ಪೆಟ್ರೋಲ್‌ನಲ್ಲಿ ಎಥನಾಲ್ ಮಿಕ್ಸ್: ಮೈಲೇಜ್ ವಿಷಯದಲ್ಲಿ ನಿತಿನ್ ಗಡ್ಕರಿ ವಿಚಿತ್ರ ವಾದ!
E20: ಭಾರತದಲ್ಲಿ ಪೆಟ್ರೋಲ್‌ನೊಂದಿಗೆ ಎಥನಾಲ್ ಮಿಶ್ರಣ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಾಹನ ಸವಾರರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೌದು ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್‌ನೊಂದಿಗೆ ಶೇ.20ರಷ್ಟು ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ. ಮೊದಲು ಪೆಟ್ರೋಲ್‌ನೊಂದಿಗೆ ಎಥನಾಲ್ ಮಿಶ್ರಣ ಮಾಡುವುದರಿಂದ ಪೆಟ್ರೋಲ್ ಬೆಲೆ ಕಡಿಮೆಯಾಗಲಿದೆ. ಅಲ್ಲದೆ ಮೈಲೇಜ್‌ಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದೇ ಹೇಳಲಾಗಿತ್ತು. ಆದರೆ ಈ ಎರಡೂ ಆಗಿಲ್ಲ ಎಂದು ಭಾರತದ ಹಲವು ವಾಹನ ಸವಾರರು ಆರೋಪಿಸಿದ್ದಾರೆ. ಎಥನಾಲ್‌ನಿಂದ ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಿಚಿತ್ರ ವಾದ ಮಂಡಿಸಿದ್ದಾರೆ.
ಪೆಟ್ರೋಲ್‌ಗೆ ಎಥನಾಲ್ ಮಿಶ್ರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ವಾಹನ ಚಲಾಯಿಸಿದ ದೂರ ಮತ್ತು ಬಳಕೆಯಾದ ಇಂಧನದ ಲೆಕ್ಕವೇ ಅಧಿಕೃತ ಮೈಲೇಜ್ ಅಲ್ಲ ಎಂದು ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. E20 ಪೆಟ್ರೋಲ್‌ನಿಂದಾಗಿ 'ಮೈಲೇಜ್ ಕಡಿಮೆಯಾಗಿದೆ' ಎಂದು ಭಾರತದ ವಾಹನ ಸವಾರರಿಂದ ಹೆಚ್ಚು ದೂರುಗಳು ಕೇಳಿ ಬರುತ್ತಿರುವಾಗಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಚಿತ್ರವಾದ ಪ್ರತಿವಾದವನ್ನು ಮಂಡಿಸಿದ್ದಾರೆ.

