ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಮಾನ ಹರಾಜಾಗುತ್ತಿದೆ ಮುಖ್ಯಮಂತ್ರಿಗಳೆ

|
Google Oneindia Kannada News

Arun Reddy
* ಅರುಣ್ ರೆಡ್ಡಿ

ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ,

ಕರ್ನಾಟಕದ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಪ್ರಜ್ಞಾವಂತರಿಗಿರಲಿ ತೀರ ಜನಸಾಮಾನ್ಯರಿಗೂ ಜಿಗುಪ್ಸೆ ತಂದಿವೆ. ನಿಮ್ಮ ಪಕ್ಷದ ಭಿನ್ನಮತೀಯ ಚಟುವಟಿಕೆಗಳು ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಜನತೆ ನಿಮ್ಮಲ್ಲಿ ಇಟ್ಟ ನಂಬಿಕೆಗೆ ಧೋಕಾ ಆಗಿದೆ.

ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು, ನೀವು ಉಪಯೋಗಿಸಿಕೊಂಡ ವ್ಯಕ್ತಿಗಳು ಮತ್ತು ಅವರ ಸಂಪನ್ಮೂಲಗಳು ಇಂದು ನಿಮ್ಮ ಪಾಲಿಗೆ ದಿನನಿತ್ಯದ ಕಂಟಕಗಳಾಗಿ ಪರಿಣಮಿಸಿವೆಯಲ್ಲವೆ. ಅದಕ್ಕೆ ಹೇಳೋದು ಮಾಡಿದ್ದುಣ್ಣೋ ಮಹರಾಯ. ನಿಮ್ಮನ್ನು ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಲು ಸಹಾಯ ಮಾಡಿದ ವ್ಯಕ್ತಿಗಳು ಎಂಥಹ ಮಹತ್ವಾಕಾಂಕ್ಷಿಗಳು, ದೂರದರ್ಶಿತ್ವ ಉಳ್ಳವರು, ಅಧಿಕಾರದಾಹಿಗಳು ಮತ್ತು ಸಂಪನ್ಮೂಲ ಉಳ್ಳವರೆಂದು ಕನಿಷ್ಠ ಬುದ್ಧಿಶಕ್ತಿ ಇರುವ ಯಾರಿಗಾದರೂ ಅರ್ಥವಾಗುತ್ತಿತ್ತು. ಮತ್ತೆ ಹೇಳುತ್ತೇನೆ, ನಿಮ್ಮ ರಾಜಕೀಯ ಮೂರ್ಖತನ ಈ ದಿನ ಕನ್ನಡಿಗರು ಅವಮಾನದಿಂದ ತಲೆತಗ್ಗಿಸುವಂತೆ ಮಾಡಿದೆ.

ಸಮಸ್ತ ಕರ್ನಾಟಕದ ಮುಖ್ಯಮಂತ್ರಿಯಾಗಿ ನಿಮಗೆ ಒಬ್ಬ ಜಿಲ್ಲಾಧಿಕಾರಿಯನ್ನು ವರ್ಗಾಯಿಸುವ ಅಧಿಕಾರವಿರಲಿಲ್ಲ. ಅದಕ್ಕೆ ನಿಮಗೆ ಒಬ್ಬ ಗಣಿ ಮಾಲೀಕ ಯಾನೆ ಮಂತ್ರಿಯ ಅಪ್ಪಣೆ ಬೇಕು ಅಂದ್ರೆ ನೀವೊಬ್ಬ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ನೀವು ಕನ್ನಡಿಗರ ಅನುಕಂಪ ಕೂಡ ಪಡೆಯಲು ಅನರ್ಹರು.

ಬಿಜೆಪಿ ಒಂದು ಕಾಲದಲ್ಲಿ ಆದರ್ಶ, ತತ್ತ್ವ, ಸಿದ್ಧಾಂತಗಳಿಗೆ ಬದ್ದವಾಗಿದ್ದಂಥ ಪಕ್ಷ. ನಿಮ್ಮ ಕಾಲದಲ್ಲಿ ನಿಮ್ಮ ರಾಜಕೀಯ ಅನುಕೂಲಗಳಿಗಾಗಿ ಎಲ್ಲವನ್ನ ಗಾಳಿಗೆ ತೂರಿ, ಬಳ್ಳಾರಿ ಗಣಿಗಳು ತ್ರಿವಿಕ್ರಮರಾಗಿ ಬೆಳೆಯಲು ಕಾರಣರಾಗಿದ್ದೀರ. ಗಣಿ ಕುಟುಂಬದ ಮೂವರು, ಶ್ರೀರಾಮುಲು ಕುಟುಂಬದ ಮೂವರು ಮತ್ತು ಅವರ ಅಸಂಖ್ಯಾತ ಬೆಂಬಲಿಗರು, ಹಣ ಮತ್ತು ತೋಳ್ಬಲದಿಂದ ಕರ್ನಾಟಕವನ್ನ ತಮ್ಮ ಪಾಳೆಪಟ್ಟು ಮಾಡಿಕೊಳ್ಳಲಿಕ್ಕೆ ಕಾರಣ ನೀವು, ನಾವಲ್ಲ.

