ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಇನ್ನೂ ಬೇಕು ಎಂಬ ಮನೋಭಾವ

By ರೇಖಾ ಬೆಳವಾಡಿ, ಆಪ್ತಸಲಹೆಗಾರರು
|
Google Oneindia Kannada News

ಸುಖೀ ಸಾಮ್ರಾಜ್ಯದ ರಾಜ ಅತ್ಯಂತ ಶ್ರೀಮಂತನಾಗಿದ್ದ. ರಾಜನಿಗೆ, ಚಿನ್ನ ಹಾಗು ಬೆಳ್ಳಿಯ ಗಟ್ಟಿಗಳನ್ನು, ಆಭರಣ ಸಂಗ್ರಹಿಸುವುದು ಎಂದರೆ ಬಹಳ ಇಷ್ಟ.

ಎಷ್ಟರ ಮಟ್ಟಿಗೆ ಎಂದರೆ ತನ್ನ ಅರಮನೆಯ ಒಂದು ಕತ್ತಲೆ ಕೋಣೆಯೊಳಗೆ, ಸಂಗ್ರಹಿಸಿದ್ದ ಅಷ್ಟೂ ನಗ ನಾಣ್ಯಗಳು, ಬೆಳ್ಳಿ, ಬಂಗಾರದ ಗಟ್ಟಿಗಳನ್ನು ಇರಿಸಿ, ಕಿಟಕಿಯನ್ನು ಸೀಳಿ ಸೂರ್ಯನ ಕಿರಣಗಳು ಬಂಗಾರದ ಮೇಲೆ ಬಿದ್ದು ಅದರಿಂದ ಬೆಳಕು ಪ್ರತಿಫಲನವಾಗಿ ಇಡೀ ಕೋಣೆಯು ಬೆಳಕಾಗುವುದನ್ನು ನೋಡುತ್ತಾ, ಆನಂದಿಸುತ್ತಾ ಹಲವಾರು ಗಂಟೆಗಳು ಹಾಗು ದಿನಗಳನ್ನು ಆ ಕೋಣೆಯ ಒಳಗೇ ಕಳೆಯುತ್ತಿದ್ದ.

ಬಹಳ ಅಮೂಲ್ಯವಾದ ವಸ್ತುಗಳು ಬೇರೆ ರಾಜರ ಬಳಿ ಇದೆ ಎಂದು ತಿಳಿದರೆ ಆ ಸಾಮ್ರಾಜ್ಯದ ಮೇಲೆ ಯುದ್ಧ ಸಾರಿ ಗೆದ್ದು ಅಮೂಲ್ಯವಾದ ವಸ್ತುಗಳನ್ನು ಪಡೆದೇ ತೀರುತ್ತಿದ್ದ. ಸೈನಿಕರ, ಪ್ರಜೆಗಳ ಯೋಗಕ್ಷೇಮ ಹಾಗು ಯುದ್ದದಿಂದ ಆಗುತ್ತಿದ್ದ ಹಾನಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಅಲ್ಲದೇ, ತನ್ನ ಸಂಗ್ರಹವನ್ನು ಪ್ರದರ್ಶನಕ್ಕೆ ಇಟ್ಟು ಇತರರು ಪ್ರಶಂಸೆ ಮಾಡುವುದನ್ನು ಕೇಳುತ್ತಾ ಆನಂದಿಸುತ್ತಿದ್ದ.

ರಾಜನಿಗೆ ತನ್ನ ಬಳಿ ಇರುವ ಸಂಪತ್ತಿನ ಮೌಲ್ಯ ಎಷ್ಟು ಎಂಬ ಅಂದಾಜೂ ಸಹ ಇರಲಿಲ್ಲ. ಕಾರಣ ಅವನು ಎಂದೂ ಸಹ ಎಣಿಸುವ ಅಥವಾ ಅವುಗಳ ಮೌಲ್ಯದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡಿರಲಿಲ್ಲ. ಹಾಗಾಗಿ ತೃಪ್ತಿ ಇರದೆ "ಇನ್ನೂ ಬೇಕು" "ಹೆಚ್ಚು ಸಂಗ್ರಹಿಸಬೇಕು" ಎಂಬ ಮನೋಭಾವ ಗೀಳಾಗಿ ದಿನದಿಂದ ದಿನಕ್ಕೆ ಏರುತ್ತಾ ಹೋಯಿತು.

