Adani Group: ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಹೊಸ ರೇಟಿಂಗ್ ಮಾದರಿ ಬೇಕು; CareEdgeಗೆ ಗೌತಮ್ ಅದಾನಿ ಕರೆ
ಭಾರತದ ಬೃಹತ್ ಹಾಗೂ ಬಹುಮುಖ ಮೂಲಸೌಕರ್ಯ ಯೋಜನೆಗಳ ನಿಜವಾದ ಆರ್ಥಿಕ ಮತ್ತು ಕಾರ್ಯತಂತ್ರದ ಮೌಲ್ಯವನ್ನು ಸಾಂಪ್ರದಾಯಿಕ ಕ್ರೆಡಿಟ್ ರೇಟಿಂಗ್ ಮಾದರಿಗಳು ಸಂಪೂರ್ಣವಾಗಿ ಅಳೆಯಲು ಸಾಧ್ಯವಾಗುತ್ತಿಲ್ಲ ಎಂದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ. ಇಂತಹ ಯೋಜನೆಗಳ ಸಮಗ್ರ ಪರಿಣಾಮವನ್ನು ಪರಿಗಣಿಸುವ ವಿಶ್ವದ ಮೊದಲ ಕ್ರೆಡಿಟ್ ಫ್ರೇಮ್‌ವರ್ಕ್ ಅಭಿವೃದ್ಧಿಪಡಿಸುವಂತೆ ಅವರು CareEdgeಗೆ ಕರೆ ನೀಡಿದ್ದಾರೆ.
ಮುಂಬೈನಲ್ಲಿ ಆಗಸ್ಟ್ 31ರಂದು ನಡೆದ CareEdge Group ವಾರ್ಷಿಕ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮೂಲಸೌಕರ್ಯ ಕ್ಷೇತ್ರ ವೇಗವಾಗಿ ಬದಲಾಗುತ್ತಿದೆ. ಹೀಗಾಗಿ ಯೋಜನೆಗಳ ಅಪಾಯ ಮತ್ತು ಅವುಗಳ ಭವಿಷ್ಯದ ಸಾಮರ್ಥ್ಯವನ್ನು ಅಳೆಯುವ ಪದ್ಧತಿಯಲ್ಲೂ ಬದಲಾವಣೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

Adani Group: ಭಾರತಕ್ಕೆ ವಿಶಾಲ ದೃಷ್ಟಿಕೋನದ ಅಗತ್ಯ
ಪ್ರಸ್ತುತ ಕ್ರೆಡಿಟ್ ರೇಟಿಂಗ್ ಮಾದರಿಗಳು ಸಾಮಾನ್ಯವಾಗಿ ಒಂದು ಯೋಜನೆಯನ್ನು ಪ್ರತ್ಯೇಕ ಆಸ್ತಿಯಾಗಿ ಪರಿಗಣಿಸಿ ಅದರ ಆದಾಯ, ವೆಚ್ಚ ಮತ್ತು ಅಪಾಯವನ್ನು ಲೆಕ್ಕ ಹಾಕುತ್ತವೆ. ಆದರೆ, ಕೆಲವು ಬೃಹತ್ ಮೂಲಸೌಕರ್ಯ ಯೋಜನೆಗಳು ಕೇವಲ ಒಂದು ಸೇವೆಯನ್ನು ನೀಡುವುದಿಲ್ಲ. ಅವುಗಳ ಸುತ್ತ ಹೊಸ ಕೈಗಾರಿಕೆಗಳು, ಉದ್ಯಮಗಳು, ಉದ್ಯೋಗಗಳು ಮತ್ತು ಆರ್ಥಿಕ ಚಟುವಟಿಕೆಗಳು ಬೆಳೆಯುತ್ತವೆ. ಇಂತಹ ಯೋಜನೆಗಳ ಸಂಪೂರ್ಣ ಪರಿಣಾಮವನ್ನು ಸಾಂಪ್ರದಾಯಿಕ ಹಣಕಾಸು ಮಾದರಿಗಳು ಸರಿಯಾಗಿ ಹಿಡಿಯುವುದಿಲ್ಲ. ಭಾರತಕ್ಕೆ ಕಡಿಮೆ ಮಾನದಂಡಗಳು ಬೇಕಿಲ್ಲ. ಭಾರತಕ್ಕೆ ವಿಶಾಲ ದೃಷ್ಟಿಕೋನದ ಅಗತ್ಯವಿದೆ ಎಂದು ಅವರು ಹೇಳಿದರು.
Adani Group: ಮೂರು ರೀತಿಯ ಮೂಲಸೌಕರ್ಯ
ಮೂಲಸೌಕರ್ಯ ಯೋಜನೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು ಎಂದು ಅದಾನಿ ವಿವರಿಸಿದರು. ಮೊದಲನೆಯದು, ಈಗಿರುವ ಮೂಲಸೌಕರ್ಯವನ್ನು ನಿರ್ವಹಿಸುವ ಅಥವಾ ವಿಸ್ತರಿಸುವ ಯೋಜನೆಗಳು. ಇವುಗಳನ್ನು ಸಾಂಪ್ರದಾಯಿಕ ರೇಟಿಂಗ್ ಮಾದರಿಗಳ ಮೂಲಕ ಸುಲಭವಾಗಿ ಮೌಲ್ಯಮಾಪನ ಮಾಡಬಹುದು. ಎರಡನೆಯದು, ಈಗಾಗಲೇ ಬೇಡಿಕೆ ಇರುವ ಕ್ಷೇತ್ರಗಳಲ್ಲಿ ಹೊಸ ಸಾಮರ್ಥ್ಯವನ್ನು ಸೃಷ್ಟಿಸುವ ಬೆಳವಣಿಗೆ ಆಧಾರಿತ ಮೂಲಸೌಕರ್ಯ.