ಗಣಿ ರೆಡ್ಡಿಗಳ ನಿಜವಾದ ಬಣ್ಣ ಈಗ ಹೊರಬರುತ್ತಿದೆ. ಹೈದರಾಬಾದ್ ಮೂಲದ ಕಂಪನಿಗೆ ಟೆಂಡರ್ ಸಿಗಲೆಂಬ ಕಾರಣಕ್ಕೆ ಕನ್ನಡಿಗರಿಗೆ ಸೇರಿದ ಕಂಪನಿಯ ನೌಕರನೊಬ್ಬನನ್ನ ಅಪಹರಿಸಲಾಗುತ್ತದೆ. ಇದೆಲ್ಲ ನಾವು ತೆಲುಗು ಸಿನೆಮಾದಲ್ಲಿ ನೋಡಿದ್ದೆವು, ತಮ್ಮ ಕೃಪೆಯಿಂದ ಇದನ್ನೆಲ್ಲಾ ಕರ್ನಾಟಕದಲ್ಲಿ ನಿಜವಾಗಿ ನೋಡುವಂತಾಗಿದೆ. ಇಡೀ ಕರ್ನಾಟಕದ ಟೆಂಡರುಗಳು, ಗಣಿಗಳು, ರಿಯಲ್ ಎಸ್ಟೇಟ್ ಹೈದರಾಬಾದಿನವರ ಪಾಲಾಗುವ ದಿನಗಳು ದೂರವಿಲ್ಲ.

ಗಣಿ ರೆಡ್ಡಿಗಳು ಮತ್ತು ಅವರ ಹಿಂಬಾಲಕರ, ರಾಜಕೀಯ ಬದ್ದತೆ ಮತ್ತು ತಮ್ಮ ಇಲಾಖೆಗಳನ್ನ ನಿಭಾಯಿಸುವಲ್ಲಿ ಅವರಿಗಿರುವ ನಿರಾಸಕ್ತಿ ಈಗಾಗಲೇ ಜಗಜ್ಜಾಹೀರಾಗಿದೆ. ಕರ್ನಾಟಕದಲ್ಲಿ H1N1 ಫ್ಲೂ ಪರಿಸ್ಥಿತಿ ನಿಭಾಯಿಸುವಲ್ಲಿ ನಿರಾಸಕ್ತಿ ಮತ್ತು ಇಡೀ ಉತ್ತರ ಕರ್ನಾಟಕ ನೆರೆ ಹಾವಳಿಯಲ್ಲಿ ತತ್ತರಿಸುತ್ತಿರುವಾಗ, ಭಿನ್ನಮತಿಯ ಚಟುವಟಿಕೆಗಳಲ್ಲಿ ತೊಡಗಿರುವುದೇ ಇದಕ್ಕೆ ಸಾಕ್ಷಿ. ನಾಚಿಕೆಗೇಡು.

ಗಣಿ ರೆಡ್ಡಿಗಳ ಪ್ರಭಾವ ಹೆಚ್ಚುತ್ತಿದ್ದಾಗ, ಕರ್ನಾಟಕದಲ್ಲಿ ಅವರಿಗೆ ಸೆಡ್ಡು ಹೊಡೆಯಬಲ್ಲ, ತೋಳ್ಬಲ, ಹಣಬಲವುಳ್ಳ ರಾಜಕೀಯ ಕುಟುಂಬವೆಂದರೆ ಗೋಕಾಕಿನ ಜಾರಕಿಹೋಳಿ ಕುಟುಂಬವೆಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೆ ಈಗ ಜಾರಕಿಹೊಳಿ ಕೂಡ ಗಣಿಗಳ ಶಿಷ್ಯ. ಶೆಟ್ಟರ್ ಅಂತಹ ಸಭ್ಯ ರಾಜಕಾರಣಿ ಕೂಡ ಗಣಿಗಳ ಜೊತೆ ಕೈಗೂಡಿಸಿ ಮುಖ್ಯಮಂತ್ರಿ ಪದವಿಯ ಕನಸು ಕಾಣುತ್ತಿರುವದು ಕರ್ನಾಟಕದ ದುರಂತ. ಶೆಟ್ಟರ್ ಮುಖ್ಯಮಂತ್ರಿಯಾದರೆ ಕರ್ನಾಟಕದ ಮೇಲೆ ಗಣಿಗಳ ಹಿಡಿತ ಹೇಗಿರಬಹುದು ಅಂತ ಊಹಿಸಿಕೊಳ್ಳುವುದು ಅಸಾಧ್ಯ.

ಕರ್ನಾಟಕಕ್ಕಾಗಿ, ಕನ್ನಡಿಗರಿಗಾಗಿ ನೀವು ಅಸಹಾಯಕ, ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯಲ್ಲ ಎನ್ನುವುದನ್ನು ಸಾಬೀತು ಮಾಡಬೇಕಾಗಿದೆ. ಅಕ್ರಮ ಗಣಿಗಾರಿಕೆಯನ್ನ ಮಟ್ಟಹಾಕಿ ತನ್ಮೂಲಕ ರಾಜ್ಯದ ಸಂಪನ್ಮೂಲಗಳನ್ನ ಲೂಟಿ ಹೊಡೆದು, ಕರ್ನಾಟಕವನ್ನೇ ಹರಾಜು ಹಾಕುತ್ತಿರುವವರನ್ನ ಮಟ್ಟ ಹಾಕಬೇಕಾಗಿದೆ. ಕರ್ನಾಟಕ ಗಡಿ ಒತ್ತುವರಿ ಮಾಡಿಕೊಂಡವರನ್ನ ನಿರ್ದಾಕ್ಷಿಣ್ಯವಾಗಿ ಕಾನೂನಿನ ಬಲೆಗೆ ಹಾಕಿ. ಈಗ ಕನ್ನಡಿಗರ ಹಿತಾಸಕ್ತಿ ಕಾಪಾಡೋ ಜವಾಬ್ದಾರಿ ನಿಮ್ಮ ಮೇಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X