gold

ಹೀಗಿರುವಾಗ ಪಕ್ಕದ ಸಾಮ್ರಾಜ್ಯದ ರಾಜ ಕುತಂತ್ರದಿಂದ ಸುಖೀ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಕೆಲವು ಸಂಪತ್ತನ್ನು ಲೂಟಿ‌ಮಾಡುತ್ತಾನೆ. ಕೆಲವು ಅಮೂಲ್ಯ ವಸ್ತುಗಳನ್ನು ಕಳೆದುಕೊಂಡ ರಾಜ, ಕೋಪಗೊಂಡು ದುರ್ಬಲರಾಗಿದ್ದ ಸೈನಿಕರ ಮೇಲೆ ಅರ್ಥವಿಲ್ಲದೆ ಕೂಗಾಡುತ್ತಾನೆ‌. ಸೈನಿಕರನ್ನು ಪ್ರಬಲಗೊಳಿಸುವಲ್ಲಿ ತಾನು ತೋರಿದ ನಿರ್ಲಕ್ಷ್ಯ ಈಗಲೂ ಸಹ ರಾಜನ ಗಮನಕ್ಕೆ ಬಾರದೆ ಹೋಗುತ್ತದೆ.

ನಂತರ ಎಂದಿನಂತೆ ರಾಜ ಚಿನ್ನ ಬೆಳ್ಳಿಯ ಗಟ್ಟಿಗಳನ್ನು / ಸಂಪತ್ತನ್ನು ನೋಡುತ್ತಾ ಆನಂದಿಸುತ್ತಾ ಕುಳಿತಿದ್ದಾಗ, ಅಶರೀರ ವಾಣಿಯೊಂದು ರಾಜನನ್ನು‌ ಕುರಿತು,

"ಹೇ ರಾಜ, ಇಷ್ಟೊಂದು ಚಿನ್ನವನ್ನು ಹೊಂದಿರುವ ನೀನು ಬಹಳ ಸಂತೋಷವಾಗಿರಬೇಕಲ್ಲವೇ?" ಎಂದು ಕೇಳುತ್ತದೆ.

Psyhology: ಇರುವುದೆಲ್ಲವ ಬಿಟ್ಟು...ಆಸಕ್ತಿ-ಆಯ್ಕೆPsyhology: ಇರುವುದೆಲ್ಲವ ಬಿಟ್ಟು...ಆಸಕ್ತಿ-ಆಯ್ಕೆ

ಆಗ ರಾಜನು "ತನ್ನ ಬಳಿ ಬಂಗಾರವಿದೆ ಆದರೆ ಇನ್ನೂ ಹೆಚ್ಚಿನ ಬಂಗಾರ ಸಂಗ್ರಹ ಮಾಡುವುದರಿಂದ, ಇತರರಿಗಿಂತ ಹೆಚ್ಚಿನ ಬಂಗಾರ ಹೊಂದುವುದರಿಂದ ನನಗೆ ಇನ್ನೂ ಹೆಚ್ಚಿನ ಸಂತೋಷ ಸಿಗುತ್ತದೆ" ಎನ್ನುತ್ತಾನೆ.

ಆಗ ಅಶರೀರ ವಾಣಿಯು

* ನೀನು ಚಿನ್ನದ ಗಟ್ಟಿಗಳನ್ನು ಏಕೆ ಸಂಗ್ರಹಿಸುವೆ?

* ಇಷ್ಟು ದಿನ ಸಂಗ್ರಹಿಸಿದ ಬಂಗಾರಗಳಲ್ಲಿ ನೀನು ಯಾವ ಯಾವ ಆಭರಣಗಳನ್ನು ಬಳಸಿರುವೆ?

* ಪ್ರದರ್ಶನ ಆದ ಮೇಲೆ ಯಾವುವು ಹೆಚ್ಚಿನ ಉಪಯೋಗಕ್ಕೆ ಬಂದಿವೆ?

* ಸಂಗ್ರಹಿದ ಸಂಪತ್ತನ್ನು ಹೇಗೆಲ್ಲಾ ಉಪಯೋಗಿಸುತ್ತಿರುವೆ?

* ಅವುಗಳ ಮೌಲ್ಯವೆಷ್ಟು?

