮಕವಾಗಿರುವುದು ಹಲ ರಾಜಕಾರಣಿಗಳಿಗೆ ನಡುಕ ತಂದಿರುವುದು ಸಹಜವೆ.

ಇಂಥ ನ್ಯಾ. ಶಿವರಾಜ ಪಾಟೀಲರು ಅಕ್ರಮವಾಗಿ ನಿವೇಶನ ಕೊಂಡಿರುವ ಆರೋಪಕ್ಕೆ ತುತ್ತಾಗಿದ್ದಾರೆ. ನ್ಯಾಯಾಂಗ ಇಲಾಖೆಯ ಬಡ ಕಾರ್ಮಿಕರಿಗೆ ನೀಡಬೇಕಾಗಿದ್ದ ಅಲ್ಲಾಳಸಂದ್ರದ ನಿವೇಶನವನ್ನು ಕೊಂಡಿರುವ, ತಮ್ಮ ಹೆಸರಿನಲ್ಲಿ ವಸಂತನಗರದಲ್ಲಿ ಒಂದು ನಿವೇಶನ ಇದ್ದಿದ್ದರೂ ಹೆಂಡತಿ ಹೆಸರಲ್ಲಿ ಮತ್ತೊಂದು ಹೌಸಿಂಗ್ ಬೋರ್ಡ್ ನಿವೇಶನ ಕೊಂಡ ಆರೋಪ ಅವರ ವಿರುದ್ಧ ಕೇಳಿಬರುತ್ತಿದೆ.

ಇಂಥ ನಿವೇಶನ ಪಡೆದ ನ್ಯಾಯಾಧೀಶ ತಾವೊಬ್ಬರೇ ಅಲ್ಲ, ಅನೇಕರಿಗೂ ಇದು ಸಿಕ್ಕಿದೆ. ಹೌಸಿಂಗ್ ಬೋರ್ಡ್ ನಿವೇಶನಕ್ಕೆ ಅಫಿಡವಿಡ್ ನೀಡಬೇಕಾಗಿಲ್ಲ ಎಂದೆಲ್ಲ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿರುವ ಸ್ಪಷ್ಟನೆ ಕೆಲವರಿಗೆ ಸಮಂಜಸವೂ ಇರಬಹುದು ಹಲವರಿಗೆ ಅಸಮಂಜಸವೂ ಇರಬಹುದು. ಆದರೆ, ಅವರಂಥ ದಕ್ಷ ಅಧಿಕಾರಿಯ ವಿರುದ್ಧ ತಿರುಗಿಬೀಳಲು, ಅವರ ರಾಜೀನಾಮೆ ಪಡೆಯಲು ಇದು ಸಮಂಜಸವಾದ ಸಮಯವೆ?

ಇದು ಸರಿಪಡಿಸಿಕೊಳ್ಳಲಾಗದಂಥ ಮಹಾಪರಾಧವೇನೂ ಅಲ್ಲ. ನಿವೇಶನ ಪಡೆದಿರುವುದು ಅಕ್ರಮವೆಂದಾದರೆ ವಾಪಸ್ ನೀಡುವುದಾಗಿ ಪಾಟೀಲ್ ಹೇಳಿದ್ದಾರೆ. ಆದರೆ, ಬೆಟ್ಟದಷ್ಟು ಭ್ರಷ್ಟಾಚಾರದ ಸಮಸ್ಯೆಗಳು ನಮ್ಮ ಮುಂದೆ ಇರುವಾಗ, ಅದೇ ಬೆಟ್ಟವನ್ನು ಇಲಿಗಾಗಿ ಅಗಿಯುವುದು ಎಲ್ಲಿಯ ನ್ಯಾಯ? ತಪ್ಪಿನ ಪ್ರಮಾಣ ಎಷ್ಟೇ ಇರಲಿ, ತಪ್ಪು ತಪ್ಪೇ. ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿರುವಾಗ ಅದನ್ನೇ ಬೃಹದಾಕಾರ ಮಾಡಿಕೊಂಡು, ಮುಂದಿನ ದೊಡ್ಡ ಸಮಸ್ಯೆಗಳನ್ನು ಕುಬ್ಜವಾಗಿಸುವುದು ಸರಿಯೆ?

ಶಿವರಾಜ ಪಾಟೀಲರಿಗೆ ನಿವೇಶನ ನೀಡಿರುವುದು ಅಪರಾಧವಾದರೆ, ಉಳಿದೆಲ್ಲ 'ಶ್ರೀಮಂತ' ನ್ಯಾಯಾಧೀಶರಿಗೆ ನೀಡಿರುವ ನಿವೇಶನಗಳನ್ನೂ ವಾಪಸ್ ಮಾಡಲು ಪತ್ರಿಕೆಗಳು, ರಾಜಕಾರಣಿಗಳು ಒತ್ತಾಯಮಾಡಲಿ. ಪರಿಸ್ಥಿತಿ ಹೀಗಿರುವಾಗ, ತಮ್ಮನ್ನು ಆಯ್ಕೆ ಮಾಡಿರುವ ಮುಖ್ಯಮಂತ್ರಿಯ ವಿರುದ್ಧವೇ ತನಿಖೆ ನಡೆಸುತ್ತಿರುವ ನ್ಯಾ. ಶಿವರಾಜ ಪಾಟೀಲರು ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಬಾರದು. ಬದಲಿಗೆ, ತಾವು ಸಿಲುಕಿರುವ ಸಂಕೋಲೆ ಬಿಡಿಸಿಕೊಂಡು ಭ್ರಷ್ಟರ ವಿರುದ್ಧ ಮುಗಿಬೀಳಬೇಕು. ಇಲ್ಲದಿದ್ದರೆ, ಇಲಿಯನ್ನು ಹುಡುಕುತ್ತಿರುವ ಹಂತದಲ್ಲಿ ಉಳಿದ ಹೆಗ್ಗಣಗಳು ಬಿಲ ಸೇರಿಕೊಂಡುಬಿಡುತ್ತವೆ ಹುಷಾರ್!

English summary
Why should Lokayukta Justice Shivaraj Patil resign? It has been alleged that Shivaraj Patil has acquired property illegally in Bangalore. Though the onus is on Shivaraj Patil to come clean, he has to continue the legacy left behind by Justice Santosh Hegde and nail the corrupt in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X