Upendra: ವಿಜಯ್ ರೀತಿ ಕರ್ನಾಟಕದಲ್ಲಿ ಯಾವ ನಟನಿಗೆ ಸಿಎಂ ಆಗುವ ಸಾಮರ್ಥ್ಯ ಇದೆ? ಶಾಕಿಂಗ್ ಉತ್ತರ ಕೊಟ್ಟ ಉಪೇಂದ್ರ
ದಕ್ಷಿಣ ಭಾರತದ ರಾಜಕೀಯ ರಂಗದಲ್ಲಿ ಈಗ ನಟರ ಅಬ್ಬರ ಜೋರಾಗಿದೆ. ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ತಮ್ಮ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮೂಲಕ ಹೊಸ ಸಂಚಲನ ಮೂಡಿಸಿ ಸಿಎಂ ಪಟ್ಟದತ್ತ ಹೆಜ್ಜೆ ಹಾಕುತ್ತಿದ್ದರೆ, ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಈಗಾಗಲೇ ತಮ್ಮ ರಾಜಕೀಯ ಶಕ್ತಿ ಪ್ರದರ್ಶಿಸಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ, "ಕರ್ನಾಟಕದಲ್ಲೂ ಒಬ್ಬ ಬಿಗ್ ಸ್ಟಾರ್ ರಾಜಕೀಯಕ್ಕೆ ಬಂದು ಬದಲಾವಣೆ ತರಬಾರದೇ?" ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಆ ಸಾಮರ್ಥ್ಯ ಇಲ್ಲಿ ಯಾರಿಗಿದೆ ಎಂದು 'ರಿಯಲ್ ಸ್ಟಾರ್' ಉಪೇಂದ್ರ ಅವರು ನೀಡಿರುವ ಹೇಳಿಕೆ ಭಾರಿ ಕುತೂಹಲ ಕೆರಳಿಸಿದೆ.
ಸ್ಟಾರ್‌ಗಳ ಎಂಟ್ರಿ ಬಗ್ಗೆ ಉಪೇಂದ್ರ ಏನಂತಾರೆ?
ರಾಜಕೀಯ ಬದಲಾವಣೆ ಬಗ್ಗೆ ಮಾತನಾಡಿರುವ ಉಪೇಂದ್ರ, "ತಮಿಳುನಾಡಿನ ವಿಜಯ್ ಅವರಂತೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲೇ ಇಂತಹ ಬದಲಾವಣೆ ಸಾಧ್ಯವಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ಗಾಳಿ ಬೀಸುತ್ತಿದೆ, ಹಾಗೆಯೇ ರಾಜಕೀಯದಲ್ಲೂ ದೊಡ್ಡ ಮಟ್ಟದ ಬದಲಾವಣೆಗಳಾಗುವುದು ಅನಿವಾರ್ಯ" ಎಂದು ಭವಿಷ್ಯ ನುಡಿದಿದ್ದಾರೆ. "ಜನಸಾಮಾನ್ಯರೇ ಸ್ಟಾರ್ ಆಗಬೇಕು" ಎನ್ನುವ ಮೂಲಕ ಯಾವ ಸ್ಟಾರ್ ರಾಜಕೀಯಕ್ಕೆ ಬರಬೇಕು ಎನ್ನುವ ಪ್ರಶ್ನೆಗೆ ಉಪೇಂದ್ರ ಅವರು ತಮ್ಮದೇ ಆದ 'ಪ್ರಜಾಕೀಯ' ಶೈಲಿಯಲ್ಲಿ ಉತ್ತರಿಸಿದ್ದಾರೆ.

