• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕನ್ನಡಂ ಗೆಲ್ಗೆ.. ಅಮೆರಿಕನ್ನಡಂ ಬಾಳ್ಗೆ..!

By * ಪಿ. ತ್ಯಾಗರಾಜ್
|
Janardhanaswamy
ಪೆಸಡೆನಾ ಸಭಾಂಗಣ, ಲಾಸ್ ಏಂಜಲೀಸ್ : ಅಮೆರಿಕ ನೆಲದಲ್ಲಿ ಗೆಜ್ಜೆಗಳಂತೆ ಕಟ್ಟಿರುವ ಕನ್ನಡಾಂಬೆಯ ಕುಡಿಗಳನ್ನು ತಾಯ್ನುಡಿಯ ಮಮಕಾರದಲ್ಲಿ ಕಟ್ಟಿ ಹಾಕಿರುವ ನಾರ್ತ್ ಅಮೆರಿಕ ವಿಶ್ವ ಕನ್ನಡ ಆಗರ (ನಾವಿಕ)ದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಸಂಭ್ರಮ, ಸಡಗರದ ನಡುವೆ ಶುಕ್ರವಾರ ಅನೌಪಚಾರಿಕ ಚಾಲನೆ ಪಡೆಯಿತು.

ಬದುಕು ಕಟ್ಟಿಕೊಟ್ಟ ನಾಡಿನಲ್ಲಿ ಜನ್ಮಭೂಮಿಯ ಮೇಲಿನ ಪ್ರೀತಿಯ ಸೆಲೆ ಉಕ್ಕಿದಾಗ ಕನ್ನಡಿಗರ ಹೃನ್ಮನಗಳು ಆನಂದ ಸಾಗರದಲ್ಲಿ ಮಿಂದೆದ್ದವು. ಅವರ ಭಾವ ಸಂಗಮಕ್ಕೆ ಹುಟ್ಟು ಹಾಕುವ ಮೂಲಕ ನಾವಿಕ' ಸಾರ್ಥಕತೆ ಪಡೆಯಿತು.

ನಾವಿಕ ಬಳಗದ ಅವಿರತ ಶ್ರಮದ ಫಲವಾಗಿ ಆಯೋಜನೆಗೊಂಡಿರುವ ಮೂರು ದಿನಗಳ ಈ ಸಮ್ಮೇಳನಕ್ಕೆ ಶುಕ್ರವಾರ ಮಧ್ಯಾಹ್ನ ಚಾಲನೆ ಕೊಟ್ಟದ್ದು ವಾಣಿಜ್ಯ ಗೋಷ್ಠಿ. ಅಮೆರಿಕದ ಕನ್ನಡಿಗರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು ಹಾಗೂ ನಾನಾ ಕ್ಷೇತ್ರಗಳ ಬಗ್ಗೆ ಈ ಗೋಷ್ಠಿಯಲ್ಲಿ ಬೆಳಕು ಚೆಲ್ಲಲಾಯಿತು. ಕರ್ನಾಟಕ ಸರಕಾರದ ಪರವಾಗಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾಹಿತಿ ನೀಡಿದರು. ಕರ್ನಾಟಕ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಪ್ರಮುಖ ಭಾಷಣದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಮಹತ್ವದ ಅಂಶಗಳನ್ನು ಒದಗಿಸಿದರು.

ಅಮೆರಿಕ ಕನ್ನಡಿಗರು ಬಂಡವಾಳ ಹೂಡಿಕೆ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬಹುದು, ಆ ಮೂಲಕ ಕರ್ನಾಟಕದ ಪ್ರಗತಿಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದರು. ಸರಕಾರದಲ್ಲಿ ಸಲ್ಲಿಸಿದ್ದ ಸೇವೆಯ ಅನುಭವದ ಆಧಾರದ ಮೇಲೆ ಅವರು ಮಂಡಿಸಿದ ವಿಷಯ ಮಹತ್ವ ಪಡೆದುಕೊಂಡಿತು.

