Adani Power: ಅಸ್ಸಾಂನಲ್ಲಿ 3,200 ಮೆಗಾವ್ಯಾಟ್ ವಿದ್ಯುತ್ ಘಟಕಕ್ಕೆ ಶಂಕುಸ್ಥಾಪನೆ
Adani Power: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಧುಬ್ರಿ ಜಿಲ್ಲೆಯ ಚಾಪರ್‌ನಲ್ಲಿ 'ಅದಾನಿ ಪವರ್ ಲಿಮಿಟೆಡ್' ಸಂಸ್ಥೆಯ 3,200 ಮೆಗಾವ್ಯಾಟ್ ಸಾಮರ್ಥ್ಯದ ಅಲ್ಟ್ರಾ-ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ಇದು ರಾಜ್ಯದ ಅತಿದೊಡ್ಡ ವಿದ್ಯುತ್ ಯೋಜನೆಗಳಲ್ಲಿ ಒಂದಾಗಿದೆ.
ಈ ಯೋಜನೆಯು ಸುಮಾರು ₹48,000 ಕೋಟಿ ಹೂಡಿಕೆಯನ್ನು ಒಳಗೊಂಡಿದ್ದು, ಅಸ್ಸಾಂನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ಕಂಪನಿಯ ಪ್ರಕಾರ, ಈ ಯೋಜನೆಯು ನಿರ್ಮಾಣ ಹಂತದಲ್ಲಿ 20,000ದವರೆಗೆ ಹಾಗೂ ಕಾರ್ಯಾಚರಣೆ ಆರಂಭಗೊಂಡ ನಂತರ ಸುಮಾರು 5,000 ಉದ್ಯೋಗಗಳನ್ನು ಸೃಷ್ಟಿಸಲಿದೆ. 2030ರ ಡಿಸೆಂಬರ್‌ನಿಂದ ಹಂತ-ಹಂತವಾಗಿ ಈ ವಿದ್ಯುತ್ ಘಟಕದ ಚಾಲನೆ ಆರಂಭವಾಗುವಂತೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಚಾಪರ್ ವಿದ್ಯುತ್ ಸ್ಥಾವರವು ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಘಟಕಗಳನ್ನು ಒಳಗೊಂಡಿರಲಿದ್ದು, ಅತ್ಯುನ್ನತ ದಕ್ಷತೆಯ ವ್ಯವಸ್ಥೆಗಳು ಮತ್ತು ಆಧುನಿಕ ಪರಿಸರ ರಕ್ಷಣಾ ತಂತ್ರಜ್ಞಾನಗಳೊಂದಿಗೆ 'ಅಲ್ಟ್ರಾ-ಸೂಪರ್‌ಕ್ರಿಟಿಕಲ್' ತಂತ್ರಜ್ಞಾನವನ್ನು ಬಳಸಲಿದೆ. ಈ ವಿದ್ಯುತ್ ಘಟಕವು ಕಾರ್ಯಾಚರಣೆಗೆ ಬಂದ ನಂತರ, ಅಸ್ಸಾಂನ ಗೃಹಬಳಕೆ, ವಾಣಿಜ್ಯ ಹಾಗೂ ಕೈಗಾರಿಕಾ ಅಗತ್ಯಗಳಿಗೆ ವಿಶ್ವಾಸಾರ್ಹ ಮತ್ತು ಕಡಿಮೆ ವೆಚ್ಚದ ವಿದ್ಯುತ್ ಪೂರೈಸುವ ನಿರೀಕ್ಷೆಯಿದೆ.
ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದೇನು?
ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಹಲವು ಪ್ರಮುಖ ಇಂಧನ ಯೋಜನೆಗಳೊಂದಿಗೆ ಅಸ್ಸಾಂ ರಾಜ್ಯವು ಈಶಾನ್ಯ ಭಾರತದ ಇಂಧನ ಹಬ್ ಆಗಿ ಹೊರಹೊಮ್ಮುತ್ತಿದೆ. ಸುಮಾರು ₹48,000 ಕೋಟಿ ಹೂಡಿಕೆಯ ಚಾಪರ್ ಯೋಜನೆಯು ಅಸ್ಸಾಂನ ಅತಿದೊಡ್ಡ ಏಕೈಕ ಹೂಡಿಕೆಗಳಲ್ಲಿ ಒಂದಾಗಲಿದೆ. ಅಲ್ಲದೆ, ಈ ಯೋಜನೆಯು ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳ ವೃದ್ಧಿ ಹಾಗೂ ಸ್ಥಳೀಯ ಉದ್ಯಮಗಳು ಮತ್ತು ಸಂಸ್ಥೆಗಳಿಗೆ ಹೆಚ್ಚಿನ ಅವಕಾಶಗಳನ್ನು ತಂದುಕೊಡಲಿದೆ,' ಎಂದು ಅವರು ಹೇಳಿದರು.
ಜೀತ್ ಅದಾನಿ ಹೇಳಿದ್ದೇನು?
ಅದಾನಿ ಗ್ರೂಪ್‌ನ ನಿರ್ದೇಶಕರಾದ ಜೀತ್ ಅದಾನಿ ಅವರು ಮಾತನಾಡಿ, 'ಈ ಯೋಜನೆಯು ಅಸ್ಸಾಂ ಪಾಲಿಗೆ ಹೊಸ ಅಧ್ಯಾಯವನ್ನು ಬರೆಯಲಿದ್ದು, ವಿಶ್ವಾಸಾರ್ಹ ಮತ್ತು ಕೈಗೆಟುಕುವ ದರದ ವಿದ್ಯುತ್ ಪೂರೈಸುವ ಮೂಲಕ ಮನೆಗಳಿಗೆ, ವ್ಯವಹಾರಗಳಿಗೆ ಹಾಗೂ ಕೈಗಾರಿಕೆಗಳಿಗೆ ಆಸರೆಯಾಗಲಿದೆ,' ಎಂದು ತಿಳಿಸಿದರು.
'ಅಸ್ಸಾಂನ ವಿವಿಧ ವಲಯಗಳಲ್ಲಿ ಅದಾನಿ ಸಮೂಹ ಮಾಡಿರುವ ಹೂಡಿಕೆಗಳು ಕೇವಲ ಭರವಸೆಯಾಗಿ ಉಳಿಯದೆ, ಈಗಾಗಲೇ ಕಾರ್ಯರೂಪಕ್ಕೆ ಬರಲು ಆರಂಭಿಸಿವೆ. ಮುಂಬರುವ ಮೂರರಿಂದ ನಾಲ್ಕು ವರ್ಷಗಳಲ್ಲಿ ವಿವಿಧ ವಲಯಗಳಾದ್ಯಂತ ಅಸ್ಸಾಂನಲ್ಲಿ ಅದಾನಿ ಗ್ರೂಪ್‌ನ ಒಟ್ಟು ಹೂಡಿಕೆಯು ₹80,000 ಕೋಟಿಗೂ ಮೀರಲಿದ್ದು, ವ್ಯಾಪಕ ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೊಸ ಆರ್ಥಿಕ ಅವಕಾಶಗಳನ್ನು ತರಲಿದೆ,' ಎಂದು ಅವರು ತಿಳಿಸಿದರು.
'ಅದಾನಿ ಗ್ರೂಪ್‌ನ ಸಂಸ್ಥೆಗಳು ಅಸ್ಸಾಂನಲ್ಲಿ ಸುಮಾರು 40,000 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. ರಾಜ್ಯದಲ್ಲಿ ನಡೆಸಲಾದ ಹಲವಾರು ಉದ್ಯೋಗ ಮೇಳಗಳ ಮೂಲಕ ಈಗಾಗಲೇ ಸುಮಾರು 4,500 ಸ್ಥಳೀಯ ಯುವಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ,' ಎಂದು ಹೇಳಿದರು.
