• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ದೀಪಾವಳಿ: ಎಲ್ಲಕ್ಕಿಂತ ಉತ್ತಮವಾದ ಉಡುಗೊರೆ ಏನು?

By ರೇಖಾ ಬೆಳವಾಡಿ, ಅಪ್ತ ಸಲಹೆಗಾರರು
|
Google Oneindia Kannada News

ದೀಪಾವಳಿ ಬಂದೇ ಬಿಟ್ಟಿತು. ಸುಮ ಮತ್ತು ಸಂದೀಪ್ ತರಾತುರಿಯಲ್ಲಿ ಇದ್ದರು. ಮನೆ ಸ್ವಚ್ಚಗೊಳಿಸಬೇಕು, ಹಬ್ಬಕ್ಕೆ ವಿವಿಧ ಸಿಹಿ ಹಾಗು ತಿನಿಸುಗಳನ್ನು‌ಮಾಡಬೇಕು, ಮನೆಯವರಿಗೆ, ಬಟ್ಟೆ ಹಾಗೂ ಸ್ನೇಹಿತರಿಗೆ ಉಡುಗೊರೆಯನ್ನು ತೆಗೆದುಕೊಳ್ಳಬೇಕು, ಮನೆಯನ್ನು ರಂಗೋಲಿ ತಳಿರು ತೋರಣಗಳಿಂದ ಸಿಂಗರಿಸಬೇಕು ಹೀಗೆ ತಯಾರಿಯ ಪಟ್ಟಿ ಬೆಳೆಯುತ್ತಲೇ ಹೋಯಿತು.

ಹಬ್ಬಕ್ಕೆಂದು ಕೆಲವು ಬಂಧುಗಳು ಸ್ನೇಹಿತರು ಹಾಗು ಆಫೀಸಿನವರನ್ನು ಆಹ್ವಾನಿಸಿದ್ದರು ಸುಮ ಮತ್ತು ಸಂದೀಪ್. ಅತಿಥಿಗಳು ಬಂದಾಗ ಊಟ, ಉಡುಗೊರೆ ಇತ್ಯಾದಿ ವ್ಯವಸ್ಥೆಗಳು ಬಹಳ ಸರಿಯಾಗಿ ಪರಿಪೂರ್ಣವಾಗಿ ಇರಬೇಕು ಎಂಬುದರ ಬಗ್ಗೆ ಸುಮ ಬಹಳ ಕಟ್ಟುನಿಟ್ಟಾಗಿದ್ದಳು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರೂ ಜನ ಸಂಪರ್ಕಕ್ಕೆ ಆದ್ಯತೆ ನೀಡುತ್ತಿದ್ದರು.

ಸುಮ ಆನ್‌ಲೈನ್‌ ಆ್ಯಪ್ ಮೂಲಕ ಮನೆ ಸ್ವಚ್ಛಗೊಳಿಸಲು ಕೆಲವರು ಜನರನ್ನು ಕರೆಸಲು ನಿರ್ಧರಿಸಿದಳು.

ಮನೆ ಸಿಂಗರಿಸಲು ಅನೇಕ ದೀಪದ ತಂತಿಗಳು, ಬಣ್ಣ ಬಣ್ಣದ ಸಾಮಾನುಗಳನ್ನೂ, ಆಕಾಶಬುಟ್ಟಿ, ವಿವಿಧ ರೀತಿಯ ಮೇಣದ ಬತ್ತಿಗಳನ್ನೂ, ಮನೆಯವರಿಗೆ ಬೇಕಾದ ಬಟ್ಟೆಗಳನ್ನೂ ಸಹ ಆನ್‌ಲೈನ್‌ನಿಂದ ಆರ್ಡರ್ ಮಾಡಿದಳು.

ಸಮಯವಿಲ್ಲದ ಕಾರಣ, ಕೊನೆಯ ಘಳಿಗೆಯಲ್ಲಿ ತನ್ನ ಗೆಳತಿ ಹೊಸದಾಗಿ ಪ್ರಾರಂಭಿಸಿದ ಆನ್‌ಲೈನ್‌ ಗಿಫ್ಟ್‌ ಸೆಂಟರ್ ಇಂದ ಕೆಲವು ಉಡುಗೊರೆಗಳನ್ನು ತರಿಸಿಕೊಂಡಳು. ಹಬ್ಬದ ದಿನ ಅತಿಥಿಗಳು ಬರುವ ಮೊದಲು ಉಡುಗೊರೆಗಳನ್ನು ವಿಂಗಡಿಸಿ, ಹೆಸರುಗಳನ್ನು ಬರೆದು ತಯಾರಿಡಬೇಕೆಂದು ಎಣಿಸಿದ್ದಳು.

