Gautam Adani: ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳದಂತೆ ಹಸಿರು ಇಂಧನ ಕ್ರಾಂತಿ ಆಗಬೇಕು: ಗೌತಮ್ ಅದಾನಿ

Adani Group: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು, ಭಾರತವು ಶುದ್ಧ ಇಂಧನದತ್ತ ಸಾಗುವ ಪ್ರಕ್ರಿಯೆಯು ಕೈಗೆಟುಕುವ ದರದಲ್ಲಿ ಮತ್ತು ವಿಶ್ವಾಸಾರ್ಹವಾಗಿ ವಿದ್ಯುತ್ ಪೂರೈಕೆಯಾಗುವುದರೊಂದಿಗೆ ಸಾಗಬೇಕು ಎಂದು ಹೇಳಿದ್ದಾರೆ. ಈ ಇಂಧನ ಪರಿವರ್ತನೆಯಿಂದ ಕುಟುಂಬಗಳ ಮೇಲಿನ ವೆಚ್ಚದ ಹೊರೆ ಹೆಚ್ಚಾಗಬಾರದು ಹಾಗೂ ಕೈಗಾರಿಕಾ ಬೆಳವಣಿಗೆಗೆ ಯಾವುದೇ ರೀತಿಯ ಅಡ್ಡಿಯಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ.

ನವದೆಹಲಿಯಲ್ಲಿ ಮೈಕಲ್ ಬ್ಲೂಮ್‌ಬರ್ಗ್ ಅವರನ್ನು ಭೇಟಿಯಾದ ಬಳಿಕ ಗೌತಮ್ ಅದಾನಿ ಅವರು ಬುಧವಾರ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ನಿರ್ಮಿಸುವ ಜೊತೆಗೆ ಶುದ್ಧ ಇಂಧನವನ್ನು ಆರ್ಥಿಕವಾಗಿ ಕೈಗೆಟುಕುವಂತೆ ಮಾಡುವುದರ ಮೇಲೆ ಈ ಬದಲಾವಣೆಯ ಯಶಸ್ಸು ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ.

Gautam Adani on Clean Energy Affordable Power Green Transition and India s Growth Know details

'ವಿಶ್ವಾಸಾರ್ಹ ಮತ್ತು ಕೈಗೆಟಕುವ ಆಯ್ಕೆಯಾಗಬೇಕು'

ಹವಾಮಾನ ವೈಪರೀತ್ಯದ ವಿರುದ್ಧದ ಕ್ರಮಗಳು ಸಾಮಾನ್ಯ ನಾಗರಿಕರನ್ನು ಸಂಕಷ್ಟಕ್ಕೆ ತಳ್ಳಲು, ಕಾರ್ಖಾನೆಗಳನ್ನು ಮುಚ್ಚಿಸಲು ಅಥವಾ 'ಗ್ಲೋಬಲ್ ಸೌತ್'ನ ಉದಯೋನ್ಮುಖ ದೇಶಗಳ ಪ್ರಗತಿಯನ್ನು ತಡೆಯಲು ಅವಕಾಶ ನೀಡಬಾರದು. ಈ ಇಂಧನ ಬದಲಾವಣೆಯು ಯಶಸ್ವಿಯಾಗಬೇಕಾದರೆ, ಶುದ್ಧ ವಿದ್ಯುತ್‌ ಮನೆಗಳು ಹಾಗೂ ಉದ್ಯಮಗಳಿಗೆ ವಿಶ್ವಾಸಾರ್ಹ ಮತ್ತು ಕೈಗೆಟಕುವ ಆಯ್ಕೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.

ಸೌಲಭ್ಯಗಳ ವಿಸ್ತರಣೆ

'ಹಸಿರು ಇಂಧನವನ್ನು ಅಳವಡಿಸಿಕೊಳ್ಳುವಾಗ ತಗಲುವ ಹೆಚ್ಚುವರಿ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯತೆಯನ್ನು ಗೌತಮ್ ಅದಾನಿ ಒತ್ತಿಹೇಳಿದ್ದಾರೆ. ಇದನ್ನು ಸಾಮಾನ್ಯವಾಗಿ 'ಗ್ರೀನ್ ಪ್ರೀಮಿಯಂ' ಎಂದು ಕರೆಯಲಾಗುತ್ತದೆ. ಶುದ್ಧ ಇಂಧನವು ಕಡಿಮೆ ವೆಚ್ಚದ ಮತ್ತು ಉತ್ತಮ ಆಯ್ಕೆಯಾಗುವವರೆಗೆ ಬಂಡವಾಳ ಹೂಡಿಕೆ, ನೀತಿ ನಿರೂಪಣೆ ಹಾಗೂ ಅನುಷ್ಠಾನ ಕಾರ್ಯಗಳು ಒಟ್ಟಾಗಿ ಸಾಗಬೇಕು,' ಎಂದು ಹೇಳಿದ್ದಾರೆ. ಹವಾಮಾನ ವೈಪರೀತ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಈಗಾಗಲೇ ಬಳಕೆಯಲ್ಲಿರುವ ಇಂಧನ ವ್ಯವಸ್ಥೆಗಳನ್ನೇ ಅವಲಂಬಿಸಿ ಮುಂದುವರಿಯುವುದರ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದಾರೆ. 'ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಹಾಗೂ ಜನರ ಜೀವನಮಟ್ಟವನ್ನು ಸುಧಾರಿಸಲು ಭಾರತವು ವಿದ್ಯುತ್ ಉತ್ಪಾದನೆ, ಕೈಗಾರಿಕಾ ಸಾಮರ್ಥ್ಯ ಮತ್ತು ಡಿಜಿಟಲ್ ಸಂಪರ್ಕ ಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸಬೇಕು,' ಎಂದು ಅವರು ತಿಳಿಸಿದ್ದಾರೆ.