'ಚಾಪರ್ ಯೋಜನೆಯು ಅಸ್ಸಾಂನಲ್ಲಿ ಅದಾನಿ ಗ್ರೂಪ್ ಯೋಜಿಸಿರುವ ಒಟ್ಟು ₹63,000 ಕೋಟಿ ಮೌಲ್ಯದ ಬೃಹತ್ ವಿದ್ಯುತ್ ಹೂಡಿಕೆಯ ಪ್ರಮುಖ ಭಾಗವಾಗಿದೆ. ಇದರಲ್ಲಿ ಸುಮಾರು ₹48,000 ಕೋಟಿಯನ್ನು ಚಾಪರ್ ಥರ್ಮಲ್ ಪವರ್ ಪ್ಲಾಂಟ್‌ಗೆ ಕಾಯ್ದಿರಿಸಲಾಗಿದ್ದರೆ, 'ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್' ಮೂಲಕ ಒಟ್ಟು 2,700 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ ಸರಿಸುಮಾರು ₹15,000 ಕೋಟಿ ಹೂಡಿಕೆ ಮಾಡಲು ಯೋಜಿಸಲಾಗಿದೆ. ಜೊತೆಗೆ, 'ಅದಾನಿ ಎನರ್ಜಿ ಸೊಲ್ಯೂಷನ್ಸ್' ಸಂಸ್ಥೆಯು ರಾಜ್ಯದಲ್ಲಿ ಸ್ಮಾರ್ಟ್ ಮೀಟರಿಂಗ್ ಯೋಜನೆಗಳನ್ನು ಜಾರಿಗೊಳಿಸುತ್ತಿದೆ,' ಎಂದು ಹೇಳಿದರು.
'ಅಸ್ಸಾಂ ರಾಜ್ಯವು ತನ್ನ ವಿಶಿಷ್ಟ ಭೌಗೋಳಿಕತೆ, ಜಲಸಂಪನ್ಮೂಲ, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹಾಗೂ ಆಯಕಟ್ಟಿನ ಭೌಗೋಳಿಕ ಸ್ಥಾನದಿಂದಾಗಿ ಪ್ರಮುಖ ಇಂಧನ ಹಬ್ ಆಗುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಅಸ್ಸಾಂ Battery of India ಆಗುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ,' ಅಂತಲೂ ಅವರು ಹೇಳಿದರು.
ಅದಾನಿ ಗ್ರೂಪ್‌ನ ಹೂಡಿಕೆಗಳು ಅಸ್ಸಾಂನಲ್ಲಿ ಕೇವಲ ವಿದ್ಯುತ್ ವಲಯಕ್ಕಷ್ಟೇ ಸೀಮಿತವಾಗಿಲ್ಲ. ಸಂಸ್ಥೆಯು ಗುವಾಹಾಟಿಯಲ್ಲಿರುವ 'ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ಕಂಪನಿಯ ಪ್ರಕಾರ, ವಿಮಾನ ನಿಲ್ದಾಣದ ಟರ್ಮಿನಲ್- 2 2026ರ ಫೆಬ್ರವರಿ 22ರಂದು ಕಾರ್ಯಾಚರಣೆಗೆ ಬಂದಿದೆ. ಜೊತೆಗೆ, ಅದಾನಿ ಗ್ರೂಪ್ ಗುವಾಹಾಟಿ ಏರ್‌ಪೋರ್ಟ್ ಸಿಟಿಯನ್ನು ಮಿಶ್ರ ಬಳಕೆಯ ವಾಣಿಜ್ಯ ಹಬ್ ಆಗಿ ಅಭಿವೃದ್ಧಿಪಡಿಸುತ್ತಿದ್ದು, ಇದರ ಮೊದಲ ಹಂತದಲ್ಲಿ ಎರಡು ಹೋಟೆಲ್‌ಗಳು, ರಿಟೇಲ್ ಮಳಿಗೆಗಳು, ಆಹಾರ ಮತ್ತು ಪಾನೀಯ ಹಾಗೂ ಮನರಂಜನಾ ಸೌಲಭ್ಯಗಳು ಸೇರಿವೆ.
