ಸಿಎಂ ಗದ್ದುಗೆ ಬೆನ್ನಲ್ಲೇ ಡಿಕೆಶಿಗೆ ಹೊಸ ತಲೆನೋವು: 'ಬೆಂಗಳೂರು ಅಭಿವೃದ್ಧಿ' ಖಾತೆ ಮೇಲೆ ಸ್ವಪಕ್ಷದವರದ್ದೇ ಕಣ್ಣು!
ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೇರಲಿರುವ ಡಿಕೆ ಶಿವಕುಮಾರ್ ಅವರು 'ಬ್ರ್ಯಾಂಡ್ ಬೆಂಗಳೂರು' ಯೋಜನೆ ಘೋಷಿಸಿದ್ದರು. ಮೂರು ವರ್ಷಗಳಿಂದ ಉಪಮುಖ್ಯಮಂತ್ರಿಯಾಗಿ, ಬೆಂಗಳೂರು ಅಭಿವೃದ್ಧಿ ಖಾತೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇದೀಗ ಆ ಸಚಿವ ಖಾತೆ ಮೇಲೆ ಸ್ವಪಕ್ಷದವರ ಕಣ್ಣು ಬಿದ್ದಿದೆ. ಮುಖ್ಯಮಂತ್ರಿ ಆದ ಮೇಲೂ ಡಿಕೆಶಿ ಅವರೇ ಖಾತೆ ನಿರ್ವಹಿಸುತ್ತಾರೆ ಎಂದರೆ ಅದನ್ನು ಆಕ್ಷೇಪಿಸಲು ಕೆಲವರು ಸಜ್ಜಾಗಿದ್ದಾರೆ. ಹೀಗಾಗಿ ನೂತನ ಸಿಎಂ ಮುಂದೆ ಹೊಸ ಸವಾಲು ಎದುರಾದಂತಾಗಿದೆ.
ಬೆಂಗಳೂರಿನಲ್ಲಿ ಮಹತ್ವದ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದ್ದ ಡಿಕೆ ಶಿವಕುಮಾರ್ ಅವರೇ ಬೆಂಗಳೂರು ಅಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ಮುಂದುವರಿಸುತ್ತಾರೆಯೇ? ಅಥವಾ ಬೇರೆಯವರಿಗೆ ಬಿಟ್ಟು ಕೊಡುತ್ತಾರೆಯೇ? ಎಂಬುದು ಬಹುಶಃ ಬುಧವಾರ ಪದಗ್ರಹಣ ವೇಳೆ ತಿಳಿಯುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮಲ್ಲಿ ಉಳಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಸಚಿವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ಅಭಿವೃದ್ಧಿಗೆ ಪೂರ್ಣಾವಧಿ ಸಚಿವರು ಬೇಕು ಎಂಬುದು ಸ್ವಪಕ್ಷದ ಕೆಲವು ನಾಯಕರ ವಾದವಾಗಿದೆ.
ಕಾಂಗ್ರೆಸ್ ಹಿರಿಯ ಸಚಿವರಾದ ರಾಮಲಿಂಗಾ ರೆಡ್ಡಿ, ಈ ಹಿಂದೆ ಇದೇ ಖಾತೆ ನಿರ್ವಹಿಸಿದ್ದ ಕೆ.ಜೆ. ಜಾರ್ಜ್ ಮತ್ತು ಕೃಷ್ಣ ಬೈರೇಗೌಡ ಅವರು ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಸಂಪುಟ ರಚನೆ ಬಿಸಿಯಲ್ಲಿ ತಮ್ಮ ಖಾತೆ ಉಳಿಸಿಕೊಳ್ಳುವ ಸವಾಲು ಡಿಕೆಶಿ ಅವರ ಮುಂದಿದೆ.
ಬೆಂಗಳೂರು ಅಭಿವೃದ್ಧಿ ಖಾತೆ ಏಕೆ ಮುಖ್ಯ?
