ಬಂಗಾಳವನ್ನ ತಮ್ಮ 2ನೇ ಕರ್ಮಭೂಮಿ ಎಂದ ಗೌತಮ್ ಅದಾನಿ: ಮುಂದಿನ 10 ವರ್ಷದಲ್ಲಿ ₹1 ಲಕ್ಷ ಕೋಟಿ ಬೃಹತ್ ಹೂಡಿಕೆ!
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಪಶ್ಚಿಮ ಬಂಗಾಳದಲ್ಲಿ ಬೃಹತ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಬುಧವಾರ ನಡೆದ 'ಇಂಡಿಯನ್ ಚೇಂಬರ್ ಆಫ್ ಕಾಮರ್ಸ್' (ICC) ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ರಾಜ್ಯದಾದ್ಯಂತ ₹1 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಹೂಡಿಕೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಕೈಗಾರಿಕಾ ಮುಖಂಡರು, ಸರ್ಕಾರಿ ಪ್ರತಿನಿಧಿಗಳು ಮತ್ತು ಐಸಿಸಿ ಸದಸ್ಯರನ್ನ ಉದ್ದೇಶಿಸಿ ಮಾತನಾಡಿದ ಅದಾನಿ, ಈ ಹೂಡಿಕೆಯನ್ನ ಬಂದರುಗಳು, ಲಾಜಿಸ್ಟಿಕ್ಸ್, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ, ರಸ್ತೆಗಳು, ಸೇತುವೆಗಳು, ರೋಪ್‌ವೇಗಳು, ಗ್ರೀನ್ ಸಿಮೆಂಟ್ ಮತ್ತು ಹೈಪರ್‌ಸ್ಕೇಲ್ ಡೇಟಾ ಸೆಂಟರ್‌ಗಳಲ್ಲಿ ಮಾಡಲಾಗುವುದು ಎಂದು ಹೇಳಿದರು.

ಗುಜರಾತ್‌ನ ಮುಂದ್ರಾ ಬಂದರನ್ನ ಆರಂಭಿಸಿದ ನಂತರದ ತಮ್ಮ ಮೂರು ದಶಕಗಳ ಪಯಣವನ್ನ ಅದಾನಿ ಸ್ಮರಿಸಿದರು. ಬಂಗಾಳವು ತಮ್ಮ ಎರಡನೇ ಕರ್ಮಭೂಮಿ ಆಗಲಿದೆ. ಆದರೆ, ಬಂಗಾಳವು ಗುಜರಾತ್‌ನ ಮಾದರಿಯನ್ನು ನಕಲು ಮಾಡಬಾರದು, ಬದಲಿಗೆ ಬಂಗಾಳವು ತನ್ನದೇ ಆದ ಅತ್ಯಂತ ಬಲಿಷ್ಠ ಆವೃತ್ತಿಯಾಗಿ ಬೆಳೆಯಬೇಕು ಎಂದು ಅವರು ಒತ್ತಿ ಹೇಳಿದರು.
ಆರೋಗ್ಯ ಕ್ಷೇತ್ರಕ್ಕೆ ಒತ್ತು: ಅದಾನಿ ಆರೋಗ್ಯ ಮಂದಿರ
ಈ ಕಾರ್ಯಕ್ರಮದಲ್ಲಿ ಅದಾನಿ ಆರೋಗ್ಯ ಮಂದಿರದ ಬಗ್ಗೆಯೂ ಘೋಷಣೆ ಮಾಡಲಾಯಿತು. ಇದು ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿ ನಿರ್ಮಾಣವಾಗಲಿರುವ 2,000 ಹಾಸಿಗೆಗಳ ವೈದ್ಯಕೀಯ ಸಂಸ್ಥೆಯಾಗಿದೆ. ಖಾಸಗಿ ಆಸ್ಪತ್ರೆಗಳ ವೆಚ್ಚ ಭರಿಸಲಾಗದ ಬಡ ರೋಗಿಗಳಿಗಾಗಿ ಈ ಆಸ್ಪತ್ರೆಯ ಅರ್ಧದಷ್ಟು ಹಾಸಿಗೆಗಳನ್ನ ಮೀಸಲಿಡಲಾಗುವುದು ಎಂದು ಅದಾನಿ ಗ್ರೂಪ್ ತಿಳಿಸಿದೆ.
