• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಾರ ಉದ್ಯಮ ಸಮಾವೇಶ ಭರ್ಜರಿ ಯಶಸ್ವಿ

By * ಸುರೇಶ, ವಸಂತ್, ವಾಣಿ, ವೆಂಕಟ್, ಗಿರೀಶ್
|

ಕನ್ನಡ ಸಂಘ (ಸಿಂಗಪುರ) ಹಾಗೂ ಯುನೈಟೆಡ್ ಲ್ಯಾಂಡ್ ಬ್ಯಾಂಕ್‌ನ ಸಹಯೋಗದಲ್ಲಿ, 27ನೇ ನವೆಂಬರ್ 2010ರಂದು ಇದೇ ಮೊದಲ ಬಾರಿಗೆ ಏರ್ಪಡಿಸಲಾದ ಉದ್ಯಮ ಗೋಷ್ಠಿ ಮತ್ತು ಸಮಾವೇಶ ("business forum") - business forum 2010 ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಂಗಪುರದ ಹಾಗೂ ಕರ್ನಾಟಕದ ಪ್ರಖ್ಯಾತ ಉದ್ದಿಮೆದಾರರ ಅನುಭವಗಳನ್ನು ಕೇಳಲು 200ಕ್ಕೂ ಹೆಚ್ಚು ಜನ ಸೇರಿದ್ದರು. ನೆರೆದ ಕನ್ನಡೇತರ ಸಭಿಕರ ಸಲುವಾಗಿ ಕಾರ್ಯಕ್ರಮವನ್ನು ಆಂಗ್ಲಭಾಷೆಯಲ್ಲಿ ರೂಪಿಸಲಾಗಿತ್ತು.

ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷರಾದ ಡಾ. ವಿಜಯ ಕುಮಾರ್ ಅವರು ಸ್ವಾಗತ ಕೋರಿದರು. ಸಂಘದ ಸದಸ್ಯರಿಗೆ ವಾಣಿಜ್ಯ ಅವಕಾಶಗಳನ್ನು ಕಲ್ಪಿಸುವ ಹಾಗೂ ಯಶಸ್ವೀ ಸಿಂಗನ್ನಡಿಗ ಉದ್ಯಮಿಗಳ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದೇ ಈ ಕಾಯಕ್ರಮದ ಮೂಲೋದ್ದೇಶವೆಂದ ಅವರು ಸಂಘವು ಇನ್ನು ಮುಂದೆಯೂ ಇದೇ ರೀತಿಯ ಸಮಾವೇಶಗಳನ್ನು ನಡೆಸುವ ಯತ್ನವನ್ನು ಮುಂದುವರೆಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಬಂದ SICCI(ಸಿಂಗಪುರ)ದ ಅಧ್ಯಕ್ಷ ಹಾಗೂ CPA(ಸಿಂಗಪುರ)ದ ಸದಸ್ಯ ಆರ್. ನಾರಾಯನ ಮೋಹನ್ ಅವರು ಬೆಂಗಳೂರು ಹಾಗೂ ಕರ್ನಾಟಕದಲ್ಲಿರುವ ವಾಣಿಜ್ಯದ ಅವಕಾಶಗಳನ್ನು ಹಾಗೂ SICCIಯ ಮೂಲೋದ್ದೇಶವನ್ನು ವಿವರಿಸಿದರು.

