ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕಾಗೋ ಸಮ್ಮೇಳನದ 3ನೇ ದಿನದ ಮಿಂಚು-ಮಿಣುಕು

By Staff
|
Google Oneindia Kannada News

Krishnagowdaಅಕ್ಕ ಸಮ್ಮೇಳನದ ಮೂರನೇ ದಿನ ಕೃಷ್ಣೇಗೌಡ ಮತ್ತು ಪುತ್ತೂರಾಯರ ಜೋಕ್ಸ್ ಗಳಿಗೆ ಭರ್ಜರಿ ಕರತಾಡನ. ಕೃಷ್ಣೇಗೌಡರ ಹಾಸ್ಯಲೋಕವಂತೂ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ತಮ್ಮದೇ ಡೈಲಾಗನ್ನು ಅಮೆರಿಕದಲ್ಲಿ ಹೊಡೆಯಲು ಉಪ್ಪಿ ವಿಫಲರಾಗಿದ್ದು ಅವರಿಗೇ ಆದ ಲಾಸು. ಕಾರ್ಯಕ್ರಮಗಳು ಏನೇ ಇರಲಿ, ಅವುಗಳ ಯಶಸ್ಸು ಎಂಥದೇ ಇರಲಿ, ಕೊನೆಗೂ ಎಲ್ಲರಿಂದ ಶಭಾಸ್ ಗಿರಿ ಪಡೆದದ್ದು ಮಾತ್ರ ಊಟದ ವ್ಯವಸ್ಥೆ. ಹೊಟ್ಟೆ ತೃಪ್ತಿಯಾದ್ರೆ ತಾನೆ ಎಲ್ಲ ತೃಪ್ತಿಕರವಾದಂತೆ!?

ವರದಿ : ಶ್ರೀವತ್ಸ ಜೋಶಿ
ಕ್ಯಾಂಪ್ : ವಿಶ್ವಕನ್ನಡ ಸಮ್ಮೇಳನ ನಗರ ಶಿಕಾಗೊ

* ನಗೆ ಸಖತ್ ಡಿಮ್ಯಾಂಡ್ : ಈ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ "steal the show" ಅಂದರೆ ಪ್ರೊ|ಕೃಷ್ಣೇಗೌಡ ಮತ್ತು ಕೆ.ಪಿ.ಪುತ್ತೂರಾಯ ಅವರ ನಗೆ ಬಾಂಬುಗಳು. ಅವರ ಕಾರ್ಯಕ್ರಮಕ್ಕೆ ಅದೆಷ್ಟು ಬೇಡಿಕೆಯೆಂದರೆ, on public demand, ಹಾಸ್ಯಲೋಕ ಕಾರ್ಯಕ್ರಮವನ್ನು ಒಂದಲ್ಲ ಎರಡಲ್ಲ ನಾಲ್ಕು ಸಲ ಪ್ರದರ್ಶಿಸಲಾಯಿತು, ಅಷ್ಟಾದರೂ ಜನರಿಗೆ ತೃಪ್ತಿಯಾಗಲಿಲ್ಲ. ರವಿವಾರದ ಪ್ರೈಮ್‌ಟೈಮ್ ಶೋದಲ್ಲಿ ಕೃಷ್ಣೇಗೌಡರು ಬುಡುಬುಡಿಕೆಯವನ ಪದ್ಯ, ಹಳ್ಳಿಹೈದರ ನಾಟಕ ಡಯಲಾಗ್ ಇತ್ಯಾದಿ ಅಟಂಬಾಂಬುಗಳನ್ನು ಸಿಡಿಸಿ ನಗೆಗಡಲಲ್ಲಿ ಸೈಕ್ಲೋನ್ ಎಬ್ಬಿಸಿದರು, ತುಂಬಿದ ಸಭಾಂಗಣದಲ್ಲಿದ್ದ ಜನರೆಲ್ಲರನ್ನೂ ಎಬ್ಬಿಸಿದರು. ಎಲ್ಲರೂ ಸ್ವಯಂ ಪ್ರಚೋದನೆಯಿಂದ ಎದ್ದು ನಿಂತು standing ovation ಕೊಟ್ಟ ಕಾರ್ಯಕ್ರಮವೆಂದರೆ ಕೃಷ್ಣೇಗೌಡರ ಹಾಸ್ಯಲೋಕ.

