ಹೂಡಿಕೆಯಲ್ಲಿ ಅತಿ ದೊಡ್ಡ ಅಪಾಯವೆಂದರೆ ಭಾವನಾತ್ಮಕತೆ, ಮಾರಕಟ್ಟೆ ಏರಿಳಿತವಲ್ಲ: ಗಣೇಶ್ ಮೋಹನ್
ದೀರ್ಘಾವಧಿ ಸಂಪತ್ತು ಸೃಷ್ಟಿಸುವ ಹೂಡಿಕೆದಾರರಲ್ಲಿ ಅಪಾಯ ಎದುರಾಗುವ ಭಯವಿರುತ್ತದೆ. ಬಹುತೇಕ ಹೂಡಿಕೆದಾರರು ದೊಡ್ಡ ಅಪಾಯಗಳೆಂದು ಮಾರುಕಟ್ಟೆ ಕುಸಿತ, ಹಣದುಬ್ಬರ, ಬಡ್ಡಿದರಗಳು ಅಥವಾ ಭೌಗೋಳಿಕ ರಾಜಕೀಯ ಘಟನೆಗಳು ಎಂದು ಭಾವಿಸುತ್ತಾರೆ. ಆದರೆ ಪ್ರಮುಖ ಅಪಾಯಗಳು ಬೇರೆಯೇ ಆಗಿವೆ ಎಂದು ಬಜಾಜ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಗಣೇಶ್ ಮೋಹನ್ ಅವರು ವಿವರಿಸಿದ್ದಾರೆ. ಹೂಡಿಕೆದಾರರು ತಿಳಿಯಬೇಕಾದ ಅಂಶಗಳು ಇಲ್ಲಿವೆ.
ಗಣೇಶ್ ಮೋಹನ್ ಅವರು ಹೂಡಿಕೆ, ಮಾರುಕಟ್ಟೆ ಅಪಾಯಗಳ ಕುರಿತು ಒಂದಷ್ಟು ಮಾಹಿತಿ ನೀಡಿದ್ದಾರೆ. 'ಹೂಡಿಕೆಯ ಕುರಿತು ಹೇಳಲಾದ ಅತ್ಯುತ್ತಮ ಮಾತುಗಳು ನನೆನಪಿಗೆ ಬರುತ್ತವೆ. ನಾನು ಈ ಮಾತನ್ನು ಆಗಾಗ ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ಹೂಡಿಕೆಯ ಅತ್ಯಂತ ಸರಳವಾದ ಸತ್ಯವನ್ನು ಇದು ಸ್ಪಷ್ಟವಾಗಿ ತಿಳಿಸುತ್ತದೆ. ಇದು ಮಾರುಕಟ್ಟೆಯಿಂದ ಗಮನವನ್ನು ಹೆಚ್ಚು ಪ್ರಭಾವಶಾಲಿಯಾದ ಮಾನವ ನಡವಳಿಕೆಯ ಕಡೆಗೆ ತಿರುಗಿಸುತ್ತದೆ.

ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವುದಕ್ಕೆ ಇರುವ ಅತ್ಯಂತ ದೊಡ್ಡ ಅಪಾಯವು ಮಾರುಕಟ್ಟೆಯಲ್ಲಿ ಏನು ನಡೆಯುತ್ತದೆ ಎಂಬುದಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ನಡೆಯುವ ಘಟನೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದನ್ನು ಎಂಬುದನ್ನು ನಾನು ಬಲವಾಗಿ ಅರಿತುಕೊಂಡಿದ್ದೇನೆ.
ಇತಿಹಾಸದಲ್ಲಿ ಪ್ರತಿಯೊಂದು ಪ್ರಮುಖ ಮಾರುಕಟ್ಟೆ ಬಿಕ್ಕಟ್ಟು ವಿಭಿನ್ನವಾಗಿ ಕಾಣುತ್ತದೆ. ಡಾಟ್-ಕಾಮ್ ಬಬಲ್ ತಂತ್ರಜ್ಞಾನ, ಜಾಗತಿಕ ಆರ್ಥಿಕ ಬಿಕ್ಕಟ್ಟು, ಕೋವಿಡ್ ಮತ್ತು ಸಾಂಕ್ರಾಮಿಕ ರೋಗಗಳು ಇಷ್ಟೇ ಅಲ್ಲ ಇತ್ತೀಚೆಗೆ, ಹೆಚ್ಚುತ್ತಿರುವ ಹಣದುಬ್ಬರ, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಬಡ್ಡಿದರ ಏರಿಕೆಯ ಅವಧಿಗಳು ಹೂಡಿಕೆದಾರರ ವಿಶ್ವಾಸವನ್ನು ಪದೇ ಪದೇ ಪರೀಕ್ಷಿಸಿವೆ ಎಂದು ಅವರು ಹೇಳಿದರು.