ಅನೇಕ ಸಿಹಿ ತಿಂಡಿ ತಿನಿಸುಗಳನ್ನೂ, ಪದಾರ್ಥಗಳನ್ನು ತನ್ನ ಅಪಾರ್ಟ್ಮೆಂಟ್‌ನಲ್ಲಿಯೇ ಆರ್ಡರ್ ಮಾಡಿದಳು.

ಮಾವಿನ ಸೊಪ್ಪಿನ ಆದಿಯಾಗಿ ತರಕಾರಿ ಹಣ್ಣುಗಳಿಂದ ಹಿಡಿದು ಬಹುತೇಕ ಪದಾರ್ಥಗಳೂ ಆನ್‌ಲೈನ್‌ ತಾಣಗಳ ಮೂಲಕ ಮನೆ ಬಾಗಿಲಿಗೆ ಬಂದಿತು.

ಹಬ್ಬದ ದಿನ ಎಲ್ಲರೂ ಸೇರಿದರು.

ಸುಮ ಮತ್ತು ಸಂದೀಪ್ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಎಲ್ಲೂ ಏರುಪೇರಿಲ್ಲ. ಬೇಕಾದ ಎಲ್ಲಾ ವಸ್ತುಗಳು, ಬೇಕೆಂದಾಗ ಮನೆ ಬಾಗಿಲಿಗೇ ಬಂದುಬಿಟ್ಟಿತ್ತು. ಅತಿಥಿ ಸತ್ಕಾರಕ್ಕೆ ಬಹಳ ಖುಷಿ ಇಂದ ಎಲ್ಲಾ ವ್ಯವಸ್ಥೆ ಮಾಡಿದರು.

ಬಹಳ‌ ದಿನಗಳ ನಂತರ ಹಬ್ಬಕ್ಕೆ ಎಲ್ಲರೂ ಸೇರಿದ್ದರು.

ಎಲ್ಲರೂ ಬಹಳ ಖುಷಿಯಿಂದ ಮಾತುಕತೆಯಾಡುತ್ತಾ, ನಕ್ಕು ನಲಿದರು. ಬಣ್ಣ ಬಣ್ಣದ ಉಡುಗೆ ತೊಟ್ಟು ಸಂಭ್ರಮಿಸಿದರು. ದೊಡ್ಡವರು ಚಿಕ್ಕವರು ಹೀಗೆ ಎಲ್ಲರೂ ಬೆರತು ಸಂಭ್ರಮಿಸಿದರು. ಅನೇಕರು ಹೊಸದಾಗಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಪರಿಚಿತರಾದರು. ಅವರವರ ಆಸಕ್ತಿ, ಪ್ರತಿಭೆಗಳ ಅನಾವರಣವಾಯಿತು‌. ಭೂ ಚಕ್ರ, ಹೂ ಕುಂಡಗಳು ಬೆಳಕನ್ನು ಹೆಚ್ಚಿಸಿತು. ಒಟ್ಟಿಗೆ ಕುಳಿತು ರುಚಿಕರ ಸ್ವಾದಿಷ್ಟವಾದ ಊಟ ಮಾಡಿದರು.

Deepavali

ಎಲ್ಲರೂ ಹೊರಡುವ ಸಮಯ, ಸುಮ‌‌ ಹಾಗು ಸಂದೀಪ್ಎಲ್ಲರಿಗೂ ಉಡುಗೊರೆಯನ್ನು ಕೊಡುವಾಗ ಅದು ಹೇಗೋ ಗೆಳೆಯನೊಬ್ಬನ ಉಡುಗೊರೆ ಕಾಣದಾಗಿತು. ಇಬ್ಬರಿಗೂ ಕಳವಳ ಉಂಟಾಯಿತು. ಗೆಳೆಯ ಪ್ರದೀಪನಿಗೆ ಬೇಸರವಾಗುವುದೇನೋ, ಎಂದುಕೊಳ್ಳುತ್ತಿರುವಾಗಲೇ... ಪ್ರದೀಪ್ ಬಹಳ ಪ್ರೀತಿಯಿಂದ ಸಂದೀಪನ ಕೈ ಹಿಡಿದುಕೊಳ್ಳುತ್ತಾ ತನಗೆ ಇಂದು ಬಹಳ ಉತ್ತಮವಾದ ಉಡುಗೊರೆ ದೊರೆತಿದೆ.