ಬಂಗಾಳದ ಸಾಂಸ್ಕೃತಿಕ ಪರಂಪರೆಯನ್ನ ಉಳಿಸುವ ಬಗ್ಗೆಯೂ ಕೈಗಾರಿಕೋದ್ಯಮಿ ಮಾತನಾಡಿದರು. ಕುಮಾರತುಲಿ ಘಾಟ್‌ನ ಅಭಿವೃದ್ಧಿ, ಬಂಗಾಳಿ ಕಲಾವಿದರನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ವಿಶೇಷ ದುರ್ಗಾ ಪೂಜೆ ಕಾರ್ಯಕ್ರಮ ಮತ್ತು ಐತಿಹಾಸಿಕ ರೈಟರ್ಸ್ ಬಿಲ್ಡಿಂಗ್ ಸಂರಕ್ಷಣೆಗೆ ಬೆಂಬಲ ನೀಡುವುದಾಗಿ ಅವರು ಹೇಳಿದರು.
"ಬೇಡಿಕೆ ಬರುವ ಮುನ್ನವೇ ನಿರ್ಮಿಸಿ"
ಆರ್ಥಿಕ ಬದಲಾವಣೆಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಬದಲು, ಅವುಗಳನ್ನ ಮೊದಲೇ ಊಹಿಸಿ ಸಿದ್ಧರಾಗುವ ತಮ್ಮ ತತ್ವದ ಬಗ್ಗೆ ಅದಾನಿ ತಮ್ಮ ಭಾಷಣದಲ್ಲಿ ಹೆಚ್ಚು ಗಮನಹರಿಸಿದರು.
ಎಐ ಡೇಟಾ ಸೆಂಟರ್‌ಗಳಲ್ಲಿ ಮೊದಲೇ ಹೂಡಿಕೆ ಮಾಡಿದ್ದು, 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' ಘೋಷಣೆಗೂ ಮುನ್ನವೇ ಇಸ್ರೇಲ್‌ನ ಹೈಫಾ ಬಂದರನ್ನ ಖರೀದಿಸಿದ್ದು ಮತ್ತು ಭಾರತದ 15 ಬಂದರುಗಳನ್ನು ಸಂಪರ್ಕಿಸುವ ಲಾಜಿಸ್ಟಿಕ್ಸ್ ನೆಟ್‌ವರ್ಕ್ ಅನ್ನ ಅವರು ಉದಾಹರಣೆಯಾಗಿ ನೀಡಿದರು.
ಜಾಗತಿಕ ಮಟ್ಟದಲ್ಲಿ ಬದಲಾವಣೆಗಳಾಗುತ್ತಿರುವಾಗ, ಉದ್ಯಮಗಳು "ಬೇಡಿಕೆ ಬರುವ ಮುನ್ನವೇ ಮೂಲಸೌಕರ್ಯಗಳನ್ನು ನಿರ್ಮಿಸಬೇಕು" ಎಂದು ಅವರು ವಾದಿಸಿದರು.
ಗುಜರಾತ್‌ನ ಮುಂದ್ರಾ ಬಂದರು ಮತ್ತು ಕಚ್‌ನ ಖಾವ್ಡಾ ನವೀಕರಿಸಬಹುದಾದ ಇಂಧನ ಪಾರ್ಕ್ ಯೋಜನೆಗಳನ್ನು ಅವರು ಉಲ್ಲೇಖಿಸಿದರು. ಪ್ರತ್ಯೇಕ ಯೋಜನೆಗಳಿಗಿಂತ, ಒಂದಕ್ಕೊಂದು ಸಂಪರ್ಕ ಹೊಂದಿರುವ ಮೂಲಸೌಕರ್ಯ "ನೆಟ್‌ವರ್ಕ್‌ಗಳು" ಹೇಗೆ ಹೆಚ್ಚಿನ ಮೌಲ್ಯವನ್ನ ಸೃಷ್ಟಿಸುತ್ತವೆ ಎಂಬುದಕ್ಕೆ ಇವು ಉದಾಹರಣೆಯಾಗಿವೆ ಎಂದರು. ತಮ್ಮ ಈ ವಿಧಾನವನ್ನ ವಿವರಿಸಿದ ಅವರು, "ಪ್ರಮಾಣವು ಗಾತ್ರವನ್ನು ಸೃಷ್ಟಿಸುತ್ತದೆ, ಆದರೆ ನೆಟ್‌ವರ್ಕ್‌ಗಳು ಬಲವನ್ನು ಸೃಷ್ಟಿಸುತ್ತವೆ" ಎಂದು ಹೇಳಿದರು.
