ಬೆಂಗಳೂರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ವೇಗ: ಜಿಬಿಎ ವ್ಯಾಪ್ತಿಯಲ್ಲಿ ಹೇಗಿದೆ ಎಸ್‌ಐಆರ್ ಪ್ರಕ್ರಿಯೆ
Bengaluru: ಬೆಂಗಳೂರಿನಲ್ಲಿ ಮತದಾರರಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಚುರುಕು ಪಡೆದುಕೊಳ್ಳುತ್ತಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision -SIR) ಹಾಗೂ ಚುನಾವಣೆ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು ಜೂನ್ 1ರ ಮಂಗಳವಾರ ವಿಜಯನಗರ, ಬಸವನಗುಡಿ ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು.
ಮತದಾರರ ಪಟ್ಟಿಯಿಂದ ಅನರ್ಹ ಮತದಾರರ ಹೆಸರನ್ನು ತೆಗೆಯುವ ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಉದ್ದೇಶವನ್ನು ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೊಂದಿದ್ದು, ಇದರಲ್ಲಿ ಮತಗಟ್ಟೆ ಅಧಿಕಾರಿ (ಬಿಎಲ್ಒ)ಗಳ ಗರಿಷ್ಠ ಪಾತ್ರ, ಜವಾಬ್ದಾರಿ ಇದೆ. ಎಸ್.ಐ.ಆರ್ ನಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಬಹಳ ಮುಖ್ಯವಾಗಿದ್ದು, ಬಿಎಲ್ಒಗಳು, ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರು (ಬಿಎಲ್ಒ ಸೂಪರ್ವೈಸರ್) ಗಳು, ಮತದಾರರ ನೋಂದಣಾಧಿಕಾರಿಗಳು (ಇಆರ್‌ಒ), ಸಹಾಯಕ ಮತದಾರರ ನೋಂದಣಾಧಿಕಾರಿಗಳು (ಎಇಆರ್‌ಒ) ಈ ಬಗ್ಗೆ ಸಮರ್ಪಕವಾಗಿ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ನೂತನ ಬಿಎಲ್ಒಗಳಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಆಯುಕ್ತರು ನಿರ್ದೇಶಿಸಿದ್ದಾರೆ.

ಇನ್ನು ಇರುವ ಎರಡು ತಿಂಗಳ ಸಮಯಾವಕಾಶದಲ್ಲಿ ಮ್ಯಾಪಿಂಗ್, ಅನ್ ಮ್ಯಾಪಿಂಗ್, ರಿ-ಮ್ಯಾಪಿಂಗ್ ಇತ್ಯಾದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಪ್ರಾಮಾಣಿಕ ಪ್ರಯತ್ನ ಅಗತ್ಯ. ಈ ಕುರಿತಂತೆ ಬಿಎಲ್‌ಒಗಳು ಅಧಿಕೃತ ರಾಜಕೀಯ ಪಕ್ಷಗಳಿಂದ ನಿಯೋಜಿಸಲ್ಪಟ್ಟ ಮತಗಟ್ಟೆ ಏಜೆಂಟ್ (ಬಿಎಲ್‌ಎ)ಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ನೆರವು ಪಡೆದು, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ.
ಜಂಟಿ ಮುಖ್ಯ ಚುನಾವಣಾಧಿಕಾಯಿಂದ ಮಾಹಿತಿ
ಈ ಸಂದರ್ಭದಲ್ಲಿ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ಾವರು ಎಸ್ಐಆರ್ ಉದ್ದೇಶ, ಪ್ರಕ್ರಿಯೆ, ಬಿಎಲ್ಒಗಳ ಪಾತ್ರ ಇತ್ಯಾದಿ ಕುರಿತಂತೆ ಮಾಹಿತಿ ನೀಡಿದರು. ಎಸ್ಐಆರ್ ಪ್ರಾರಂಭವಾಗಿದ್ದು, ಮುಂದಿನ 5 ತಿಂಗಳ ಕಾಲ ಬಿಎಲ್‌ಒಗಳ ಪಾತ್ರ ಪ್ರಮುಖವಾಗಿರುತ್ತದೆ. ಮತದಾರರ ಪಟ್ಟಿಯನ್ನು ಸರಿಪಡಿಸುವಲ್ಲಿ ಬಿಎಲ್‌ಒ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿ ಎಸ್ಐಆರ್-ಪೂರ್ವ ಚಟುವಟಿಕೆ (Pre-SIR Activities) ಬಗ್ಗೆ ಅರಿವು ಆವಶ್ಯಕವಾಗಿದೆ. ಅದರಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಪ್ರಮುಖವಾಗಿದ್ದು, ಗುಣಮಟ್ಟದ ಮ್ಯಾಪಿಂಗ್ ಮುಖ್ಯ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು, ಅನರ್ಹರನ್ನು ಕೈಬಿಡಬೇಕು ಎಂದು ಉದ್ದೇಶವನ್ನು ಎಸ್ಐಆರ್ ಹೊಂದಿದ್ದು, ಪ್ರತಿವರ್ಷ ನಡೆಯುವ ಸ್ಪೆಷಲ್ ಸಮ್ಮರಿ ರಿವಿಶನ್ (SSR)ಗಿಂತ ಇದು ಭಿನ್ನವಾಗಿದೆ ಎಂಬುದನ್ನು ಬಿಎಲ್‌ಒಗಳು ಅರಿತುಕೊಳ್ಳಬೇಕು. ಜೂನ್ 30ರಿಂದ ಜುಲೈ 29ರ ವರೆಗೆ ನಡೆಯುವ ಮನೆ-ಮನೆ ಭೇಟಿ ಸಂದರ್ಭದಲ್ಲಿ ಎಲ್ಲ ಅರ್ಹ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ಕೊಡುವುದು, ಭರ್ತಿ ಮಾಡಿದ ಫಾರ್ಮ್ ಗಳನ್ನು ಸಂಗ್ರಹಿಸುವುದರ ಜೊತೆಗೆ ಬಿಎಲ್‌ಎಗಳಿಗೆ ತರಬೇತಿ ನೀಡಿ, ವಿಶ್ವಾಸಕ್ಕೆ ಪಡೆದುಕೊಂಡು ಕೆಲಸ ನಿರ್ವಹಿಸಬೇಕು ಎಂದಿದ್ದಾರೆ.
