ಅಕ್ಕ : ಕಾರ್ಯಕ್ರಮ ನಿರೂಪಕಿ ಶ್ರುತಿ ಜಿ ರಾವ್
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹುಟ್ಟಿ ಬೆಳೆದ ಶ್ರುತಿ, ತಮ್ಮ ಐದನೇ ವಯಸ್ಸಿನಿಂದಲೇ ಹೆಸರಿಗೆ ಅನ್ವರ್ಥ ಎಂಬಂತೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮ್ಯಾಂಡೊಲಿನ್ ವಾದನದಲ್ಲಿ ಪಳಗಿರುವ ಕಲಾವಿದೆ. ಸದ್ಯ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡದ ಬಹುಮುಖ ಪ್ರತಿಭೆ.
ಇಂಜಿನಿಯರಿಂಗ್ ಪದವೀಧರೆ. ಸಂಗೀತ, ಸಾಹಿತ್ಯ, ಅಭಿನಯ, ನೃತ್ಯ ಹೀಗೆ ಕಲೆಯ ವಿವಿಧ ಪ್ರಕಾರಗಳಲ್ಲಿ ಅಭಿರುಚಿ. ನಾದ ಮಾಧುರ್ಯ ಮೂಡಿಸುವ ಆಶಯವಿರುವ ಶ್ರುತಿ, ಕಮಲ ರಾಜಲಕ್ಷ್ಮಿ, ಎಚ್ಆರ್ ಲೀಲಾವತಿ ಮತ್ತು ದತ್ತಾತ್ರೇಯ ಇವರುಗಳ ನುರಿತ ಮಾರ್ಗದರ್ಶನದಿಂದ ಉದಯ, ಈಟಿವಿ, ಜೀ ಕನ್ನಡ, ದೂರದರ್ಶನ ಚಂದನ ವಾಹಿನಿಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಮತ್ತು ಮ್ಯಾಂಡೊಲಿನ್ ಕಚೇರಿಗಳನ್ನು ನೀಡಿರುವುದು ಇವರ ಪ್ರತಿಭೆಗೆ ಸಾಕ್ಷಿಯಾಗಿದೆ.
ಅಖಿಲ ಭಾರತ ಸಂಗೀತ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು 5 ಬಾರಿ ಪ್ರತಿನಿಧಿಸಿ, 2000ನೇ ಇಸವಿಯಲ್ಲಿ ನವ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ಮಹಾ ಸಮ್ಮೇಳನದಲ್ಲಿ ಕಾರ್ಯಕ್ರಮವನ್ನು ನೀಡಿ "ಕನ್ನಡ ಕೋಗಿಲೆ" Yuva Pratibha Puraskar Award ಪಡೆದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ "ಮೌನಿ" ಎಂಬ ಸಾಕ್ಷ್ಯ ಚಿತ್ರಕ್ಕೆ ಹಿನ್ನಲೆ ಗಾಯಕಿಯಾಗಿ ಹಾಡಿರುವುದು ಮತ್ತು "ಉದಯಚಂದ್ರನ ಶ್ರೀ ಕಲ್ಕಿ" ಎಂಬ ಇವರ ಧ್ವನಿಸುರುಳಿ ಹೊರಬಂದಿರುವುದು ಇವರ ಪ್ರತಿಭೆಗೆ ಸಂದ ಮತ್ತೊಂದು ಗೌರವ.
ಪ್ರಸಕ್ತ ಅಮೆರಿಕಾದ ಚಾರ್ಲೋಟೆ ನಗರದಲ್ಲಿ ನೆಲೆಸಿರುವ ಶ್ರುತಿಯವರು, ಕೆರೋಲಿನಾ ಕನ್ನಡ ಬಳಗದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಹಲವಾರು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿರುವ ಶ್ರುತಿ, ಈಗ ಪ್ರಸ್ತುತ ಅಕ್ಕ 2010ರ ಸಮ್ಮೇಳನದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವವರ ತಂಡದಲ್ಲಿ ಒಬ್ಬರಾಗಿರುತ್ತಾರೆ.
ಅಕ್ಕ: ಕಾರ್ಯಕ್ರಮ ನಿರೂಪಕಿ ವೀಣಾ ಮೋಹನ್ »