• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯೂಜೆರ್ಸಿಯಲ್ಲಿ ಮೇರೆ ಮೀರಿದ ಕನ್ನಡ ಸಂಭ್ರಮ

By * ಸತೀಶ್ ಹೊಸನಗರ
|
AKKA, World Kannada Conference, NJ
4ನೇ ತಾರೀಕು ಶನಿವಾರ ಮುಂಜಾನೆ ರಾರಿಟನ್ ಸೆಂಟರ್‌ ಕಡೆಗೆ ಬರುತ್ತಿದ್ದವರೆಲ್ಲರಿಗೆ ಒಂದು ರೀತಿಯ ಲಗುಬಗೆ, ಗಡಿಬಿಡಿ ಗೋಚರಕ್ಕೆ ಬರುತ್ತಿತ್ತು. ಒಂದು ಕಡೆ ಮೆರವಣಿಗೆಯನ್ನು ನೋಡಬೇಕು ಎನ್ನುವ ಕುತೂಹಲವಾದರೆ, ಮತ್ತೊಂದೆಡೆಗೆ ಇರುವ ಆರು ಸ್ಟೇಜುಗಳಲ್ಲಿ ಯಾವ ಕಾರ್ಯಕ್ರಮವನ್ನು ನೋಡುವುದು, ಯಾವ ಕಾರ್ಯಕ್ರಮವನ್ನು ಬಿಡುವುದು ಎಂಬ ಗೊಂದಲ.

ಬೆಳಿಗ್ಗೆ ಸುಮಾರು ಎಂಟು ಘಂಟೆಯ ಹೊತ್ತಿಗೆ ಆರಂಭವಾದ ಮೆರವಣಿಗೆಯಲ್ಲಿ ಸುಮಾರು ಇಪ್ಪತ್ತೈದು ತಂಡಗಳು ಭಾಗವಹಿಸಿದ್ದು ಸ್ಥಳೀಯ ಹಾಗೂ ದೂರದಿಂದ ಬಂದ ಕನ್ನಡಿಗರ ಸ್ಪೂರ್ತಿ ಹಾಗೂ ಬೆಂಬಲದ ಪ್ರತಿಬಿಂಬದಂತೆ ಎಲ್ಲರ ಮುಖದಲ್ಲೂ ಹರ್ಷ ತುಂಬಿ ತುಳುಕುತ್ತಿತ್ತು. ಇನ್ನೂ ಎರಡು ವಾರ ಬೇಸಿಗೆ ಇದ್ದರೂ ಬೆಳಿಗ್ಗಿನ ತಿಳಿಗಾಳಿಯ ವಾತಾವರಣದಲ್ಲಿ ಕಣ್ಣು ಕುಕ್ಕುವಂತೆ ಸೂರ್ಯರಶ್ಮಿಗಳು ಹಾಗೂ ನಿನ್ನೆ ಅಲ್ಪ ಸ್ವಲ್ಪ ಮಳೆ ಬಂದು ಎಲ್ಲವೂ ತಿಳಿಯಾದಂತೆ ಕಂಡು ಬರುತ್ತಿದ್ದುದು ಆಹ್ಲಾದಕರವಾಗಿತ್ತು. ಮುಖ್ಯ ಅತಿಥಿಗಳಾದ ಮನು ಬಳಿಗಾರ್, ಜಯರಾಮ್ ರಾಜೇ ಅರಸ್, ಮುಖ್ಯಮಂತ್ರಿ ಚಂದ್ರು, ಕೃಷ್ಣೇ ಗೌಡ ಮೊದಲಾದವರು ನೋಡನೋಡುತ್ತಿದ್ದಂತೆ ಒಂದಲ್ಲ ಎರಡಲ್ಲ ಸುಮಾರು ಮುವತ್ತೆರಡು ತಂಡಗಳು ಭಾಗವಹಿಸಿದ್ದ ದಸರಾ ಮೆರವಣಿಗೆಯ ದ್ಯೋತಕದಂತೆ ಅಕ್ಕ ಮೆರವಣಿಗೆ ನಡೆದುಬಂತು.

