ನನಗೆ ಸಚಿವ ಸ್ಥಾನ ಸಿಗುವುದು ಗ್ಯಾರಂಟಿ: ಹೈಕಮಾಂಡ್ ಭೇಟಿ ಬೆನ್ನಲ್ಲೇ ಶಾಸಕ ಅಜಯ್ ಸಿಂಗ್ ವಿಶ್ವಾಸ
ನವದೆಹಲಿ: ಕರ್ನಾಟಕದಲ್ಲಿ ನೂತನ ಸರ್ಕಾರದ ಸಚಿವ ಸಂಪುಟ ಪುನರ್‌ರಚನೆಯ ಪ್ರಕ್ರಿಯೆ ದೆಹಲಿ ಮಟ್ಟದಲ್ಲಿ ಬಿರುಸುಗೊಂಡಿದೆ. ಈ ನಡುವೆ, ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಕಾಂಗ್ರೆಸ್ ಹಿರಿಯ ನಾಯಕ ದಿವಂಗತ ಧರ್ಮಸಿಂಗ್ ಅವರ ಪುತ್ರ ಹಾಗೂ ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರು ತಮಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ಸಂಪುಟ ರಚನೆಯ ಸ್ವರೂಪ ಹೇಗಿರಲಿದೆ ಎಂಬ ಸುಳಿವು ನೀಡಿದ್ದಾರೆ.
ಯುವನಾಯಕರಿಗೆ ಮಣೆ
ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಅವರ ಹೊಸ ಸಂಪುಟದ ಸ್ವರೂಪದ ಬಗ್ಗೆ ಮಾತನಾಡಿದ ಅಜಯ್ ಸಿಂಗ್, "ಈ ಬಾರಿ ಸಚಿವ ಸಂಪುಟದಲ್ಲಿ ಅನುಭವಿ ನಾಯಕರು ಹಾಗೂ ಹೊಸ ಮುಖಗಳ ಮಿಶ್ರಣ ಇರಲಿದೆ. ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ಮತ್ತು ಅವಕಾಶ ನೀಡಲಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಪಕ್ಷದ ಹೈಕಮಾಂಡ್ ಶೀಘ್ರದಲ್ಲೇ ಒಟ್ಟಿಗೆ ಕುಳಿತು ಎಷ್ಟು ಜನರನ್ನು ಮೊದಲ ಹಂತದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ" ಎಂದು ತಿಳಿಸಿದ್ದಾರೆ.

ನಾನೂ ಪ್ರಬಲ ಆಕಾಂಕ್ಷಿ
ತಮ್ಮ ಸಚಿವ ಸ್ಥಾನದ ಬೇಡಿಕೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ಅವರು, "ಸಚಿವ ಸ್ಥಾನಕ್ಕೆ ನಾನೂ ಕೂಡ ಒಬ್ಬ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ನನಗೆ ಸಚಿವ ಸಂಪುಟ ಸೇರಲು ಖಂಡಿತ ಅವಕಾಶ ಸಿಗಲಿದೆ ಎಂಬ ಸಂಪೂರ್ಣ ಭರವಸೆ ನನಗಿದೆ" ಎಂದು ಮಂತ್ರಿಮಂಡಲ ಸೇರುವ ಇಂಗಿತವನ್ನು ಹೊರಹಾಕಿದ್ದಾರೆ. ದೆಹಲಿಯಲ್ಲಿ ಎಐಸಿಸಿ ವರಿಷ್ಠರೊಂದಿಗೆ ಸಚಿವರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಯಾರಿಗೆಲ್ಲ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.