ಎಂ. ಟಿ. ಆರ್ ಕಥೆ ಹೇಳಿದ ಮಯ್ಯ: ಕರ್ನಾಟಕದ ಆಹಾರ ಉದ್ಯಮದ ಮಂಚೂಣಿಯಲ್ಲಿರುವ, ಎಂ. ಟಿ. ಆರ್. ಉಪಾಹಾರ ಮಂದಿರ ಹಾಗೂ ಮಯ್ಯ ಗ್ರೂಪ್‌ನ ಸಂಸ್ಥಾಪಕರಾದ ಸದಾನಂದ ಮಯ್ಯ ಅವರು ಲಾಲ್‌ಬಾಗ್‌ನಿಂದ ಪ್ರಪಂಚದಾದ್ಯಂತ ಪ್ರಸಿದ್ಧಿ ಹರಡಿದ ತಮ್ಮ ಸಂಸ್ಥೆಯ ಯಶಸ್ಸಿನ ಹಾದಿಯನ್ನು ಸೊಗಸಾಗಿ ವಿವರಿಸಿದರು. ತಮ್ಮ ಕುಟುಂಬದ ವೃತ್ತಿಯನ್ನು ಮುಂದುವರೆಸಲು ಉತ್ತಮ ಅಂಕಗಳನ್ನು ಪಡೆದೂ ಕೂಡ ವಿದ್ಯಾಭ್ಯಾಸವನ್ನು ಬಿಡಬೇಕಾಗಿ ಬಂತು. ಒಣ ಆಹಾರದ ಪೊಟ್ಟಣಗಳನ್ನು ಮಾಡಿ ಮಾರಲು ಪ್ರಾರಂಭಿಸಿದ ಇವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಸಾಲದಿಂದ ಕಾರ್ಖಾನೆ ಆರಂಭಿಸಿದ ಇವರು ಉಪ್ಪಿನ ಕಾಯಿ, ವೆರ್ಮಿಸೆಲ್ಲಿ, ಸಾಫ್ಟ್ ಐಸ್ ಕೀಂ ಹೀಗೆ ಒಂದಾದ ಮೇಲೊಂದು ಹೊಸ ಆವಿಷ್ಕಾರದ ಪದಾರ್ಥಗಳನ್ನು, ಹೊಸ ಕಾರ್ಖಾನೆಗಳಲ್ಲಿ ತಯಾರಿಸಲಾರಂಭಿಸಿದರು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಯೋಧರಿಗೆ ಆರೋಗ್ಯಕರ, ಪೌಷ್ಠಿಕ, ಕಡಿಮೆ ಭಾರದ ಎಂ.ಟಿ. ಆರ್. ನ ಆಹಾರ ಪ್ಯಾಕೆಟ್‌ಗಳನ್ನು 15 ದಿನಗಳಲ್ಲಿ ವಿನ್ಯಾಸ ಮಾಡಿ ಸರಬರಾಜು ಮಾಡಿದ್ದಕ್ಕೆ ಇವರಿಗೆ ವಿಶೇಷ ಪ್ರಶಸ್ತಿ ದೊರೆತಿದೆ. ಐ. ಟಿ., ಬಿ.ಟಿ.ಗಳೇ ಪ್ರಧಾನವಾಗಿರುವ ಕರ್ನಾಟಕದಲ್ಲಿ ಆಹಾರ ಉದ್ಯಮದ ಮೂಲಕ ಕೆಲಸಗಳನ್ನು ಸೃಷ್ಟಿಸಿ, ವರಮಾನ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಹೊಸ ಆವಿಷ್ಕಾರಗಳನ್ನೂ ಇವರು ಕೈಗೆತ್ತಿಕೊಂಡರು.