* ಪುತ್ತೂರಾಯರ ಹಾಸ್ಯವೂ ಕಮ್ಮಿಯೇನಲ್ಲ. ಅವರು ವೇದಿಕೆಯ ಮೇಲೆ ಮಾತ್ರವಲ್ಲ, ಹೀಗೇ ಭೇಟಿಯಾಗಿ ಕೈಕುಲುಕುವಾಗಲೂ ಹಾಸ್ಯವೇ. ಅವರಬಗ್ಗೆ ಬೇರೆಯವರು ಹಾಸ್ಯ ಮಾಡಿದರೂ ಅವರಿಗೆ ಬೇಜಾರಾಗುವುದಿಲ್ಲ. ಎಷ್ಟರಮಟ್ಟಿಗೆ ಎಂದರೆ, ಅವರು ಕೈಕುಲುಕಿ ಇಂಟ್ರೊಡ್ಯೂಸ್ ಮಾಡಿಕೊಳ್ಳುತ್ತ "ನಾನು ಪುತ್ತೂರಾಯ..." ಎಂದಾಗ "ನನಗೆ ಗೊತ್ತು ರಾಯ..." ಎಂದುತ್ತರಿಸಿದರೂ ಅವರಿಗೆ ಬೇಸರವಾಗುವುದಿಲ್ಲ. ಹಹ್ಹಹ್ಹಾ ಎಂದು ನಗುತ್ತಾರೆ!

Upendra and Priyanka* ಉಪ್ಪಿದಾದಾ ಪಬ್ಲಿಕ್ ಎಪಾಲಜಿ ಪ್ರಸಂಗ : ಶನಿವಾರ ರಾತ್ರೆಯ ಗುರುಕಿರಣ್ ನೈಟ್‌ನಲ್ಲಿ ಉಪ್ಪಿದಾದಾ ಸಹ ಭಾಗವಹಿಸಬೇಕಿತ್ತು. ಆ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಶುರುವಾಗಬೇಕಿದ್ದದ್ದು ಅವತ್ತು ದಿನವಿಡೀ ಎಲ್ಲ ಕಾರ್ಯಕ್ರಮಗಳು ಸುಮಾರು 2-3 ಗಂಟೆಗಳಷ್ಟು running behind the schedule ಆದ್ದರಿಂದ ಸಮಯಕ್ಕೆ ಸರಿಯಾಗಿ ಶುರುವಾಗಲಿಲ್ಲ. ಅಂತೂ ಗುರುಕಿರಣ್ ವೃಂದದ ಮ್ಯೂಸಿಕ್ ಇನ್ಸ್‌ಟ್ರುಮೆಂಟ್ಸ್ ಎಲ್ಲ ಸ್ಟೇಜ್ ಮೇಲೆ ಸೆಟ್ ಆಗಿ ತೆರೆಸರಿದಾಗ ಗಂಟೆ ರಾತ್ರೆ ಹನ್ನೆರಡು ದಾಟಿತ್ತು. ಎರಡು ಗಂಟೆವರೆಗೆ ಶೋ ನಡೆಯಿತು, ಉಪ್ಪಿಯ ಪತ್ತೆಯಿಲ್ಲ. ಆದರೆ ಭಾನುವಾರ ರಾತ್ರೆ ಕನ್ನಡಚಿತ್ರರಂಗದವರನ್ನು ವೇದಿಕೆಯ ಮೇಲೆ ಸನ್ಮಾನಿಸುವ ಕಾರ್ಯಕ್ರಮವಿದ್ದಾಗ ಉಪ್ಪಿ ವಿಥ್ ಪ್ರಿಯಾಂಕಾ ಪ್ರತ್ಯಕ್ಷನಾದ! ಸಭಿಕರೆಲ್ಲ ಗದ್ದಲ ಎಬ್ಬಿಸಿದರು, ನಿನ್ನೆ ರಾತ್ರೆ ಎಲ್ಲಿದ್ದೆ ಎಂದು ಕೂಗತೊಡಗಿದರು. ಕೊನೆಗೂ ಉಪ್ಪಿ ಅವರನ್ನೆಲ್ಲ ಸಮಾಧಾನಪಡಿಸಿ "ದಯವಿಟ್ಟು ಕ್ಷಮಿಸಿ. ನಿನ್ನೆ ರಾತ್ರೆ ಹೊಟೆಲ್ ರೂಮ್ನಲ್ಲಿ ನಾವು ರೆಡಿಯಾಗ್ತಾ ಇದ್ದೆವು. ಪ್ರಿಯಾಂಕಾನೇ ನನ್ನ ಮೇಕಪ್ ಸಹ ಮಾಡಿದ್ದಳು. ಯಾರೋ ಹೇಳಿದರು ಪ್ರೊಗ್ರಾಂ ನಾಳೆಗೆ ಪೋಸ್ಟ್‌ಪೋನ್ ಆಗಿದೆ ಅಂತ. ಇನ್ನು ಮೇಕಪ್ ಮಾಡ್ಕೊಂಡು ಸಭೆಗೆ ಹೋದರೆ ಚೆನ್ನಾಗಿರಲ್ಲ ಅಂತ ಬರಲಿಲ್ಲ..." ಎಂದು ಕಾರಣ ತಿಳಿಸಿದರು. ಆದದ್ದಿಷ್ಟೇ. ರಾತ್ರೆ 9 ಗಂಟೆಗೆಂದು ನಿಗದಿಯಾಗಿದ್ದ ಕಾರ್ಯಕ್ರಮ ಹನ್ನೊಂದರವೆರೆಗೂ ಶುರುವಾಗದಿದ್ದಾಗ ಕೆಲವರೆಲ್ಲ ತಂತಮ್ಮ ಹೊಟೆಲ್‌ಗಳಿಗೆ ವಾಪಸಾದರು, ಮಧ್ಯರಾತ್ರೆಯ ನಂತರ ಕಾರ್ಯಕ್ರಮ ಶುರುವಾಗುತ್ತದೆಂದು ತಮಾಷೆಯಿಂದ (ಮತ್ತು ಸ್ವಲ್ಪ ಬೇಸರದಿಂದಲೂ) ಮ್ಯೂಸಿಕಲ್ ನೈಟ್ ನಾಳೆಗೆ ಪೋಸ್ಟ್‌ಪೋನ್ ಆಗಿದೆಯೆಂದು ಸುದ್ದಿ ಎಬ್ಬಿಸಿದ್ದರು. ಕೊನೆಗೂ ಭಾನುವಾರ ಉಪ್ಪಿ ವೇದಿಕೆಯನ್ನೇರಿ ಕ್ಷಮೆ ಕೇಳಿದ ಮೇಲೆ ತೃಪ್ತರಾದ ಅಭಿಮಾನಿಗಳು, ಉಪ್ಪಿ ಒಂದೆರಡು ಡಯಲಾಗ್ಸ್ ಉದುರಿಸಿ ಒಂದು ಹಾಡನ್ನೂ ಹಾಡಿದ ಮೇಲೆ ಎಲ್ಲರ ಸಿಟ್ಟು ಸೆಡವುಗಳೂ ಮಾಯವಾದುವು.

