ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ: 1 ರಿಂದ 5ನೇ ತರಗತಿವರೆಗೆ ಕನ್ನಡದ ಜೊತೆಗೆ ಇಂಗ್ಲೀಷ್ ಪಾಠ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. 2026-27 ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಒಟ್ಟು 15 ಜಿಲ್ಲೆಗಳಲ್ಲಿನ 24,328 ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.
1 ನೇ ತರಗತಿಯಿಂದ 5 ನೇ ತರಗತಿಯವರೆಗೆ ಈ ದ್ವಿಭಾಷಾ ವ್ಯವಸ್ಥೆ ಜಾರಿಯಲ್ಲಿರಲಿದೆ. ಅಂದರೆ, ಇನ್ನು ಮುಂದೆ ಈ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಪಾಠ ಮಾಡಲಾಗುತ್ತದೆ.

ಯಾವ ಶಾಲೆಗಳಲ್ಲಿ ಜಾರಿ?
ಈ ಹೊಸ ಯೋಜನೆಯು ಪಿಎಂಶ್ರೀ, ಇಸಿಸಿಇ, ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗಳು ಸೇರಿದಂತೆ ಒಟ್ಟು 24,328 ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಜ್ಞಾನ ಬಹಳ ಮುಖ್ಯವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಭಾಷಾ ಸಮಸ್ಯೆಯಿಂದ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಒಂದನೇ ತರಗತಿಯಿಂದಲೇ ಮಕ್ಕಳಿಗೆ ಮಾತೃಭಾಷೆ ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲಿಯೂ ವಿಷಯಗಳನ್ನು ಕಲಿಸುವುದರಿಂದ, ಭಾಷೆಯ ಮೇಲಿನ ಹಿಡಿತ ಹೆಚ್ಚಾಗುತ್ತದೆ.
6ನೇ ತರಗತಿಯಿಂದ ಆಯ್ಕೆಗೆ ಅವಕಾಶ
ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ, 6ನೇ ತರಗತಿಗೆ ಬಂದಾಗ ತಮ್ಮ ಮುಂದಿನ ಶಿಕ್ಷಣವನ್ನು ಯಾವ ಮಾಧ್ಯಮದಲ್ಲಿ ಮುಂದುವರಿಸಬೇಕು ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಸಂಪೂರ್ಣವಾಗಿ ಕನ್ನಡ ಮಾಧ್ಯಮ ಅಥವಾ ಇಂಗ್ಲೀಷ್ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು.
ಖಾಸಗಿ ಶಾಲೆಗಳತ್ತ ಮುಖ ಮಾಡುವುದು ತಪ್ಪಲಿದೆ
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳು ಆಂಗ್ಲ ಭಾಷೆ ಕಲಿಯಲಿ ಎಂಬ ಒಂದೇ ಕಾರಣಕ್ಕೆ ದುಬಾರಿ ಶುಲ್ಕ ಪಾವತಿಸಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಸರ್ಕಾರದ ಈ ದ್ವಿಭಾಷಾ ಶಿಕ್ಷಣ ನೀತಿಯಿಂದಾಗಿ ಸರ್ಕಾರಿ ಶಾಲೆಗಳಲ್ಲೇ ಮಕ್ಕಳಿಗೆ ಉತ್ತಮ ಇಂಗ್ಲೀಷ್ ಜ್ಞಾನ ಸಿಗಲಿದೆ. ಇದರಿಂದ ಗ್ರಾಮೀಣ ಭಾಗದ ಪೋಷಕರ ಆರ್ಥಿಕ ಹೊರೆ ಕಡಿಮೆಯಾಗುವುದರ ಜೊತೆಗೆ, ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ.
ಆರಂಭಿಕ ಹಂತದಲ್ಲಿ 15 ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದ್ದು, ಯೋಜನೆಯ ಯಶಸ್ಸನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಮಾತೃಭಾಷೆಯ ಜೊತೆಗೆ ಜಾಗತಿಕ ಭಾಷೆಯನ್ನು ಸಮಾನವಾಗಿ ಕಲಿಸುವ ಈ ಪ್ರಯತ್ನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ.












Click it and Unblock the Notifications