ಮುಂದೆ ತಮ್ಮದೇ ಕೂಸಾದ ಎಂ.ಟಿ.ಆರ್. ಕಂಪನಿಯನ್ನು ಮಾರಿ, ತಮ್ಮ ಉದ್ಯಮ ಜೀವನದ ಮೂರನೇ ಇನ್ನಿಂಗ್ಸ್‌ನಲ್ಲಿ Maiya's restaurantನ್ನು ಪ್ರಾರಂಭಿಸಿದರು. ಪಾಕಶಾಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ತಂದ ಇವರು ಧರ್ಮಸ್ಥಳ, ಇನ್‌ಫೋಸಿಸ್, ನಾರಾಯಣ ಹೃದಯಾಲಯ, ಐ.ಐ.ಎಸ್.ಸಿ. ಬೆಂಗಳೂರು ಮುಂತಾದ ಕಡೆ ಆಧುನಿಕ ಪಾಕಶಾಲೆಯ ಸಂರಚನೆ ಮಾಡಿದ್ದಾರೆ. ಹಲವಾರು ಸಮಾಜೆಸೇವೆಯ ಕೆಲಸಗಳಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಹಾರ ಕ್ಷೇತ್ರದಲ್ಲಿ ನ್ಯಾನೋ ಟೆಕ್ನಾಲಜಿಯನ್ನು ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಬಳಸುವುದು ಅವರ ಈಗಿನ ಆಸಕ್ತಿಯಾಗಿದ್ದು, ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ಉದ್ಯಮಿ ಕಾರ್ಲ್ ತತ್ವ : ಸಿಂಗಪುರದಲ್ಲಿ ಯಶಸ್ವೀ ಜೀವ ತಂತ್ರಜ್ಞಾನದಲ್ಲಿ ಉದ್ಯಮಿಯಾಗಿರುವ ಭಾರತೀಯ ಮೂಲದ ಶ್ರೀ ಕಾರ್ಲ್ ಬ್ಯಾಪ್ಟಿಸ್ಟಾ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. "ಒರಿಜಿನ್" ಗುಂಪಿನ ಮಾಲೀಕರಾಗಿರುವ ಕಾರ್ಲ್, ಜೀವ ತಂತ್ರಜ್ಞಾನದಲ್ಲಿ ತಮಗೆ ಬಂದಿರುವ ಆಸಕ್ತಿ ತಮ್ಮ ತಂದೆಯ ಬಳುವಳಿ ಎಂದು ಹೇಳಿ ಸಿಂಗಪುರದಲ್ಲಿ ಕೀಟ ನಾಶಕಗಳ ಬಗ್ಗೆ ತಮ್ಮ ಸಂಸ್ಥೆ ನಡೆಸಿದ ಹಾಗು ನಡೆಸುತ್ತಿರುವ ಸಂಶೋಧನೆಗಳನ್ನು ಕುರಿತು ವಿವರಗಳನ್ನು ನೀಡಿದರು.

ಸಿಂಗಪುರದಲ್ಲಿ ಹೇಗೆ ತಮ್ಮ ಸಂಸ್ಥೆ ಹಸಿರು ತಂತ್ರಜ್ಞಾನದಲ್ಲಿ ಅಗ್ರಗಾಮಿಯಾಗಿ ಪ್ರಸಿದ್ಧಿ ಪಡೆಯಿತು ಎಂದು ವಿವರಿಸಿದರಲ್ಲದೇ, ಹಸಿರು ತಂತ್ರಜ್ಞಾನದ ಅಭಿವೃದ್ದಿ ಸಮಾಜ ಮತ್ತು ಪರಿಸರಕ್ಕೆ ಹೇಗೆ ಉಪಯೋಗವಾಗುತ್ತದೆ ಮತ್ತು ಅದರ ಪರಿಣಾಮ ಇತರ ಮೂಲ ಸಂಶೋಧನೆಗಳಿಗೆ ಕಾರಣವಾಗುತ್ತದೆ ಎಂದು ವಿವರಿಸಿದರು. ತಮ್ಮ ಕಂಪನಿ ಯಾವಾಗಲೂ ಹೇಗೆ "ನೀಲಿ ಮಹಾಸಾಗರ" Blue Ocean ತತ್ವವನ್ನು ಅಳವಡಿಸಿಕೊಂಡಿದೆ ಎಂಬುದನ್ನು ಹೆಮ್ಮೆಯಿಂದ ಹೇಳಿದರು.

