ಪಿಜಾ ಹಟ್‌ನಲ್ಲಿ ಕನ್ನಡ ಔಟ್!
ಕರ್ನಾಟಕದಲ್ಲಿ, ಅದರಲ್ಲೂ ರಾಜಧಾನಿ ನಗರ ಬೆಂಗಳೂರಿನಲ್ಲಿ ಕನ್ನಡ ಸೊರಗುತ್ತಿದೆ, ಸೋರಿ ಹೋಗುತ್ತಿದೆ! ಕನ್ನಡ, ಕನ್ನಡಿಗರ ಬಗೆಗೆ ಅಸಡ್ಡೆ ತೋರುವ ಮನಸ್ಥಿತಿ ಬೆಂಗಳೂರಿನಲ್ಲಿ ಬೆರೆತುಹೋಗಿದೆ! ಮತ್ತೊಂದು ಕಡೆ, ಪತ್ರಿಕೆಗಳಲ್ಲಿ, ವೇದಿಕೆಗಳಲ್ಲಿ ಕನ್ನಡದ ಕೂಗು ಹಾಕುವುದು ಸಹಾ ಒಂದು ಫ್ಯಾಷನ್ ಅನ್ನಿಸಿದೆ! ಚಳವಳಿಗಳು ದಾರಿ ತಪ್ಪುತ್ತಿವೆ... ಕನ್ನಡ ನಾಯಕರು ಮೈಕ್ ನಿಷ್ಠೆ ಪ್ರದರ್ಶಿಸುತ್ತಿದ್ದಾರೆ.
ಹೀಗಾದರೆ ಹೇಗೆ? ಈ ಮಧ್ಯೆ ಕನ್ನಡ ಅವಮಾನ ಎಂದಿನಂತೆ ಮುಂದುವರೆದಿದೆ... ಈದೀಗ ಪಿಜಾ ಹಟ್‌ನ ಸರದಿ. ಅಲ್ಲಿ ಕನ್ನಡ ಕೇಳುವವರೇ ಇಲ್ಲ, ಇನ್ನು ಮಾತನಾಡುವುದು ದೂರದ ಮಾತು...!? -ಕೇಳಿ ಓದುಗರೊಬ್ಬರ ಅನುಭವ.
- ನಾಗೇಶ್, ಬೆಂಗಳೂರು
[email protected]
ಬಸವೇಶ್ವರನಗರ, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುವ ಬಡಾವಣೆಗಳಲ್ಲೊಂದು. ಆಲ್ಲಿ ಕಳೆದ ವಾರ ಪಿಜಾ ಹಟ್ ಆರಂಭ ಆಗಿದೆ. ಮನೆಯ ಹತ್ತಿರ ಇರುವುದರಿಂದ ಮತ್ತು ವಾಹನ ದಟ್ಟಣೆಯಿಂದ ತಪ್ಪಿಸಿಕೊಳ್ಳುವ ಅವಕಾಶದ ಆಸೆಯಿಂದ ಮಕ್ಕಳೊಟ್ಟಿಗೆ ಅಲ್ಲಿ ಹೋಗಿದ್ದೆ. ಅಲ್ಲಿನ ಪರಿಸ್ಥಿತಿಯನ್ನು ನೋಡಿ ನನಗೆ ಒಂದು ಕ್ಷಣ, ನಾನೇನಾದರೂ ಕರ್ನಾಟಕದಲ್ಲಿದ್ದೇನೆೋ ಅಥವಾ ಬೇರೆಲ್ಲಿಗೋ ದಾರಿ ತಪ್ಪಿ ಹೋಗಿದ್ದೇನೆಯೋ ಎಂಬ ಅನುಭವ ಆಯಿತು.
ಕಾರಣ ಅಲ್ಲಿ ಕನ್ನಡ ಮಾತನಾಡುವವರು ಒಬ್ಬರೂ ಸಿಗಲಿಲ್ಲ. ಅಲ್ಲಿ ಕೆಲಸಮಾಡುವವರೆಲ್ಲರೂ ಬೇರೆ ರಾಜ್ಯದವರು ಮತ್ತು ಕನ್ನಡ ಬಾರದವರೆಂದು ನಂತರ ತಿಳಿಯಿತು. ನಾನು ಕನ್ನಡ ಮಾತನಾಡುವವರು ಯಾರೂ ಇಲ್ಲವೆ ಎಂದು ಧ್ವನಿ ಎತ್ತರಿಸಿ ಮಾತನಾಡಿದಾಗ ನನ್ನನ್ನೊಬ್ಬ ಬೇಡದ ಅತಿಥಿಯ ಥರ ನೋಡಿದರು.
