ಹಕ್ಕುಸ್ವಾಮ್ಯ: ಒಂದು ಚಿಂತನೆ

ಪೇಟೆಂಟ್‌ ಬಗೆಗಿನ ಲೇಖನವನ್ನು ಸ್ವಾಗತಿಸುವದರೊಟ್ಟಿಗೆ ಕೆಲವು ಆಕ್ಷೇಪಗಳು, ಅನುಮಾನಗಳು ಮತ್ತು ಸಮೂಹ ಚಿಂತನೆಗೆ ಓದುವ ಸಾಮಗ್ರಿಗಳು

ಶೇಷಾದ್ರಿ, ಸೌತ್‌ ಬ್ರನ್ಸ್‌ವಿಕ್‌, ನ್ಯೂ ಜರ್ಸಿ, ಯು.ಎಸ್‌.ಎ.

Going for a Patent!ಮಾನ್ಯ ಸಂಪಾದಕರೇ,

ಕನ್ನಡದ ಸ್ಥಿತಿ-ಗತಿಗಳ ಕುರಿತು, ಬೆನ್ನಿ ಹಿನ್‌ ಅವಾಂತರದ ಕುರಿತು ಅವ್ಯಾಹತ ಏಕ ಪಕ್ಷೀಯ ಚರ್ಚೆಗಳ ನಡುವೆ, ಕೃಷ್ಣರಾಜ್‌ ಪಿ.ಎಂ. ರವರ ಪೇಟೆಂಟ್‌ ಕುರಿತಾದ ಲೇಖನವನ್ನೋದಿ ಸಂತೋಷವಾಯಿತು. ಒಟ್ಟಾರೆ ಕೃಷ್ಣರಾಜರ ವಾದಗಳನ್ನು ನಾನು ಬಹುಮಟ್ಟಿಗೆ ಒಪ್ಪುವುದಿಲ್ಲವಾದರೂ, ಪೇಟೆಂಟ್‌-ನಂತಹ ಗಹನವಾದ ವಿಚಾರವನ್ನು ಚರ್ಚೆಗೆ ತಂದಿದ್ದಕ್ಕೆ, ಅವರಿಗೆ ನನ್ನ ಕೃತಜ್ನತೆಗಳು.

ಓದಿ : ಪೇಟೆಂಟ್‌ ಕಾನೂನುಗಳು ನಮಗೆ ಬೇಕೆ?

ಕೃಷ್ಣರಾಜರ ಲೇಖನದ ಮೊದಲಲ್ಲಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಹಿಂದಿನ ಕಾಲದವರಿಗೆ ದುಡ್ಡಿನ ಮೇಲೆ ಆಸೆ ಇರಲಿಲ್ಲ. ಈಗ ಪ್ರತಿಯಾಬ್ಬರಿಗೂ ಕೀರ್ತಿಶನಿಯ ಹುಚ್ಚು ಒಪ್ಪುವುದು ಕಷ್ಟ. ಪೇಟೆಂಟ್‌, ಕಾಪಿರೈಟ್‌ ಕಾಯಿದೆಗಳಿದ್ದಿದ್ದರೆ, ' ಮನುಕುಲದ ಏಳಿಗೆಗೆ' ಶ್ರಮಿಸಿದ ಹಿಂದಿನ ಮಹಾನುಭಾವರು 'ಅನಾಮಧೇಯರಾಗಿ' ಉಳಿಯುತ್ತಿರಲಿಲ್ಲವೋ ಏನೋ?! ಹಾಗೆಯೇ, ' ದುಡ್ಡಿನ ಆಸೆ' ' ಕೀರ್ತಿಶನಿಯ ಹುಚ್ಚು' ಹೆಚ್ಚಿರುವ ಈ ಕಾಲದಲ್ಲಿ, ಪೇಟೆಂಟ್‌, ಕಾಪಿರೈಟ್‌ ಕಾನೂನುಗಳು ಅನಿವಾರ್ಯ ಎಂದೂ ವಾದಿಸಬಹುದು. ಒಟ್ಟಿನಲ್ಲಿ ತಮ್ಮ ಲೇಖನದ ಮೊದಲಲ್ಲೇ ಕೃಷ್ಣರಾಜರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ನಾಸ್ಟಾಲ್ಜಿಯದ ಮೊರೆ ಹೊಕ್ಕಿದ್ದಾರೆ.