ಈ ರೀತಿಯ ಸಂಶೋಧನೆಗೆ ನೀಡಿದ ಮಹತ್ವದಿಂದ ಅವರು ಕೀಟ ನಿಯಂತ್ರಣದಿಂದ ಮುನ್ನಡೆದು ಹೇಗೆ ಕೀಟಗಳ ಪ್ರಬಲ ಗುಣಗಳಿಂದ ಒಳ್ಳೆಯ ಉಪಯೋಗ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ವಿವರಿಸಿದರು. ನೊಣಗಳಿಂದ ಸಕ್ಕರೆ ರೋಗಿಗಳ ಗಾಯಗಳನ್ನು ಶಸ್ತ್ರಕ್ರಿಯೆ ಇಲ್ಲದೇ ಹೇಗೆ ಬೇಗ ಗುಣಪಡಿಸಬಹುದು ಎಂಬುದನ್ನು ವಿವರಿಸಿದರು. ಜಿರಳೆಗಳಿಂದ ಹೊಸ ಜೀವ ನಿಓಧಿ ಔಷಧಿಗಳನ್ನು ಉತ್ಪಾದಿಸುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ನಂತರ ನಡೆದ ಲಘು ಸಂದರ್ಶನದಲ್ಲಿ ಅವರು ತಮ್ಮ ಸಂಸ್ಥೆ ಹೇಗೆ ಹಸಿರು ತಂತ್ರಜ್ಞಾನದ ಮತ್ತು ಕೀಟ ನಿಯಂತ್ರಣಗಳಂಥ ಪರಸ್ಪರ ವಿರೋಧಿ ಕ್ಷೇತ್ರಗಳನ್ನು ಒಂದಾಗಿಸುವ ಕೆಲಸವನ್ನು ಸಂಶೋಧನೆಯ ಮೂಲಕ ಸಾಧಿಸಿತು ಎಂದು ತಿಳಿ ಹೇಳಿದರು. ಒಂದು ಸಂಶೋಧನಾ ಪ್ರಧಾನ ಸಂಸ್ಥೆಯನ್ನು ನಡೆಸುವ ಅವರ ಹಿಂದಿನ ಪ್ರೇರಕ ಶಕ್ತಿ ಯಾವದು ಎಂದು ಕೇಳಿದಾಗ ತಮ್ಮ ಕೆಲಸದಲ್ಲಿ ತಮಗಿರುವ ಅನುಶಕ್ತಿ ಅವರನ್ನು ಸದಾಕಾಲ ಕ್ರಿಯಾಶೀಲತೆಗೆ ಪ್ರೇರೆಪಿಸುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯ ಅವಕಾಶಗಳ ಬಗ್ಗೆ ತಿಳಿಸಿದ CEO, Mpower Capital," ಬೆಂಗಳೂರಿನ ಶ್ರೀ ಕೆ.ಕೆ. ಪೂರ್ಣೇಶ್ ಅವರು "ಕರ್ನಾಟಕವು ಜ್ಞಾನದ ರಾಜಧಾನಿ, ನೈಸರ್ಗಿಕ ಸಂಪನ್ಮೂಲಗಳ ಆಗರ" ಎಂದರು; ಶಿಕ್ಷಣ, ಆರ್ಥಿಕ, ಶಕ್ತಿ, ಮೂಲಭೂತ ವ್ಯವಸ್ಥೆ (infrastructure), ಆರೋಗ್ಯ, ಸತ್ಕಾರ, ಉತ್ಪಾದನೆ, ಕೃಷಿ ಮುಂತಾದ ಕ್ಷೇತ್ರಗಲ್ಲಿರುವ ಅಪರಿಮಿತ ಅವಕಾಶಗಳನ್ನು ವಿವರಿಸಿದರು. ಇದಾದ ನಂತರ ಈ ಉದ್ಯಮ ಗೋಷ್ಠಿಯ ಯಶಸ್ಸಿನ ಕುರುಹೆಂಬಂತೆ ಶ್ರೀ ಗುರುಪ್ರಕಾಶ್ ಹಾಗೂ ಶ್ರೀ ರವಿ ವೈದ್ಯ ಅವರು "Sanjose Acquadocs PTE. LTD." ಮತ್ತು "Ecotex" ಕಂಪನಿಯ ನಡುವೆ ಸಹಕಾರದ ಒಪ್ಪಂದದ ಕಾಗದ (MemoraMdum Of Understanding)ಗೆ ಸಹಿ ಹಾಕಿದರು. ವೇದಿಕೆಯ ಮೇಲೆ ಉಪಸ್ಥಿತರಿದ್ದ ಉದ್ಯಮಿಗಳಿಗೆ, ಗಣ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ವಿಜ್ಞಾನಿ ವೆಂಕಟೇಶ್ ಭೈರಪ್ಪ ಹಿತನುಡಿ : ಖ್ಯಾತ ಜೀವ ತಂತ್ರಜ್ಞ ಮತ್ತು ಸಿಂಗಪುರದ ಹೆಮ್ಮೆಯ ಕನ್ನಡಿಗ ಡಾ. ವೆಂಕಟೇಶ್ ಭೈರಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿ ತಾವು ಕೇವಲ ವಿಜ್ಞಾನಿ ಮಾತ್ರ. ಆದ್ದರಿಂದ ತಾವು ಉದ್ಯಮಶೀಲತೆಯ ಬಗ್ಗೆ ಮಾತನಾಡುವುದಿಲ್ಲ. ಕೇವಲ ತಂತ್ರಜ್ಞಾನದ ಬಗ್ಗೆ ವಿವರಿಸುತ್ತೇನೆ, ಅದರಲ್ಲಿ ಉದ್ಯಮಶೀಲತೆಗೆ ಎಲ್ಲಿ ಅವಕಾಶವಿದೆಯೋ ಇಲ್ಲಿ ನೆರೆದಿರುವ ಉದ್ಯಮಿಗಳು ಕಂಡುಕೊಳ್ಳಬೇಕು ಎಂದು ನಗುತ್ತ ಹೇಳಿದರು. ಹೀಗೆ ಮುಂದುವರೆಸಿದ ಭೈರಪ್ಪ ಅವರು ತಮ್ಮ ಮಾನವ ಜಿನೋಮ್ ಪ್ರಾಜೆಕ್ಟ್ ಬಗ್ಗೆ ಕೂಲಂಕುಶವಾಗಿ ವಿವರಿಸಿದರು. ಜೀನ್‌ಗಳು ಮಾನವನ ನೀಲಿ ನಕಾಶೆ ಹೊಂದಿರುತ್ತವೆ ಹಾಗೂ ನಮ್ಮ ಹಣೆಬರಹವನ್ನು ನಿರ್ಧರಿಸುತ್ತವೆ ಎಂದು ವಿವರಿಸಿದರು. ಜೀನ್ ಮಾನವನ ಲಿಂಗ, ಬೆಳವಣಿಗೆ, ಅರೋಗ್ಯ ಎಲ್ಲವನ್ನು ನಿರ್ಧರಿಸುವುದರಿಂದ, ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವದರಿಂದ ರೋಗಗಳನ್ನು ತಡೆಗಟ್ಟಬಹುದು, ಅರೋಗ್ಯಕರ ಶಿಶುಗಳನ್ನು ಪಡೆಯಲು ಪ್ರಯತ್ನಿಸಬಹುದು ಎಂದು ತಿಳಿಸಿದರು.

ಜಿನೋಮ್ ಪ್ರಾಜೆಕ್ಟ್‌ನ ಮೂಲ ಉದ್ದೇಶ ಜೀನ್‌ನ ರಚನೆ, ಜೋಡಣೆ ಮತ್ತು ಅದರ ಕಾರ್ಯಗಳನ್ನು ತಿಳಿದುಕೊಳ್ಳುವದು ಎಂದು ಹೇಳಿದ ಅವರು ಅದರ ತತ್ಪರಿಣಾಮವಾಗಿ ಅನೇಕ ಹೊಸ ಉದ್ಯಮಗಳು ಸೃಷ್ಟಿಯಾಗಲಿವೆ ಎಂದು ಅಭಿಪ್ರಾಯ ಪಟ್ಟರು. ಸಭೆಯನ್ನುದ್ದೇಶಿಸಿ ಮಾತನಾಡುತ್ತಾ "ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರ ಜ್ಞಾನಗಳನ್ನು ಕುರಿತು ಸಾಕಷ್ಟು ಸಾಮಗ್ರಿಗಳಿಲ್ಲ ಎಂಬ ಅಳಲು ಇದೆ. ಕನ್ನಡ ಸಾಹಿತ್ಯ ಪರಿಷತ್ತು ಕೂಡ ವಿಜ್ಞಾನ ಮತ್ತು ತಂತ್ರ ಜ್ಞಾನಗಳನ್ನು ಹೊರಗಡೆ ಇಟ್ಟಂತೆ ಕಾಣುತ್ತದೆ. ಸಾಹಿತ್ಯ ಗೋಷ್ಠಿ, ಕವಿಗೋಷ್ಠಿಗಳಿರುವಂತೆ ಸಾಹಿತ್ಯ ಸಮಾವೇಶಗಳಲ್ಲಿ ವಿಜ್ಞಾನ ಗೋಷ್ಠಿ ಏಕಿರುವುದಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ" ಎಂದು ಹೇಳಿದರು.

