ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ 'ಅಕ್ಕ'ರೆಯ ಮೈಸೂರು ದಸರಾ

By * ಎಸ್ಕೆ. ಶಾಮಸುಂದರ
|
Google Oneindia Kannada News

ಎಡಿಸನ್, ಸೆ. 4 (ಗುಬ್ಬಿ ವೀರಣ್ಣ ವೇದಿಕೆ) : ಸರ್ವಾಲಂಕಾರ ಶೋಭಿತಳಾದ ದುರ್ಗಾ ದೇವಿಯ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಿದ ಅಂಬಾರಿಯನ್ನು ಹೊತ್ತ ಆನೆ ಅಮೆರಿಕಾದ ಬೀದಿಗಳಲ್ಲಿ ಮೆಲ್ಲಮೆಲ್ಲನೆ ಹೆಜ್ಜೆ ಹಾಕಲಾರಂಭಿಸಿದಂತೆ ವಿಶ್ವವಿಖ್ಯಾತ ಮೈಸೂರು ದಸರೆಯ ದೃಶ್ಯಾವಳಿಗಳು ಮನಃಪಟಲದಲ್ಲಿ ಮತ್ತೆ ಹಾದುಹೋಗತೊಡಗಿದವು. ಮೈಸೂರಿನ ವೈಭವ ಮನೆಬಾಗಿಲಿಗೇ ಬಂದಂತೆ ಜನತೆ ಪುಳಕಿತರಾಗತೊಡಗಿದರು. ಮಾವುತರಿಬ್ಬರ ಆದೇಶದಂತೆ ಹೆಜ್ಜೆಹಾಕುತ್ತಿದ್ದ 32 ವರ್ಷದ ಹೆಣ್ಣಾನೆ 'ಮಿನ್ನಿಯ' ಗಜಗಾಂಭೀರ್ಯಕ್ಕೆ ಬೆರಗಾದ ಕನ್ನಡಿಗರ ಹರ್ಷೋದ್ಗಾರಗಳು ಮೋಡಾಚ್ಛಾದಿತ ಆಕಾಶ ತಲುಪಿತು. ಅಮೆರಿಕನ್ನಡಿಗರಿಗೆ ನಿಂತಲ್ಲೇ ಮೈಸೂರು ದರ್ಶನವಾದರೆ ಅವರ ಮಕ್ಕಳು ಮರಿಗಳಿಗೆ ಇದೇ ಮೊದಲ ಬಾರಿಗೆ 'ಎಲಿಫೆಂಟ್' ನೋಡುವ ಭಾಗ್ಯ ಸಿಕ್ಕಿತು.

ನ್ಯೂ ಜೆರ್ಸಿ ರಾಜ್ಯದ ಎಡಿಸನ್ ನಗರದಲ್ಲಿ ಶುಕ್ರವಾರ ಹೀಗೆ ಆರಂಭವಾದ ಮೂರು ದಿನಗಳ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಅಮೆರಿಕಾ ನೆಲದಲ್ಲಿ ಕರ್ನಾಟಕ ಸಂಸ್ಕೃತಿಯ ಸೀಮೋಲ್ಲಂಘನಕ್ಕೆ ಹೊಸ ಭಾಷ್ಯ ಬರೆಯಿತು. ಕನ್ನಡಿಗರ ಸಮಾವೇಶಕ್ಕೆ ಹೊಸ ರಂಗು ತರುವ ಅಕ್ಕ ಮತ್ತು ಸಮಾವೇಶದ ಆತಿಥ್ಯ ವಹಿಸಿರುವ ಬೃಂದಾವನ ಕನ್ನಡ ಸಂಘದ ಕನಸುಗಳು ದಸರಾ ಮೆರವಣಿಗೆಯ ತದ್ರೂಪು ಸೃಷ್ಟಿಸುವುದರೊಂದಿಗೆ ವಿಧ್ಯುಕ್ತವಾಗಿ ಸಾಕಾರಗೊಂಡವು. ಕನೆಕ್ಟಿಕಟ್ ರಾಜ್ಯದಿಂದ ದಿನಕ್ಕೆ ಆರು ಸಾವಿರ ಡಾಲರ್ ಬಾಡಿಗೆ ದರದಲ್ಲಿ Minnieಯನ್ನು ಅಕ್ಕ ಅಂಬಾರಿ ಸಂಭ್ರಮಕ್ಕಾಗಿ ಕರೆಸಲಾಗಿತ್ತು.