ಪೇಟೆಂಟ್‌ ಪಡೆದುಕೊಳ್ಳುವ ಪ್ರಕ್ರಿಯೆ ಸಹ ಕೃಷ್ಣರಾಜರಿಗೆ ಇಷ್ಟವಿಲ್ಲ. ಈ ವಿಚಾರದಲ್ಲಿ ಅವರ ಮುಖ್ಯ ಆಕ್ಷೇಪಣೆಗಳಿವು:

' ಪೇಟೆಂಟ್‌ ವ್ಯವಸ್ಥೆಯಲ್ಲಿ ಮೊದಲು ಬಂದವರಿಗೇ ಆದ್ಯತೆ. ... ನೀವು ಮಾಡಿದ ಕೆಲಸವಲ್ಲ'
' ಪೇಟೆಂಟ್‌ ಅರ್ಜಿಯ ಜೊತೆಯಲ್ಲಿ ದುಬಾರಿ ಶುಲ್ಕ ಕಟ್ಟಬೇಕು'
ಪೇಟೆಂಟ್‌ ಅರ್ಜಿಗಳು ಅತಿ ' ಸಂಕೀಣ
'ಪೇಟೆಂಟ್‌ ವ್ಯವಸ್ಥೆಯಲ್ಲಿ ಕೆಲಸಕ್ಕಿಂತ ಕಲ್ಪನೆಗೇ ಹೆಚ್ಚು ಆದ್ಯತೆ'

ನನ್ನ ಅಭಿಪ್ರಾಯದಲ್ಲಿ ಇವುಗಳು ಯಾವುವೂ ಅಂತಹ ಗಹನವಾದ ಆಕ್ಷೇಪಣೆಗಳಲ್ಲವೆನಿಸುತ್ತದೆ. ಸಮಯವನ್ನು ಮಾನದಂಡವಾಗಿ ಉಪಯೋಗಿಸುವುದು ಹೊಸದೇನೂ ಅಲ್ಲ, ಇದು ಪೇಟೆಂಟ್‌ ವ್ಯವಸ್ಥೆಗೆ ಮಾತ್ರ ಸೀಮಿತವೂ ಅಲ್ಲ. ಸಮಯವೆಂಬ ಅಳತೆಗೋಲು ಯಾವಾಗಲೂ ಸಮಂಜಸವಾಗಿರುತ್ತದೆಂದಲ್ಲ. ಆದರೆ ಕೆಲವೊಮ್ಮೆ ಅದಕ್ಕಿಂತ ನಿಷ್ಪಕ್ಷಪಾತವಾದ ಅಳತೆಗೋಲು ಸಿಗುವುದಿಲ್ಲ, ಹೀಗಾಗಿ By Default ಮೊದಲಿಗರಿಗೆ ಮಣೆಹಾಕುವಂತಾಗುತ್ತದೆ. ಯಾವುದೇ ಪ್ರಕ್ರಿಯೆ Perfect ಆಗಿರುವುದು ಕಷ್ಟ. ಬಹುಮಟ್ಟಿನ ಸಂದರ್ಭಗಳಲ್ಲಿ ಅದು ಕಾರ್ಯ ಮಾಡುತ್ತಿದ್ದರೆ, ಅದಕ್ಕಿಂತ ಉತ್ತಮವಾದ ಪ್ರಕ್ರಿಯೆ ಲಭ್ಯವಾಗುವವರೆಗೆ, ಇರುವುದನ್ನು ಉಪಯೋಗಿಸುವುದರಲ್ಲಿ ತಪ್ಪೇನಿಲ್ಲ. ಕೃಷ್ಣರಾಜರ ಅಭಿಪ್ರಾಯದಲ್ಲಿ ಈಗಿರುವ ಪ್ರಕ್ರಿಯೆ ಬಹುಮಟ್ಟಿಗಿನ (ಬೇಡ, ಗಣನೀಯ) ಸಂದರ್ಭಗಳಲ್ಲಿ ಕೆಲಸಮಾಡುತ್ತಿಲ್ಲವೆಂದಾದರೆ, ಅದಕ್ಕೆ ಪೂರಕವಾದ ಅಂಕಿ-ಅಂಶಗಳನ್ನು ಅವರು ಒದಗಿಸಿಲ್ಲ. ಉದಾಹರಣೆಗೆ, ಎಷ್ಟು ಸಂದರ್ಭಗಳಲ್ಲಿ, ಇಬ್ಬರು ವ್ಯಕ್ತಿಗಳು ಸ್ವತಂತ್ರವಾಗಿ ಒಂದೇ ಸಂಶೋಧನೆ ನಡೆಸಿ, ಮೊದಲು ಬಂದವನಿಗೆ ಪೇಟೆಂಟ್‌ ದೊರಕಿದೆ?