ಇದೇ ಮೊದಲ ಬಾರಿಗೆ ಕನ್ನಡ ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಏರ್ಪಡಿ ಸಲಾಗಿದೆ. ಕನ್ನಡಿಗರು ಹಾಗೂ ಅಮೆರಿಕ ಕನ್ನಡಿಗರ ಉತ್ಪನ್ನಗಳ ಪ್ರದರ್ಶನದಲ್ಲಿ ಜವಳಿ, ಸಾಂಬಾರು ಪದಾರ್ಥ, ಆಭರಣಗಳಿಂದ ಹಿಡಿದು ಜ್ಞಾನ ಮಾಹಿತಿ ವಿನಿಮಯ ದವರೆಗೂ ಅವಕಾಶ ಕಲ್ಪಿಸಲಾಗಿದೆ.

ಈ ಮಧ್ಯೆ ಅಮೆರಿಕ ಮತ್ತು ಭಾರತ ಕನ್ನಡ ಸಾಹಿತಿಗಳ ನಡುವೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾವ್ಯಧಾರೆ' ಸಾಹಿತ್ಯ ಸಂವಾದ ಹಾಗೂ ಕವನ ವಾಚನವೂ ನಡೆಯಿತು. ಇಂತಹದೊಂದು ವಿಶಿಷ್ಟ ಕಾರ್ಯಕ್ರಮಕ್ಕೆ ಪ್ರಥಮ' ಬರೆದ ಹೆಗ್ಗಳಿಕೆ ನಾವಿಕದ್ದು. ಬೆಂಗಳೂರಿನ ನಯನ' ಸಭಾಂಗಣದಿಂದ ಖ್ಯಾತ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಪ್ರೊ. ಎಸ್.ಜಿ. ಸಿದ್ದರಾಮಯ್ಯ ನೇರ ಪ್ರಸಾರದಲ್ಲಿ ಕವನ ವಾಚಿಸಿದರು. ಇತ್ತಲಿಂದ ಅಲಮೇಲು ಅಯ್ಯಂಗಾರ್, ಜ್ಯೋತಿ ಮಹದೇವ, ಸುಕುಮಾರ್ ರಘುರಾಮ್ ಹಾಗೂ ಸವಿತಾ ರವಿಶಂಕರ್ ಬರವಣಿಗೆಗೆ ಆಧಾರ ಆಗಬೇಕಾದ ಅಂಶಗಳ ಬಗ್ಗೆ ಪ್ರಶ್ನೋತ್ತರ ನಡೆಸಿದರು. ಅಮೆರಿಕದಲ್ಲಿ ಮಕ್ಕಳಿಗೆ ಕನ್ನಡ ಕಲಿಸಲು ಮಾಡಿರುವ ವ್ಯವಸ್ಥೆಗಳ ಬಗ್ಗೆ ತಿಳಿಸಿ, ಮೆಚ್ಚುಗೆಗೆ ಪಾತ್ರರಾದರು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಖ್ಯಾತ ಗಾಯಕರಾದ ಬದರಿ ಪ್ರಸಾದ್, ಕಿಕ್ಕೇರಿ ಕೃಷ್ಣಮೂರ್ತಿ, ಅಜಯ್ ವಾರಿಯರ್ ಹಾಗೂ ದಿವ್ಯಾ ರಘುರಾಮ್ ಅವರ ಹಾಡುಗಳಿಗೆ ಸಭಿಕರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಅದೇ ರೀತಿ ಪ್ರೊ. ಕೃಷ್ಣೇಗೌಡ ಹಾಗೂ ಡಾ. ಕೆ.ಪಿ. ಪುತ್ತೂರಾಯ ಅವರ ಹಾಸ್ಯ ಲಹರಿಗೆ ನಗೆಬುಗ್ಗೆ ಹರಿಸಿದರು. ಕರ್ನಾಟಕದಿಂದ ಬಂದಿರುವ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಮನಸೋತು, ಮೈ ಮರೆತಿದ್ದ ಸಭಿಕರ ಉತ್ಸಾಹಕ್ಕೆ ಬ್ರೇಕ್ ಹಾಕಿದ್ದು ಸಮಯದ ಮಿತಿ. ಇಂದಿನ ಅನುಭವ ಹಾಗೂ ನಾಳಿನ ನಿರೀಕ್ಷೆಯೊಡನೆ ಅವರು ಮನೆಗಳತ್ತ ಹೊರಟಾಗ ಮಧ್ಯರಾತ್ರಿ ದಾಟಿತ್ತು. (ಸ್ನೇಹಸೇತು : ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more