ಸಮ್ಮೇಳನದ ಮುಖ್ಯವೇದಿಕೆ, ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸಾಕಷ್ಟು ಜನರು ನೆರಿದಿದ್ದಂತೆ, ಅಮೇರಿಕದಿಂದ ಹಾಗೂ ಬೆಂಗಳೂರಿನಿಂದ ಏಕಕಾಲಕ್ಕೆ ಏರ್ಪಟ್ಟ "ಯಾವ ಮೋಹನ ಮುರಳಿ ಕರೆಯಿತೋ" ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು. ಕರ್ನಾಟಕದಿಂದ ಮುಖ್ಯಮಂತ್ರಿ ಯಡಿಯೂರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಜಿ.ಎಸ್. ಶಿವರುದ್ರಪ್ಪ ಹಾಗೂ ಶಿವಮೊಗ್ಗ ಸುಬ್ಬಣ್ಣನವರು ನೆರೆದಿದ್ದ ಕಾರ್ಯಕ್ರಮ ಸ್ಥಳೀಯ ಕಲಾವಿದೆಯೊಬ್ಬರ ನಿರೂಪಣೆಯಲ್ಲಿ ಚೆನ್ನಾಗಿ ಮೂಡಿಬಂತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಲೈವ್ ಸಂದೇಶದ ಜೊತೆಗೆ ಶಿವಮೊಗ್ಗ ಸುಬ್ಬಣ್ಣ, ಜಿ.ಎಸ್. ಶಿವರುದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್ ಮೊದಲಾದ ಗಣ್ಯರು ಕೆಲವು ಮಾತುಗಳನ್ನಾಡಿದರು.

ನಂತರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಈ ಕೆಲವು ವರ್ಷಗಳಲ್ಲಿ ನಮ್ಮನಗಲಿದ ಕನ್ನಡಿಗರಲ್ಲಿ ಮುಖ್ಯರಾದವರನ್ನು ಸ್ಮರಿಸಲಾಯಿತು. ಇನ್ನೊಂದು ವಿಶೇಷ ಸಂದರ್ಭದಲ್ಲಿ ದಿವಂಗತ ರಾಜು ಅನಂತಸ್ವಾಮಿ ಮತ್ತು ಸಿ. ಅಶ್ವಥ್ ಅವರನ್ನು ನೆನೆದು ಸಭೆಯಲ್ಲಿ ಉಪಸ್ಥಿತರಿದ್ದ ಅವರ ಶ್ರೀಮತಿಯವರನ್ನು ಕರೆದು ಮುಖ್ಯವೇದಿಕೆಯಲ್ಲಿ ಗೌರವಿಸಲಾಯಿತು. ನಾವು ರಾಜು ಅನಂತಸ್ವಾಮಿ ಮತ್ತು ಸಿ. ಅಶ್ವಥ್ ಅವರನ್ನು ಕಳೆದುಕೊಂಡಿದ್ದರೂ ಅವರು ನಿರ್ಮಿಸಿದ ಸುಗಮ ಸಂಗೀತದ ಗುಂಗು ಕನ್ನಡಿಗರಿಗೆ ಎಂದೂ ಮಾಸದು ಎಂದು ಸಭೆಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಸಂಚಾಲಕ ಪ್ರಸನ್ನಕುಮಾರ್ ಅವರ ಈ ಪ್ರಯತ್ನ ಸಮಯಸ್ಪರ್ಶಿಯಾಗಿತ್ತು.

***

ಮಧ್ಯಾಹ್ನ ರಾಯಚೂರ್ ಶೇಷಗಿರಿದಾಸ್ ಅವರಿಂದ ರಾಣಿ ಚೆನ್ನಮ್ಮ ಕಲಾಮಂದಿರದಲ್ಲಿ ಸುಶ್ರಾವ್ಯವಾದ ಭಕ್ತಿಗೀತೆಗಳು ಹೊರಬಂದವು. "ಪವಮಾನ"ದಿಂದ ಆರಂಭವಾದ ಶುಶ್ರಾವ್ಯವಾದ ಗಾಯನ ಸುಮಾರು ಮುವತ್ತು ನಿಮಿಷಗಳ ಕಾಲ ಪ್ರೇಕ್ಷಕರನ್ನು ಭಕ್ತಿಗಂಗೆಯಲ್ಲಿ ಓಲಾಡಿಸಿತು, ಸ್ವಲ್ಪ ಸಮಯದ ನಂತರ ವಿದ್ಯಾಭೂಷಣರ ಕರ್ನಾಟಕ ಭಕ್ತಿ ಸಂಗೀತ ಸಾಕಷ್ಟು ಜನರನ್ನು ಮಂತ್ರ ಮುಗ್ದರನ್ನಾಗಿಸಿತ್ತು.

***

ಹೊಯ್ಸಳ ಕನ್ನಡ ಸಂಘದಿಂದ ನೃತ್ಯ ರೂಪಕ : ಕನ್ನಡದ ಇತ್ತೀಚಿನ ಚಲನ ಚಿತ್ರಗಳನ್ನು ಆಯ್ದುಕೊಂಡು ಕಾರ್ಯಕ್ರಮ ಆಯೋಜಕರು ತಮ್ಮ ಕಾರ್ಯಕ್ರಮವನ್ನು ಕೇವಲ ಹದಿನೈದು ನಿಮಿಷಗಳಿಗೆ ಮೊಟಕುಗೊಳಿಸಿದರೂ ಬೇಸರಗೊಳ್ಳದೇ ಚಿಕ್ಕದಾಗಿ ಹಾಗಿ ಚೊಕ್ಕದಾಗಿ ನೃತ್ಯರೂಪಕವನ್ನು ನೇರವೇರಿಸಿ ಪ್ರೇಕ್ಷಕರಿಂದ ಪ್ರಶಂಸೆಗೊಳಪಟ್ಟ ಕೀರ್ತಿ ಹೊಯ್ಸಳ ಕನ್ನಡ ಸಂಘ - ಡೆಲವೇರ್‌ನ ಕಲಾವಿದರಿಗೆ ಸೇರುತ್ತದೆ.