* ನಿನಗೆ ಮತ್ಯಾವ ಬಂಗಾರ ಸಿಗುವುದರಿಂದ ಸಂತೋಷವಾಗಿರುತ್ತೀಯ?"

ಎಂದು ಕೇಳಿದಾಗ ರಾಜನಿಗೆ ತಬ್ಬಿಬ್ಬಾಗುತ್ತದೆ ಕಾರಣ ರಾಜ ಕೇವಲ ಬಂಗಾರ/ ಸಂಪತ್ತನ್ನು ಸಂಗ್ರಹಿಸುತ್ತಿದ್ದನೇ ಹೊರತು, ಅದರ ಮೌಲ್ಯ ವಾಗಲೀ, ತನ್ನ ಬಳಿ ಏನೇನಿದೆ? ಮತ್ತೇನು ಬೇಕು? ಏನು ಅಗತ್ಯವಿದೆ? ಸಂಗ್ರಹಿಸಿದ ಸಂಪತ್ತನ್ನು ಹೇಗೆ ಸದುಪಯೋಗಿಸಬಹುದು? ಎಂದು ಯೋಚಿಸಿಯೇ ಇರಲಿಲ್ಲ. ಈ ಸಂಗ್ರಹಿಸುವ ಭರದಲ್ಲಿ ತಾನು ಏನನ್ನು ನಿರ್ಲಕ್ಷಿಸುತ್ತಿರುವೆ ಎಂಬ ಅಂಶವೂ ಮನಸ್ಸಿಗೆ ಬಂದಿರಲಿಲ್ಲ. ಆದ ಕಾರಣ ಇನ್ನೂ ಬೇಕು ಎಂಬ ಸುಳಿಗೆ ಸಿಕ್ಕು "ಇನ್ನೂ ಸಂಗ್ರಹಿಸುವ" ಮತ್ತಿನಲ್ಲಿದ್ದ ರಾಜ.

ಈ ಕಥೆ ನಮಗೂ ಬಹಳ ಅನ್ವಯಿಸುತ್ತದೆ ಅಲ್ಲವೇ?
ಅಗತ್ಯತೆ ಹಾಗೂ ಬೇಕು ಇವುಗಳ ವ್ಯತ್ಯಾಸವರಿಯದೆ ವಸ್ತುಗಳನ್ನು ಕಲೆಹಾಕುತ್ತಾ ಹೋಗುತ್ತೇವೆ. ಈ ನಿಟ್ಟಿನಲ್ಲಿ ಜೀವನದ ಮುಖ್ಯವಾದ ಅನೇಕ ಅಂಶಗಳನ್ನು ನಿರ್ಲಕ್ಷಿಸಿಬಿಡುತ್ತೇವೆ.

ಅನೇಕ ಬಾರಿ ನಮ್ಮಲ್ಲಿ ಏನಿದೆ? ಅದರ ಮೌಲ್ಯವೇನು? ಹೇಗೆ ಉಪಯೋಗಿಸಿಕೊಳ್ಳಬಹುದು?‌ ಹೊಸ ವಸ್ತುಗಳು ಅಗತ್ಯವಿದೆಯೇ ಇಲ್ಲವೇ? ಎಂದು ತಿಳಿದುಕೊಳ್ಳುವ ಗೋಜಿಗೇ ಹೋಗದೆ ಒಂದೇ ಸಮನೆ ವಸ್ತುಗಳನ್ನು ಖರೀದಿಸುತ್ತೇವೆ.

ಬಹಳ ಸುಲಭವಾಗಿ ಬೇಕೆಂದ ಆಕರ್ಷಕ ಆಕಾರ, ಬಣ್ಣದ ವಸ್ತುಗಳನ್ನು ಬೆರಳ ತುದಿಯಲ್ಲಿ ಆನ್‌ಲೈನ್ ಮೂಲಕ ವಸ್ತುಗಳನ್ನು ಯಾವಾಗೆಂದರೆ ಆಗ ಖರೀದಿಸುತ್ತೇವೆ. ಒಂದನ್ನು ಕೊಂಡರೆ ಮತ್ತೊಂದು ಉಚಿತ, ಈ ದಿನ ವಸ್ತುವನ್ನು ಕೊಂಡರೆ 50%, 90% ರಿಯಾಯಿತಿ ಎಂಬ ಆಕರ್ಷಕ ಸುಳಿಗೆ ಸಿಕ್ಕು ಹಾಕಿಕೊಳ್ಳುತ್ತಾ ಬೇಕೋ ಬಹಳ ಬೇಡವೋ ವಸ್ತುಗಳನ್ನು ಸಂಗ್ರಹಿಸುತ್ತಾ ಹೋಗುತ್ತೇವೆ. ಸರಿಯಾದ ಸಮಯಕ್ಕೆ ವಸ್ತುಗಳನ್ನು ಬಳಸದೆ ಎಷ್ಟೋ ಬಾರಿ ಕಸದ ಡಬ್ಬಿಗೆ ಹಾಕಿರುವುದೂ ಉಂಟು.

