ನ್ಯೂಜೆರ್ಸಿ: 1,383 ಧ್ವಜ ಪ್ರದರ್ಶನದೊಂದಿಗೆ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ವಿಶ್ವ ಗಿನ್ನೆಸ್ ದಾಖಲೆ
ಪಾರ್ಸಿಪ್ಪನಿ, ನ್ಯೂಜೆರ್ಸಿ: ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (FIA NY-NJ-CT-NE), ನ್ಯೂಯಾರ್ಕ್‌ನ ಭಾರತೀಯ ರಾಯಭಾರ ಕಚೇರಿ ಮತ್ತು Zoho Corporation ಸಹಯೋಗದಲ್ಲಿ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. 'Largest Flagpole Number' ವಿಭಾಗದಲ್ಲಿ ಈ ದಾಖಲೆ ನಿರ್ಮಾಣವಾಗಿದೆ.

ಆಗಸ್ಟ್ 15ರ ಶನಿವಾರ ಸಂಜೆ ನ್ಯೂಜೆರ್ಸಿಯ ಪಾರ್ಸಿಪ್ಪನಿಯ ವೆಟರನ್ಸ್ ಮೆಮೋರಿಯಲ್ ಪಾರ್ಕ್‌ನಲ್ಲಿ ಈ ದಾಖಲೆ ನಿರ್ಮಿಸಲಾಯಿತು. 1,383 ಅಮೆರಿಕದ ಧ್ವಜಗಳನ್ನು ಧ್ವಜ ಕಂಬಗಳ ಮೇಲೆ ಹಾಕಿ, ದೊಡ್ಡ '250' ಸಂಖ್ಯೆಯ ಆಕಾರದಲ್ಲಿ ಜೋಡಿಸಲಾಗಿತ್ತು. ಅದರ ಸುತ್ತಲೂ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸಿದವು.
ಈ ವಿಶೇಷ ಕಾರ್ಯಕ್ರಮವು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ (India@80) ಮತ್ತು ಅಮೆರಿಕದ 250ನೇ ವಾರ್ಷಿಕೋತ್ಸವ (America@250) ಸವಿ ನೆನಪಿಗಾಗಿ ಆಯೋಜಿಸಲಾಗಿತ್ತು.
ಗಿನ್ನೆಸ್ ವಿಶ್ವ ದಾಖಲೆ ತಂಡ ಆಯೋಜಿಸಿದ ಕಾರ್ಯಕ್ರಮವನ್ನು ಅಲ್ಲಿಯೇ ಪರಿಶೀಲಿಸಿತು. ನಂತರ, ಗಿನ್ನೆಸ್ ವಿಶ್ವ ದಾಖಲೆ ಅಧಿಕಾರಿಗಳು ಸಂಸ್ಥೆಯ ಮುಖಂಡರು ಮತ್ತು ಗಣ್ಯರಿಗೆ ಅಧಿಕೃತ ಪ್ರಮಾಣಪತ್ರ ನೀಡಿದರು.
FIA ಅಧ್ಯಕ್ಷ ಅಂಕುರ್ ವೈದ್ಯ ಮಾತನಾಡಿ, "ಈ ಗಿನ್ನೆಸ್ ವಿಶ್ವ ದಾಖಲೆ ನಮ್ಮ ಸಮುದಾಯದ ಒಗ್ಗಟ್ಟು, ನಮ್ಮ ಸಂಸ್ಕೃತಿ ಮತ್ತು ನಮ್ಮ ದೇಶದ ಬಗ್ಗೆ ನಮಗಿರುವ ಹೆಮ್ಮೆಯನ್ನು ತೋರಿಸುತ್ತದೆ. ನಾವೆಲ್ಲರೂ ಒಂದೇ ಗುರಿಯೊಂದಿಗೆ ಒಟ್ಟಾಗಿ ಕೆಲಸ ಮಾಡಿದರೆ ಎಷ್ಟು ದೊಡ್ಡ ಕೆಲಸವನ್ನೂ ಮಾಡಬಹುದು ಎಂಬುದನ್ನು ಈ ದಾಖಲೆ ತೋರಿಸಿದೆ" ಎಂದರು.
ನ್ಯೂಯಾರ್ಕ್‌ನ ಭಾರತದ ಕಾನ್ಸುಲ್ ಜನರಲ್ ರಾಯಭಾರಿ ಬಿನಯ್ ಶ್ರೀಕಾಂತ ಪ್ರಧಾನ್ ಮಾತನಾಡಿ, "ಈ ಸಾಧನೆ ಭಾರತ ಮತ್ತು ಅಮೆರಿಕ ನಡುವಿನ ಸ್ನೇಹ ಮತ್ತು ಬಾಂಧವ್ಯದ ಪ್ರತೀಕ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಈ ಎರಡು ದೇಶಗಳ ನಡುವಿನ ಬಂಧವನ್ನು ಇನ್ನಷ್ಟು ಬಲಪಡಿಸುತ್ತಿದ್ದಾರೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಾರ್ಸಿಪ್ಪನಿ ಮೇಯರ್ ಪುಲ್ಕಿತ್ ದೇಸಾಯಿ, ಭಾರತ ಮತ್ತು ಅಮೆರಿಕ ಎರಡೂ ದೇಶಗಳ ಜನರಿಗೆ ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿ, ತಮ್ಮದೇ ಆದ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂಬ ಗುರಿ ಇದೆ ಎಂದರು.
