New Cabinet: ಡಿಕೆಶಿ ಸಂಪುಟಕ್ಕೆ ಹೊಸ ಮುಖಗಳು ಬರಲಿ: ಟಿಕೆ ತ್ಯಾಗರಾಜ್ ವಿಶ್ಲೇಷಣೆ
Dk Shivakumar New Cabinet: ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಚಿವ ಸಂಪುಟ ಸಭೆಯನ್ನು ವಿಸರ್ಜನೆ ಮಾಡಿದ್ದಾರೆ. ಹೊಸ ಸಚಿವ ಸಂಪುಟ ಸಭೆ ರಚನೆಗೆ ಸಂಬಂಧಿಸಿದಂತೆ ಕಸರತ್ತು ಮುಂದುವರಿದಿದೆ. ಆದರೆ, ಜಾತಿ ರಾಜಕೀಯದ ಹೊರತಾಗಿ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯದಡಿ ಸಚಿವರನ್ನು ಆಯ್ಕೆ ಮಾಡಬೇಕು ಎನ್ನುವುದು ಮರೆಯಾಗಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಟಿ.ಕೆ.ತ್ಯಾಗರಾಜ್ ಅವರ ವಿಶ್ಲೇಷಣಾತ್ಮಕ ಬರಹ ಇಲ್ಲಿದೆ.
ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿಗಳಲ್ಲಿ ಒಕ್ಕಲಿಗ ಕೋಟಾ, ಲಿಂಗಾಯತ ಕೋಟಾ, ಮುಸ್ಲಿಂ ಕೋಟಾ, ದಲಿತ ಕೋಟಾ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ದಿಟ್ಟತನ, ದಕ್ಷತೆ, ಪ್ರಾಮಾಣಿಕತೆ, ಕ್ರಿಯಾಶೀಲತೆ, ಸಭ್ಯತೆ, ಸರಳತೆ ಒಳಗೊಂಡ ಸಮರ್ಥರ ಕೋಟಾ ಎಂಬ ಮಾತು ಕೇಳುತ್ತಿಲ್ಲ. ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯದಡಿ ಸಚಿವರನ್ನು ಆಯ್ಕೆ ಮಾಡಬೇಕು ನಿಜ. ಆದರೆ ಇದೇ ಸೂತ್ರದಡಿ ಯೋಗ್ಯರನ್ನು ಪರಿಗಣಿಸದ ಪರಿಸ್ಥಿತಿ ವರ್ಷಗಳಿಂದ ಇದೆ. ಯೋಗ್ಯರ ಮಂತ್ರಿಮಂಡಲ ಎಂಬುದೇ ಮರೀಚಿಕೆಯಾಗಿದೆ.

ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿರುವ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಮೂರ್ನಾಲ್ಕು ಹೆಸರುಗಳನ್ನು ಹೊರತುಪಡಿಸಿದರೆ ಬಹುತೇಕ ಡಿ.ಕೆ.ಶಿವಕುಮಾರ್ ನೇತೃತ್ವದ ಸಿದ್ದರಾಮಯ್ಯ ಸಂಪುಟ ಇದ್ದಂತಿದೆ. ವಾಕರಿಕೆ ತರಿಸಿರುವ ಹಳೆ ಮುಖಗಳ ಬದಲು ಸಾಧ್ಯವಾದಷ್ಟು ಹೊಸ ಮುಖಗಳನ್ನು ಪರಿಗಣಿಸುವುದು ಒಳಿತು. ನಿಷ್ಕ್ರಿಯರು, ಭ್ರಷ್ಟರನ್ನು ಮುಲಾಜಿಲ್ಲದೇ ಹೊರಗಿಡುವುದು ಒಳ್ಳೆಯದು. ಆದರೆ ಅದು ಅಷ್ಟು ಸುಲಭವಲ್ಲ. ದಿಟ್ಟತನ, ತತ್ವ ನಿಷ್ಠೆ, ಪ್ರಗತಿಪರ ಚಿಂತನೆ ಹಿನ್ನೆಲೆಯಲ್ಲಿ ಬಿ.