'ವಾಹ್ ವಾಹ್!' ವಿದ್ಯಾರಣ್ಯ ಕನ್ನಡ ಕೂಟ

AKKA WKC 2008, Chicagoತಳಿರು ತೋರಣ ಕಟ್ಟುವುದರಿಂದ ಹಿಡಿದು ಅತಿಥಿಗಳನ್ನು ಬೀಳ್ಕೊಡುವ ತನಕ ಎಲ್ಲೂ ಅಚಾತುರ್ಯವಾಗದಂತೆ ಮೂರು ದಿನಗಳ ಕಾರ್ಯಕ್ರಮ ಸಂಘಟಿಸುವುದು ಸಣ್ಣ ಮಾತಲ್ಲ. ಎಲ್ಲರ ನಿರೀಕ್ಷೆಗಳನ್ನೂ ಮೀರಿ 5ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನವನ್ನು ಸಂಘಟಿಸುವಲ್ಲಾಗಲಿ, ದೂರದಿಂದ ಬಂದ ಅತಿಥಿಗಳಿಗೆ ಆತಿಥ್ಯ ನೀಡುವಲ್ಲಾಗಲಿ ಅದ್ಭುತ ಕಾರ್ಯಕ್ಷಮತೆ ಮೆರೆದ ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರ ನಿಸ್ವಾರ್ಥ ಸೇವೆಗೆ ಇಲ್ಲಿದೆ ಮೆಚ್ಚುಗೆಯ ಪತ್ರ.

***

ಆತ್ಮೀಯ ವಿದ್ಯಾರಣ್ಯ ಕನ್ನಡ ಕೂಟ (ಶಿಕಾಗೊ)ದ ಕನ್ನಡಿಗ ಸ್ನೇಹಿತರಿಗೆ, ನಮಸ್ಕಾರ!

ಇದೀಗ ಸಮಾಪ್ತಗೊಂಡ ಐದನೆಯ 'ಅಕ್ಕ" ವಿಶ್ವ ಕನ್ನಡ ಸಮ್ಮೇಳನವನ್ನು ನಿಮ್ಮೂರಲ್ಲಿ ನೀವೆಲ್ಲ ಸೇರಿ ಅಚ್ಚುಕಟ್ಟಾಗಿ ನಿರ್ವಹಿಸಿದ ಸಂದರ್ಭದಲ್ಲಿ, ಒಬ್ಬ ಸಾಮಾನ್ಯ ಸಮ್ಮೇಳನಾರ್ಥಿಯಾಗಿ ನನ್ನ ವೈಯಕ್ತಿಕ ಧನ್ಯವಾದವನ್ನು ತಿಳಿಸಲಿಕ್ಕಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ.

ಇದನ್ನು ಹೊಗಳಿಕೆಯಿಂದ ಬರೆಯುತ್ತಿಲ್ಲ; ಹೊಗಳಿಕೆಯಿಂದ ನನಗಾಗಲೀ ನಿಮಗಾಗಲೀ ಆಗಬೇಕಾದ್ದೇನೂ ಇಲ್ಲ. ಆದರೆ ಕನ್ನಡದ ಕೆಲಸವೆಂಬ ಪ್ರೀತಿಯಿಂದ, ಕನ್ನಡಿಗರ ಕೆಲಸವೆಂಬ ಹೆಮ್ಮೆಯಿಂದ, ನೀವೆಲ್ಲರೂ ವೃತ್ತಿಪರ/ಸಾಂಸಾರಿಕ ಅಗತ್ಯ-ಅನಿವಾರ್ಯಗಳ ನಡುವೆಯೂ ಸಮಯವನ್ನು ಹೊಂದಿಸಿಕೊಂಡು ಇಂಥದೊಂದು ಬೃಹತ್ ಪ್ರಮಾಣದ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಿದ್ದನ್ನು ಕಂಡು ನಿಮಗೆಲ್ಲರಿಗೂ ಒಂದು heartfelt thanks ತಿಳಿಸೋಣವೆಂದು ಇದನ್ನು ಬರೆಯುತ್ತಿದ್ದೇನೆ.

ಸಮ್ಮೇಳನದ ಮೂರು ದಿನಗಳಲ್ಲೂ ವಿದ್ಯಾರಣ್ಯ ಕೂಟದ ಅನೇಕ ಸದಸ್ಯರು ಇದು ತನ್ನ ಮನೆಯ ಸಮಾರಂಭ ಎನ್ನುವುದಕ್ಕಿಂತಲೂ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ಅಂದಮೇಲೆ ಸಮ್ಮೇಳನದ ತಯಾರಿಗಳಿಗಾಗಿ ತಿಂಗಳು/ವರ್ಷದಿಂದ ನೀವು ಪಟ್ಟಿರುವ ಶ್ರಮವೂ ಅಷ್ಟೇ ಪ್ರಾಮಾಣಿಕವಾದುದು ಎಂದು ಬೇರೆ ಹೇಳಬೇಕಿಲ್ಲ. ನನಗೆ ನಿಮ್ಮ ಪೈಕಿ ವೈಯಕ್ತಿಕ ಪರಿಚಯವಿರುವುದು ಕೇವಲ ಕೆಲವರದಷ್ಟೇ. ಆದರೆ ಸಮ್ಮೇಳನದಲ್ಲಿ ವಿದ್ಯಾರಣ್ಣಿಗ (ನಿಮ್ಮನ್ನು ನೀವು ಕರೆದುಕೊಳ್ಳಲಿಚ್ಛಿಸುವ ರೀತಿಯಲ್ಲೇ ಬರೆದಿದ್ದೇನೆ) ಯಾರೆಂದು ಛಕ್ಕನೆ ಗೊತ್ತಾಗುವಷ್ಟು ತಾದಾತ್ಮ್ಯವಿತ್ತು ಆ ಕಾರ್ಯನಿರ್ವಹಣೆಯಲ್ಲಿ, ಆ ರೀತಿಯಲ್ಲೇ ಎಲ್ಲರ ಪರಿಚಯವೂ ಆಯ್ತು ಎಂದರೆ ತಪ್ಪಲ್ಲ.