ಅಸ್ಸಾಂನಲ್ಲಿ ಅದಾನಿ ಗ್ರೂಪ್‌ನ ಚಟುವಟಿಕೆಗಳು ಸಿಮೆಂಟ್ ಉತ್ಪಾದನೆ, ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ, ಸಾರಿಗೆ ಸಂಪರ್ಕ ವ್ಯವಸ್ಥೆ ಹಾಗೂ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ ಸೇವೆಗಳನ್ನೂ ಒಳಗೊಂಡಿವೆ. ಅದಾನಿ ಗ್ರೂಪ್‌ನ ಸಾಮಾಜಿಕ-ಆರ್ಥಿಕ ಹಾಗೂ ಅಭಿವೃದ್ಧಿ ವಿಭಾಗವಾದ 'ಅದಾನಿ ಫೌಂಡೇಶನ್' ಕೂಡ ಅಸ್ಸಾಂನಲ್ಲಿ ಹಲವು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ.
ಅದಾನಿ ಫೌಂಡೇಶನ್ ಶಿವಸಾಗರ್ ಹಾಗೂ ಧೇಮಾಜಿ ಜಿಲ್ಲೆಗಳಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಈಡಾಗಿದ್ದ 8,000ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ, ಔಷಧಿಗಳು, ನೈರ್ಮಲ್ಯ ಹಾಗೂ ಸ್ವಚ್ಛತೆಯ ಸಾಮಗ್ರಿಗಳನ್ನು ತಲುಪಿಸಿದೆ. ಕಾಮರೂಪ್ ಗ್ರಾಮೀಣ ಜಿಲ್ಲೆಯಲ್ಲಿ, ಫೌಂಡೇಶನ್‌ನ ಯೋಜನೆಗಳು 19 ಹಳ್ಳಿಗಳನ್ನು ಒಳಗೊಂಡಿವೆ. ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ, ಸಮುದಾಯ ಮೂಲಸೌಕರ್ಯ ಹಾಗೂ ಹವಾಮಾನ ಪ್ರಗತಿಯ ಮೇಲೆ ಗಮನ ಹರಿಸಿವೆ.
ಜೀತ್ ಅದಾನಿ ಅವರು ಗುವಾಹಾಟಿ ಏರ್‌ಪೋರ್ಟ್ ಶಾಲೆಯ ಬಗ್ಗೆಯೂ ವಿಶೇಷವಾಗಿ ಉಲ್ಲೇಖಿಸಿದರು. ಈ ಶಾಲೆಯಲ್ಲಿ 414 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಹೆಚ್ಚಿನವರು ತಮ್ಮ ಕುಟುಂಬದಲ್ಲೇ ಶಿಕ್ಷಣ ಪಡೆಯುತ್ತಿರುವ ಮೊದಲ ತಲೆಮಾರಿನ ವಿದ್ಯಾರ್ಥಿಗಳಾಗಿದ್ದಾರೆ. 3,200 ಮೆಗಾವ್ಯಾಟ್ ಸಾಮರ್ಥ್ಯದ ಈ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು, ಅದಾನಿ ಪವರ್ ಸಂಸ್ಥೆಯು ಅಕ್ಟೋಬರ್ 2025ರಲ್ಲಿ ನಡೆದ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಯಶಸ್ವಿ ಬಿಡ್‌ದಾರರಾಗಿ ಹೊರಹೊಮ್ಮಿತ್ತು. ತದನಂತರ, ನವೆಂಬರ್ 2025ರಲ್ಲಿ 'ಅಸ್ಸಾಂ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್'ನಿಂದ ಸಂಸ್ಥೆಯು ಎಲ್‌ಒಎ ಸ್ವೀಕರಿಸಿತು.
ಚಾಪರ್ ಯೋಜನೆಯು ಅಸ್ಸಾಂನ ಇಂಧನ ಮೂಲಸೌಕರ್ಯವನ್ನು ಬಲಪಡಿಸುವ ಜೊತೆಗೆ, ಸ್ಥಳೀಯ ಗುತ್ತಿಗೆದಾರರು, ಸರಬರಾಜುದಾರರು, ಸಾರಿಗೆ ನಿರ್ವಾಹಕರು ಹಾಗೂ ಸೇವಾ ಪೂರೈಕೆದಾರರಿಗೆ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಶಂಕುಸ್ಥಾಪನೆ ಸಮಾರಂಭದಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಉದ್ಯಮ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಸ್ಥಳೀಯ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.


Click it and Unblock the Notifications