ಮೂರನೆಯದು, ಪ್ಲಾಟ್‌ಫಾರ್ಮ್ ಇನ್‌ಫ್ರಾಸ್ಟ್ರಕ್ಚರ್. ಇಂತಹ ಯೋಜನೆಗಳು ಈಗಿರುವ ಬೇಡಿಕೆಯನ್ನು ಪೂರೈಸುವುದಷ್ಟೇ ಅಲ್ಲದೆ, ಹೊಸ ಉದ್ಯಮಗಳು ಮತ್ತು ಹೊಸ ಆರ್ಥಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಅವರು ಹೇಳಿದರು.
ಮುಂದ್ರಾ ಬಂದರಿನ ಉದಾಹರಣೆ
ಗುಜರಾತ್ಮುಂದ್ರಾ ಬಂದರನ್ನು ಇದಕ್ಕೆ ಉದಾಹರಣೆಯಾಗಿ ಗೌತಮ್ ಅದಾನಿ ಉಲ್ಲೇಖಿಸಿದರು. ಆರಂಭದಲ್ಲಿ ಕೈಗಾರಿಕಾ ಚಟುವಟಿಕೆಗಳಿಲ್ಲದ ಪ್ರದೇಶದಲ್ಲಿ ಬಂದರನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಕಾಲಕ್ರಮೇಣ ಬಂದರಿನ ಸುತ್ತ ರೈಲು ಸಂಪರ್ಕ, ಲಾಜಿಸ್ಟಿಕ್ಸ್ ಕೇಂದ್ರಗಳು, ವಿದ್ಯುತ್ ಸ್ಥಾವರಗಳು ಹಾಗೂ ಕೈಗಾರಿಕಾ ವಲಯಗಳು ಅಭಿವೃದ್ಧಿಯಾದವು. ಹೀಗಾಗಿ ಮುಂದ್ರಾ ಬಂದರು ಕೇವಲ ಬಂದರಾಗಿ ಉಳಿಯದೆ, ದೊಡ್ಡ ಆರ್ಥಿಕ ಕೇಂದ್ರವಾಗಿ ಬೆಳೆಯಿತು ಎಂದು ಅವರು ಹೇಳಿದರು.
ಒಂದು ಬೃಹತ್ ಮೂಲಸೌಕರ್ಯ ಯೋಜನೆಯು ಅದರ ಸುತ್ತ ಇನ್ನಷ್ಟು ಆರ್ಥಿಕ ಚಟುವಟಿಕೆಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುತ್ತದೆ. ಈ ರೀತಿಯ ದೀರ್ಘಾವಧಿಯ ಪರಿಣಾಮವನ್ನು ಹೊಸ ಕ್ರೆಡಿಟ್ ಮಾದರಿಯಲ್ಲಿ ಪರಿಗಣಿಸಬೇಕು ಎಂದು ಅದಾನಿ ಅಭಿಪ್ರಾಯಪಟ್ಟರು.
ವಿಜಿಂಜಂ ಬಂದರು ನಿರ್ಮಿಸದಿರುವುದೂ ಅಪಾಯ
ಕೇರಳದ ವಿಜಿಂಜಂ ಅಂತರರಾಷ್ಟ್ರೀಯ ಬಂದರಿನ ಕುರಿತು ಮಾತನಾಡಿದ ಅದಾನಿ, ಕೆಲವು ಸಂದರ್ಭಗಳಲ್ಲಿ ಯೋಜನೆಯನ್ನು ನಿರ್ಮಿಸುವುದಕ್ಕಿಂತ ನಿರ್ಮಿಸದೆ ಇರುವುದೇ ದೊಡ್ಡ ಅಪಾಯವಾಗಬಹುದು ಎಂದು ಹೇಳಿದರು.
ವರ್ಷಗಳ ಕಾಲ ಭಾರತವು ಕಂಟೇನರ್ ಸಾಗಣೆಗೆ ವಿದೇಶಿ ಬಂದರುಗಳ ಮೇಲೆ ಅವಲಂಬಿತವಾಗಿತ್ತು. ವಿಜಿಂಜಂ ಬಂದರು ಯೋಜನೆಯು ಆರಂಭದಲ್ಲಿ ಹಣಕಾಸಿನ ದೃಷ್ಟಿಯಿಂದ ಹೆಚ್ಚು ಅಪಾಯಕಾರಿಯಂತೆ ಕಂಡರೂ, ಅದರ ಕಾರ್ಯತಂತ್ರದ ಮಹತ್ವ ದೊಡ್ಡದಾಗಿತ್ತು ಎಂದು ಅವರು ಹೇಳಿದರು. ಬಂದರು ಆರಂಭವಾದ ಬಳಿಕ ಕಡಿಮೆ ಅವಧಿಯಲ್ಲೇ ಮಹತ್ವದ ಸಾಧನೆ ಮಾಡಿದೆ ಎಂದು ಅದಾನಿ ತಿಳಿಸಿದರು.


Click it and Unblock the Notifications