ಈ ಮೇಲಿನವುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಹೂಡಿಕೆದಾರರ ಮನೋಭಾವನೆ ಒಂದೇ ರೀತಿ ಇದ್ದದ್ದು ಗಮನಾರ್ಹ. ಹೂಡಿಕೆಯ ದೊಡ್ಡ ವಿಪರ್ಯಾಸವೆಂದರೆ ಇಬ್ಬರು ಹೂಡಿಕೆದಾರರು ಒಂದೇ ಹೂಡಿಕೆಯ ಮಾಡಿದರೂ ಫಲಿತಾಂಶ ಮಾತ್ರ ವಿಭಿನ್ನವಾಗಿರುವ ಸಾಧ್ಯತೆ ಇದೆ.
ಮಾರುಕಟ್ಟೆ ಕುಸಿತದಿಂದ ಎರಡು ರೀತಿಯ ನಷ್ಟ
ಪ್ರತಿ ಬಾರಿಯ ಮಾರುಕಟ್ಟೆ ಕುಸಿತವೂ ಎರಡು ರೀತಿಯ ನಷ್ಟಗಳನ್ನು ಉಂಟು ಮಾಡುತ್ತದೆ. ಮೊದಲನೆಯದು ಮಾರುಕಟ್ಟೆಯಿಂದ ಉಂಟಾಗುತ್ತದೆ. ಎರಡನೆಯದು ಹೂಡಿಕೆದಾರರಿಂದ ಉಂಟಾಗುತ್ತದೆ. ಇವುಗಳಲ್ಲಿ ಎರಡನೇಯದರಿಂದ ಹೆಚ್ಚಿನ ನಷ್ಟ ಕಂಡು ಬರುತ್ತದೆ ಎಂಬುದು ಇತಿಹಾಸದಿಂದ ಕಂಡುಕೊಂಡಿದ್ದೇನೆ ಎಂದರು.
ಮಾರುಕಟ್ಟೆಗಳ ಕುಸಿತವು ಹೂಡಿಕೆದಾರರಲ್ಲಿ ಭಯ ಹುಟ್ಟಿಸುತ್ತದೆ. ನಷ್ಟದ ಆತಂಕ ಹೂಡಿಕೆದಾರರನ್ನು ಹಣ ಹಿಂಪಡೆಯುವಂತೆ/ನಿರ್ಗಮಿಸುವಂತೆ ಮಾಡುತ್ತದೆ. ಮಾರುಕಟ್ಟೆಗಳು ಏರುಪೇರಾದಾಗ ಅನೇಕ ಹೂಡಿಕೆದಾರರು ಸಾಮಾನ್ಯರಂತೆ ವರ್ತಿಸುತ್ತಾರೆ. ಪರಿಸ್ಥಿತಿ ಹತೋಟೆಗೆ ಬರಬೇಕು, ನಷ್ಟ ಉಂಟಾಗದೇ ಸುರಕ್ಷತವಾಗಿರಬೇಕೆಂದು ಬಯಸುತ್ತಾರೆ. ಆದ್ದರಿಂದ ಸ್ಥಿರ ಮಾರುಕಟ್ಟೆಗಾಗಿ ಕಾಯುತ್ತಾರೆ. ಜೊತೆಗೆ ಲಾಭದ ನಿರೀಕ್ಷೆಯಲ್ಲಿರುತ್ತಾರೆ.
ಹಿಂದೆಲ್ಲ ಮಾರುಕಟ್ಟೆಗಳು ಕುಸಿದಾಗ ಹೆಚ್ಚಾಗಿ ಚೇತರಿಸಿಕೊಂಡಿವೆ. ತಕ್ಷಣ ಚೇತರಿಕೆ ಸಾಧ್ಯವಿಲ್ಲ ಜೊತೆಗೆ ಯಾವಾಗ ಎಂದು ಊಹಿಸಲಿಕ್ಕಾಗದು. ಆದರೆ ಚೇತರಿಕೆ ಮಾತ್ರ ಖಚಿತ. ಇದೇ ವೇಳೆ ಹೆಚ್ಚಿನ ಹೂಡಿಕೆದಾರರು ಮಾರುಕಟ್ಟೆಯ ಚೇತರಿಕೆಯ ಪ್ರಯೋಜನವನ್ನು ಪಡೆಯಲು ವಿಫಲರಾಗುತ್ತಾರೆ.