* ಪಂಚೆ-ಪೇಟ ಧರಿಸಿದ ರಮೇಶ್ : ಅಮೆರಿಕನ್ನಡಿಗರ ಫೇವರಿಟ್ ಕನ್ನಡ ಹೀರೊ ಯಾರೆಂದರೆ ಅದು ನಿಸ್ಸಂಶಯವಾಗಿ ರಮೇಶ್ ಅರವಿಂದ್. ಈತ ಚಿತ್ರಗಳಲ್ಲಷ್ಟೇ ಅಲ್ಲ, ನಿಜಜೀವನದಲ್ಲೂ ಸಭ್ಯ ಸುಸಂಸ್ಕೃತ ಮನುಷ್ಯ. "ಪಕ್ಕದ್ಮನೆ ಹುಡುಗ" ಆಪ್ತತೆ ಆತ್ಮೀಯತೆ ಈತನನ್ನು ನೋಡಿದವರಿಗೆ ಭೇಟಿಯಾಗಿ ಮಾತಾಡಿಸಿದವರಿಗೆ ದಕ್ಕುವ ಅನುಭವ. ಅಕ್ಕ ಸಮ್ಮೇಳನದಲ್ಲೂ, ಬಂದದಿನ ಶುಕ್ರವಾರ ರಮೇಶ್ ಜೀನ್ಸ್ ಟೀಶರ್ಟ್‌‍ನಲ್ಲಿ ಕಾಣಿಸಿಕೊಂಡರೂ ಅಮೇಲೆ ಎರಡೂ ದಿನ ಠಾಕುಠೀಕಾಗಿ ಪಂಚೆಯುಟ್ಟು ಕ್ರೀಮ್ ಕಲರ್ ಶರಟು ಮತ್ತು ತಲೆಗೆ ಮೈಸೂರು ಪೇಟ. ಅಕ್ಕ ಸಮ್ಮೇಳನವನ್ನು ಜಾತ್ರೆ ಎಂದವರಿದ್ದಾರೆ, ಮದುವೆ ಸಮಾರಂಭ ಎಂದವರೂ ಇದ್ದಾರೆ, ಹಾಗಿದ್ದರೆ ಮದುಮಗ ಬೇರಾರೂ ಅಲ್ಲ ನಮ್ಮೆಲ್ಲರ ನೆಚ್ಚಿನ ರಮೇಶ್ ಅರವಿಂದ್!