Psychology: ಸಂತೋಷ - ಮನಸ್ಥಿತಿ- ಆದ್ಯತೆPsychology: ಸಂತೋಷ - ಮನಸ್ಥಿತಿ- ಆದ್ಯತೆ

ಅನೇಕರು ಪ್ರತೀ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕುವುದರಿಂದ ಒತ್ತಡಕ್ಕೆ ಮಣಿದು ಖರೀದಿಸಿದ ಉಡುಪುಗಳನ್ನು ಪುನರ್ಬಳಕೆ ಮಾಡಲು ಹಿಂಜರಿಯುತ್ತಾರೆ. ಕಾರಣ ಅನಗತ್ಯ ಖರೀದಿ ಹಾಗು ಸಂಗ್ರಹಣ ಮುಂದುವರೆಯುತ್ತದೆ.

ಮಾರುಕಟ್ಟೆಯಲ್ಲಿ ಬಂದ ಪ್ರತಿ ಹೊಸ ವಸ್ತುಗಳನ್ನೂ ಹೊಂದಬೇಕು ಎಂದು ತಮಗೆ ತಾವೇ ನಿಯಮ ಹಾಕಿಕೊಂಡುಬಿಡುತ್ತಾರೆ. ಇದು ಒತ್ತಡವನ್ನು ಉಂಟುಮಾಡುತ್ತದೆ.

Psychology: Why We Want More, What is level of satisfaction explained in Kannada

ಇನ್ನು ಸುತ್ತಮುತ್ತದವರೊಂದಿಗೆ "ಹೋಲಿಕೆ" ಮಾಡಿಕೊಳ್ಳುವುದೂ ಸಹ ಅನಗತ್ಯ ಖರೀದಿಗೆ ಕಾರಣವಾಗುತ್ತದೆ. ಕಾರಣಾಂತರಗಳಿಂದ ಇಷ್ಟ ಪಟ್ಟ ವಸ್ತುಗಳನ್ನು ಹೊಂದಲು ಆಗದಾಗ ಮಾನಸಿಕ ಕುಗ್ಗುವಿಕೆ ಉಂಟಾಗುತ್ತದೆ.

ಹೋಲಿಕೆಯಿಂದ, ಕೀಳರಿಮೆ ಹಾಗು ಖಿನ್ನತೆ ಹೆಚ್ಚುತ್ತದೆ. ಖಿನ್ನತೆ ಯಲ್ಲಿರುವಾಗ ತಮಗೆ ತಾವೇ ಸಂತೋಷಪಡಿಸಿಕೊಳ್ಳಲು ವಸ್ತುಗಳನ್ನು ಖರೀದಿಸುತ್ತಾ ಹೋಗುತ್ತಾರೆ. ಒಮ್ಮೆ ಪ್ರಾರಂಭವಾದ ಮೇಲೆ ಖರೀದಿಗೆ ಇತಿ‌ಮಿತಯಾಗಲೀ ಅಥವಾ ಯಾವಾಗ ನಿಲ್ಲಿಸಬೇಕು ಎಂಬ ಅರಿವಿನ ಶಕ್ತಿ ಇರುವುದಿಲ್ಲ.

