ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡತನ - ನಿನ್ನೆ, ಇಂದು ಮತ್ತು ನಾಳೆ

By Prasad
|
Google Oneindia Kannada News

Dr. Guruprasad Kaginele
ಕನ್ನಡತನವೆಂದರೇನು? ಕನ್ನಡನಾಡಿನಲ್ಲಿ ವಾಸಿಸುವುದೇ? ಕನ್ನಡದಲ್ಲಿ ಮಾತಾಡುವುದೇ? ಕನ್ನಡದಲ್ಲಿ ಓದು ಬರಹ ಮಾಡುವುದೇ? ಕನ್ನಡದಲ್ಲಿ ರಾಜ್ಯಾಡಳಿತ ಮಾಡುವುದೇ?

ಕಾವೇರಿಯಿಂದಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ....

ಎಂದು ಕವಿರಾಜಮಾರ್ಗದಲ್ಲಿ ಹೇಳಿದೆ. ಇದು ಭೌಗೋಳಿಕವಾಗಿ ಕನ್ನಡನಾಡನ್ನು ವಿವರಿಸುತ್ತದೆ ಎಂದರೆ ಅದು 'ಭಾವಿತ'ಕನ್ನಡ ನಾಡನ್ನು ಮಿತಿಗೊಳಿಸುತ್ತದೆ. ಅದು ನೃಪತುಂಗನ ಆಶಯವೂ ಆಗಿರಲಿಲ್ಲ. ಕನ್ನಡ ಭಾಷೆಯ ಮೂಲ ಫಿನ್ನೋ ಉಗ್ರಿಯನ್ ಭಾಷಾವರ್ಗಕ್ಕೆ ಸೇರಿದ್ದಿರಬಹುದು ಎಂದು ಭಾಷಾತಜ್ಞರು ವಾದಿಸುತ್ತಾರೆ. ಅಲ್ಲಿಂದ ಹುಟ್ಟಿ ಅಫ್ಗಾನಿಸ್ತಾನದ ಮೂಲಕ ಭಾರತವನ್ನು ಪ್ರವೇಶಿಸಿ ಮಧ್ಯ ಭಾರತದಲ್ಲಿ ಒಂದಿಷ್ಟು ದಿನ ತಂಗಿ ನಂತರ ಕರ್ನಾಟಕದಲ್ಲಿ ನೆಲೆಸಿತು ಎಂದು ಒಂದು ವಾದ. ಇರಲಿ. ನಾವು ಯಾವುದನ್ನು ಒಂದು ಪ್ರಾಂತ್ಯಕ್ಕೆ ಸೇರಿದ ಭಾಷೆ ಅಂದುಕೊಳ್ಳುತ್ತೇವೋ ಅದು ಆ ಪ್ರಾಂತ್ಯದಲ್ಲಿ ಇರಲಿಲ್ಲ ಅನ್ನುವುದು ನಮ್ಮ ಭಾಷೆಯ, ಸಂಸ್ಕೃತಿಯ ಚಲನಶೀಲತೆಯನ್ನು ಹೇಳುತ್ತದೆ.

ಇದು ಯಾಕೆ ಮುಖ್ಯ ಅಂದರೆ, ಕರ್ನಾಟಕ ಏಕೀಕರಣ ಆದಮೇಲೆ ಕರ್ನಾಟಕಕ್ಕೆ ಒಂದು ಭೌಗೋಳಿಕ ಪರಿಧಿ ಒದಗಿರಬಹುದು. ಆದರೆ, ಕರ್ನಾಟಕದಿಂದ ಕನ್ನಡಿಗರು ಹೊರಗೆ ಹೋಗುವುದು, ಕರ್ನಾಟಕಕ್ಕೆ ಬೇರೆ ಭಾಷೆಯ ಜನ ಬಂದು ನೆಲಸುವುದು ಅನಾದಿಕಾಲದಿಂದಲೂ ನಡೆದೇ ಇದೆ. ಹೀಗಾಗುತ್ತಿರುವುದರಿಂದ ಒಂದು ರೀತಿ ಕೊಡುಕೊಳ್ಳುವಿಕೆಯಿಂದ ಭಾಷೆಯೂ ಸಮೃದ್ಧವಾಗಿದೆ ಎಂತಲೇ ನಂಬಿಕೆ. ಇದು ನಿಜವೇ? ನಗರೀಕರಣ, ಜಾಗತೀಕರಣ, ಮುಕ್ತಮಾರುಕಟ್ಟೆ, ವಲಸೆ-ಇವೆಲ್ಲ ಕನ್ನಡಕ್ಕೆ ಹಿಂದೆಂದೂ ಇಲ್ಲದ ಭೌಗೋಳಿಕ, ಸಾಂಸ್ಕೃತಿಕ, ರಾಜಕೀಯ ಆಯಾಮವನ್ನು ಕೊಟ್ಟಿದೆ.

