ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ

By Staff
|
Google Oneindia Kannada News

Rosemonte Convention Centerಬೆಂಗಳೂರು, ಆ. 29 : ಸಮಯ ಪ್ರಜ್ಞೆ, ಸಾಮಾಜಿಕ ಕಳಕಳಿ ಮತ್ತು ನೈತಿಕತೆಯ ಕಟ್ಟಳೆಗಳನ್ನು ಗಾಳಿಗೆ ತೂರಿ ಕರ್ನಾಟಕದ ಜನಪ್ರತಿಧಿಗಳು ಇದೀಗ ಕೈಗೊಂಡಿರುವ ಅಮೆರಿಕಾ ಪ್ರವಾಸ ವಿವಾದದ ಹಿನ್ನೆಲೆಯಲ್ಲಿ 5ನೇ ಅಕ್ಕ ವಿಶ್ವ ಕನ್ನಡ ಸಮ್ಮಳನದ ತೆರೆ ಶಿಕಾಗೋ ನಗರದಲ್ಲಿ ನಿಧಾನವಾಗಿ ಸರಿದುಕೊಳ್ಳುತ್ತಿದೆ. ಭಾರತೀಯ ಕಾಲಮಾನ ಆ.29ರ ರಾತ್ರಿ 9 ಗಂಟೆಗೆ ಸರಿಯಾಗಿ ಅಕ್ಕ ಸಮ್ಮೇಳನದ ಶಿಕಾಗೋ ಕಹಳೆ ಮೊಳಗಲಿದೆ. ಕಳೆದ ಹತ್ತು ತಿಂಗಳಿಂದ ನೂರಾರು ಸ್ವಯಂಸೇವಕರು ನಡೆಸಿದ ತಾಲೀಮು ಇವತ್ತು ರಂಗಮಂಚವೇರಲಿದೆ.

ಸರಿಸುಮಾರು 2800 ನೊಂದಾಯಿತ ಪ್ರತಿನಿಧಿಗಳು, ನಾಲ್ಕು ಲಾರಿಗೆ ತುಂಬುವಷ್ಟು ಕರ್ನಾಟಕದ ಶಾಸಕರು, ಮಂತ್ರಿಮಹೋದಯರು, ಪತ್ರಕರ್ತರು, ಅಧಿಕಾರಿಗಳು ಹಾಗೂ ಆಯ್ದ ಸಾಂಸ್ಕೃತಿಕ ರಾಯಭಾರಿಗಳ ಸಮ್ಮುಖದಲ್ಲಿ ನಡೆಯಲಿರುವ 3 ದಿವಸಗಳ ಕಲಾಪಗಳ ಪಟ್ಟಿಯಲ್ಲಿ ನೂರಾಯೆಂಟು ಕಾರ್ಯಕ್ರಮಗಳು ಮಿಳಿತವಾಗಿದ್ದು ಸಮ್ಮೇಳನವನ್ನು ನಿರ್ವಿಘ್ನವಾಗಿ ನೆರವೇರಿಸಲು ವಿದ್ಯಾರಣ್ಯ ಕನ್ನಡ ಸಂಘದ ಸದಸ್ಯರು, ಅಕ್ಕ ಪದಾಧಿಕಾರಿಗಳು ಶತಪ್ರಯತ್ನ ಮಾಡುತ್ತಿದ್ದಾರೆ.

ಸ್ವತಃ ಆತಿಥೇಯ ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರ ಗೊಣಗಾಟದಿಂದಲೇ ಆರಂಭವಾದ ಸಮ್ಮೇಳನ ವ್ಯವಸ್ಥೆಗಳು ಇದೀಗ ಅಂತಿಮ ಹಂತ ತಲುಪಿದ್ದು, ಶಾಸಕರ ಪ್ರವಾಸ ವಿವಾದಗಳು ಸಮ್ಮೇಳನದ ಆಂತರಿಕ ಗೊಂದಲದ ಬ್ರೆಡ್ಡಿಗೆ ಬೆಣ್ಣೆ ಸವರಿವೆ. ನೊಂದಾಯಿತ ಪ್ರತಿನಿಧಿಗಳಿಗೆ ಮೂರು ದಿವಸ ಸಮರ್ಪಕ ಆತಿಥ್ಯ, ಮನರಂಜನೆ ಒದಗಿಸುವ ಹೊಣೆಗಾರಿಕೆಯ ನಡುವೆ ಒಲ್ಲದ ಅತಿಥಿಗಳಿಗೆ ರತ್ನಗಂಬಳಿ ಹಾಸಬೇಕಾಗಿರುವ ಮುಜಗರ ಸಮ್ಮೇಳನದ ನೊಂದಾವಣೆ ಮತ್ತು ಸತ್ಕಾರ ಸಮಿತಿಯ ಹೆಗಲೇರಿವೆ.