ಕೆ.ಹರಿಪ್ರಸಾದ್ ಸಚಿವ ಸ್ಥಾನಕ್ಕಾಗಿ ಮೊದಲೇ ಪರಿಗಣಿಸಬೇಕಾದ ಹೆಸರು. ಹರಿಪ್ರಸಾದ್ ಸೇರ್ಪಡೆಯಿಂದ ಮಂತ್ರಿಮಂಡಲಕ್ಕೂ, ಡಿಕೆಶಿಗೂ ಗೌರವ ತರುತ್ತದೆ. ಅದೇನೋ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸತೀಶ್ ಜಾರಕೀಹೊಳಿ, ಹರಿಪ್ರಸಾದ್ ತೀವ್ರ ಪ್ರಯತ್ನ ನಡೆಸಿದ್ದಾರೆ ಎಂದು ಮಾಧ್ಯಮಗಳು ಹೇಳುತ್ತಿವೆ. ಆದರೆ ಕೆಪಿಸಿಸಿ ಅಧ್ಯಕ್ಷ ಗಾದಿ ಎಂದರೆ ಕೋಟಿಗಟ್ಟಲೆ ಹಣ ಇರುವಂಥ ಸಿರಿವಂತರೇ ಬೇಕು. ಸತೀಶ್ ಜಾರಕೀಹೊಳಿ, ಎಂ.ಬಿ.ಪಾಟೀಲ್ ತರಹದವರಾದರೆ ಖರ್ಚು ಮಾಡಬಲ್ಲರು. ಆದರೆ ಹರಿಪ್ರಸಾದ್ ಸಿರಿವಂತರೇನಲ್ಲ. ಮಾಧ್ಯಮಗಳೇ ಅವರ ಹೆಸರನ್ನು ಬಿತ್ತನೆ ಮಾಡಿದೆಯೋ, ಅವರೇ ಈ ಹುದ್ದೆಯನ್ನು ಬಯಸಿದ್ದಾರೋ ಅಥವಾ ಅವರ
ತಲೆಯನ್ನು ಯಾರಾದರೂ ಹಾಳು ಮಾಡಿದ್ದಾರೋ ಗೊತ್ತಿಲ್ಲ. ಬಹುಶಃ ಅವರನ್ನು ಡಿಕೆಶಿ ನಿಯಂತ್ರಣಕ್ಕೆ ಈ ಜವಾಬ್ದಾರಿ ನೀಡುವುದು ಒಳಿತೆಂದು ಯಾರಾದರೂ ಬಯಸಿದ್ದಾರೋ ಏನೋ. ಆದರೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಿಂತ ಮಂತ್ರಿಸ್ಥಾನವೇ ಸೂಕ್ತ. ಗೃಹ ಖಾತೆಯೇ ಅವರಂಥ ಪ್ರಖರ ವಿಚಾರವಂತ ಮತ್ತು ದಿಟ್ಟತನ ಇರುವ ಹರಿಪ್ರಸಾದ್ ಗೃಹಖಾತೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ನಾಯಕ. ಆದರೆ ಡಿಕೆಶಿ ಸಂಪುಟದಲ್ಲಿ ಇರುವುದಕ್ಕೆ ಅವರಿಗೆ ಮನಸ್ಸಿದೆಯೋ ಇಲ್ಲವೋ ಗೊತ್ತಿಲ್ಲ. ವರ್ಷಗಳ ಕಾಲ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ದುಡಿದ ಅಪರೂಪದ ತತ್ವ ಮತ್ತು ಪಕ್ಷ ನಿಷ್ಠೆಯ ನಾಯಕ ಹರಿಪ್ರಸಾದ್ ಮನವೊಲಿಸಿ ಸಂಪುಟದಲ್ಲಿ ಇರುವಂತೆ ಮಾಡುವುದು ಡಿಕೆಶಿ ಕರ್ತವ್ಯ. ಇದು ಡಿಕೆಶಿಗೂ ಒಳಿತು ಮಾಡಬಲ್ಲದು. ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರನ್ನು ಪರಿಗಣಿಸುವುದಾದರೆ ಖನೀಜ್ ಫಾತಿಮಾ ಉತ್ತಮ ಆಯ್ಕೆ ಆಗಬಹುದು.