ಬಂಗಾಳವನ್ನೇ ಏಕೆ ಆಯ್ಕೆ ಮಾಡಿದ್ದು, ಮತ್ತು ಈಗಲೇ ಏಕೆ?
ಕಳೆದ ಹಲವು ದಶಕಗಳಿಂದ ಆರ್ಥಿಕತೆಯು ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚು ಕೇಂದ್ರೀಕೃತವಾಗಿತ್ತು. ಆದರೆ, ಭಾರತದ ಮುಂದಿನ ಹಂತದ ಬೆಳವಣಿಗೆಯು ಪೂರ್ವ ಭಾಗದತ್ತ ಸಾಗಬೇಕು ಎಂದು ಅದಾನಿ ಹೇಳಿದರು.
ಬಂಗಾಳದ ಭೌಗೋಳಿಕ ಸ್ಥಾನವನ್ನ ಅವರು ವಿವರಿಸಿದರು. ಇದು ಖನಿಜ ಸಂಪನ್ಮೂಲಗಳಿರುವ ಒಡಿಶಾ, ಜಾರ್ಖಂಡ್ ಮತ್ತು ಛತ್ತೀಸ್‌ಗಢ ರಾಜ್ಯಗಳ ಗಡಿಯನ್ನು ಹಂಚಿಕೊಂಡಿದೆ. ಇದು ಭಾರತದ ಈಶಾನ್ಯ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ ಹಾಗೂ ಬಂಗಾಳ ಕೊಲ್ಲಿಯ ಮೂಲಕ ಆಗ್ನೇಯ ಏಷ್ಯಾ ಮತ್ತು ಇಂಡೋ-ಪೆಸಿಫಿಕ್ ಪ್ರದೇಶಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಇದು "ಆಯಕಟ್ಟಿನ ರಾಷ್ಟ್ರೀಯ ಕೇಂದ್ರ" ಆಗಲು ಅತ್ಯಂತ ಸೂಕ್ತವಾಗಿದೆ ಎಂದು ಅವರು ಹೇಳಿದರು.
ಬಂಗಾಳದ ಪರಂಪರೆಗೆ ಗೌರವ
ಕೋಲ್ಕತ್ತಾದ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಶ್ಲಾಘಿಸುವ ಮೂಲಕ ಅದಾನಿ ತಮ್ಮ ಭಾಷಣವನ್ನು ಆರಂಭಿಸಿದರು. ನಗರದ ನೊಬೆಲ್ ಪುರಸ್ಕೃತರು ಹಾಗೂ ಐತಿಹಾಸಿಕ ನಾಯಕರಾದ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಜಗದೀಶ್ ಚಂದ್ರ ಬೋಸ್ ಅವರನ್ನು ಅವರು ಸ್ಮರಿಸಿದರು.
ಅದಾನಿ ಗ್ರೂಪ್‌ನ ಹೆಡ್ ಆಫ್ ಟ್ರಾನ್ಸ್‌ಫಾರ್ಮೇಶನ್ ಸುದೀಪ್ತಾ ಭಟ್ಟಾಚಾರ್ಯ ಬಂಗಾಳಿಗಳಿಗೆ ಹಿಲ್ಸಾ ಮೀನಿನ ಮೇಲಿರುವ ಪ್ರೀತಿಯ ಬಗ್ಗೆ ಅವರು ಒಂದು ತಮಾಷೆಯ ಘಟನೆಯನ್ನು ಹಂಚಿಕೊಂಡರು. ಇದು ನೆರೆದಿದ್ದವರಲ್ಲಿ ನಗು ತರಿಸಿತು. ರವೀಂದ್ರನಾಥ ಟ್ಯಾಗೋರ್ ಅವರು ದೇಶಕ್ಕಾಗಿ ಬರೆದ ಪ್ರಾರ್ಥನೆಯ ಹಿಂದಿ ಅನುವಾದವನ್ನ ಹೇಳುವ ಮೂಲಕ ಅವರು ತಮ್ಮ ಭಾಷಣವನ್ನ ಮುಕ್ತಾಯಗೊಳಿಸಿದರು. ಈ ಮೂಲಕ "ತನ್ನ ಸಾಧ್ಯತೆಗಳಿಗೆ ಎಚ್ಚೆತ್ತುಕೊಂಡಿರುವ" ಭಾರತದ ದೃಷ್ಟಿಕೋನವನ್ನ ಅವರು ನೆನಪಿಸಿದರು.


Click it and Unblock the Notifications