ಪೇಟೆಂಟ್‌ ಶುಲ್ಕ ಬಹುಮಟ್ಟಿಗಿನ ಸಂಶೋಧಕರಿಗೆ ನಿಲುಕದಷ್ಟು ದುಬಾರಿಯೇ? ಎಷ್ಟು ಸಂದರ್ಭಗಳಲ್ಲಿ ದುಬಾರಿ ಶುಲ್ಕದಿಂದ ಅಥವಾ ಅರ್ಜಿಯ ಸಂಕೀರ್ಣತೆಯಿಂದ ಪೇಟೆಂಟ್‌ ಪಡೆಯಲಾಗುತ್ತಿಲ್ಲ? 1%? 10%? 50%?

' ಕೆಲಸಕ್ಕಿಂತ ಕಲ್ಪನೆಗೇ ಹೆಚ್ಚು ಆದ್ಯತೆ' ಎಂಬುದೂ, ಪೇಟೆಂಟ್‌ ವ್ಯವಸ್ಥೆಗೆ ಮಾತ್ರ ಸೀಮಿತವಾದುದಲ್ಲ. ದಿನವಿಡೀ ಬಿಸಿಲಿನಲ್ಲಿ ಇಟ್ಟಿಗೆಹೊತ್ತು ಕಾಯಕ ಗೈಯ್ಯುವವನಿಗಿಂತ ಕಛೇರಿಯಲ್ಲಿ ಕುಳಿತು ಸೇತುವೆ ನಿರ್ಮಾಣದ ನಕಾಶೆ ರಚಿಸುವವನಿಗೇ ಹೆಚ್ಚು ಆದ್ಯತೆ. ಇದರಲ್ಲಿ ಹೊಸದೇನೂ ಇಲ್ಲ ಮತ್ತು ಅಂತಹ ಆಕ್ಷೇಪಣೀಯವಾದುದೂ ಅಲ್ಲವೆಂದು ನನ್ನ ಅಭಿಪ್ರಾಯ.