ಐವರು ಮುಸ್ಲಿಮರಿಗೆ ಸಚಿವರಾಗುವ ಅವಕಾಶ ಇದ್ದರೆ ತನ್ವೀರ್ ಸೇಠ್, ಎನ್.ಎ.ಹ್ಯಾರಿಸ್, ಇಕ್ಬಾಲ್ ಹುಸೇನ್ ಕೂಡ ಉತ್ತಮ ಆಯ್ಕೆಯಾಗಬಹುದು. ದಲಿತ ಮಹಿಳೆಯರ ಪ್ರಾತಿನಿಧ್ಯ ನೆಲೆಯಲ್ಲಿ ನಯನಾ ಮೋಟಮ್ಮ, ರೂಪಾ ಶಶಿಧರ್ ಅವರಿಗೂ ಅವಕಾಶ ನೀಡಿದರೆ ಒಳ್ಳೆ ನಿರ್ಧಾರ ಅನ್ನಿಸುತ್ತದೆ. ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ, ಸಜ್ಜನಿಕೆಯ ವ್ಯಕ್ತಿತ್ವದ ಅಜಯ್ ಧರಂಸಿಂಗ್ ಅಂಥವರನ್ನೂ ಪರಿಗಣಿಸಿದರೆ ಒಳಿತು. ಶರತ್ ಬಚ್ಚೇಗೌಡ ತರಹದವರಿಗೆ ಅವಕಾಶ ನೀಡಿ ನೋಡಬಹುದು. ಎ.ಕೆ.ಸುಬ್ಬಯ್ಯನವರ ಆಲೋಚನೆಗೂ ಅವರ ಮಗ ಎ.ಎಸ್.ಪೊನ್ನಣ್ಣ ಅವರ ಆಲೋಚನೆಗೂ ಅಜಗಜಾಂತರ ಇರಬಹುದು.ಕೊಡಗಿನ ಪ್ರಾತಿನಿಧ್ಯ ಅಂತ ಕೊಡುವುದಾದರೆ ಅವರನ್ನೇ ಪರಿಗಣಿಸಬಹುದು. ಸಿದ್ದರಾಮಯ್ಯ ಸಂಪುಟದಲ್ಲಿದ್ದ ವಾಕರಿಕೆ ತರಿಸುವ ಮುಖಗಳಮ್ನು ಕೈಬಿಟ್ಟು ತಾಜಾ ಮುಖಗಳಿಗೆ ಮಣೆ ಹಾಕಿದರೆ ಸರ್ಕಾರ ಇನ್ನಷ್ಟು ಕ್ರಿಯಾಶೀಲವಾಗಿ ಇರುವುದು ಸಾಧ್ಯವಿದೆ.
ಯಾವುದೇ ಕಾರಣಕ್ಕೂ ಉಪ ಮುಖ್ಯಮಂತ್ರಿಗಳಿಲ್ಲದಂತೆ ಡಿಕೆಶಿ ಎಚ್ಚರಿಕೆ ವಹಿಸಬೇಕಿದೆ. ಡಿಕೆಶಿ ಉಪಮುಖ್ಯಮಂತ್ರಿ ಹುದ್ದೆ ಜತೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಉಳಿಸಿಕೊಂಡಿದ್ದ ಸಂದರ್ಭವೇ ಬೇರೆ. ಡಿಕೆಶಿ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡಿದ್ದರಿಂದ ಅವರನ್ನು ಸಮಾಧಾನ ಪಡಿಸುವ ಸಲುವಾಗಿ ಎರಡೂ ಹುದ್ದೆಗಳಲ್ಲಿ ಮುಂದುವರೆಯುವ ಅವಕಾಶವನ್ನು ಹೈಕಮಾಂಡ್ ಕಲ್ಪಿಸಿತ್ತು. ಅದೇ ಹಿಮ್ಮೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ವನ್ನು ಈಗ ಬಯಸುವವರು ಮಂತ್ರಿ ಸ್ಥಾನವನ್ನೂ ಬಯಸುವುದು ಸಮರ್ಥನೀಯವಲ್ಲ.
ಸಿದ್ದರಾಮಯ್ಯ ಎರಡನೇ ಅವಧಿ(2023-28)ಗೆ ಮುಖ್ಯಮಂತ್ರಿ ಸ್ಥಾನಕ್ಕೆ ಹಠ ಹಿಡಿಯುವ ಬದಲು ಆಗಲೇ ಮಲ್ಲಿಕಾರ್ಜುನ ಖರ್ಗೆ ಅಥವಾ ಜಿ.ಪರಮೇಶ್ವರ್ ಮುಖ್ಯಮಂತದರಿಯಾಗಲಿ, ದಲಿತ ಸಮುದಾಯಕ್ಕೆ ಋಣ ಸಂದಾಯ ಮಾಡಬೇಕಿದೆ ಎಂದು ಹೇಳಬೇಕಿತ್ತು. ಆಗ ದಲಿತ ಮುಖ್ಯಮಂತ್ರಿಯನ್ನು ಬಯಸದ ಸಿದ್ದರಾಮಯ್ಯ ಈಗ ಯಾಕಾದರೂ ಬಯಸುತ್ತಾರೆ. ಈಗ ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಕೊಡುವ ಸಲುವಾಗಿಯೇ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲಾಗಿದೆಯೇ ಹೊರತು ಇನ್ಯಾರನ್ನೋ ಮುಖ್ಯಮಂತ್ರಿ ಮಾಡುವ ಸಲುವಾಗಿ ಅಲ್ಲ. ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಸಂದರ್ಭದಲ್ಲಿ ಜಿ.ಪರಮೇಶ್ವರ್ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸುತ್ತಾರೆ ಎಂಬ ಜೋಕ್ ಕೂಡ ಗಮನ ಸೆಳೆಯಿತು.