ಈ ದೊಡ್ಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅನೇಕ ಜನರು ಶ್ರಮಿಸಿದ್ದನ್ನು ಗುರುತಿಸಿದ ನ್ಯೂಜೆರ್ಸಿ ಲೆಫ್ಟಿನೆಂಟ್ ಗವರ್ನರ್ ಡಾ. ಡೇಲ್ ಜಿ. ಕಾಲ್ಡ್ವೆಲ್, ಸಮುದಾಯದ ಜನರ ಸೇವಾ ಮನೋಭಾವವನ್ನು ಶ್ಲಾಘಿಸಿದರು. ಮುಂದೆಯೂ ಇಂತಹ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನರು ಸ್ವಯಂಸೇವಕರಾಗಿ ಭಾಗವಹಿಸಬೇಕು ಎಂದು ಅವರು ಹೇಳಿದರು.
FIA ಅಧ್ಯಕ್ಷ ಶ್ರೀಕಾಂತ್ ಅಕ್ಕಪಲ್ಲಿ ಮಾತನಾಡಿ, "ಈ ದಾಖಲೆ ಒಬ್ಬರದ್ದಲ್ಲ.ಇದರ ಹಿಂದೆ ಕೆಲಸ ಮಾಡಿದ ಪ್ರತಿಯೊಬ್ಬ ಸ್ವಯಂಸೇವಕ, ಸಹಭಾಗಿ ಮತ್ತು ಬೆಂಬಲಿಗರ ದಾಖಲೆ ಇದು. ಎಲ್ಲರೂ ಸೇರಿ ಮಾಡಿದ ಈ ಕೆಲಸ ನಮ್ಮ ಒಗ್ಗಟ್ಟು, ದೇಶಪ್ರೇಮ ಮತ್ತು ವಿಶ್ವದ ಜನರ ನಡುವಿನ ಏಕತೆಯ ಸಂಕೇತ," ಎಂದರು.
FIA ಅಧ್ಯಕ್ಷ ಶ್ರೀಕಾಂತ್ ಅಕ್ಕಪಲ್ಲಿ ಮತ್ತು Zoho Corporationನ ಮುಖ್ಯ ಪ್ರಚಾರ ಅಧಿಕಾರಿ ರಾಜು ವೇಗೆಸ್ನಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಮೆರಿಕದ ಕಾಂಗ್ರೆಸ್ ಸದಸ್ಯೆ ಅನಲಿಲಿಯಾ ಮೆಜಿಯಾ ಅವರು ಅತಿಥಿ ಭಾಷಣಕಾರರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದವರು, ತಂತ್ರಜ್ಞಾನ, ಸಾರ್ವಜನಿಕ ಸೇವೆ ಮತ್ತು ಸ್ಥಳೀಯ ವ್ಯಾಪಾರ ಕ್ಷೇತ್ರಗಳಲ್ಲಿ ಭಾರತೀಯ-ಅಮೆರಿಕನ್ನರು ಮಾಡುತ್ತಿರುವ ಉತ್ತಮ ಕೆಲಸವನ್ನು ಶ್ಲಾಘಿಸಿದರು.
ವಿಶ್ವದಾಖಲೆಗಾಗಿ ಹಲವರ ಒಗ್ಗಟ್ಟು
FIAಯ ಮಾಜಿ ಅಧ್ಯಕ್ಷ ಸೌರಿನ್ ಪರಿಖ್ ಮಾತನಾಡಿ,"ವಿಶ್ವ ದಾಖಲೆ ನಿರ್ಮಿಸುವ ಮಟ್ಟಕ್ಕೆ ತಲುಪಲು ಹಲವು ವರ್ಷಗಳ ಪರಿಶ್ರಮ, ಒಗ್ಗಟ್ಟಿನ ಕೆಲಸ ಮತ್ತು ನಿರಂತರ ಪ್ರಯತ್ನ ಬೇಕಾಯಿತು. ನಮ್ಮ ಸಂಸ್ಥೆಯ ಪರಂಪರೆ ಮುಂದುವರಿದು, ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವಂತಹ ವಿಶ್ವ ದಾಖಲೆ ನಿರ್ಮಿಸಿರುವುದನ್ನು ನೋಡುವುದು ತುಂಬಾ ಸಂತೋಷದ ವಿಷಯ" ಎಂದರು.
FIA ಅಧ್ಯಕ್ಷ ಅಂಕುರ್ ವೈದ್ಯ ಅವರು FIA ಹಿಂದೆ ನಡೆಸಿದ ಹಲವು ದೊಡ್ಡ ಪ್ರಯತ್ನಗಳನ್ನೂ ಸ್ಮರಿಸಿಕೊಂಡು, "ಹಲವು ವರ್ಷಗಳಿಂದ FIA ಹಲವು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ಪ್ರಯತ್ನಿಸಿದೆ. ಪ್ರತಿಯೊಂದು ಪ್ರಯತ್ನದಲ್ಲೂ ಹಲವು ಸವಾಲುಗಳಿದ್ದವು. ಆದರೆ ಕೊನೆಗೆ ಇಂತಹ ಫಲಿತಾಂಶ ಸಿಕ್ಕು ನಮ್ಮ ಸಮುದಾಯದ ಜನರೆಲ್ಲರೂ ಒಂದಾಗುವುದನ್ನು ನೋಡಿದಾಗ, ನಾವು ಪಟ್ಟ ಕಷ್ಟವೆಲ್ಲವೂ ಸಾರ್ಥಕವಾಗಿದೆ ಎನಿಸುತ್ತದೆ," ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ವಿಶ್ವ ದಾಖಲೆ ನಿರ್ಮಿಸಿದ ಧ್ವಜಗಳ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿದರು.
ಏನಿದು ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (FIA NY-NJ-CT-NE)?
1970ರಲ್ಲಿ ಆರಂಭವಾದ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (FIA), ಅಮೆರಿಕದಲ್ಲಿರುವ ಪ್ರಮುಖ ಭಾರತೀಯ-ಅಮೆರಿಕನ್ ಲಾಭರಹಿತ ಸಂಸ್ಥೆಗಳಲ್ಲಿ ಒಂದು. ಅಮೆರಿಕದ ಈಶಾನ್ಯ ಭಾಗದ ಎಂಟು ರಾಜ್ಯಗಳಲ್ಲಿರುವ ಭಾರತೀಯ-ಅಮೆರಿಕನ್ ಸಮುದಾಯವನ್ನು FIA ಪ್ರತಿನಿಧಿಸುತ್ತದೆ.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವುದು, ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ಮತ್ತು ಭಾರತ-ಅಮೆರಿಕ ನಡುವಿನ ಉತ್ತಮ ಸಂಬಂಧವನ್ನು ಬಲಪಡಿಸುವುದು FIAಯ ಪ್ರಮುಖ ಉದ್ದೇಶ.ಪ್ರತಿ ವರ್ಷ ನಡೆಯುವ NYC India Day Parade ಸೇರಿ ಹಲವು ದೊಡ್ಡ ಕಾರ್ಯಕ್ರಮಗಳ ಮೂಲಕ FIA ಈ ಕೆಲಸ ಮಾಡುತ್ತಿದೆ.
Zoho Corporation ಬಗ್ಗೆ
Zoho Corporation ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪ್ರಮುಖ ತಂತ್ರಜ್ಞಾನ ಸಂಸ್ಥೆ. ಇದು ವ್ಯಾಪಾರ ಸಂಸ್ಥೆಗಳಿಗೆ ಬೇಕಾದ ವಿವಿಧ ಕ್ಲೌಡ್ ಆಧಾರಿತ ಸಾಫ್ಟ್‌ವೇರ್ ಮತ್ತು ಕೆಲಸವನ್ನು ಸುಲಭಗೊಳಿಸುವ ಆ್ಯಪ್‌ಗಳನ್ನು ನೀಡುತ್ತದೆ. Zoho ಸಂಸ್ಥೆಯ ಪ್ರಧಾನ ಕಚೇರಿ ಭಾರತದ ಚೆನ್ನೈಯಲ್ಲಿದ್ದು, ಅಮೆರಿಕದ ಕಚೇರಿ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಇದೆ.
ವಿಶ್ವದಾದ್ಯಂತ ಲಕ್ಷಾಂತರ ಜನರು Zoho ಸೇವೆಗಳನ್ನು ಬಳಸುತ್ತಿದ್ದಾರೆ. ಬಳಕೆದಾರರ ಗೌಪ್ಯತೆ ಮತ್ತು ಮಾಹಿತಿಯ ಸುರಕ್ಷತೆಗೆ Zoho ಹೆಚ್ಚಿನ ಆದ್ಯತೆ ನೀಡುತ್ತದೆ. ಜೊತೆಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಸಂಸ್ಥೆ ಗಮನ ನೀಡುತ್ತಿದೆ.


Click it and Unblock the Notifications