ದೆಹಲಿಯಲ್ಲೇ ಬೀಡುಬಿಟ್ಟ ಕೈ ನಾಯಕರು
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿರುವ ಬೆನ್ನಲ್ಲೇ, ದೆಹಲಿಯಲ್ಲಿ ಸಚಿವ ಸಂಪುಟ ರಚನೆಯ ರಾಜಕೀಯ ಚಟುವಟಿಕೆಗಳು ತಾರಕಕ್ಕೇರಿವೆ. ಮಂತ್ರಿ ಸ್ಥಾನದ ಆಕಾಂಕ್ಷಿಗಳು ಹಾಗೂ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿರುವ ಸಿದ್ದರಾಮಯ್ಯ ಅವರು ದೆಹಲಿಯ ಪ್ರಸಿದ್ಧ 'ಸರವಣ ಭವನ' ಹೋಟೆಲ್‌ಗೆ ಭೇಟಿ ನೀಡಿ ಉಪಾಹಾರ ಸೇವಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ರಾಜ್ಯದ ಹಲವು ಪ್ರಮುಖ ನಾಯಕರು ಮತ್ತು ಶಾಸಕರು ಸಾಥ್ ನೀಡಿದರು. ಸಿಎಂ ಆಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ, ಸತೀಶ್ ಜಾರಕಿಹೊಳಿ ಮತ್ತು ಎಂ.ಸಿ.ಸುಧಾಕರ್ ಸೇರಿದಂತೆ ಹಲವು ಶಾಸಕರು ಸಿದ್ದರಾಮಯ್ಯ ಅವರೊಂದಿಗೆ ರಾಜಕೀಯ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಮೇ 28ರಂದು ತಾವು ಸ್ವಇಚ್ಛೆಯಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸಿದ್ದರಾಮಯ್ಯ ಮತ್ತೆ ತನ್ನ ಬೆಂಬಲಿಗರಿಗೆ ಸ್ಪಷ್ಟಪಡಿಸಿದ್ದಾರೆ. ಸಂಪುಟದ ಅಂತಿಮ ಪಟ್ಟಿ ಸಿದ್ಧಪಡಿಸುವ ಮುನ್ನ ಸಿದ್ದರಾಮಯ್ಯ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಆದರೆ, ಈ ಭೇಟಿಯ ಅಜೆಂಡಾ ಏನು ಎಂಬ ಮಾಧ್ಯಮಗಳ ಪ್ರಶ್ನೆಗೆ, "ನನಗೆ ಗೊತ್ತಿಲ್ಲ" ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಇನ್ನೊಂದೆಡೆ ಶಾಸಕ ಪ್ರಿಯಾಂಕ್ ಖರ್ಗೆ ಅವರೂ ಸಹ ಇಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಹೊಸ ಸಂಪುಟದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಅತ್ಯಂತ ಪ್ರಮುಖ ಅಥವಾ ಉನ್ನತ ಹುದ್ದೆ ಸಿಗಲಿದೆ ಎಂಬ ಬಲವಾದ ವದಂತಿಗಳು ಹರಿದಾಡುತ್ತಿವೆ. ಹೊಸ ಸಂಪುಟದಲ್ಲಿ ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲು ಹೈಕಮಾಂಡ್ ಒಲವು ತೋರಿದ್ದು, ಸಿದ್ದರಾಮಯ್ಯ ಅವರ ಹಿಂದಿನ ಸಂಪುಟದಲ್ಲಿದ್ದ ಹಲವು ಹಿರಿಯ ಸಚಿವರಿಗೆ ಈ ಬಾರಿ ಕೊಕ್ ನೀಡಲಾಗುವುದು ಎಂಬ ಚರ್ಚೆಗಳು ಬಿರುಸಾಗಿವೆ.
ಆದರೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಖುದ್ದಾಗಿ ರಾಹುಲ್ ಗಾಂಧಿ ಅವರೇ ತಮಗೆ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಿದ್ದರು ಎಂದು ಯತೀಂದ್ರ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಈ ಸರಣಿ ಸಭೆಗಳಲ್ಲಿ ಸಚಿವರ ಪಟ್ಟಿ ಮತ್ತು ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಅಂತಿಮ ತೀರ್ಮಾನ ಹೊರ ಬೀಳಲಿದೆ. ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭವು ಜೂನ್ 3ರ ಬುಧವಾರ ಸಂಜೆ 4 ಗಂಟೆಗೆ ಲೋಕಭವನದಲ್ಲಿ ನೆರವೇರಲಿದೆ.













Click it and Unblock the Notifications