ಸಿದ್ದರಾಮಯ್ಯ ತಮ್ಮ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುವ ಅಸಹಾಯಕ ಸ್ಥಿತಿಯಲ್ಲಿದ್ದರೇ ಹೊರತು ಇನ್ನೊಬ್ನರ ಹೆಸರನ್ನು ಸೂಚಿಸುವ ಮನಃಸ್ಥಿತಿಯಲ್ಲಿರಲಿಲ್ಲ. ಯಾಕೆಂದರೆ ಇದು ಸಿದ್ದರಾಮಯ್ಯ ವಿರುದ್ಧದ ಯಾವುದೇ ವಿವಾದ ಅಥವಾ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಉದ್ಭವಿಸಿದ ಪದಚ್ಯುತಿ ಸಂದರ್ಭವಲ್ಲ.ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ 136 ಸ್ಥಾನ ಪಡೆದ ಕಾಂಗ್ರೆಸ್ ಪಕ್ಷ ತನಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಡಿಕೆಶಿ ಪಟ್ಟು ಹಿಡಿದ ಸಂದರ್ಭದಲ್ಲಿ ಕೈಗೊಂಡ ತೀರ್ಮಾನದಂತೆ ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವುದಾಗಿ ಸಿದ್ದರಾಮಯ್ಯ ಮಾತು ಕೊಟ್ಟ ಹಿನ್ನೆಲೆಯಲ್ಲಿ ಎದುರಾದ ಸಂದರ್ಭ.
ಸಿದ್ದರಾಮಯ್ಯ ಮಾತು ಕೊಟ್ಟಂತೆ ಕಳೆದ ನವಂಬರ್ ನಲ್ಲೇ ಡಿಕೆಶಿಗೆ ಅಧಿಕಾರ ಹಸ್ತಾಂತರಕ್ಕೆ ಸ್ವಯಂಪ್ರೇರಿತರಾಗಿ ನಿರ್ಧಾರ ಕೈಗೊಳ್ಳಬೇಕಿತ್ತು. ಹಾಗೆ ಆಗಲೇ ನಿರ್ಧಾರ ಕೈಗೊಂಡಿದ್ದರೆ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹೈಕಮಾಂಡ್ ಇವತ್ರು ಸಿದ್ದರಾಮಯ್ಯಗೆ ರಾಜೀನಾಮೆ ನೀಡಿ ಎಂಬ ವಾತಾವರಣ ನಿರ್ಮಾಣವಾಗುತ್ತಿರಲಿಲ್ಲ. ಅದೇನೇ ಇರಲಿ ಡಿಕೆಶಿ ಮುಂದಿನ ಮುಖ್ಯಮಂತ್ರಿಯಾಗಿ ವೀರೇಂದ್ರಪಾಟೀಲ್, ದೇವರಾಜ ಅರಸು, ಸಿದ್ದರಾಮಯ್ಯ ಆಗದಿರಬಹುದು. ಆದರೆ ಜಗದೀಶ್ ಶೆಟ್ಟರ್ ಮತ್ತು ಡಿ.ವಿ.ಸದಾನಂದಗೌಡರಿಗಿಂತ ನೂರುಪಟ್ಟು ಉತ್ತಮ ಮುಖ್ಯಮಂತ್ರಿಯಾಗುವುದರಲ್ಲಿ ಅನುಮಾನವಿಲ್ಲ. ಅವರು ಬಿಜೆಪಿಯಲ್ಲಿರುವ ಚಿಲ್ಲರೆ ನಾಯಕರಿಗಿಂತ ಉತ್ತಮ.ನಾಯಕರಾಗುತ್ತಾರೆ.ಅವರ ಹಿನ್ನೆಲೆಯನ್ನು ಮರೆತು ಹೊಸ ಕನ್ನಡಕದಿಂದ ಡಿಕೆಶಿಯನ್ನು ನೋಡಬೇಕು.
ಬರಹ: ಟಿ.ಕೆ.ತ್ಯಾಗರಾಜ್, ಹಿರಿಯ ಪತ್ರಕರ್ತ - ರಾಜಕೀಯ ವಿಶ್ಲೇಷಕ












Click it and Unblock the Notifications