ಮನಸ್ಸು/ಭಾವನೆ

ಇನ್ನೂ ಬೇಕು ಎಂಬುದು ಕೇವಲ ವಸ್ತುಗಳಿಗಲ್ಲದೇ, ಕೆಲಸ ಸ್ಥಾನ ಹುದ್ದೆಗಳಿಗೂ ಅನ್ವಯಿಸುತ್ತದೆ. ಬಹಳ‌ಬೇಗ ಮುಂದಿನ ಹಂತಕ್ಕೆ ಏರುವ ಆಸೆಯಲ್ಲಿ ಸುತ್ತಮುತ್ತಲಿನವರ ಭಾವನೆ ವಿಚಾರಗಳನ್ನು ಗೌರವಿಸದೆ, ನೋವುಂಟು ಮಾಡುತ್ತಾ ಮಾನವ ಸಂಬಂಧಗಳನ್ನು ನಿರ್ಲಕ್ಷ್ಯ ಮಾಡಿ, ಮುಂದೆ ಪಶ್ಚಾತಾಪ ಪಡುವ ಸಾಧ್ಯತೆಗಳೂ ಇವೆ.

Psychology: ನಿಮ್ಮ ಬ್ಯಾಗಿನಲ್ಲಿ ಏನಿದೆ?; ಮನಸ್ಸನ್ನು ಹಗುರಾಗಿಸಿಕೊಳ್ಳಿPsychology: ನಿಮ್ಮ ಬ್ಯಾಗಿನಲ್ಲಿ ಏನಿದೆ?; ಮನಸ್ಸನ್ನು ಹಗುರಾಗಿಸಿಕೊಳ್ಳಿ

ತೃಪ್ತಿ ಇರದೆ "ಇನ್ನೂ ಬೇಕು" ಅಥವಾ ಇನ್ನೂ ಹೆಚ್ಚಿನದನ್ನೇನೋ ಸಾಧಿಸಬೇಕು ಎಂಬ ಭರದಲ್ಲಿ ಹತ್ತಿರದವರ ಅನೇಕ ಯೋಚನೆಗಳನ್ನು, ಭಾವನೆಗಳನ್ನು ಗೌರವಿಸದೆ ಬದಿಗಿಕ್ಕಿದರೆ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ.

ಕಾರಣಗಳು

* ಅಗತ್ಯ ಹಾಗು ಬೇಕು ಇವುಗಳ ವ್ಯತ್ಯಾಸ ತಿಳಿಯದಿರುವುದು

* ತಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು

* ಇರುವುದರಲ್ಲಿ ತೃಪ್ತಿ ಇಲ್ಲದಿರುವುದು

* ಇರುವುದನ್ನು ಸದುಪಯೋಗಗೊಳಿಸಿಕೊಳ್ಳಲು ತಿಳಿಯದಿರುವುದು

* ಧನ್ಯತಾಭಾವವಿರದೆ ಇರುವುದು.

Psychology: Why We Want More, What is level of satisfaction explained in Kannada
ಪರಿಹಾರ

* ಕೇವಲ ವಸ್ತುಗಳನ್ನು ಸಂಗ್ರಹ ಮಾಡದೆ, ಅಗತ್ಯಕ್ಕೆ ತಕ್ಕಂತೆ ಖರೀದಿ ಹಾಗು ಖರೀದಿಸಿದ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವುದು ಬಹಳ ಮುಖ್ಯ.

* ಒತ್ತಡಕ್ಕೆ ಮಣಿಯದೆ, ವಸ್ತುಗಳ ಪುನರ್ಬಳಕೆ ಬಹಳ ಸಹಜವಾದುದು ಎಂದು ಮನದಟ್ಟುಮಾಡಿಕೊಳ್ಳುವುದು.

* ವಾಸ್ತವವಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು.

* ಮಾನವ ಸಂಬಂಧಗಳಿಗೆ ಹೆಚ್ಚಿನ ಬೆಲೆ ಕೊಡುವುದು ಉತ್ತಮ.

ನೆನಪಿಟ್ಟುಕೊಳ್ಳಿ

ಬೇಕು ಎಂದು ಯೋಚಿಸುವುದು ಖಂಡಿತ ತಪ್ಪಲ್ಲ. ಆದರೆ ಕೇವಲ ಸಂಗ್ರಹ ಮಾಡದೆ, ಸೌಕರ್ಯಗಳು, ವಸ್ತು, ಸಮಯ, ಅಧಿಕಾರದ ಸದುಪಯೋಗಕ್ಕೆ ಹೆಚ್ಚಿನ ಮಹತ್ವ ಕೊಡುವುದು ಒಳಿತು.

English summary
Psychology of Why We Want More, What is level of satisfaction explained in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X