ಕಟ್ಟಡ ನಿರ್ಮಾಣ ಕಲೆ : ಸಿಂಗಪುರದ ರಾಷ್ಟೀಯ ವಿಶ್ವ ವಿದ್ಯಾಲಯದಲ್ಲಿ ಸಿವಿಲ್ ಮತ್ತು ಸ್ಟ್ರಕ್ಚರಲ್ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಈಗ ತಮ್ಮದೇ ಆದ ಕನ್ಸಲ್ಟಿಂಗ್ ಸಂಸ್ಥೆಯನ್ನು ನಡೆಸುವ ಹೆಮ್ಮೆಯ ಸಿಂಗನ್ನಡಿಗ ಮತ್ತು ಕನ್ನಡ ಸಂಘದ ಸಂಸ್ಥಾಪಕ ಸದಸ್ಯ ಶ್ರೀಯುತ ಸಿ ಕೆ ಮೂರ್ತಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅವರು ಸಿಂಗಪುರದಲ್ಲಿ ಅನೇಕ ಕಟ್ಟಡಗಳ ನಿರ್ಮಾಣ, ಮರುನಿರ್ಮಾಣ ಮತ್ತು ಜೀರ್ಣೋದ್ಧಾರ ಮಾಡಲು ಕಾರಣೀಭೂತರು. ಇವರು Cheng Hong Mansion, Amara Hotel ಮತ್ತು Cheng Hong Mansion, Amara Hotel ಮತ್ತು Abdul Gafur Mosqueಗಳಂಥ ಅನೇಕ ಹಳೆಯ ಕಟ್ಟಡಗಳ ಜೀರ್ಣೋದ್ಧಾರ ಮಾಡಿದ್ದಾರೆ. ಸಿಂಗಪುರದಲ್ಲಿ ಅವರನ್ನು Saviour of building ಎಂದು ಗುರುತಿಸುತ್ತಾರೆ. ಇಂದು ಇವರ ಸಂಸ್ಥೆ ಸಿಂಗಪುರವಲ್ಲದೇ, ಮಲೇಶಿಯ, ದುಬೈ ಹಾಗೂ ಇನ್ನೂ ಅನೇಕ ದೇಶಗಳಲ್ಲಿ ಕೆಲಸ ಮಾಡುತ್ತಿದೆ. ಇದೀಗ ಭಾರತದಲ್ಲೂ ಸಂಸ್ಥೆಯನ್ನು ಆರಂಭಿಸಿದ್ದಾರೆ ಮತ್ತು ಅಲ್ಲಿ ತಮ್ಮ ಕೆಲಸವನ್ನು ಮಾಡಲು ಉತ್ಸುಕರಾಗಿದ್ದಾರೆ. ಸಿ. ಕೆ ಮೂರ್ತಿ ಅವರು ಒಳ್ಳೆಯ ಉದ್ಯಮಿಯಾಗಲು ಧನಾತ್ಮಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ ಎಂದು ಕರೆ ಕೊಟ್ಟರು.