15 ವರ್ಷಗಳ ಕಾಲ ತಾಳ್ಮೆಯಿಂದ ಹೂಡಿಕೆ ಮಾಡಿ ನಂತರ ವಿಷಾದ ವ್ಯಕ್ತಪಡಿಸಿದವರನ್ನು ನಾನು ಕೆಲವೊಮ್ಮೆ ಗಮನಿಸಿದ್ದೇನೆ. ಆದರೆ ಮಾರುಕಟ್ಟೆ ಅಸ್ಥಿರವಿದ್ದಾಗ ಆತುರದಿಂದ ಹೂಡಿಕೆಯಿಂದ ಹೊರ ಬಂದು, ನಂತರ ತಮ್ಮ ನಿರ್ಧಾರಕ್ಕಾಗಿ ಪಶ್ಚಾತಾಪ ಪಟ್ಟವರು ಅನೇಕರಿದ್ದಾರೆ. ಇದೇ ಕಾರಣಕ್ಕೆ ಹೂಡಿಕೆಯಲ್ಲಿ ಭಾವನೆಗಳನ್ನು ನಿಯಂತ್ರಿಸುವುದು ಅತ್ಯಂತ ಮುಖ್ಯ.
ಭಯ ಉಂಟಾದಾಗ ತಾತ್ಕಾಲಿಕ ಕುಸಿತಗಳು ಶಾಶ್ವತವೆಂದು ನಮ್ಮನ್ನು ನಂಬುವಂತೆ ಮಾಡುತ್ತದೆ. ಭರವಸೆಗಳು ಒಳ್ಳೆಯ ಸಮಯ ಬಂದೇ ಬರುತ್ತದೆ ಎಂದು ನಮಗೆ ಮನವರಿಕೆ ಮಾಡಿಕೊಡುತ್ತದೆ. ಅಸಹನೆಯು ಅಲ್ಪಾವಧಿಯಲ್ಲಿ ದೀರ್ಘಾವಧಿಯ ಲಾಭದ ನಿರೀಕ್ಷಿಯನ್ನು ಹುಟ್ಟಿಸುತ್ತದೆ. ಈ ಭಾವನೆಗಳು ಒಟ್ಟಾಗಿ ಮಾರುಕಟ್ಟೆ ಮತ್ತು ಹೂಡಿಕೆದಾರರ ಲಾಭದ ನಡುವೆ ಅಂತರ ಸೃಷ್ಟಿಸುತ್ತದೆ. ಇಂತಹ ಭಾವನೆಗಳು ಸರ್ವೇ ಸಾಮಾನ್ಯ ಪ್ರತಿಯೊಬ್ಬ ಹೂಡಿಕೆದಾರರೂ ಅವುಗಳನ್ನು ಎದುರಿಸಬೇಕಾಗುತ್ತದೆ.
ಭಾವನೆಗಳ ನಿರ್ವಹಣೆ ಮುಖ್ಯ
ಹೂಡಕೆದಾರರು ಭಾವನೆಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದು ಮುಖ್ಯ. ನನ್ನ ಪ್ರಕಾರ, ಮಾರುಕಟ್ಟೆಯನ್ನು ನಿಖರವಾಗಿ ಊಹಿಸುವವರಿಗಿಂತ, ಮಾರುಕಟ್ಟೆಯ ಏರಿಳಿತಗಳ ಸಂದರ್ಭದಲ್ಲಿಯೂ ಭಾವನೆಗಳಿಗೆ ಒಳಗಾದಾಗ ತಾಳ್ಮೆ ಮತ್ತು ಸಮಚಿತ್ತವನ್ನು ಕಾಪಾಡಿಕೊಳ್ಳುವವರೇ ಯಶಸ್ವಿ ಹೂಡಿಕೆದಾರರಾಗುತ್ತಾರೆ ಎಂದು ಅವರು ತಿಳಿಸಿದರು.