ಕಂಡಕಂಡ ಶಾಸಕರಿಗೆಲ್ಲ ಆಹ್ವಾನ ನೀಡುವ ಉತ್ಸಾಹವನ್ನು ಸಮ್ಮೇಳನದ ಕಾರ್ಯಕರ್ತರು ಪ್ರದರ್ಶಿಸಿದ್ದರಿಂದಲೇ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂಬ ಮಾತುಗಳು ಶಾಸಕರ ಭವನದ ಮೊಗಸಾಲೆಗಳಿಂದ ಕೇಳಿ ಬರುತ್ತಿವೆ. ಆಹ್ವಾನ ಪತ್ರಿಕೆಯನ್ನು ನೀಡುವುದರಲ್ಲಿ ಕಂಡುಬಂದ ಲೋಪಗಳು ಹಾಗೂ ಸಮ್ಮೇಳನಕ್ಕೆ ಆಗಮಿಸುವ ಗಣ್ಯರನ್ನು ಯಾವರೀತಿ ನೋಡಿಕೊಳ್ಳಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸದ ಕಾರಣದಿಂದಾಗಿಯೇ ಕೋಲಾಹಲ ಉಂಟಾಯಿತು ಎಂಬ ಮಾತುಗಳು ದಟ್ಟವಾಗಿವೆ. "ಎಲ್ಲರೂ ಶಾಸಕರನ್ನು ನಿಂದಿಸುತ್ತಿದ್ದಾರೆ. ಆದರೆ ನಾವೇನೂ ಅತ್ತೂಕರೆದು ಆಹ್ವಾನ ಪತ್ರಿಕೆಯನ್ನು ತರಿಸಿಕೊಳ್ಳಲಿಲ್ಲ. ಅಕ್ಕ ಸಂಸ್ಥೆಯ ಲೋಪದಿಂದಾಗಿ ನಮಗೆಲ್ಲ ಕೆಟ್ಟ ಹೆಸರು ಬಂತು" ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ ಶಾಸಕರೊಬ್ಬರು ನಮ್ಮ ಪ್ರತಿನಿಧಿಗೆ ತಿಳಿಸಿದ್ದಾರೆ.