ಕೃಷ್ಣರಾಜರು ತಮ್ಮ ಲೇಖನದಲ್ಲಿ ಇನ್ನೊಂದೆಡೆ ಬರೆದಿದ್ದಾರೆ: ' ಪೇಟೆಂಟ್‌ ಕಾನೂನಿನಿಂದ ಜನ ಸಾಮಾನ್ಯರಿಗೇನೂ ಉಪಯೋಗವಾಗುತ್ತಿಲ್ಲ'. ಮೊದಲ ನೋಟಕ್ಕೆ ಇದು ಸರಿ ಎನ್ನಿಸಿದರೂ, ಕೊಂಚ ವಿಶ್ಲೇಶಿಸಿ ನೋಡಿದರೆ ಈ ಮಾತಿನ ಹಿಂದಿನ ಸತ್ಯಾಸತ್ಯತೆ ಗೋಚರವಾಗುತ್ತದೆ. 'ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ..' ಎಂಬ ಭಾವ ಒಳ್ಳೆಯದಾದರೂ, ನಿಜ ಜೀವನ ಹಾಗಿಲ್ಲ. ನಾವು ದೈನಂದಿನ ಕಾರ್ಯದಲ್ಲಿ ಬಳಸುವ ಬಹುಪಾಲು ವಸ್ತುಗಳು, ತಂತ್ರಜ್ನಾನಗಳು ಲಾಭಕ್ಕೆಂದೇ ತಯಾರಿಸಿರುವಂತಹವು. ನಮ್ಮ ಕೆಲ ಬುದ್ಧಿಜೀವಿಗಳಿಗೆ 'ಲಾಭ', ' ವ್ಯಾಪಾರ' ಗಳೆಂದರೆ ಅಸಹ್ಯ. ಆದರೆ ಹೊಸ ಹೊಸ ಅವಿಷ್ಕಾರ, ಸಂಶೋಧನೆಗಳಿಗೆ, ಅವುಗಳು ನಮ್ಮ ಕೈಗೆ ವ್ಯಾಪಾರಿಗಳ ಮೂಲಕ ಸುಲಭವಾಗಿ ದೊರಕುವುದಕ್ಕೆ, ' ಲಾಭ', ' ಕೀರ್ತಿ' ಗಳೇ ಮುಖ್ಯ ಪ್ರೇರಣೆ. If necessity is the mother of inventions, profit motive is the Father . ಒಂದು ದಿನಕ್ಕೆ ಮಾತ್ರ, ಲಾಭಕ್ಕೆಂದು ತಯಾರಿಸಲ್ಪಟ್ಟ ವಸ್ತುಗಳನ್ನು ಬಿಟ್ಟು ಬದುಕಲು ಯತ್ನಿಸಿ ನೋಡಿ... ಪೇಟೆಂಟ್‌, ಕಾಪಿರೈಟ್‌ ಕಾಯಿದೆಗಳಿಲ್ಲದಿದ್ದರೆ, ಯಾವುದೇ ಸಂಸ್ಥೆ, ಸಂಶೋಧನೆಗಳಿಗಾಗಿ ಕೋಟ್ಯಂತರ ಖರ್ಚು ಯಾಕಾದರೂ ಮಾಡಬೇಕು?! ' ಬಿರುದು ಸನ್ಮಾನ' ಬೇಡದ ಕವಿಗೆ ಕೂಡ, ಕೃತಿಚೌರ್ಯ ಇಷ್ಟವಾಗುವುದಿಲ್ಲ, ಕಾಪಿರೈಟ್‌ ಬೇಡವೆನ್ನಿಸುವುದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣರಾಜರಿಗೆ ' ವಸ್ತುಗಳಿಗೆ ಪೇಟೆಂಟ್‌' ನೀಡುವ ಕಾನೂನು ಆಕ್ಷೇಪಣೀಯವೆನಿಸಿದೆ. ಅವರ ಆಕ್ಷೇಪಣೆಯಲ್ಲಿ ಹುರುಳಿಲ್ಲದೆಯೂ ಇಲ್ಲ. ಆದರೂ, ಅವರ ಲೇಖನ ಈ ಚರ್ಚಾ ವಿಷಯದ ಒಂದು ಪಕ್ಷವನ್ನು ಮಾತ್ರ ಬಿಂಬಿಸಿದೆ. ' ವಸ್ತುಗಳಿಗೆ ಪೇಟೆಂಟ್‌' (Product Patent) ಕಾನೂನು ಮುಖ್ಯವಾಗಿ ಪರಿಣಾಮ ಬೀರುವುದು ಭಾರತದ ಔಷಧಿ ತಯಾರಕ ಸಂಸ್ಥೆಗಳ ಮೇಲೆ. ಇಲ್ಲಿಯವರೆಗೆ, ಭಾರತದಲ್ಲಿದ್ದಿದ್ದು ' ಪ್ರಕ್ರಿಯೆ ಪೇಟೆಂಟ್‌'(Process Patent) ಮಾತ್ರ. ಹೀಗಾಗಿ, ವಿದೇಶಿ ಔಷಧಿ ತಯಾರಕರು ಹಲವಾರು ವರ್ಷ, ಕೋಟ್ಯಂತರ ವೆಚ್ಚದಲ್ಲಿ ಸಂಶೋಧನೆ ನಡೆಸಿ ತಯಾರಿಸಿದ ಔಷಧಿಗಳನ್ನು, ಭಾರತೀಯ ತಯಾರಕರು ನಕಲು ಮಾಡಿ, ತಯಾರಿಕೆಯ ವಿಧಾನವನ್ನು ಮಾತ್ರ ಬದಲಿಸಿ, ಮಾರಾಟ ಮಾಡಲು ಕಾನೂನಿನಲ್ಲಿ ಯಾವುದೇ ಅಡಚಣೆಗಳಿರಲಿಲ್ಲ. ಸಂಶೋಧನೆಯ ವೆಚ್ಚವಿಲ್ಲದೆ ತಯಾರಿಸಿದ ಔಷಧಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಲಾಭಗಳಿಸಬಹುದಿತ್ತು.