ರಾಣಿ ಚೆನ್ನಮ್ಮ ಕಲಾಮಂದಿರದಲ್ಲಿ ಮಧ್ಯಾಹ್ನ ಇದ್ದಕ್ಕಿದ್ದಂತೆ ಪ್ರಖ್ಯಾತ ಕನ್ನಡ ಚಲನಚಿತ್ರಗಳ ಟ್ಯೂನ್ ಕೇಳಿ ಬರಲು ಮೀಟ್ ಎಂಡ್ ಗ್ರೀಟ್ ಏರಿಯಾದಲ್ಲಿ ಇದ್ದವರೆಲ್ಲರೂ ಚೆನ್ನಮ್ಮ ಸ್ಟೇಜ್‌ನತ್ತ ದೌಡಾಯಿಸಿದಾಗ ಸ್ಟೇಜ್‌ ಮೇಲೆ ತಮ್ಮ ಕನ್ನಡ ಕೂಟದ ಮಕ್ಕಳು ಹಾಗೂ ದೊಡ್ಡವರಿಂದ ಒಂದು ಸುಂದರವಾದ ನೃತ್ಯ ರೂಪಕವನ್ನು ಚಂದ್ರಶೇಖರ ಆರಾಧ್ಯ ಹಾಗೂ ಅವರ ತಂಡದ ಕಲಾವಿದರಿಗೆ ಸಲ್ಲುತ್ತದೆ. ವಿಭಿನ್ನ ವರ್ಣರಂಜಿತ ಉಡುಗೆ ತೊಡುಗೆ ಹಾಗೂ ಹಲವು ನೃತ್ಯ ಮತ್ತು ಅಣಕುಗಳನ್ನೊಳಗೊಳಂಡ ಡ್ಯಾನ್ಸ್ ಕಾರ್ಯಕ್ರಮ ಚಿಕ್ಕದಾಗಿ ಹಾಗೂ ಮನಮೋಹಕವಾಗಿ ಮೂಡಿಬಂತು.

***

ರಮೇಶ್ ಕದ್ರಿ - ಸ್ಯಾಕ್ಸೋಫೋನ್ : ರಮೇಶ್ ಕದ್ರಿ ಅವರು ತಮ್ಮ ಸಹ ಕಲಾವಿದರೊಂದಿಗೆ ಸೊಗಸಾದ ಸಂಗೀತ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಅವರ ಸ್ಯಾಕ್ಸೋಫೋನಿನ ಅಲೆಗಳು ಗುಬ್ಬಿ ವೀರಣ್ಣ ರಂಗಮಂದಿರದ ತುಂಬೆಲ್ಲಾ ಅನುರಣಿಸಿ ಹಲವಾರು ನೂರಾರು ಶೋತೃಗಳನ್ನು ತಲ್ಲೀನರಾಗಿಸಿತ್ತು.

ಕೃಷ್ಣ ವೈಜಯಂತಿ - ಪ್ರಭಾತ್ ಕಲಾವಿದರು : ಬ್ರಾಡ್‌ವೇ ಶೈಲಿಯಲ್ಲಿ ಕೃಷ್ಣನ ಜನ್ಮದಿಂದ ಹಿಡಿದು ಕುರುಕ್ಷೇತ್ರ ಯುದ್ಧದವರೆಗಿನ ಸುಂದರವಾದ ನೃತ್ಯ ರೂಪಕದ ಮೂಲಕ ಸುಮಾರು ಎಂಭತ್ತು ನಿಮಿಷಗಳ ಕಾಲ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟು ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರರಾದ ಕೀರ್ತಿ ಪ್ರಭಾತ್ ಕಲಾವಿದರಿಗೆ ಸಲ್ಲಬೇಕು. ನಮಗೆಲ್ಲ ಗೊತ್ತಿರುವ ಹಾಗೆ ಅಕ್ಕ ಸಮ್ಮೇಳನದಲ್ಲಿ ಮೊಟ್ಟ ಮೊದಲನೇ ಭಾರಿಗೆ ಈ ರೀತಿಯ ಕಾರ್ಯಕ್ರಮವೊಂದನ್ನು ಪ್ರಭಾತ್ ಕಲಾವಿದರು ನೆರವೇರಿಸಿಕೊಟ್ಟಿದ್ದಾರೆ. ಬಾಲಕೃಷ್ಣನ ವೇಷದಲ್ಲಿ ಮೊಟ್ಟ ಮೊದಲು ಅಭಿನಯಿಸಿದ ಬಾಲ ಕಲಾವಿದೆಯಿಂದ ಹಿಡಿದು, ಕೃಷ್ಣ, ಅರ್ಜುನ, ಕಂಸ, ಯಶೋಧೆ, ಸಖಿಯರು ಮೊದಲಾದವರ ಪಾತ್ರಗಳಲ್ಲಿ ಅನೇಕ ನೃತ್ಯ-ಸಂಗೀತ ರೂಪಕಗಳ ಸಂಗಮವನ್ನು ಶ್ರೋತೃಗಳು ಚಪ್ಪಾಳೆಯ ಮೂಲಕ ಆಹ್ಲಾದಿಸಿದರು. ಹಿನ್ನೆಲೆ ಸಂಗೀತ, ವಸ್ತ್ರ ವಿನ್ಯಾಸ ಹಾಗೂ ಹಿನ್ನೆಲೆ ಸೀನರಿಗಳ ಚಿತ್ರಗಳು ಅದ್ಭುತವಾಗಿದ್ದವು.