Swamy Sukhabodhananda* ಅಧ್ಯಾತ್ಮ ಸಿಂಚನ : ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಮುಖ್ಯವೇದಿಕೆಯಲ್ಲಿ ಸ್ವಾಮಿ ಸುಖಬೋಧಾನಂದರ ಆಧ್ಯಾತ್ಮ ಉಪದೇಶ, ಅದಾದ ಮೇಲೆ ಮತ್ತೂರು ಕೃಷ್ನಮೂರ್ತಿಯವರಿಂದ ಸಂದೇಶ. ತಲಾ ಹದಿನೈದು ನಿಮಿಷಗಳ ಕಾರ್ಯಕ್ರಮ, ಅವೆರಡೂ ಹೇಗಿದ್ದವೆಂದರೆ ಅಥವಾ ಹೇಗಾದವೆಂದರೆ, ಮಿಕ್ಕೆಲ್ಲ ಪ್ರದರ್ಶನಗಳನ್ನು ನೋಡಿ-ಕೇಳಿ ಅಜೀರ್ಣವಾಗುವಂತಿದ್ದವರಿಗೆ ರುಚಿರುಚಿಯಾದ ಕಾನ್ಸಂಟ್ರೇಟೆಡ್ ಕಷಾಯ ಕುಡಿದು ದೇಹ-ಮನಸ್ಸಿಗೆ ಹೊಸ ಲವಲವಿಕೆ ತಂದುಕೊಡುವಂತೆ.

* ಮೈಸೂರು ಚರಿತ್ರೆ ಬರೆದ ಪುಟ್ಟ ಬಾಲಕ : ಭಾನುವಾರ ಬೆಳಿಗ್ಗೆ ಮುಖ್ಯವೇದಿಕೆಯಲ್ಲಿ ಪುಸ್ತಕ/ ಸಿಡಿ ಬಿಡುಗಡೆ ಸಮಾರಂಭವಿತ್ತು. ಸಾಹಿತಿಗಳಾದ ಬೈರಪ್ಪ, ಕಂಬಾರ, ಕುಂ..ವೀ, ಕಾಯ್ಕಿಣಿ ಮತ್ತಿತರರಿಂದ ಸುಮಾರು ಹತ್ತು-ಹದಿನೈದು ವಿವಿಧ ಪುಸ್ತಕಗಳ ಮತ್ತು ಧನಿಸಂಪುಟಗಳ ಬಿಡುಗಡೆ. ಗಮನ ಸೆಳೆದ ಒಂದು ಪುಸ್ತಕವೆಂದರೆ 'Splendours of Royal Mysore' ಎಂಬ ಶೀರ್ಷಿಕೆಯ ಪುಸ್ತಕ. ವಿಕ್ರಮ್ ಸಂಪತ್ ಎಂಬ "ಬಾಲಕ" ಬರೆದಿರುವ ಈ ನಾನೂರು ಪುಟಗಳ ಇಂಗ್ಲಿಷ್ ಹೊತ್ತಗೆಯನ್ನು ಬಿಡುಗಡೆ ಮಾಡಿದದರು ಎಸ್.ಎಲ್ ಬೈರಪ್ಪ. ಪುಸ್ತಕದ ಒಂಚೂರು ಹಿನ್ನೆಲೆ. Sword of Tippu Sultan ಟಿವಿ ಧಾರಾವಾಹಿ ಬರುತ್ತಿದ್ದಾಗ ಆಗಿನ್ನೂ ಹನ್ನೊಂದು ವರ್ಷದ ಬಾಲಕನಾಗಿದ್ದ ವಿಕ್ರಂ, ಆ ಧಾರಾವಾಹಿಯಲ್ಲಿ ಮೈಸೂರು ಅರಸರನ್ನು ಬರೀ ಜೋಕರ್‌ಗಳಂತೆ ಚಿತ್ರಿಸಿದ್ದನ್ನು ಕಂಡು ಬೇಸರಗೊಂಡು ಪ್ರಭಾವಿತನಾಗಿ, ಮೈಸೂರು ಒಡೆಯರ ನಿಜಚರಿತ್ರೆಯನ್ನು ಕರಾರುವಾಕ್ಕಾಗಿ ಪ್ರಪಂಚಕ್ಕೆಲ್ಲ ತಿಳಿಸಬೇಕೆಂಬ ಪಣತೊಟ್ಟು ಅವಿರತ ಶ್ರಮದಿಂದ ಮಾಹಿತಿಯನ್ನೆಲ್ಲ ಒಟ್ಟುಹಾಕಿ ಇದೀಗ ಪುಸ್ತಕ ಬರೆದು ಪ್ರಕಟಿಸಿದ್ದಾನೆ! ಬೆಂಗಳೂರಿನ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ವಿಕ್ರಂ (ಈಗ ವಯಸ್ಸು 28) ತನ್ನೂರು ಮೈಸೂರಿನ ಮೇಲಿನ ತುಂಬು ಅಭಿಮಾನದಿಂದ ಈ ಅದ್ಭುತ ಗ್ರಂಥವನ್ನು ಬರೆದಿದ್ದು, ವಿಶ್ವಕನ್ನಡ ಸಮ್ಮೇಳನದಲ್ಲಿ ಅದಕ್ಕೆ none other than ಭೈರಪ್ಪನವರಿಂದ ಬಿಡುಗಡೆಯ ಯೋಗ!