ಆದರೆ, ಈಗ Product Patent ಕಾನೂನಿನಿಂದ ಇಂತಹ ನಕಲುಗಾರಿಕೆಗೆ ಕಡಿವಾಣ ಬಿದ್ದಿದೆ. ' ಅನುಮತಿ ಇಲ್ಲದೆ ನಕಲು ಮಾಡುವುದು ತಪ್ಪು' ಎಂಬ ನೈತಿಕ ತತ್ವದ ಬಗ್ಗೆ ಎರಡು ಮಾತಿಲ್ಲ, ಆದರೆ, ಈ ' ನಕಲಿ' ಔಷಧಿಗಳು ಕಡಿಮೆ ಬೆಲೆಗೆ ದೊರಕುವುದರಿಂದ ಬಡ ರಾಷ್ಟ್ರಗಳಲ್ಲಿ ಈ ವಿಷಯದಲ್ಲಿ ನೈತಿಕ, ತಾತ್ವಿಕ, ರಾಜಕೀಯ ವಿವಾದಗಳಾಗುವುದು ಸಹಜ. ನೈತಿಕ ತತ್ವ - ಬಡ ಜನತೆಯ ಆರೋಗ್ಯದ ನಡುವೆ ಒಂದನ್ನು ಆಯ್ಕೆ ಮಾಡುವುದು ಸುಲಭದ ವಿಷಯವಲ್ಲ. ಇಷ್ಟರ ಮಧ್ಯೆ, ಇತರೆ ರಾಷ್ಟ್ರಗಳು, ಭಾರತದ ಮೇಲೆ ವಾಣಿಜ್ಯ ನಿರ್ಬಂಧಗಳನ್ನು ಹೇರಿದರೆ, ಔಷಧಿ ತಯಾರಕರು ಮಾತ್ರವಲ್ಲ, ಇಡೀ ದೇಶದ ಜನತೆ ಅದರ ಪರಿಣಾಮವನ್ನು ಎದುರಿಸ ಬೇಕಾಗುತ್ತದೆ.

ಸ್ವಂತ ಆಸ್ತಿಯನ್ನು ಕಾಪಾಡಿಕೊಳ್ಳುವುದು ಮನುಷ್ಯನ ಸಹಜ ಸ್ವಭಾವ ಮತ್ತು ನೈಸರ್ಗಿಕ ಹಕ್ಕು. ಇಂತಹ ಆಸ್ತಿ ಬೌದ್ಧಿಕವಾಗಿದ್ದ ಮಾತ್ರಕ್ಕೆ, ಅದನ್ನು ಕಾಪಾಡಿಕೊಳ್ಳುವುದರ ಮೇಲೆ ನಿರ್ಬಂಧ ಹೇರಬೇಕೆನ್ನುವುದು ಸರಿಯಲ್ಲವೆನ್ನಿಸುತ್ತದೆ. ಬೌದ್ಧಿಕ ಆಸ್ತಿಗಳನ್ನು ರಕ್ಷಿಸುವ ಪೇಟೆಂಟ್‌, ಕಾಪಿರೈಟ್‌ ಕಾಯಿದೆಗಳು, ಸದ್ಯಕ್ಕೆ ಭಾರತಕ್ಕೆ ಹಾನಿಕಾರಕವೆನ್ನಿಸಿದರೂ, ಭವಿಷ್ಯದಲ್ಲಿ ಭಾರತದ ಮುನ್ನಡೆಗೆ ಸಹಕಾರಿ ಎಂದೇ ನನ್ನ ಭಾವನೆ. ಭಾರತೀಯರು ನಕಲು ಮಾಡುವುದರಲ್ಲಿ ಮಾತ್ರ ನಿಪುಣರೆಂಬುದನ್ನು ನಾನು ಒಪ್ಪುವುದಿಲ್ಲ. ಹೊಸ ಅನ್ವೇಷಣೆ-ಅವಿಷ್ಕಾರಗಳು ಭಾರತದಿಂದ ಹೊರ ಬರುವ ಕಾಲ ದೂರವೇನಿಲ್ಲ. ಹಾಗಾದಾಗ, ಈಗ ನಾವು ಬೇಡವೆನ್ನುತ್ತಿರುವ ಕಾಯಿದೆ, ಕಾನೂನುಗಳು ನಮಗೆ ಬೇಕೆನ್ನಿಸುತ್ತವೆ.