ಬೆಂಗಳೂರಿನಿಂದ ಹಾರುವ ಬ್ರಿಟಿಷ್ ಏರ್‌ವೇಸ್‌ಗೆ ಲಗೇಜ್ ಪ್ಯಾಕ್ ಮಾಡಿ ಕ್ಯಾನ್ಸಲ್ ಮಾಡಿದವರೂ ಇದ್ದಾರೆ. ಕೊನೆಗಳಿಗೆಯಲ್ಲಿ ಅಮೆರಿಕಾ ಪ್ರವಾಸ ರದ್ದುಗೊಳಿಸಿದವರ ಪಟ್ಟಿಯಲ್ಲಿ 'ಕ್ಷಣಹೊತ್ತು ಅಣಿಮುತ್ತು' ಅಂಕಣಕಾರ ಷಡಕ್ಷರಿ, ಬಸಂತ್ ಟೈಲ್ಸ್‌ನ ಮಾಲಿಕ ಬಸಂತ್ ಕುಮಾರ್ ಪಾಟೀಲ್, ಕೆಲವು ಮಂದಿ ಕಾಂಗ್ರೆಸ್ ಶಾಸಕರ ಹೆಸರುಗಳಿವೆ. ಅಮೆರಿಕಾ ಕನ್ನಡ ಹಬ್ಬವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನಿಂದ ಕೆಲವರು ವಿಮಾನ ಹತ್ತುತ್ತಿದ್ದರೆ, ಆಹ್ವಾನವಿದ್ದರೂ ಸಹ ಖಾಸಗಿ ಉದ್ದೇಶದಿಂದ ಶಿಕಾಗೋ ಪ್ರವಾಸದಲ್ಲಿದ್ದವರು ಸಮ್ಮೇಳನವನ್ನು ಲೆಕ್ಕಿಸದೆ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. "ಯಾಕೋ ಸ್ವಾರಸ್ಯ ಕಾಣುತ್ತಿಲ್ಲ, ಈ ಮಧ್ಯೆ ಶಾಸಕರ ಹಾವಳಿಯಲ್ಲಿ ಸಮ್ಮೇಳನವೂ ಬೇಡ ಗಿಮ್ಮೇಳನವೂ ಬೇಡ ಎನಿಸಿ ಬೆಂಗಳೂರಿಗೆ ವಾಪಸ್ಸು ಬಂದೆ" ಎಂದು ಆಹ್ವಾನ ನಿರಾಕರಿಸಿದ ಖ್ಯಾತ ಜ್ಯೋತಿಷಿಯೊಬ್ಬರು ತಿಳಿಸಿದರು.

ಈ ಎಲ್ಲ ಬಗೆಯ ಅನಪೇಕ್ಷಿತ ಗೊಂದಲಗಳನ್ನು ಅಕ್ಕ ನಿವಾರಿಸಿಕೊಳ್ಳಬಹುದಿತ್ತು. ಆದರೆ ಮೇರು ಸಂಸ್ಥೆಯ ಸಾರ್ವಜನಿಕ ಸಂಪರ್ಕ ತುಂಬಾ 'ಪೂರ್' ಎಂಬ ಪ್ರತಿಕ್ರಿಯೆಗಳು ವಿಶೇಷವಾಗಿ ಮಾಧ್ಯಮ ಕಚೇರಿಗಳಲ್ಲಿ ಸುಳಿದಾಡುತ್ತಿವೆ. ಬರೆಯುವ ಪತ್ರಕರ್ತರಿಗೆ ಅಧಿಕೃತ ಮಾಹಿತಿ ಕೊಡುವುದಕ್ಕೆ ಕರ್ನಾಟಕದಲ್ಲಿ ಯಾರೂ ಗತಿಯಿಲ್ಲದಿರುವುದು ವಿಪರ್ಯಾಸವಾಗಿದೆ. ಅಕ್ಕ ಇಂಡಿಯಾ ಕೋಆರ್ಡಿನೇಟರ್ ಆಗಿದ್ದ ಎಂ. ಕೃಷ್ಣಮೂರ್ತಿ ಅವರು ಕೆಲಕಾಲ ಬೆಂಗಳೂರಿನಲ್ಲಿ ಸಾರ್ವಜನಿಕ ಸಂಪರ್ಕ ಕೆಲಸ ಮಾಡಿ ಖಾಸಗಿ ಕೆಲಸದ ನಿಮಿತ್ತ ಅಮೆರಿಕಾಗೆ ಹೋಗಿ ಒಂದು ತಿಂಗಳಾಗಿದೆ. ಇನ್ನೊಬ್ಬ ಇಂಡಿಯಾ ಕೋಆರ್ಡಿನೇಟರ್ ರಾಘವೇಂದ್ರ ರಾಜು ಅವರನ್ನು ಸಂಪರ್ಕಿಸಿದ ವರದಿಗಾರರಿಗೆ "ನೀವೇ ಹೇಳಿ ಬ್ರದರ್" ಎಂಬ ಉತ್ತರ ಸಿಕ್ಕಿದೆ. ಇನ್ನೂ ಒಬ್ಬ ಕೋಆರ್ಡಿನೇಟರ್ ಆಗಿರುವ ಜಗದೀಶ್ ಅವರಿಗೆ ಬೂತ್ ಬುಕ್ಕಿಂಗ್ ಮತ್ತು ಚೆಕ್ ಕಲೆಕ್ಷನ್ ಮಾಡುವುದಕ್ಕೆ ಸಮಯ ಸಾಕಾಗಲಿಲ್ಲ.