ಈಗಿನ ಯಾಂತ್ರಿಕ ಬದುಕಿನಲ್ಲಿ ಎಲ್ಲವನ್ನೂ ಬೆರಳಿನ ತುದಿಯಲ್ಲಿ ಆರ್ಡರ್ ಮಾಡಬಹುದು. ಕ್ಷಣಮಾತ್ರದಲ್ಲಿ ಮನೆಗೆ ವಸ್ತುಗಳು ಬರುತ್ತವೆ. ವ್ಯವಸ್ಥೆಗಳನ್ನು ಮಾಡಬಹುದು. ಜನ ಸಂಪರ್ಕ ಕಡಿಮೆಯಾಗುತ್ತಿರುವ ಕಾಲದಲ್ಲಿ, ಎಲ್ಲರನ್ನೂ ಒಟ್ಟುಗೂಡಿಸುವ, ಭಾವನೆ ಬೆಸೆಯುವ ಪ್ರಯತ್ನದಲ್ಲಿರುವ ಸುಮ ಹಾಗು ಸಂದೀಪ್ ಕೊಟ್ಟ ಸಮಯದ ಉಡುಗೊರೆಗೆ ಬಹಳ ಸಂತೋಷಪಟ್ಟನು. ಸ್ವಾರ್ಥ ರಹಿತವಾಗಿ ಸಮಯಕ್ಕೆ ಸ್ಪಂದಿಸುವ ಅಂಶವನ್ನು ಕೊಂಡಾಡಿದನು. ಇದು ಎಲ್ಲಕ್ಕಿಂತ ಉತ್ತಮವಾದ ಉಡುಗೊರೆ‌ ಎಂದನು.

ಹಾಗಾದರೆ ಉಡುಗೊರೆಯು ಸ್ವರೂಪ ಹೀಗೂ ಇರಬಹುದೆ....

 • ಒಬ್ಬರನ್ನು ಇರುವಂತೆ ಒಪ್ಪಿಕೊಳ್ಳುವುದು (acceptance )
 • ವ್ಯತ್ಯಾಸಗಳನ್ನು ಗೌರವಿಸುವುದು (respecting differences)
 • ಹೊಂದುಕೊಳ್ಳುವುದು
 • ಪ್ರೀತಿ
 • ವಿಶ್ವಾಸ
 • ನಂಬಿಕೆ
 • ಧೈರ್ಯ - ಹುರಿದುಂಬಿಸುವುದು
 • ಧನಾತ್ಮಕ ಚಿಂತನೆಗಳು ಬೆಳೆಸುವುದು
 • ಭಾವನೆಗಳನ್ನು ವ್ಯಕ್ತಪಡಿಸುವುದು
 • ಗ್ರಹಿಕೆ (perception)
 • ಜವಾಬ್ದಾರಿಯನ್ನು ವಹಿಸಿಕೊಳ್ಳುವುದು (taking responsibility)
 • ಬೇಕಾದಾಗ ಕ್ಷಮೆ ಯಾಚನೆ (apologizing)
 • ಸಹಾನುಭೂತಿ (empathy)
 • ಸಂಘರ್ಷಗಳನ್ನು ನಿಭಾಯಿಸುವ ರೀತಿ (dealing with conflicts)
 • ಸಹಕಾರ (cooperation)
 • ಸಮ್ಮತ ಇಲ್ಲದಿದ್ದಲ್ಲಿ, ಮತ್ತೊಬ್ಬರನ್ನು ನೋಯಿಸದೆ ನಯವಾಗಿ "ಇಲ್ಲ" ಎನ್ನುವುದು
 • ಉತ್ತಮ ಸಂವಹನ ಮುಂತಾದವುಗಳು ಅಮೂಲ್ಯವಾದ ಉಡುಗೊರೆಯಾಗಿದ್ದುಇವು ಯಾವುದೇ ಆನ್ ಲೈನ್ app ಅಲ್ಲಿ ಸಿಗುವುದಿಲ್ಲ.

ಪ್ರಯತ್ನ ಪೂರ್ವಕವಾಗಿ ಮನುಷ್ಯ ಸಂಪರ್ಕದಿಂದ ಹಾಗು ಒಡನಾಟದಿಂದ ಮಾತ್ರ ಸಾಧ್ಯ.

ಈ ದೀಪಾವಳಿಗೆ ಮನೆ ಸ್ಚಚ್ಛಗೊಳಿಸುವಂತೆ ಮನಸ್ಸಿನ ನಕಾರಾತ್ಮಕತೆಯನ್ನೂ ಸ್ವಚ್ಛಗೊಳಿಸಿ

 • ಮನೆಯನ್ನು ಸಿಂಗರಿಸುವಂತೆ, ಮನವನ್ನೂ ಸಿಂಗರಿಸಿ.
 • ಸಿಹಿ ಹಂಚುವಂತೆ, ಸಿಹಿಯಾದ ಒಳ್ಳೆಯ ಮಾತುಗಳನ್ನಾಡಿರಿ.
 • ದೀಪಗಳು ಮನೆಯನ್ನು ಬೆಳಗುವಂತೆ, ಮನಗಳೂ ಬೆಳಗಲಿ.
 • ಸಮಯವೆಂಬ ಉಡುಗೊರೆ ಮನೆ ಮನಸ್ಸುಗಳನ್ನು ಬೆಸೆಯಲಿ.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

English summary
Psychology: How to Choose Gifts and What is the best gift during Deepavali
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X