ಕೃಷ್ಣರಾಜರ ಲೇಖನದ ಅಂತ್ಯದಲ್ಲಿ ಬರೆದಿರುವ ಕೆಲವು ವಾಕ್ಯಗಳು ಸಹ್ಯವೆನ್ನಿಸಲಿಲ್ಲ: ' ದೇಶದ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಜನರು 'ಗ್ಯಾಟ್ಸ್‌ ಒಪ್ಪಂದಕ್ಕೆ' ಸಹಿ ಮಾಡಿದರು. ಆ ಮೂಲಕ ದೇಶವನ್ನು ಧನದಾಹೀ ಕಂಪೆನಿಗಳಿಗೆ ಮಾರಿದ್ದಾರೆ'. ಈ ರೀತಿಯ ಆರೋಪಗಳನ್ನು ಹೊರಿಸುವಾಗ, ಮತ್ತಷ್ಟು Specific ಆಗಿದ್ದರೆ, ಮಾಡುತ್ತಿರುವ ಆರೋಪಕ್ಕೆ ಬೆಲೆಸಿಗುತ್ತದೆ. (ಉದಾಹರಣೆಗೆ, Product ಕಾಯಿದೆಗೆ ಒಪ್ಪಿದ ಪ್ರಧಾನಿ ಮನ್‌ಮೋಹನ್‌ ಸಿಂಗ್‌ರವರಿಗೆ ದೇಶದ ಒಳಿತಿನ ಬಗ್ಗೆ ಕಾಳಜಿ ಇಲ್ಲವೇ?, ದೇಶವನ್ನು ಮಾರಿದವರು ಯಾರು? ಕೊಂಡವರು ಯಾರು?, ಮಾರಿದವರು ಈ ಮಾರಾಟದಿಂದ ವೈಯುಕ್ತಿಕ ಲಾಭ ಪಡೆದರೇ?, ಅದಕ್ಕೆ ಪುರಾವೆಗಳೇನಾದರೂ ಇವೆಯೇ?) Specificity ಇಲ್ಲದ ಟೀಕೆಗಳು, ಲೋಕಾಭಿರಾಮಕ್ಕೆ ಆಡಿದ ಮಾತುಗಳೆಂದೆನ್ನಿಸುತ್ತವೆ. ಪೇಟೆಂಟ್‌-ನಂತಹ ಗಹನವಾದ ವಿಷಯದ ಚರ್ಚಿಸುವಾಗ, ನಮ್ಮ ತಾತ್ವಿಕ ವಿರೋಧಿಗಳ ದೇಶಪ್ರೇಮವನ್ನು ಪ್ರಶ್ನಿಸುವುದರಿಂದ ಚರ್ಚೆ ನಿಲ್ಲುತ್ತದೆಯೇ ಹೊರತು, ಪ್ರತಿವಾದಿಗಳ ಅಭಿಪ್ರಾಯ ಬದಲಾಗುವುದಿಲ್ಲ. ಕೊನೆಯಲ್ಲಿ ಒಂದು ಮಾತು: ' ದೇಶ ಪ್ರೇಮ', ' ದೇಶದ ಬಗ್ಗೆ ಕಾಳಜಿ' ಇವುಗಳ ಮೇಲೆ ಪೇಟೆಂಟ್‌-ವಿರೋಧಿಗಳು ಮಾತ್ರ ಪೇಟೆಂಟ್‌-ಕಾಪಿರೈಟ್‌ ಹೊಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+