ಅದಾನಿ ವಿಂಡ್‌ನಿಂದ ಹೊಸ ಮೈಲಿಗಲ್ಲು: ಭಾರತದ ಅತಿ ಉದ್ದದ 91.2 ಮೀಟರ್ ವಿಂಡ್ ಟರ್ಬೈನ್ ಬ್ಲೇಡ್ ಉತ್ಪಾದನೆ ಶುರು

ಅಹಮದಾಬಾದ್: ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅದಾನಿ ನ್ಯೂ ಇಂಡಸ್ಟ್ರೀಸ್ ಲಿಮಿಟೆಡ್ (ANIL), ಗುಜರಾತ್‌ನ ಮುಂದ್ರಾದಲ್ಲಿರುವ ತನ್ನ ಬೃಹತ್ ಸಮಗ್ರ ಉತ್ಪಾದನಾ ಘಟಕದಲ್ಲಿ 91.2 ಮೀಟರ್ ಉದ್ದದ ಆನ್‌ಶೋರ್ ವಿಂಡ್ ಟರ್ಬೈನ್ ಬ್ಲೇಡ್‌ಗಳ ಉತ್ಪಾದನೆಯನ್ನ ಆರಂಭಿಸಿದೆ. ಇದರೊಂದಿಗೆ ತನ್ನ MWL185-5.0 MW ವಿಂಡ್ ಟರ್ಬೈನ್ ಪ್ಲಾಟ್‌ಫಾರ್ಮ್‌ಗಾಗಿ ಕಂಪನಿಯು ಅಧಿಕೃತ ಪ್ರಮಾಣೀಕರಣವನ್ನ ಪಡೆದುಕೊಂಡಿದ್ದು, ದೊಡ್ಡ ಮಟ್ಟದ ಸರಣಿ ಉತ್ಪಾದನೆಗೆ ಹಸಿರು ನಿಶಾನೆ ಸಿಕ್ಕಂತಾಗಿದೆ.

Adani Wind Starts Production of India s Longest 91 2m Wind Turbine Blade for 5 MW Power Platform

ಈ 91.2 ಮೀಟರ್ ಬ್ಲೇಡ್‌ಗಳು ಭಾರತದಲ್ಲಿಯೇ ತಯಾರಾದ ಅತಿ ಉದ್ದದ ವಿಂಡ್ ಟರ್ಬೈನ್ ಬ್ಲೇಡ್‌ಗಳಾಗಿವೆ. ಇವುಗಳನ್ನ MWL 185-5.0 MW ಪ್ಲಾಟ್‌ಫಾರ್ಮ್‌ಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಟರ್ಬೈನ್ 185 ಮೀಟರ್ ರೋಟರ್ ಡಯಾಮೀಟರ್‌ ಅನ್ನಾ ಹೊಂದಿದ್ದು, ಇದು ದೇಶದಲ್ಲಿಯೇ ಅತಿ ದೊಡ್ಡದಾಗಿದೆ. ಜೊತೆಗೆ 140 ಮೀಟರ್ ಹಬ್ ಎತ್ತರವನ್ನ ಹೊಂದಿದೆ. ಇದರ ರೋಟರ್ ಸುಮಾರು 26,600 ಚದರ ಮೀಟರ್‌ಗಳಷ್ಟು ವಿಸ್ತಾರವನ್ನು ವ್ಯಾಪಿಸುತ್ತದೆ.

ಇದು ಸಾಧಾರಣವಾಗಿ ಮೂರೂವರೆ ಫುಟ್‌ಬಾಲ್ ಮೈದಾನಗಳಿಗೆ ಸಮನಾಗಿರುತ್ತದೆ. ಮುಂದ್ರಾದಲ್ಲಿ ಈ ಮೊದಲು 78.6 ಮೀಟರ್ ಮತ್ತು 80.5 ಮೀಟರ್ ಬ್ಲೇಡ್‌ಗಳನ್ನು ಉತ್ಪಾದಿಸಲಾಗುತ್ತಿತ್ತು. ಈಗ 91.2 ಮೀಟರ್‌ಗೆ ಏರಿಸುವ ಮೂಲಕ ಬ್ಲೇಡ್ ವಿನ್ಯಾಸ, ಎಂಜಿನಿಯರಿಂಗ್ ಮತ್ತು ಉತ್ಪಾದನಾ ಕರಾರುವಕ್ಕತೆಯಲ್ಲಿ ಭಾರತದ ಸಾಮರ್ಥ್ಯವನ್ನ ಅದಾನಿ ವಿಂಡ್ ಮತ್ತಷ್ಟು ವಿಸ್ತರಿಸಿದೆ.

ಕಡಿಮೆ ವೇಗದಲ್ಲೂ ಅತ್ಯುತ್ತಮ ಗಾಳಿ ವಿದ್ಯುತ್ ಉತ್ಪಾದನೆ

ಟರ್ಬೈನ್‌ನ ವಿದ್ಯುತ್ ಉತ್ಪಾದನೆಯು ಅದರ ರೋಟರ್ ಡಯಾಮೀಟರ್‌, ಹಬ್ ಎತ್ತರ ಮತ್ತು ಆ ಪ್ರದೇಶದಲ್ಲಿರುವ ಗಾಳಿಯ ವೇಗವನ್ನು ಅವಲಂಬಿಸಿರುತ್ತದೆ. ಅದಾನಿ ವಿಂಡ್‌ನ ಈ ಹೊಸ ಟರ್ಬೈನ್‌ಗಳು ಕಡಿಮೆ ಮತ್ತು ಸಾಧಾರಣ ಗಾಳಿಯಿರುವ ಸ್ಥಳಗಳಲ್ಲೂ ಹೆಚ್ಚು ಶಕ್ತಿಯನ್ನು ಉತ್ಪಾದಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಗಾಳಿ ವಿದ್ಯುತ್ ಯೋಜನೆಗಳಿಗೆ ವಾಣಿಜ್ಯಿಕವಾಗಿ ದೊಡ್ಡ ಮಟ್ಟದ ಲಾಭವನ್ನು ತಂದುಕೊಡಲಿದೆ. ಭಿನ್ನ ವೇಗದ ಗಾಳಿಯನ್ನು ಸಮರ್ಥವಾಗಿ ಬಳಸಿಕೊಂಡು ನಿರಂತರವಾಗಿ ವಿದ್ಯುತ್ ಉತ್ಪಾದಿಸಲು ಇದು ನೆರವಾಗುತ್ತದೆ.

ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ

ಈ ಮಹತ್ವದ ಸಾಧನೆ ಬಗ್ಗೆ ಮಾತನಾಡಿದ ಅದಾನಿ ವಿಂಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮಿಲಿಂದ್ ಕುಲಕರ್ಣಿ, "ಭಾರತದ ಅತಿ ಉದ್ದದ ವಿಂಡ್ ಟರ್ಬೈನ್ ಬ್ಲೇಡ್ ಉತ್ಪಾದಿಸುವುದು ಮತ್ತು ನಮ್ಮ 5 MW ಪ್ಲಾಟ್‌ಫಾರ್ಮ್‌ಗೆ ಪ್ರಮಾಣೀಕರಣ ಪಡೆಯುವುದು ಅದಾನಿ ವಿಂಡ್ ಹಾಗೂ ದೇಶದ ಗಾಳಿ ವಿದ್ಯುತ್ ಉತ್ಪಾದನಾ ವಲಯದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದೆ. ದೊಡ್ಡ ಬ್ಲೇಡ್‌ಗಳು ಮತ್ತು ಹೆಚ್ಚಿನ ಸಾಮರ್ಥ್ಯದ ಟರ್ಬೈನ್‌ಗಳು ಕಡಿಮೆ ಗಾಳಿಯಿರುವ ಪ್ರದೇಶಗಳಲ್ಲೂ ಹೆಚ್ಚು ಶಕ್ತಿಯನ್ನ ಪಡೆಯಲು ಸಹಾಯ ಮಾಡುತ್ತವೆ. ಭಾರತದ ಬೆಳೆಯುತ್ತಿರುವ ನವೀಕರಿಸಬಹುದಾದ ಮತ್ತು ಶುದ್ಧ ಇಂಧನದ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ," ಎಂದು ತಿಳಿಸಿದರು.

ಜಾಗತಿಕ ಮಟ್ಟದ ವಿಂಡ್ ಟರ್ಬೈನ್ ಪ್ರಮಾಣೀಕರಣ

ಅದಾನಿ ವಿಂಡ್‌ನ MWL185-5.0 MW ಪ್ಲಾಟ್‌ಫಾರ್ಮ್ ಅನ್ನು ಜರ್ಮನ್ ತಂತ್ರಜ್ಞಾನ ಪಾಲುದಾರ W2E (ವಿಂಡ್ ಟು ಎನರ್ಜಿ) ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಜರ್ಮನಿಯ ಸ್ವತಂತ್ರ ವಿಂಡ್ ಟರ್ಬೈನ್ ಪರೀಕ್ಷೆ ಮತ್ತು ಪ್ರಮಾಣೀಕರಣ ಸಂಸ್ಥೆಯಾದ ವಿಂಡ್‌ಗಾರ್ಡ್ ಸರ್ಟಿಫಿಕೇಶನ್ ಜಿಎಂಬಿಹೆಚ್ ಮುಂದ್ರಾದಲ್ಲಿನ ಮೂಲಮಾದರಿಯ ಪರೀಕ್ಷೆಯ ನಂತರ ಈ ಟರ್ಬೈನ್‌ಗೆ ಪ್ರಮಾಣಪತ್ರವನ್ನ ನೀಡಿದೆ.

ಇದಲ್ಲದೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಪಟ್ಟಿಯಲ್ಲಿ ಅದಾನಿ ವಿಂಡ್‌ನ ಮೂರು ಟರ್ಬೈನ್ ಮಾದರಿಗಳು ಸ್ಥಾನ ಪಡೆದಿವೆ. 2025ರ ಬ್ಲೂಮ್‌ಬರ್ಗ್‌ಎನ್‌ಇಎಫ್‌ನ (BloombergNEF) ಜಾಗತಿಕ ಟಾಪ್ 15 ಟರ್ಬೈನ್ ತಯಾರಕರ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿರುವ ಏಕೈಕ ಭಾರತೀಯ ವಿಂಡ್ ಟರ್ಬೈನ್ ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೂ ಅದಾನಿ ವಿಂಡ್ ಪಾತ್ರವಾಗಿದೆ.

ಗುಜರಾತ್‌ನ ಖಾವ್ಡಾದಲ್ಲಿರುವ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಘಟಕದಲ್ಲಿ ಕಂಪನಿಯ 5.2 ಮೆಗಾವ್ಯಾಟ್ ಸಾಮರ್ಥ್ಯದ ಟರ್ಬೈನ್‌ಗಳು 2 ಗಿಗಾವ್ಯಾಟ್‌ಗಿಂತ ಹೆಚ್ಚಿನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನ ಯಶಸ್ವಿಯಾಗಿ ಸ್ಥಾಪಿಸಿವೆ. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟ ಮತ್ತು ಹಸಿರು ಇಂಧನ ಪೂರೈಕೆಯಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+