ಮತದಾರ ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕಾದರೆ ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡುವುದು ಅತ್ಯಗತ್ಯವಾಗಿದೆ. ದಾಖಲೆಗಳು ಇಲ್ಲದ ಮತದಾರರಿಗೆ ನೋಟಿಸ್ ನೀಡಿ, ದಾಖಲೆಗಳು ಸಲ್ಲಿಕೆಯಾದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳುತ್ತದೆ. ಚುನಾವಣಾ ಆಯೋಗ ಸೂಚಿಸಿದ ಯಾವುದೇ 11 ದಾಖಲೆ ಇಲ್ಲದ ಮತದಾರರ ಬಗ್ಗೆ ಮಾಹಿತಿಯನ್ನು ಬಿಎಲ್‌ಒಗಳು ಮೇಲ್ವಿಚಾರಕರಿಗೆ, ಅವರಿಂದ ಎಇಆರ್‌ಒ, ಇಆರ್.ಒ ಮೂಲಕ ಮೇಲಿನ ಹಂತಕ್ಕೆ ಕಳುಹಿಸಿಕೊಡಬೇಕು ಎಂದರು.
ಮತದಾರರಪಟ್ಟಿ ಸಮಗ್ರ ಪರಿಷ್ಕರಣೆ ಮುಖ್ಯಾಂಶಗಳು
* ಮತದಾರರ ಪಟ್ಟಿಯಿಂದ ಅನರ್ಹ ಮತದಾರರ ಹೆಸರನ್ನು ತೆಗೆಯುವ ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಎಸ್‌ಐಆರ್ ಉದ್ದೇಶ
* ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿ (ಬಿಎಲ್ಒ)ಗಳದ್ದು ಗರಿಷ್ಠ ಪಾತ್ರ
* ಮ್ಯಾಪಿಂಗ್ ಪ್ರಕ್ರಿಯೆ ಪ್ರಮುಖವಾಗಿದ್ದು, ಗುಣಮಟ್ಟದ ಮ್ಯಾಪಿಂಗ್ ಅಗತ್ಯ.
* ಮ್ಯಾಪಿಂಗ್, ಅನ್ ಮ್ಯಾಪಿಂಗ್, ರಿ-ಮ್ಯಾಪಿಂಗ್ ಇತ್ಯಾದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಪ್ರಾಮಾಣಿಕ ಪ್ರಯತ್ನ ಅಗತ್ಯ.
* ಅರ್ಹ ಮತದಾರರು ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡಿ ಕೊಡಬೇಕು.
* ಬಿಎಲ್‌ಓ ಗಳು ಮನೆ-ಮನೆ ಭೇಟಿ ಸಂದರ್ಭದಲ್ಲಿ ಎಲ್ಲ ಅರ್ಹ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ಕೊಡುವುದು, ಭರ್ತಿ ಮಾಡಿದ ಫಾರ್ಮ್ ಗಳನ್ನು ಸಂಗ್ರಹಿಸುವುದು.
* ದಾಖಲೆಗಳು ಇಲ್ಲದ ಮತದಾರರಿಗೆ ನೋಟಿಸ್ ನೀಡಿ, ದಾಖಲೆಗಳು ಸಲ್ಲಿಕೆಯಾದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳುತ್ತದೆ.
* ಯಾವುದೇ ದಾಖಲೆ ಇಲ್ಲದ ಮತದಾರರ ಬಗ್ಗೆ ಮಾಹಿತಿಯನ್ನು ಬಿಎಲ್.ಓ ಗಳು ಮೇಲಿನ ಹಂತಕ್ಕೆ ಕಳುಹಿಸಿಕೊಡಬೇಕು.












Click it and Unblock the Notifications