* ಕರ್ನಾಟಕದ ಹಬ್ಬದಲ್ಲಿ ಮಧ್ಯಪ್ರದೇಶಕ್ಕೆ ಸಕಲ ಮನ್ನಣೆ : ಈಸಲದ ಸಮ್ಮೇಳನದಲ್ಲಿ ಊಟ ತಿಂಡಿ ವಿಷಯದಲ್ಲಿ ಗೊಣಗುವುದಕ್ಕೆ ಕಾರಣ ಹುಡುಕಿದರೂ ಸಿಗಲಿಕ್ಕಿಲ್ಲ ಎನ್ನುವಷ್ಟು "ಸುವ್ಯವಸ್ಥಿತ". ಭಾನುವಾರದ ಮೆನು- ಬೆಳಿಗ್ಗೆ ತಿಂಡಿಗೆ ಇಡ್ಲಿ-ವಡಾ, ಮಧ್ಯಾಹ್ನದೂಟಕ್ಕೆ ಚಪಾತಿ-ಸೊಪ್ಪಿನಪಲ್ಯ, ಅನ್ನ-ಸಾರು, ಮಜ್ಜಿಗೆಹುಳಿ, ವಾಂಗಿಭಾತ್, ಬಾದೂಷಾ-ಬರ್ಫಿ, ರಾತ್ರೆಯೂಟಕ್ಕೆ ಪಲಾವ್, ಮೊಸರುಬಜ್ಜಿ, ಜಾಮೂನು ಇತ್ಯಾದೀತ್ಯಾದಿಯೊಂದಿಗೆ ಉದ್ದಿನಹಪ್ಪಳ ಸಹ! ಸಂಜೆ ಕಾಫಿಹೊತ್ತಿಗೆ munchಇಸಲಿಕ್ಕೆ ತೇಂಗೊಳಲು! ಅಂತೂ ಕರ್ನಾಟಕ ಹಬ್ಬದಲ್ಲಿ ಎಲ್ಲರ ಮಧ್ಯಪ್ರದೇಶ ಮಹಾ ಖುಶ್!

Jayanth Kaikini* ಅನಿಸುತಿದೆ ಯಾಕೋ ಇಂದು....: ಜಯಂತ್ ಕಾಯ್ಕಿಣಿಯನ್ನು ಕಂಡು ಕೈಕುಲುಕಿ "ನಿಮ್ಮ ಮಳೆ ಹಾಡು ನನಗೆ ತುಂಬ ಇಷ್ಟ ನನ್ನ ಮೊಮ್ಮಗಳೂ ಹಾಡ್ತಾಳೆ..." ಎಂದು ಅಜ್ಜಿಯಂದಿರು ಹೇಳಿದರೆ ಹದಿಹರೆಯದವರದೂ ಅದೇ ಡಯಲಾಗ್ "ನಿಮ್ಮಮಳೆ ಹಾಡು ನನಗೆ ತುಂಬ ಇಷ್ಟ. ನಮ್ಮನೇಲಿ ನಮ್ಮ ಅಜ್ಜಿ ಸಮೇತ ಅದನ್ನೇ ಗುನುಗುತ್ತಿರ್ತಾಳೆ..."! ಭಾನುವಾರ ಬೆಳಗ್ಗೆ ಮುಖ್ಯವೇದಿಕೆಯಲ್ಲಿ "ಸಾಹಿತಿಗಳ ಸಂದೇಶ" ಕಾರ್ಯಕ್ರಮದಲ್ಲಿ ಬಹಳ ಚಂದವಾಗಿ ಮಾತಾಡಿದ ಜಯಂತಕಾಯ್ಕಿಣಿ ಮಾತುಮುಗಿಸಿದ್ದು "ಅನಿಸುತಿದೆ ಯಾಕೋ ಇಂದು ನೀವೆಲ್ಲ ನನ್ನವರೆಂದೂ..." ಎಂದು ಇಡೀ ಸಭೆಗೆ ಮನಃಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತ.