ಏರೋಸ್ಪೇಸ್ ಕ್ಷೇತ್ರದಲ್ಲಿ ಅವಕಾಶ ಅಪಾರ: ರಕ್ಷಣೆ, ಅಣು ಶಕ್ತಿ, ಏರೋಸ್ಪೇಸ್ ಹಾಗೂ ಆಟೋಮೇಶನ್ ಕ್ಷೇತ್ರಗಳಲ್ಲಿ ಖಾಸಗೀ ಕಂಪನಿಗಳಿಗೆ ಇರುವ ಅವಕಾಶಗಳ ಬಗ್ಗೆ ಶ್ರೀ ಎನ್. ಜಿ. ವಿ. ಕೆ. ಭಟ್ ಅವರು ಬಗ್ಗೆ ಮಾತನಾಡಿದರು. ವಿದ್ಯುತ್ತಿನ ಕೊರತೆ ಭಾರತವನ್ನು ಕಾಡುತ್ತಿದ್ದು ಮುಂದಿನ ವರ್ಷಗಳಲ್ಲಿ ಅಣು ಶಕ್ತಿ ಸ್ಥಾವರಗಳಿಗೆ ಭಾರೀ ಬೇಡಿಕೆಯಿದೆಯೆಂದು ತಿಳಿಸಿದರು. ನಂತರ ಮಾತನಾಡಿದ ಶ್ರೀ Anarghya Innovations and Technology Pvt LTd, Bangalore, S & L Innovations and Technology Pvt LTd"ನ ಮಾಲೀಕರಾದ ಶ್ರೀ ಸಿದ್ಧರಾಮ ಶಾಬಾದಿ ಅವರು ಉದ್ಯಮಿಯಾಗುವುದ ಮಹತ್ವದ ಬಗ್ಗೆ ಮಾತನಾಡುತ್ತಾ, ಉದ್ಯಮಿಯಾಗಲು ಮೊದಲು ನಿರುದ್ಯೋಗಿಯಾಗಬೇಕೇಂದು ಹೇಳಿದಾಗ ಸಭೆಯಲ್ಲಿ ನಗೆಬುಗಿಲೆದ್ದಿತ್ತು. ನಂತರ "ಶೇಪ್ ಟೆಕ್ನಾಲಜಿ"ಯ ಶ್ರೀ ಪ್ರಭುದೇವ ಅವರೂ ಸಭಿಕರನ್ನುದ್ದೇಶಿಸಿ ಕೆಲವು ಮಾತುಗಳನ್ನಾಡಿ, ಈ ಸಮಾವೇಶದ ಉಪಯೋಗಗಳ ಬಗ್ಗೆ ಇನ್ನೂ ಹೆಚ್ಚು ಜನರಿಗೆ ತಿಳಿಸಿ ಎಂದು ಕೇಳಿಕೊಂಡರು.

ಕಾರ್ಯಕ್ರಮದ ನಂತರ ಸಭಿಕರೊಂದಿಗೆ ವಿವಿಧ ಉದ್ಯಮಗಳ ಬಗ್ಗೆ ಮತ್ತು ಅಲ್ಲಿರುವ ಅವಕಾಶಗಳ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮವನ್ನು ಯಜ್ಞನಾರಾಯಣ ಅವರ ನೇತೃತ್ವದಲ್ಲಿ ಎಲ್ಲಾ ಆಹ್ವಾನಿತರೂ ನಡೆಸಿಕೊಟ್ಟರು. ಶ್ರೀ ನಾರಾಯಣ ಮೋಹನ್ ಅವರು ಸಮಾರೋಪ ಭಾಷಣವನ್ನು ಮಾಡಿದರು. ಸಂಘದ ಕಾರ್ಯಕಾರೀ ಸದಸ್ಯರಾದ ಶ್ರೀ ಗುರುಪ್ರಕಾಶ್ ಅವರು ವಂದನಾರ್ಪಣೆ ಮಾಡಿದರು. ಸಿಂಗಪುರದಲ್ಲಿ ಕನ್ನಾಡಿಗರಿಂದ ಪ್ರಪ್ರಥಮವಾಗಿ ನಡೆದ ಉದ್ಯಮ ಗೋಷ್ಠಿ ಮತ್ತು ಸಮಾವೇಶ ಯಶಸ್ವಿಯಾಗಿದ್ದು ಎಲ್ಲರ ಮೆಚ್ಚುಗೆ ಪಡೆಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Singara Business Forum 2010 organized by Singapore Kannada Sangha held at polytechnic center, Singapore on the eve of 7th Singapore Kannada Cultural Convention. The Forum was attended by many industrialists from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more