ಕನ್ನಡ ನಕಾಶೆಯ ನಾನಾ ಪ್ರದೇಶಗಳಿಂದ ಆಗಮಿಸಿರುವ ನಾಲಕ್ಕು ಸಾವಿರ ಪ್ರತಿನಿಧಿಗಳು, ಕರ್ನಾಟಕದಿಂದ ಆಗಮಿಸಿರುವ ಗಣ್ಯರು ಹಾಗೂ ಇಲ್ಲಿ ಚಾತುರ್ಮಾಸ್ಯ ಆರಂಭಿಸಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಸಮ್ಮುಖದಲ್ಲಿ ಸಂಭ್ರಮದ ಅಕ್ಕ ಸಮ್ಮೇಳನಕ್ಕೆ ಈ ಬಾರಿ ಈ ಬಗೆಯ ಚಾಲನೆ ಸಿಕ್ಕಿತು. ಸಮಾವೇಶ ಸಭಾಂಗಣನ್ನು ಪ್ರದಕ್ಷಿಣೆ ಹಾಕಿ ವೇದಿಕೆಗೆ ಬಂದ ಆನೆ ಸವಾರಿ ಅಂಬಾರಿಯನ್ನು ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಇರಿಸಿದ ನಂತರ ಋತಿಜ್ವರಿಂದ ವೇದಘೋಷ, ಸಭಾಸದರಿಂದ ಪುಷ್ಪವೃಷ್ಠಿ ಹಾಗೂ ಸುಮಂಗಲಿಯರಿಂದ ಪೂಜಾ ಕೈಂಕರ್ಯಗಳು ನೆರವೇರಿದವು.

ಸಮಾವೇಶದ ಮೊದಲದಿನದ ಆಕರ್ಷಣೆಯ ಬಹುಪಾಲು ಅಂಬಾರಿಯತ್ತ ವಾಲಿದರೆ, ಪ್ರಶಾಂತ ವಾತಾವರಣದಲ್ಲಿ ಆರು ಗಂಟೆಗಳ ಕಾಲ ನಡೆದ ಆರ್ಟ್ ಆಫ್ ಲಿವಿಂಗ್ ಧ್ಯಾನ ಶಿಬಿರ ಅನೇಕರ ಜೀವಾತ್ಮಗಳನ್ನು ಸಾಂತ್ವನಗೊಳಿಸಿರಬೇಕು. ಸ್ವಾಮಿ ಸೂರ್ಯಪಾದ ಅವರು ನಡೆಸಿಕೊಟ್ಟ ಯೋಗ, ಧ್ಯಾನ, ನಿಶ್ಯಬ್ದ ಚಿಕಿತ್ಸೆಯನ್ನು ಸುಮಾರು 200 ಮಂದಿ ಅಮೆರಿಕನ್ನಡಿಗರು ಪಡೆದುಕೊಂಡರು. ನೂರು ಮಂದಿ ಶ್ರೀ ರವಿಶಂಕರ್ ಭಕ್ತರು 50 ಡಾಲರು ಕೊಟ್ಟು ಶಿಬಿರಕ್ಕೆ ನೊಂದಾಯಿಸಿಕೊಂಡಿದ್ದರೆ, ಕಡೇ ಗಳಿಗೆಯಲ್ಲಿ ಆಕರ್ಷಿತರಾದ ಮತ್ತೂ ನೂರು ಮಂದಿ ಶಿಬಿರಕ್ಕೆ ಬಂದು ಚಾಪೆ ಮೇಲೆ ಕುಲಿತು ಧ್ಯಾನಾಸಕ್ತರಾದರೆಂದು ಎಒಎಲ್ ಸಂಯೋಜಕರೊಬ್ಬರು ದಟ್ಸ್ ಕನ್ನಡ ಪ್ರತಿನಿಧಿಗೆ ತಿಳಿಸಿದರು.

ಅಕ್ಕ ಸಮ್ಮೇಳನದ ಮೊದಲ ದಿನದ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಉದ್ಘಾಟನಾ ಕಾರ್ಯಕ್ರಮ : ತುಂಬಿದ ಗುಬ್ಬಿ ವೀರಣ್ಣ ಸಭಾಂಗಣವನ್ನು ಆನಂತರ ಸೂರೆಗೊಂಡದ್ದು ಉದ್ಘಾಟನಾ ಕಾರ್ಯಕ್ರಮ. ಗಣ್ಯರ ಭಾಷಣ ಸರಣಿ ಆರಂಭಗೊಳ್ಳುವುದಕ್ಕೂ ಮುನ್ನ ಬೃಂದಾವನ ಕನ್ನಡ ಸಂಘದ ಪ್ರತಿಭಾವಂತ ಕಲಾವಿದರು ಪ್ರಸ್ತುತಪಡಿಸಿದ ವಿನೂತನ ಸಾಂಸ್ಕೃತಿಕ ಸಮಾರಾಧನೆಗಳು ಕಣ್ಮನಗಳನ್ನು ಅಪಹರಿಸಿತು. ಭೂಮಿಯ ಉಗಮದ ಕಲ್ಪನೆಯನ್ನು ಸಾರುತ್ತ, ಭರತ ಖಂಡದ ವೈಭವವನ್ನು ವೇದೋಪನಿಷತ್ತುಗಳ ಘೋಷದೊಂದಿಗೆ ಬಿಂಬಿಸುವ ಮಂತ್ರಮುಗ್ಧಗೊಳಿಸುವ ಒಂದು ಝೇಂಕಾರ, ಕರ್ನಾಟಕ ಬಗೆಬಗೆಯ ಜಾನಪದ ನೃತ್ಯಗಳ ಕೊಲಾಜ್, ಕನ್ನಡ ಭಾಷೆ ಮತ್ತು ಪಾರಂಪರಿಕ ಸತ್ವವನ್ನು ತೆರೆದಿಟ್ಟ ಸಮೂಹ ನೃತ್ಯ, ಭರತ ನಾಟ್ಯ, ಅಮೆರಿಕಾ ಮತ್ತು ಭಾರತ ರಾಷ್ಟ್ರಗೀತೆಗಳ ಲಯಬದ್ದ ಗಾನಗಳು ಸಮಾವೇಶದ ಮೊದಲ ದಿನದ ರಸಸಂಜೆಗೆ ಜೇನು ಹನಿಸಿದವು.

