Adani Airports: ಅದಾನಿ ಏರ್‌ಪೋರ್ಟ್‌ಗೆ ₹9,825 ಕೋಟಿ ಹೂಡಿಕೆ; ಜಾಗತಿಕ ಹೂಡಿಕೆದಾರರಿಂದ ಬಂಡವಾಳ ಸಂಗ್ರಹ

Adani: ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ನ ಅಂಗಸಂಸ್ಥೆಯಾಗಿದ್ದು, ಭಾರತದ ಪ್ರಮುಖ ಖಾಸಗಿ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳಲ್ಲಿ ಒಂದಾಗಿದೆ. ಇದೀಗ ದೇಶೀಯ ಮತ್ತು ಜಾಗತಿಕ ಮಟ್ಟದ ಪ್ರಮುಖ ಹೂಡಿಕೆದಾರರ ಒಕ್ಕೂಟದಿಂದ ₹9,825 ಕೋಟಿ (ಸುಮಾರು 1 ಬಿಲಿಯನ್ ಡಾಲರ್) ಬಂಡವಾಳ ಸಂಗ್ರಹಿಸಲು ಒಪ್ಪಂದಗಳಿಗೆ ಸಹಿ ಮಾಡಿದೆ ಎಂದು ಕಂಪನಿ ಮಂಗಳವಾರ ಘೋಷಿಸಿದೆ.

ಹೂಡಿಕೆದಾರರ ಈ ಒಕ್ಕೂಟವು ಅಲ್ಫಾ ವೇವ್ ಗ್ಲೋಬಲ್, ಪ್ರೇಮ್‌ಜಿ ಇನ್ವೆಸ್ಟ್, ಟೆಮಾಸೆಕ್ ಹಾಗೂ ಬ್ಲ್ಯಾಕ್‌ರಾಕ್ ನಿರ್ವಹಿಸುವ ಫಂಡ್‌ಗಳನ್ನು ಒಳಗೊಂಡಿದೆ. ಈ ವ್ಯವಹಾರವು 'ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್' ಸಂಸ್ಥೆಯ ಬಂಡವಾಳ ಪೂರ್ವ ಈಕ್ವಿಟಿ ಮೌಲ್ಯವನ್ನು ಸುಮಾರು 18 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ವಿಮಾನ ನಿಲ್ದಾಣಗಳ ಕ್ಷೇತ್ರಕ್ಕೆ ಬಲವಾದ ಬಾಹ್ಯ ಸಾಂಸ್ಥಿಕ ಮಾನದಂಡವನ್ನು ನಿಗದಿಪಡಿಸಿದೆ.

Adani Airports Raises rs 9 825 Crores from Alpha Wave Premji Invest Temasek aND BlackRock

ಒಪ್ಪಂದದ ಪ್ರಕಾರ, 'ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್' ಮತ್ತು ಹೂಡಿಕೆದಾರರು ಶೇರು ಚಂದಾದಾರಿಕೆ ಒಪ್ಪಂದ ಹಾಗೂ ಶೇರುದಾರರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೂಡಿಕೆದಾರರು ಮೂರು ಕಂತುಗಳಲ್ಲಿ ಹೊಸ ಈಕ್ವಿಟಿ ಶೇರುಗಳನ್ನು ಖರೀದಿಸಲಿದ್ದಾರೆ. ಅಂತಿಮ ಕಂತು ಜುಲೈ 2027ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೂರೂ ಕಂತುಗಳ ಪ್ರಕ್ರಿಯೆ ಪೂರ್ಣಗೊಂಡ ನಂತರ, ಈ ಹೂಡಿಕೆದಾರರ ಒಕ್ಕೂಟವು ಜಂಟಿಯಾಗಿ AAHLನಲ್ಲಿ ಸುಮಾರು ಶೇಕಡಾ 5.54ರಷ್ಟು ಪಾಲುದಾರಿಕೆಯನ್ನು ಹೊಂದಲಿದೆ.