ಆರೇಳು ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡುವ ಸಮ್ಮೇಳನದವರು ಸಮ್ಮೇಳನದ ಕರ್ನಾಟಕ ಕಾರ್ಯಭಾರವನ್ನು ನಿರ್ವಹಿಸಲು ಮೂರು ತಿಂಗಳ ಸಮಯಕ್ಕಾಗಿ ಬೆಂಗಳೂರಿನಲ್ಲಿ ಒಂದು "ಸಮ್ಮೇಳನ ಕಚೇರಿ" ತೆರೆದಿದ್ದರೆ ಅನೇಕ ಗೊಂದಲಗಳನ್ನು ನಿವಾರಿಸಬಹುದಿತ್ತು. ಮುಖ್ಯವಾಗಿ ಸಮ್ಮೇಳನಾಕಾಂಕ್ಷಿಗಳಿಗೆ, ಅಧಿಕಾರಿಗಳಿಗೆ, ವೀಸಾ ಬೇಕಾದವರಿಗೆ, ಹಾಗೂ ಮಾಧ್ಯಮದವರಿಗೆ ಸುಲಭವಾಗಿ ಎಟಕುವ ಮಾಹಿತಿ ಕೇಂದ್ರದ ಅಭಾವ ಪ್ರತೀಬಾರಿಯಂತೆ ಈ ಸಮ್ಮೇಳನದಲ್ಲೂ ಕಂಡುಬಂತು. ಅಕ್ಕದವರಿಗೆ ಇಮೇಲ್ ಕಳಿಸಿದರೆ ಅನೇಕವೇಳೆ ಉತ್ತರಿಸುವವರೂ ಇಲ್ಲದಂತಾದುದು ಈ ಬಾರಿಯ ದುರ್ದೈವ. ಶಿಕಾಗೋದಲ್ಲಿ ನೆಲೆಸಿರುವ ಕನ್ನಡಿಗರಿಗೂ ಇಂಥ ಅನುಭವವಾಗಿರುವ ಅನೇಕ ನಿದರ್ಶನಗಳುಂಟು. "ಫ್ರೀ ಇಮೇಲ್ ಕಳಿಸುವುದಕ್ಕೂ ನಮ್ಮ ನಾಯಕರುಗಳಿಗೆ ಕಷ್ಟವಾಗಿದೆ" ಎಂದು ಶಿಕಾಗೋದ ಕನ್ನಡ ಪ್ರೇಮಿಯೊಬ್ಬರು ಪ್ರಲಾಪಿಸಿದ್ದಾರೆ.

ಹಣಕಾಸು ನಿರ್ವಹಣೆಯಲ್ಲೂ ಶಿಕಾಗೋ ಸಮ್ಮೇಳನದ ಮ್ಯಾನೇಜರುಗಳು ಕೊಸರಾಡುತ್ತಾರೆ. ಅಂದರೆ, ತೀರ ಅಗತ್ಯವಾಗಿ ಖರ್ಚು ಮಾಡುವ ಬಾಬತ್ತುಗಳಲ್ಲೂ ಜಿಪುಣತನ ತೋರಿಸುತ್ತಾರೆ ಎಂಬ ಆಪಾದನೆಗಳಿವೆ. ಸಮ್ಮೇಳನಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅನೇಕ ಕಮಿಟಿಗಳ ಸದಸ್ಯರುಗಳು ಅನೇಕ ಸಂದರ್ಭಗಳಲ್ಲಿ, ಪಾಪ ತಮ್ಮ ಹಣವನ್ನೇ ಉಪಯೋಗಿಸಿ ಸಾಮಾನು ಸರಂಜಾಮುಗಳನ್ನು ಹೊಂದಿಸಿಕೊಂಡ ಸಣ್ಣ ಪುಟ್ಟ ಉದಾಹರಣೆಗಳಿವೆ.