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಸಮ್ಮೇಳನದ ಆಶಯವನ್ನು ವಿವರಿಸುವುದು ಹಾಗೂ ಸಮಾವೇಶಕ್ಕೆ ಶುಭಕೋರುವ ಕಾರ್ಯಕ್ರಮ ವೇದಿಕೆಯಲ್ಲಿ ಸಾಂಗೋಪಾಂಗವಾಯಿತು. ಒಟ್ಟು ಹದಿನೈದು ಮಂದಿ ಗಣ್ಯರಿಂದ ಭಾಷಣಗಳು ಮೂಡಿಬಂದವಾದರೂ, ಪ್ರತಿಯೊಬ್ಬರೂ ಸಮಯ ಮಿತಿ ಮತ್ತು ಸಂದರ್ಭದ ಔಚಿತ್ಯ ಅರಿತು ಮಾತನಾಡಿದುದು ಹಿತವಾಗಿತ್ತು. ಶ್ರೀಗಳ ಆಶೀರ್ವಚನ, ಸಚಿವರು ಮತ್ತು ಶಾಸಕರ ಶುಭಾಶಯ ಹರಕೆ, ಸಮಾವೇಶ ಆಯೋಜಕರ ಸ್ವಾಗತ ಮತ್ತು ನಿರೂಪಣೆಗಳು ಮಿತವಾಗಿದ್ದವು.

ಸಚಿವ ಜಗದೀಶ್ ಶೆಟ್ಟರ್, ಶಾಸಕರುಗಳಾದ ಡಿ.ಎಚ್. ಶಂಕರಮೂರ್ತಿ, ಸತೀಶ್ ರೆಡ್ಡಿ, ನಟ ಜಗ್ಗೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಮಂ ಚಂದ್ರು, ವಾರ್ತಾ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೇ ಅರಸ್ ಅಮೆರಿಕನ್ನಡಿಗರ ಕನ್ನಡೋತ್ಸಾಹಕ್ಕೆ ಬೆನ್ನು ತಟ್ಟಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಶುಭಕೋರುವ ಸಂದೇಶವನ್ನು ವಾಚಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಸುತ್ತಿರುವುದಕ್ಕೆ ತಮಗೆ ತುಂಬಾ ಸಂತೋಷವಾಗುತ್ತಿದೆ ಎಂದು ನಟಿ ರಮ್ಯಾ ನುಡಿದರೆ, ಅಮೆರಿಕನ್ನಡಿಗರ ಕನ್ನಡ ಪ್ರೀತಿಯನ್ನು ಕರ್ನಾಟಕವಾಸಿ ಕನ್ನಡಿಗರು ನೋಡಿ ಕಲಿಯಬೇಕಾಗಿದೆ ಎಂದವರು ನಟ ಪುನೀತ್ ರಾಜ್ ಕುಮಾರ್.

ಬೃಂದಾವನ ಕನ್ನಡ ಸಂಘದ ಪರವಾಗಿ ಉಷಾ ಪ್ರಸನ್ನ ಕುಮಾರ್, ಪ್ರಸನ್ನ ಕುಮಾರ್, ಶಂಕರ ಶೆಟ್ಟಿ, ಮಧುರಂಗಯ್ಯ ಸ್ವಾಗತ ಕೋರಿದರೆ, ಅಕ್ಕ ಪರವಾಗಿ ದಯಾನಂದ ಅಡಪ, ರವಿ ಡಂಕಣಿಕೋಟೆ ಮತ್ತು ಅಮರ್ ನಾಥ್ ಗೌಡ ಅವರು ಅಕ್ಕದ ಸಂಸ್ಥೆಯ ಆಶೋತ್ತರಗಳನ್ನು ತಮ್ಮ ಚಿಕ್ಕ ಚೊಕ್ಕ ಭಾಷಣಗಳಲ್ಲಿ ಮಂಡಿಸಿದರು. ಕಾರ್ಯಕ್ರಮ ನಿರೂಪಣೆ, ವೀಣಾ ಮೋಹನ್.

ಅಕ್ಕ ಸಮ್ಮೇಳನದ ಮೊದಲ ದಿನದ ಚಿತ್ರಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X