ಈ ಹೂಡಿಕೆಯಿಂದ ಬರುವ ಹಣವನ್ನು ಮೂರು ಪ್ರಮುಖ ಆದ್ಯತೆಗಳಿಗಾಗಿ ಕಾಯ್ದಿರಿಸಲಾಗಿದೆ. 'ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್' (AAHL) ವ್ಯಾಪ್ತಿಯಲ್ಲಿರುವ ವಿಮಾನ ನಿಲ್ದಾಣಗಳ ಮೂಲಸೌಕರ್ಯಗಳನ್ನು ವಿಸ್ತರಿಸುವುದು ಮತ್ತು ಆಧುನಿಕೀಕರಣಗೊಳಿಸುವುದು, ಸಮಗ್ರ 'ಅದಾನಿ ಏರ್‌ಪೋರ್ಟ್ ಸಿಟಿ' ವ್ಯವಸ್ಥೆಯ ಅಭಿವೃದ್ಧಿಯನ್ನು ವೇಗಗೊಳಿಸುವುದು ಹಾಗೂ ಗ್ರೌಂಡ್ ಹ್ಯಾಂಡ್ಲಿಂಗ್ ಸೇರಿದಂತೆ ವಾಯುಯಾನಯೇತರ ಮತ್ತು ಪ್ರಯಾಣಿಕರ ಸೇವಾ ವ್ಯವಹಾರಗಳನ್ನು ಹೆಚ್ಚಿಸುವುದು.

ಸುಮಾರು 200 ಮಿಲಿಯನ್ (20 ಕೋಟಿ) ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಅಗತ್ಯವಿರುವ ಸಾಮರ್ಥ್ಯವನ್ನು ವಿಸ್ತರಿಸಲು ಈ ಹೂಡಿಕೆ ನೆರವಾಗಲಿದೆ ಹಾಗೂ 'ಅದಾನಿ ಏರ್‌ಪೋರ್ಟ್ ಸಿಟಿ' ಯೋಜನೆಯ ಮೊದಲ ಹಂತದಲ್ಲಿ ಸರಿಸುಮಾರು 22 ಮಿಲಿಯನ್ (2.2 ಕೋಟಿ) ಚದರ ಅಡಿ ವಿಸ್ತೀರ್ಣದ ಬಹು-ಬಳಕೆಯ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.

'ಈ ಈಕ್ವಿಟಿ ಸಂಗ್ರಹಣೆಯು, ಜುಲೈ 2026ರಲ್ಲಿ ಎಇಎಲ್ (AEL) ಪೂರ್ಣಗೊಳಿಸಿದ ₹15,000 ಕೋಟಿ ಮೌಲ್ಯದ ಅರ್ಹ ಸಾಂಸ್ಥಿಕ ನಿಯೋಜನೆಯ ಬೆನ್ನಲ್ಲೇ ಬಂದಿದೆ. ಇದು ಬ್ಯಾಂಕಿಂಗ್‌ಯೇತರ ಸಂಸ್ಥೆಯೊಂದರಿಂದ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಕ್ಯೂಐಪಿ ಆಗಿದೆ. ಒಟ್ಟಾರೆಯಾಗಿ ಈ ಎರಡೂ ವಹಿವಾಟುಗಳು ಅದಾನಿ ಸಮೂಹಕ್ಕೆ ದೀರ್ಘಾವಧಿಯ ದೇಶೀಯ ಮತ್ತು ಜಾಗತಿಕ ಸಾಂಸ್ಥಿಕ ಬಂಡವಾಳ ಲಭ್ಯವಾಗುತ್ತಿರುವುದನ್ನು ಎತ್ತಿ ತೋರಿಸುತ್ತವೆ.' ಎಂದು ತಿಳಿಸಿದೆ.