ಅದಾನಿ ಅವರ ಪ್ರಕಾರ, ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಮೂಲಸೌಕರ್ಯಗಳು ಬಂದರುಗಳು, ವಿದ್ಯುತ್ ಪ್ರಸರಣ ಮಾರ್ಗಗಳು, ಹಸಿರು ಹೈಡ್ರೋಜನ್ ಘಟಕಗಳು ಮತ್ತು ಕಂಪ್ಯೂಟಿಂಗ್ ಸೌಲಭ್ಯಗಳಂತಹ ಭೌತಿಕ ಆಸ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ವಿಶ್ವಾಸಾರ್ಹ ದತ್ತಾಂಶ, ಹೊಣೆಗಾರಿಕೆಯುಳ್ಳ ಸಂಸ್ಥೆಗಳು ಮತ್ತು ಪರಿಣಾಮಕಾರಿ ಆಡಳಿತವೂ ಅಷ್ಟೇ ಮಹತ್ವದ್ದಾಗಿವೆ. ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ನಾಲ್ಕು ಪ್ರಮುಖ ಅಂಶಗಳನ್ನು ಅವರು ಗುರುತಿಸಿದ್ದಾರೆ. ಅವುಗಳೆಂದರೆ ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಬಂಡವಾಳ ಹೂಡಿಕೆ, ಸ್ಥಳಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನ, ಪಾರದರ್ಶಕ ಆಡಳಿತ ಮತ್ತು ಸಮರ್ಥ ಸ್ಥಳೀಯ ನಾಯಕತ್ವ ಎಂದು ತಿಳಿಸಿದ್ದಾರೆ.

ಬ್ಲೂಮ್‌ಬರ್ಗ್ ಅವರೊಂದಿಗಿನ ಸಂವಾದದಲ್ಲಿ ನಗರಾಭಿವೃದ್ಧಿ, ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನಾ ವಲಯ ಮತ್ತು ಹಸಿರು ಮೂಲಸೌಕರ್ಯಗಳ ಬಗ್ಗೆಯೂ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಗೌತಮ್ ಅದಾನಿ ಅವರು ಮುಂಬೈನ ಧಾರಾವಿ ಪುನರಾಭಿವೃದ್ಧಿ ಯೋಜನೆ ಬಗ್ಗೆ ವಿವರಿಸಿದರು. 'ಈ ಯೋಜನೆಯನ್ನು ಎಷ್ಟು ಪ್ರಮಾಣದ ರಿಯಲ್ ಎಸ್ಟೇಟ್ ನಿರ್ಮಿಸಲಾಗಿದೆ ಎಂಬುದರ ಆಧಾರದ ಮೇಲೆ ಅಳೆಯುವ ಬದಲು, ಅಲ್ಲಿನ ನಿವಾಸಿಗಳ ಜೀವನಮಟ್ಟ ಮತ್ತು ಜೀವನೋಪಾಯದಲ್ಲಿ ಆಗುವ ಸುಧಾರಣೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು,' ಎಂದು ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಸಮುದಾಯದ ವಿಶ್ವಾಸವನ್ನು ಗಳಿಸುವುದು ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳನ್ನು ಸಂರಕ್ಷಿಸುವುದಕ್ಕೆ ಆದ್ಯತೆ ನೀಡಿದರೆ, ಧಾರಾವಿ ನಗರ ಪುನರಾಭಿವೃದ್ಧಿಗೆ ಮಾದರಿಯಾಗಬಹುದು ಎಂದು ಅವರು ಹೇಳಿದ್ದಾರೆ. ದೂರ ದೃಷ್ಟಿಕೋನದಲ್ಲಿ ಹೇಳುವುದಾದರೆ, ಮೂಲಸೌಕರ್ಯಗಳ ಮೌಲ್ಯವನ್ನು ನಿರ್ಮಿಸಲಾದ ಆಸ್ತಿಗಳ ಸಂಖ್ಯೆಯ ಆಧಾರದ ಮೇಲೆ ಅಳೆಯಬಾರದು. ಬದಲಾಗಿ ಅವು ಜನರಿಗೆ ಯಾವ ರೀತಿಯ ಅವಕಾಶಗಳನ್ನು ಒದಗಿಸುತ್ತವೆ ಮತ್ತು ಜನರು ತಮ್ಮ ಜೀವನದಲ್ಲಿ ಏನನ್ನು ಸಾಧಿಸಲು ನೆರವಾಗುತ್ತವೆ ಎಂಬುದರ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪೋಸ್ಟ್‌ನ ಪ್ರಕಾರ, ಮೈಕೆಲ್ ಬ್ಲೂಮ್‌ಬರ್ಗ್ ಅವರು ಮಂಗಳವಾರ ದೆಹಲಿಯಲ್ಲಿ ನಡೆದ 'ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ'ನಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಕೃತಕ ಬುದ್ಧಿಮತ್ತೆ (AI), ಸುಧಾರಿತ ಉತ್ಪಾದನಾ ವಲಯ ಮತ್ತು ಹಸಿರು ಮೂಲಸೌಕರ್ಯಗಳ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+