ಹೀಗಾಗಿ ಕನ್ನಡಿಗನೆಂದರೆ ಯಾರು? ಕರ್ನಾಟಕದಲ್ಲಿ ವಾಸಿಸುವವನೇ- ಎಷ್ಟೋ ಜನ ಕನ್ನಡದಲ್ಲಿ ಒಂದಕ್ಷರ ಮಾತಾಡದಿದ್ದರೂ ಕರ್ನಾಟಕದಲ್ಲಿ ನೆಲಸಿಲ್ಲವೇ? ಇದೇ ವಾದವನ್ನು, ಕನ್ನಡದ ಓದು, ಬರಹಕ್ಕೂ ವಿಸ್ತರಿಸಬಹುದು. ಇದು ಕನ್ನಡಕ್ಕೆ ಮಾತ್ರ ಸೀಮಿತವಾದ ಪರಿಕಲ್ಪನೆಯೇ? ಅಥವಾ ಭಾರತದ ಬೇರೆ ಪ್ರಾದೇಶಿಕ ಭಾಷೆಗಳಿಗೂ ಇಂತಹ ಒಂದು ಕಾಳಜಿ, ಕಳಕಳಿ ಇದೆಯೇ ನಿಮ್ಮ ದೃಷ್ಟಿಯಲ್ಲಿ ಕನ್ನಡಿಗನೆಂದರೆ ಯಾರು? ಕನ್ನಡದ ಮನಸ್ಸು ಎಂದರೆ ಏನು? ಕರ್ನಾಟಕದಿಂದ ಹೊರಗೆ ಭಾರತದಲ್ಲಿಯೇ ಇರುವ ಕನ್ನಡಿಗರಿಗಿಂತ ದೇಶದ ಹೊರಗಿರುವ ಕನ್ನಡಿಗರ ಕನ್ನಡತನ ಬೇರೆಯೇ? ಬೇರೆಯಾದರೆ ಹೇಗೆ ಬೇರೆ?

ಅನಿವಾಸಿ ಕನ್ನಡಿಗ ಎಂಬ ಲಗತ್ತು ಹಚ್ಚಿ ಕಲೆ, ಸಾಹಿತ್ಯ ಇವುಗಳನ್ನು ಪ್ರತ್ಯೇಕಿಸಿ ನೋಡುವುದು ಎಷ್ಟು ಸಾಧು? ಒಳ ಹೊರ ವಲಸೆಯಿಂದಾಗಿರುವ ಈ ಕೊಡುಕೊಳ್ಳುವಿಕೆಯಿಂದ ಕನ್ನಡ ಭಾಷೆ ನಿಜವಾಗಿಯೂ ಸಮೃದ್ಧವಾಗಿದೆ ಎಂದು ಅನಿಸುತ್ತದೆಯೇ? ಇದರಿಂದ ಕನ್ನಡ ದೇಸೀ ಭಾಷೆಗೆ, ಸಂಸ್ಕೃತಿಗೆ ಯಾವ ಹೊಡೆತವೂ ಬಿದ್ದಿಲ್ಲವೇ? ನಾವು ಇಂದು ಕರ್ನಾಟಕ ಎನ್ನುವ ಪ್ರದೇಶ ಹಿಂದಿನಿಂದಲೂ ಎಲ್ಲ ಮತಗಳಿಗೂ, ಸಂಸ್ಕೃತಿಗಳಿಗೂ, ಭಾಷೆಗಳಿಗೂ ಆಶ್ರಯವಿತ್ತ ನೆಲ ಎಂಬುದನ್ನು ಗಮನಿಸಬೇಕಲ್ಲವೇ?

ಇವೇ ಮೊದಲಾದ ಪ್ರಶ್ನೆಗಳನ್ನಿಟ್ಟುಕೊಂಡು ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಒಂದು ಸಂವಾದವನ್ನು ಏರ್ಪಡಿಸಿದೆ. ಭಾನುವಾರ, ಸೆಪ್ಟೆಂಬರ್ 5, ಮ. 1:30ರಿಂದ 3:30, ಡಿವಿಜಿ ಭವನದಲ್ಲಿ. ದಯವಿಟ್ಟು ಸಂವಾದದಲ್ಲಿ ಪಾಲ್ಗೊಳ್ಳಿ. ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.

ಸಂಪರ್ಕ : ಗುರುಪ್ರಸಾದ್ ಕಾಗಿನೆಲೆ, 507-358-7292

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X