'ಈ ಸಹಭಾಗಿತ್ವವು ಅದಾನಿ ಏರ್‌ಪೋರ್ಟ್ಸ್ ಅನ್ನು ಮತ್ತಷ್ಟು ವಿಸ್ತರಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಈ ಪ್ರಯಾಣದಲ್ಲಿ ನಮ್ಮೊಂದಿಗೆ ಇಂತಹ ಪ್ರಸಿದ್ಧ ಹಾಗೂ ದೀರ್ಘಾವಧಿಯ ಹೂಡಿಕೆದಾರರನ್ನು ಹೊಂದಿರುವುದು ನಮ್ಮ ಸೌಭಾಗ್ಯ,' ಎಂದು ಎಎಚ್‌ಎಎಲ್‌ನ ನಿರ್ದೇಶಕರಾದ ಜೀತ್ ಅದಾನಿ ಹೇಳಿದರು. ಭಾರತದ ವಿಮಾನಯಾನ ಕ್ಷೇತ್ರವು ದೇಶದ ಜಿಡಿಪಿ ಬೆಳವಣಿಗೆಯ ಅತ್ಯಂತ ಶಕ್ತಿಯುತ ಶಕ್ತಿವರ್ಧಕಗಳಲ್ಲಿ ಒಂದಾಗಿ ಮುಂದುವರಿದಿದ್ದು, ವಾಯು ಸಂಪರ್ಕದ ಪ್ರತಿಯೊಂದು ವಿಸ್ತರಣೆಯು ವ್ಯಾಪಾರ, ಪ್ರವಾಸೋದ್ಯಮ, ಉದ್ಯೋಗ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.

ಭಾರತದ ಬೆಳವಣಿಗೆ ಮತ್ತು ನಗರ ಭಾಗದ ಅಭಿವೃದ್ಧಿಯ ವೇಗವು ಪ್ರಮುಖ ಚಾಲನಾ ಶಕ್ತಿಗಳಾಗಿವೆ ಎಂದು ಉಲ್ಲೇಖಿಸಿದ ಎಎಚ್‌ಎಎಲ್ ಸಿಇಒ ಅರುಣ್ ಬನ್ಸಾಲ್ ಅವರು, 'ಕಂಪನಿಯು ವಿಶ್ವದ ಅತಿ ದೊಡ್ಡ ವಿಮಾನ ನಿಲ್ದಾಣಗಳ ವೇದಿಕೆಯಾಗಿ ಬೆಳೆಯಲು ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದನ್ನು ಮುಂದುವರಿಸಲಿದೆ,' ಎಂದು ಹೇಳಿದರು.

ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಭಾರತದಾದ್ಯಂತ ಎಂಟು ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿದ್ದು, ದೇಶದ ಒಟ್ಟು ಪ್ರಯಾಣಿಕರ ಸಂಚಾರದಲ್ಲಿ ಶೇಕಡಾ 23ಕ್ಕಿಂತ ಹೆಚ್ಚಿನ ಪಾಲು ಹೊಂದಿದೆ. ಇದು ವಿಮಾನಯಾನ ಕಾರ್ಯಾಚರಣೆಗಳು, ವಿಮಾನಯಾನೇತರ ಸೇವೆಗಳು ಮತ್ತು ನಗರ ಭಾಗದ ಅಭಿವೃದ್ಧಿಯನ್ನು ಒಳಗೊಂಡಿದೆ.

ಈ ವಹಿವಾಟಿಗೆ ಸಿರಿಲ್ ಅಮರ್‌ಚಂದ್ ಮಂಗಲ್‌ದಾಸ್, ಎಝಡ್‌ಬಿ ಮತ್ತು ಪಾರ್ಟ್‌ನರ್ಸ್, ಜೆಎಸ್‌ಎ ಅಡ್ವೊಕೇಟ್ಸ್ ಮತ್ತು ಸಾಲಿಸಿಟರ್ಸ್, ಟಿಟಿ&ಎ ಅಡ್ವೊಕೇಟ್ಸ್ ಮತ್ತು ಸಾಲಿಸಿಟರ್ಸ್, ಜೆಫರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಮತ್ತು ಅರ್ನ್ಸ್ಟ್ & ಯಂಗ್ ಎಲ್‌ಎಲ್‌ಪಿ ಸೇರಿದಂತೆ ಹಲವು ಸಲಹೆಗಾರರು ಬೆಂಬಲ ನೀಡಿದ್ದಾರೆ. ಇದು ನಿಯಂತ್ರಕ ಸಂಸ್ಥೆಗಳ ಅನುಮೋದನೆಗಳು ಸೇರಿದಂತೆ ಸಾಮಾನ್ಯ ಶರತ್ತುಗಳಿಗೆ ಒಳಪಟ್ಟಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+