ಬೆಂಗಳೂರು ಅಭಿವೃದ್ಧಿ ಖಾತೆ ವಿವಿಧ ಸಚಿವ ಸ್ಥಾನಗಳಂತೆ ಅತ್ಯಂತ ಪ್ರಮುಖ ಮತ್ತು ಪ್ರಭಾವಿ ಸ್ಥಾನವಾಗಿದೆ. ಕಳೆದ ಮೂರು ವರ್ಷಗಳಿಂದ ಡಿಕೆ ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಉಪ್ರಕಮದೊಂದಿಗೆ ಅತ್ಯುತ್ತಮ ನಂಟು ಹೊಂದಿದ್ದಾರೆ. ವಿಪಕ್ಷಗಳ ವಿರೋಧದ ನಡುವೆಯು ದೊಡ್ಡ ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ. ನಗರದ ಆಡಳಿತ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಗಿ ಪುನರ್ ರಚಿಸಿದ ಕೀರ್ತಿ ಅವರದ್ದಾಗಿದೆ.
ಈ ಎಲ್ಲ ಯೋಜನೆಗಳಿಂದ ಇದೇ ತಿಂಗಳು ನಡೆಯಲಿರುವ ಜಿಬಿಎ ಚುನಾವಣೆಗಳಲ್ಲಿ ಅವರ ಪ್ರಯತ್ನಗಳು ಫಲ ನೀಡುತ್ತವೆ ಎಂದು ಅವರು ನಂಬಿದ್ದಾರೆ. ಪಕ್ಷಕ್ಕೆ ಇದರಿಂದ ಮತ್ತಷ್ಟು ಅನುಕೂಲವಾಗಲಿದೆ ಎಂಬ ವಿಶ್ವಾಸ ಅವರಲ್ಲಿದೆ. ಈ ಕಾರಣಕ್ಕೆ ಆ ಸ್ಥಾನ ಬೇರೆಯವರಿಗೆ ಬಿಟ್ಟು ಕೊಡದೇ ಅವರು ತಮ್ಮಲ್ಲಿಯೇ ಉಳಿಸಿಕೊಳ್ಳುತ್ತಾರೆ ಎಂದು ಅವರೊಂದಿಗೆ ಕಳೆದ ಮೂರು ವರ್ಷದಿಂದ ಕೆಲಸ ಮಾಡಿದ ಕಾರ್ಯಕರ್ತರು ತಿಳಿಸಿದ್ದಾರೆ.
ಬೇರೆಯವರು ಆದರೂ ಡಿಕೆಶಿಯೇ ಮುನ್ನಡೆಸುತ್ತಾರೆ!
ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡ ಮಾಜಿ ಸಚಿವರೊಬ್ಬರು, ಅವರು ಮುಖ್ಯಮಂತ್ರಿ ಆದ ಬಳಿಕವು ಜಿಬಿಎ ಅಧ್ಯಕ್ಷರಾಗಿರುತ್ತಾರೆ. ಒಂದು ವೇಳೆ ಬೇರೆ ಯಾರಾದರೂ ಉಸ್ತುವಾರಿ ವಹಿಸಿಕೊಂಡರೂ ಇಲಾಖೆಯನ್ನು ಅವರೇ ಮುನ್ನಡೆಸುವ ನಿರೀಕ್ಷೆಗಳಿವೆ ಎಂದಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಖಾತೆ ಬಿಟ್ಟುಕೊಡದಿರಲು ತೀರ್ಮಾನಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಬೆಂಗಳೂರು ಸಂಚಾರ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ಡಿಕೆ ಶಿವಕುಮಾರ್ ಅವರು, ಸುರಂಗ ರಸ್ತೆಗಳು, ಪೆರಿಫೆರಲ್ ರಿಂಗ್ ರಸ್ತೆ ಮುಂತಾದ ಪ್ರಮುಖ ದೊಡ್ಡ ಯೋಜನೆಗಳ ಜಾರಿ ಮೂಲಕ ನಗರಕ್ಕೆ ಕಾರ್ಯಸೂಚಿ ನಿರ್ಮಿಸಿದ್ದಾರೆ. ಇದೀಗ ಅವರು ಸಿಎಂ ಸ್ಥಾನಕ್ಕೇರುವ ಕಾರಣ ಆ ಕಾರ್ಯಸೂಚಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು, ವಿಚಲನಗೊಳ್ಳದಂತೆ ಎಚ್ಚರಿಕೆ ವಹಿಸಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.













Click it and Unblock the Notifications