ನಾನು ಕನ್ನಡದಲ್ಲೇ ಮಾತನಾಡುವ ಹಠ ಹಿಡಿದಾಗ, ಯಾರೋ ಜಯನಗರ ಪಿಜಾ ಹಟ್‌ನವರು (ಅವರಿಲ್ಲಿ ತರಬೇತಿ ಕೊಡಲು ಬಂದವರಂತೆ) ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು.
ಇಷ್ಟೆಲ್ಲಾ ಆದ ನಂತರ ಇನ್ನೊಂದು ಅನುಭವ... ಅಲ್ಲಿ ಮೂರು ರೀತಿಯ(ಸೈಜ್‌ನ) ಪಿಜಾ ದೊರೆಯುತ್ತದೆ; ಚಿಕ್ಕದು(ಒಬ್ಬರಿಗೆ), ಮಧ್ಯಮ(ಇಬ್ಬರಿಗೆ), ದೊಡ್ಡದು(ನಾಲ್ವರಿಗೆ). ಆದರೆ ಫ್ಯಾಮಿಲಿ ಪ್ಯಾಕ್(ನಾಲ್ವರಿಗೆ) ಅಂತ ಹೇಳಿ ಒಂದು ಚಿಕ್ಕದು ಮತ್ತು ಒಂದು ಮಧ್ಯಮ ಪಿಜಾ ಸರ್ವ್ ಮಾಡ್ತಾ ಇದ್ದಾರೆ. (ಆಂದರೆ 3 ಜನರಿಗಾಗುವಷ್ಟು ಪಿಜಾ ನಾಲ್ವರಿಗೆ ಅಂಥ ಸರ್ವ್ ಮಾಡುತ್ತಿದ್ದಾರೆ) ಕಾರಣ ಕೇಳಿದ್ದಕ್ಕೊಂದು ಗಲಾಟೆ. ನಾವು ಕನ್ನಡಿಗರು ಹೇಗಿದ್ದರೂ ಏನು ಕೊಟ್ಟರೂ ಸುಮ್ಮನಿರುವವರೇ?
ಈ ಅನುಭವದ ನಂತರ ನನ್ನ ಮನದಲ್ಲಿ ಎದ್ದ ಪ್ರಶ್ನೆಗಳು :
1. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವುದು ತಪ್ಪಾ?
2. ಪಿಜಾ ಹಟ್‌ನ ಕೆಲಸಕ್ಕೆ ಕನ್ನಡಿಗರು ಸಿಗುವುದಿಲ್ಲವೇ?
3. ನಮ್ಮ ನಡುವೆ ಬಂದು, ನಮ್ಮ ಮೇಲೆ ಡಿಪೆಂಡ್ ಆಗಿರುವ ಈ ಕಂಪನಿಗಳಿಗೆ ನಮ್ಮ ಸಂಸ್ಕೃತಿ ತುಳಿಯುವ ಆಧಿಕಾರ ಕೊಟ್ಟವರಾರು?(ಈಸ್ಟ್ ಇಂಡಿಯಾ ಕಂಪನಿ ಕೂಡಾ ಹೀಗೇ ವ್ಯಾಪಾರಕ್ಕೆಂದು ಬಂದು ಕಡೆಗೆ ನಮ್ಮನ್ನು ಆಳಿದರು)
4. ಹೀಗೇ ಮುಂದುವರೆದರೆ ನಮ್ಮ ಮುಂದಿನ ತಲೆಮಾರಿಗೆ ನಾವು ಬಿಟ್ಟು ಹೋಗುವುದೇನು?
ಗ್ಲೋಬಲೀಕರಣ ನಮ್ಮನ್ನು ನಮ್ಮ ಸಂಸ್ಕೃತಿಯನ್ನು ಮೂಲೆಗುಂಪು ಮಾಡುತ್ತಿದೆ ಎಂದು ಅನ್ನಿಸುವುದಿಲ್ಲವೆ???












Click it and Unblock the Notifications