* ಕೊನೆಗೂ ಅನುರಣಿಸಿದ ಚಂಡೆ ಮದ್ದಲೆ : ಭಾರತದಿಂದ ಬಂದಿರುವ ಎಸ್.ಎನ್.ಪಂಜಾಜೆ ಬಳಗದ ಯಕ್ಷಗಾನ ತಂಡದ "ಚಂಡೆ" ವಾದ್ಯ ಲಾಸ್ಟ್ ಇನ್ ಲಂಡನ್‍ ಆದದ್ದು ಕೊನೆಗೂ ಶನಿವಾರ ಸಂಜೆಗೆ ಶಿಕಾಗೊ ಸಮ್ಮೇಳನ ಸ್ಥಳವನ್ನು ತಲುಪಿತು. ಭಾನುವಾರ ಮಧ್ಯಾಹ್ನ ಒಂದರ ಬೆನ್ನಿಗೆ ಒಂದರಂತೆ ಸಮಾಂತರ ವೇದಿಕೆಯಲ್ಲಿ ಜಾಂಬವತಿ ಕಲ್ಯಾಣ ಮತ್ತು ಮುಖ್ಯವೇದಿಕೆಯಲ್ಲಿ ನರಕಾಸುರ ವಧೆ ಪ್ರಸಂಗಗಳು ಅದ್ಭುತವಾಗಿ ಪ್ರದರ್ಶನಗೊಂಡವು. ಈ ತಂಡದ ಅಮೆರಿಕ ಪ್ರವಾಸವನ್ನು ಭಾರತದ ಕೇಂದ್ರ ಸರಕಾರ ಪ್ರಾಯೋಜಿಸಿತ್ತು. ಕರ್ನಾಟಕ ಸರಕಾರದ ಪ್ರಾಯೋಜಕತ್ವದಲ್ಲಿ ಬಂದಿದ್ದ ಕುಂಬ್ಳೆ ಸುಂದರ ರಾವ್ ಮತ್ತು ಬಾಲಕಿ ಅರ್ಪಿತಾ ಹೆಗಡೆಯವರ ಇನ್ನೊಂದು ಯಕ್ಷಗಾನ ಪ್ರದರ್ಶನವೂ ತುಂಬ ಚೆನ್ನಾಗಿದ್ದು ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.

ಪೂರಕ ಓದಿಗೆ

ಭಿನ್ನಮತ ಹತ್ತಿಕ್ಕಲು ಶಾಸಕರ ಮೂಗಿಗೆ ಶಿಕಾಗೊ ತುಪ್ಪ
ಸಂಭ್ರಮದ ರಥೋತ್ಸವ, ತವರುಮನೆ ಊಟ
ಸಂತಸ, ಆಶ್ಚರ್ಯ, ಭಾವ ಪುಳಕಗಳ ಸಮ್ಮಿಳನ

ಸಮ್ಮೇಳನದ ಗ್ಯಾಲರಿ
ಸಮ್ಮೇಳನ ಉದ್ಘಾಟನೆಗೊಂಡ ಸಂತಸದ ಘಳಿಗೆ
ಮೊದಲ ದಿನಕ್ಕೇ ರಂಗೆದ್ದು ಹೋದ ಶಿಕಾಗೊ
ಎರಡನೇ ದಿನದಂದು ಸಂಭ್ರಮದ ರಥಯಾತ್ರೆ
ಎರಡನೇ ದಿನದ ಮತ್ತಷ್ಟು ಚಿತ್ರಗಳು
ಮೂರನೇ ದಿನ ಕನ್ನಡಿಗರ ಉತ್ಸಾಹ ನೂರ್ಮಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X