ಕರುನಾಡ ಕೊಡುಗೆ : ಬೃಂದಾವನದ ಕಲಾವಿದರು ಆಹ್ವಾನಿತ ಕನ್ನಡ ಕೂಟಗಳ ಸಹ ಕಲಾವಿದರೊಂದಿಗೆ ಕೈ ಜೋಡಿಸಿ ಯಮುನಾ ಶ್ರೀನಿಧಿಯವರ ನಿರ್ದೇಶನದಲ್ಲಿ ಕನ್ನಡದ ರಂಜನೀಯ ಚಿತ್ರಗೀತೆಗಳು ಮತ್ತು ಚಿತ್ರಗಳ ಸಹಾಯದಿಂದ "ಕರುನಾಡ ಕೊಡುಗೆ" ಕಾರ್ಯಕ್ರಮವನ್ನು ಸುಂದರವಾಗಿ ನೆರವೇರಿಸಿ ಪ್ರೇಕ್ಷಕರ ಚಪ್ಪಾಳೆಗಳಿಗೆ ಪಾತ್ರರಾದರು. ಹಲವಾರು ಕನ್ನಡ ಕೂಟಗಳ ಕಲಾವಿದರನ್ನು ಒಳಗೊಂಡು ಆಯ್ದ ಚಿತ್ರ ಸಂಗೀತದ ಹಿನ್ನೆಲೆಯಲ್ಲಿ ನೃತ್ಯವನ್ನು ಸಂಯೋಜಿಸಿ ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನಗೆದ್ದ ಕೀರ್ತಿ ಯಮುನಾರವರಿಗೆ ಹಾಗೂ ಭಾಗವಹಿಸಿದ ಕಲಾವಿದರೆಲ್ಲರಿಗೆ ಸೇರುತ್ತದೆ.

ಪುಸ್ತಕ ಬಿಡುಗಡೆ: ಸ್ಮರಣ ಸಂಚಿಕೆ, ಮನು ಬಳಿಗಾರ್ - ಕೆಲವು ಕಥೆಗಳು; ದೊಡ್ಡ ರಂಗೇಗೌಡರ ಸಂಕಲನವೊಂದನ್ನು ಬಿಡುಗಡೆ ಮಾಡಲಾಯಿತು.

ಕನ್ನಡವೇ ಶ್ರೇಷ್ಠ : ಶ್ರೀನಿವಾಸ ಕಪ್ಪಣ್ಣ ಮತ್ತು ಸುನಿತಾ ಅನಂತಸ್ವಾಮಿ ಅವರು ಕರ್ನಾಟಕದ ಶ್ರೇಷ್ಠ ಗಾಯಕ-ಗಾಯಕಿಯರನ್ನು ಒಳಗೊಂಡು ಹಲವಾರು ಜಾನಪದ ಗೀತೆ, ಚಿತ್ರಗೀತೆ ಮತ್ತು ಭಾವಗೀತೆಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ಕುಣಿಸಿ ನಲಿಸುವಲ್ಲಿ ಸಫಲರಾದರು. ಮಧ್ಯರಾತ್ರಿಯ ನಂತರವೂ ಮುಂದುವರೆದ ಈ ಕಾರ್ಯಕ್ರಮವನ್ನು ನೋಡಲು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಸುಮಾರು ತೊಂಭತ್ತು ನಿಮಿಷಗಳ ಕಾಲ ನಡೆದ ಈ ಕಾರ್ಯಕ್ರಮ ರಂಜನೀಯವಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more