ಸ್ಟಾರ್‌ಗಳು ರಾಜಕೀಯಕ್ಕೆ ಬಂದು ಸಿಎಂ ಆಗುವುದು ಒಂದು ಕಡೆಯಾದರೆ, ಜನಸಾಮಾನ್ಯರೇ ಒಬ್ಬೊಬ್ಬರೂ ಸ್ಟಾರ್‌ಗಳಾಗಬೇಕು ಎನ್ನುವುದು ಉಪೇಂದ್ರ ಅವರ ಆಶಯ. ಇಂದು ಹಣವಿದ್ದವರು ಮಾತ್ರ ರಾಜಕೀಯಕ್ಕೆ ಬರಬಹುದು ಎಂಬ ವಾತಾವರಣವಿದೆ. ಆದರೆ, ಉತ್ತಮ ಐಡಿಯಾಲಜಿ ಮತ್ತು ಸಮಾಜವನ್ನು ಬದಲಿಸುವ ವಿಚಾರವಿದ್ದ ಯಾರು ಬೇಕಾದರೂ ರಾಜಕೀಯಕ್ಕೆ ಬರುವಂತಾಗಬೇಕು. ಜನರು ಕೇವಲ ವ್ಯಕ್ತಿ ಅಥವಾ ಪಕ್ಷವನ್ನು ನೋಡಿ ವೋಟ್ ಹಾಕುವ ಬದಲು, ಅಭ್ಯರ್ಥಿಯ ವಿಚಾರ ಮತ್ತು ಕೆಲಸಕ್ಕೆ ಮತ ಹಾಕುವ ಪರಿಸ್ಥಿತಿ ಬರಬೇಕು. ಇದು ನನ್ನ ಕಲ್ಪನೆ ಅಥವಾ ಹುಚ್ಚುತನ ಅಂದುಕೊಳ್ಳಿ, ಆದರೆ ಬದಲಾವಣೆ ಮಾತ್ರ ಖಂಡಿತ ಎನ್ನುವ ಮೂಲಕ ಉಪೇಂದ್ರ ಅವರು ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ವಿಜಯ್ ಜೊತೆ ನಟಿಸಬೇಕಿತ್ತು ಉಪ್ಪಿ
ಇದೇ ಸಂದರ್ಭದಲ್ಲಿ ಉಪೇಂದ್ರ ಅವರು ಒಂದು ಕುತೂಹಲಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ವಿಜಯ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಗಿಲ್ಲಿ'ಯಲ್ಲಿ ಪ್ರಕಾಶ್ ರಾಜ್ ಅವರು ಮಾಡಿದ್ದ ಪಾತ್ರಕ್ಕೆ ಮೊದಲು ಉಪೇಂದ್ರ ಅವರಿಗೆ ಆಫರ್ ಬಂದಿತ್ತಂತೆ. "ಆ ಸಮಯದಲ್ಲಿ ನನಗೆ ಆ ಪಾತ್ರ ಮಾಡುವ ಆಸಕ್ತಿ ಇರಲಿಲ್ಲ, ಹಾಗಾಗಿ ಒಪ್ಪಿಕೊಳ್ಳಲಿಲ್ಲ. ಇಲ್ಲದಿದ್ದರೆ ದಳಪತಿ ವಿಜಯ್ ಜೊತೆ ನಾನು ತೆರೆ ಹಂಚಿಕೊಳ್ಳಬೇಕಿತ್ತು" ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಕರ್ನಾಟಕದ ಪ್ರಮುಖ ಸ್ಟಾರ್ ನಟರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ರಾಜಕೀಯಕ್ಕೆ ಬರಬೇಕೆಂದು ಒತ್ತಾಯಿಸುತ್ತಿರುವ ಈ ಸಮಯದಲ್ಲಿ, ಉಪೇಂದ್ರ ಅವರ ಈ ಮಾತುಗಳು ಎಷ್ಟು ಪ್ರಸ್ತುತ ಎಂಬ ಚರ್ಚೆ ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಜೋರಾಗಿದೆ. ಒಟ್ಟಿನಲ್ಲಿ ದಳಪತಿ ವಿಜಯ್ ಮತ್ತು ಪವನ್ ಕಲ್ಯಾಣ್ ಅವರ ರಾಜಕೀಯ ಯಶಸ್ಸು ಕರ್ನಾಟಕದ ಮೇಲೆಯೂ ಪ್ರಭಾವ ಬೀರುತ್ತಿರುವುದಂತೂ ಸುಳ್ಳಲ್ಲ.













Click it and Unblock the Notifications