ಒಂದು ತಲೆಮಾರಿನ ಹಿಂದೆ ಹೂಡಿಕೆದಾರರು ಆಗೊಮ್ಮೆ ಈಗೊಮ್ಮೆ ಮಾತ್ರ ಮಾರುಕಟ್ಟೆಯ ಮಾಹಿತಿಯನ್ನು ಪರಿಶೀಲಿಸುತ್ತಿದ್ದರು. ಆದರೆ ಇಂದು ನಮ್ಮ ಕೈಯಲ್ಲಿರುವ ಮೊಬೈಲ್‌ನಲ್ಲೇ ಮಾರುಕಟ್ಟೆಯ ಮಾಹಿತಿ ಯಾವಾಗಲೂ ದೊರೆಯುತ್ತವೆ. ಇಂದು ಹೂಡಿಕೆದಾರರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಪ್ರತಿದಿನ ಹಲವಾರು ಸುದ್ದಿಗಳು, ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು, ತಜ್ಞರ ಅಭಿಪ್ರಾಯಗಳು ಮತ್ತು ವಾಟ್ಸ್ಆಪ್ ಸಂದೇಶಗಳು ನಮ್ಮ ಮುಂದೆ ಬರುತ್ತವೆ. ಹೀಗೇ ಮಾಹಿತಿ ಸಿಗುವುದರಿಂದ ಸಮಸ್ಯೆ ಆಗಲ್ಲ. ಆದರೆ ಆ ಮಾಹಿತಿ ಪ್ರಭಾವಕ್ಕೆ ಒಳಗಾಗಿ ನಾವು ಹೇಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬುದೇ ನಿಜವಾದ ಸವಾಲಾಗಿದೆ.
ಸಂಪತ್ತು ನಿರ್ಮಾಣದಲ್ಲಿ ವಿಫಲವಾಗಲು ಬುದ್ಧಿವಂತಿಕೆಯ ಕೊರತೆಯಾಗಲಿ ಅಥವಾ ಮಾಹಿತಿ ಸಿಗದಿರುವುದಾಗಲಿ ಸಾಮಾನ್ಯವಾಗಿ ಕಾರಣವಾಗುವುದಿಲ್ಲ. ಭಯ, ಲೋಭ, ಅಸಹನೆ, ಅತಿಯಾದ ಆತ್ಮ ವಿಶ್ವಾಸ ಮತ್ತು ಮಾರುಕಟ್ಟೆಯ ಏರಿಳಿತಗಳಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದೇ ಹೆಚ್ಚಾಗಿ ಕಾರಣವಾಗುತ್ತದೆ ಎಂದರು.
ಮಾರುಕಟ್ಟೆಯನ್ನು ನಿಖರವಾಗಿ ಊಹಿಸಲು ಸಾಧ್ಯವಿಲ್ಲ. ಚಿಂತೆಗೆ ಯಾವುದಾದರೂ ಒಂದು ಕಾರಣ ಇರುತ್ತದೆ. ಆದರೆ ಭಯ ಅಥವಾ ಲೋಭ ನಮ್ಮನ್ನು ತಪ್ಪು ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಿದಾಗಲೂ, ನಮ್ಮ ದೀರ್ಘಾವಧಿಯ ಹೂಡಿಕೆ ಯೋಜನೆಯನ್ನು ಬಿಡದೆ ಅನುಸರಿಸುವುದೇ ಮುಖ್ಯವಾಗಿದೆ.
ಯುದ್ಧಗಳು, ಆರ್ಥಿಕ ಹಿಂಜರಿತಗಳು, ಸಾಂಕ್ರಾಮಿಕ ರೋಗಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳಿಂದ ಮಾರುಕಟ್ಟೆಗಳು ಚೇತರಿಸಿಕೊಂಡಿವೆ ಎಂದು ಇತಿಹಾಸವು ತೋರಿಸಿದೆ. ದೊಡ್ಡ ಪ್ರಶ್ನೆಯೆಂದರೆ ಹೂಡಿಕೆದಾರರು ಆ ಚೇತರಿಕೆಯಿಂದ ಲಾಭ ಪಡೆಯಲು ಸಾಕಷ್ಟು ಸಮಯದವರೆಗೆ ಹೂಡಿಕೆ ಮಾಡಬಹುದೇ ಎಂಬುದು. ಏಕೆಂದರೆ ಹೂಡಿಕೆಯಲ್ಲಿ ನಿಜವಾದ ದೊಡ್ಡ ಅಪಾಯ ಮಾರುಕಟ್ಟೆಯಲ್ಲ. ಮಾರುಕಟ್ಟೆಯ ಏರಿಳಿತಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದೇ ಆಗಿದೆ. ಹಿಂದಿನ ಸಾಧನೆ ಭವಿಷ್ಯದಲ್ಲಿಯೂ ಮುಂದುವರಿಯಬಹುದು ಅಥವಾ ಮುಂದುವರಿಯದಿರಬಹುದು' ಎಂದು ಅವರು ವಿವರಿಸಿದ್ದಾರೆ.


Click it and Unblock the Notifications