ಹಾಗೆ ನೋಡಿದರೆ ಸಂಪನ್ಮೂಲಗಳಿಗೆ ಕೊರತೆ ಏನಿಲ್ಲ. ನೊಂದಾವಣೆಯಿಂದ ಬರುವ ಹಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೂ ಸಹ, ಸ್ಮರಣ ಸಂಚಿಕೆಯ ಜಾಹಿರಾತು, ಮಾರಾಟ ಮಳಿಗೆಗಳು, ಉತ್ಪನ್ನ ಪ್ರದರ್ಶನ ಬೂತುಗಳಿಂದ ಒದಗುವ ಆದಾಯಕ್ಕೇನೂ ಕೊರತೆ ಇಲ್ಲ. ಪ್ರತೀ ಸಮ್ಮೇಳನಕ್ಕೂ ತಪ್ಪದೆ ಡೊನೋಷನ್ ಕೊಡುವ ಮಹಾದಾನಿಗಳು ಈ ಬಾರಿ ಹಿಂದೆ ಬಿದ್ದಿಲ್ಲ. ಕರ್ನಾಟಕದ ಒಬ್ಬ ಲೋಕಸಭಾಸದಸ್ಯರು ಸ್ವಯಂ ಪ್ರೇರಣೆಯಿಂದ ತಮ್ಮ ಕಿಸೆಯಿಂದಲೇ 20 ಲಕ್ಷ ರೂಪಾಯಿ ಕೊಡುಗೆ ನೀಡಿದ್ದಾರೆ. ಸ್ಥಿತಿ ಹೀಗಿರುವಾಗ ಪುಕ್ಕಟೆ ಇಮೇಲ್ ಉತ್ತರ ಬರೆಯುವುದಕ್ಕೆ ಹಿಂದೆ ಮುಂದೆ ನೋಡುವ ಪದಾಧಿಕಾರಿಗಳ ವರ್ತನೆಯಿಂದ ಸಾಕಷ್ಟು ಮಂದಿಗೆ ಬೇಸರವಾಗಿರುವ ಸಂಗತಿ ಸರ್ವವ್ಯಾಪಿಯಾಗಿದೆ.

ಇದೇ ವೇಳೆ, ಉತ್ತರ ಅಮೆರಿಕಾದ ನಾನಾ ರಾಜ್ಯಗಳಿಂದ ಪ್ರತಿನಿಧಿಗಳು ಗುರುವಾರ ರಾತ್ರಿಯಿಂದಲೇ ಶಿಕಾಗೋಗೆ ಬಂದಿಳಿಯುತ್ತಿದ್ದಾರೆ. ದಿನಬಳಕೆಯ ಬಟ್ಟೆ ಬರೆಗಳ ಬ್ಯಾಗ್ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಕಲಾವಿದ ಪ್ರತಿನಿಧಿಗಳ ತಂಡದವರು ಕಾಸ್ಟ್ಯೂಮ್ಸ್ ಮತ್ತು ವಾದ್ಯಗಳ ಸಮೇತ ಒಹಾರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ಬರುವ ದೃಶ್ಯ ಸಾಮಾನ್ಯವಾಗಿದೆ ಎಂದು ಬೆಂಗಳೂರನ್ನು ತಲುಪುತ್ತಿರುವ ವರದಿಗಳು ತಿಳಿಸಿವೆ.

ಪೂರಕ ಓದಿಗೆ:
ಭಾಷಣದ ಭಾಗ-1 :
5 ನೇ'ಅಕ್ಕ' ವಿಶ್ವ ಕನ್ನಡಸಮ್ಮೇಳನದಲ್ಲಿ ಸಿಎಂ ಭಾಷಣ
ಭಾಷಣದ ಭಾಗ-2 : ಅನಿವಾಸಿ ಕನ್ನಡಿಗರೇ, ರಾಜ್ಯದ ಪ್ರಗತಿಗೆ ಕೈಜೋಡಿಸಿ
ಭಾಷಣದ ಭಾಗ-3 : ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು: ಸಿಎಂ
ಗ್ಯಾಲರಿ-1:
5ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆ ಸಂಭ್ರಮ
ಗ್ಯಾಲರಿ-2: ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗಳದಲ್ಲಿ ಗಣ್ಯರಕೂಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X