ಪ್ರೊ|ಕೃಷ್ಣೇಗೌಡರು ತನ್ನ ಹಾಸ್ಯಲೋಕ ಕಾರ್ಯಕ್ರಮಕ್ಕೆ standing ovation ಸಿಕ್ಕಿದಾಗ ಒಮ್ಮೆ ಅವಾಕ್ಕಾಗಿ, ಒಂದು ಕ್ಷಣ ಮೂಕವಿಸ್ಮಿತರಾಗಿ, ಆಮೇಲೊಂದು ಮಾತನ್ನು ಹೇಳಿದರು. "ಇದು ನನಗೆ ಸಲ್ಲಬೇಕಾದ ಗೌರವವಲ್ಲ, ಈ ಸಮ್ಮೇಳನವು ಇಷ್ಟು ಯಶಸ್ವಿಯಾಗಿ ಜರುಗಲು ಹಗಲಿರುಳೂ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತನಿಗೆ ಸಲ್ಲಬೇಕಾದ ಗೌರವ. ನಾನದನ್ನು ಅವರಿಗೇ ತಲುಪಿಸುತ್ತೇನೆ." ಅವರದು ಉದಾರ ಮನಸ್ಸು, ಆದರೆ ನೀವು ಆ ಗೌರವಕ್ಕೆ ಸರ್ವರೀತಿಯಲ್ಲೂ ಅರ್ಹರು.

ಸಮ್ಮೇಳನದ ಕೊನೆಯ ದಿನ, ವಿದ್ಯಾರಣ್ಣಿಗರೆಲ್ಲರ ಪರಿಶ್ರಮವನ್ನು ಗುರುತಿಸುವುದಕ್ಕಾಗಿ ನಿಮ್ಮೆಲ್ಲರನ್ನು ವೇದಿಕೆಗೆ ಕರೆದಾಗ ನಿಮ್ಮಲ್ಲಿ ಎಷ್ಟೋ ಮಂದಿ ವೇದಿಕೆ ಹತ್ತಲೂ ಹಿಂಜರಿದರು. ಅದೇ ನಿಸ್ವಾರ್ಥ ಸೇವೆಯ ಪ್ರತೀಕ. ಏಕೆಂದರೆ, ಏನೂ ಕೆಲಸ ಮಾಡದೆ “ಕೋಲ್‌ಮೇಸ್ತ್ರಿ"ಗಳಂತೆ ವರ್ತಿಸಿ ಅಗತ್ಯವಿಲ್ಲದಿದ್ದರೂ ವೇದಿಕೆಯ ಮೇಲೆ ರಾರಾಜಿಸುತ್ತಿದ್ದ, ಫೊಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದ, ಮಾತಿಗೆ ಅವಕಾಶ ಸಿಕ್ಕಿದಾಗ ಮೈಕ್ ಹಿಡಿಯುತ್ತಿದ್ದ ಕೆಲವರು ಅಲ್ಲಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅವರದು ಸ್ವಾರ್ಥ ಸೇವೆ ಇರಬಹುದು. ಅದಕ್ಕೆ ಧನ್ಯವಾದ ಹೇಳುವುದು ಅವಶ್ಯವಿಲ್ಲ, ಹೇಳಿದರೆ ಅದಕ್ಕೆ ಅರ್ಥವೂ ಇಲ್ಲ.

ಅವಶ್ಯವಾದ, ಅರ್ಥವುಳ್ಳ ಕೆಲಸವನ್ನಷ್ಟೇ ನೀವು ಮಾಡಿದಿರಿ. ಹಾಗೆಯೇ ನನ್ನ ಈ ಧನ್ಯವಾದ ಪತ್ರ ಸಹ. ಇದು ಅವಶ್ಯವಾದದ್ದು ಮತ್ತು ಅರ್ಥವುಳ್ಳದ್ದು.

ಮತ್ತೊಮ್ಮೆ ನಿಮಗೆಲ್ಲರಿಗೂ ಕೃತಜ್ಞತಾಪೂರ್ವಕ ನಮಸ್ಕಾರ.

ಶ್ರೀವತ್ಸ ಜೋಶಿ; ವರ್ಜೀನಿಯಾ
(ಒಬ್ಬ ಸಂತೃಪ್ತ ಸಮ್ಮೇಳನಾರ್ಥಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+