ಸಾಮಾನ್ಯ ವಾಹನ ಚಾಲಕರು ಸ್ವಂತವಾಗಿ ವಾಹನದ ಮೈಲೇಜ್ ಅನ್ನು ನಿಖರವಾಗಿ ನಿರ್ಧರಿಸಲು ಅಥವಾ ನೋಡುವುಕ್ಕೆ ಸಾಧ್ಯವಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ಅವರು ABP ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಪೆಟ್ರೋಲ್‌ನೊಂದಿಗೆ ಶೇ.20% ಎಥೆನಾಲ್ ಬೆರೆಸುವುದರಿಂದ ವಾಹನ ಮೈಲೇಜ್ ಕಡಿಮೆ ಆಗುತ್ತಿದೆ ಎಂದು ಭಾರತದ ಹಲವು ವಾಹನ ಸವಾರರು ದೂರುತ್ತಿದ್ದಾರೆ. ಇನ್ನು ಈ ಸಂದರ್ಶನಲ್ಲಿ ಪತ್ರಕರ್ತೆಯು 2023ರಲ್ಲಿ ಖರೀದಿಸಿದ E20 ಕಾರಿನ ಮೈಲೇಜ್ 11 ಕಿಮೀ/ಲೀಟರ್‌ನಿಂದ 7 ಕಿಮೀ/ಲೀಟರ್‌ಗೆ ಇಳಿದಿದೆ ಎಂದಿದ್ದಾರೆ. ಇದಕ್ಕೆ ಸಚಿವ ನಿತಿನ್ ಗಡ್ಕರಿ ಅವರು, "ಈ ಮೈಲೇಜ್ ಅನ್ನು ಹೇಗೆ ಲೆಕ್ಕ ಹಾಕಿದ್ದೀರಿ?" ಎಂದು ಕೇಳಿದ್ದಾರೆ. ಅದಕ್ಕೆ ಪತ್ರಕರ್ತೆಯು, ಎಲ್ಲರೂ ಮಾಡುವಂತೆಯೇ ನಾನೂ ಸಹ ಗಾಡಿಯ ಮೇಲೈಜ್ ಚೆಕ್ ಮಾಡಿದ್ದೇನೆ. ಡ್ಯಾಶ್‌ಬೋರ್ಡ್ ಮೈಲೇಜ್ ಪ್ರದರ್ಶನವನ್ನು ಅವರು ಉಲ್ಲೇಖಿಸಿದ್ದಾರೆ.
ಇದಕ್ಕೆ ನಿತಿನ್ ಗಡ್ಕರಿ ಅವರು, "ನೀವು ಮತ್ತು ನಾನು ಗಾಡಿಯ ಮೈಲೇಜ್ ಪರಿಶೀಲನೆ ಮಾಡುವುದಕ್ಕೆ ಸಾಧ್ಯವಿಲ್ಲ. ಕಂಪನಿಯ ಅಧಿಕೃತ ಡೀಲರ್‌ನ ಯಂತ್ರವನ್ನು ಬಳಸಿಕೊಂಡು ಮಾತ್ರ ಕಾರಿನ ಮೈಲೇಜ್ ಅನ್ನು ಪರಿಶೀಲಿಸಬಹುದು" ಎಂದಿದ್ದಾರೆ.
ಇನ್ನು ಸಚಿವ ನಿತಿನ್ ಗಡ್ಕರಿ, ವಾಹನದ ಮೈಲೇಜ್ ಅನ್ನು ಪ್ರತಿದಿನ ಚಾಲನೆ ಮಾಡಿದ ಅನುಭವದ ಆಧಾರದ ಮೇಲೆ ಅಳೆಯುವುದಕ್ಕೆ ಸಾಧ್ಯವಿಲ್ಲ. ಅಧಿಕೃತ ಪರೀಕ್ಷಾ ಉಪಕರಣಗಳನ್ನು ಬಳಸುವ ಡೀಲರ್‌ಶಿಪ್‌ಗಳಲ್ಲಿ ನಡೆಸುವ ಪರೀಕ್ಷೆಯ ಫಲಿತಾಂಶವೇ ನಿಜವಾದ ಮೈಲೇಜ್ ತಿಳಿಯಲು ಸಾಧ್ಯ ಎಂದಿದ್ದಾರೆ.
ಮೈಲೇಜ್ ಕಡಿಮೆಯಾಗಿದೆ ಎನ್ನುವುದು ಲೆಕ್ಕ ಹಾಕುವ ವಿಧಾನದಲ್ಲಿಯೇ ಸಮಸ್ಯೆ ಅಥವಾ ಗ್ರಾಹಕರು ನಿಜವಾಗಿಯೂ ಮೈಲೇಜ್ ಕುಸಿತವನ್ನು ಅನುಭವಿಸುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. E20 ಇಂಧನದಿಂದ ಎಂಜಿನ್‌ಗೆ ಹಾನಿಯಾಗುತ್ತದೆ ಎಂಬ ಆರೋಪವನ್ನು ನಿತಿನ್ ಗಡ್ಕರಿ ಅವರು ಸಾರಾಸಾಗಟವಾಗಿ ತಳ್ಳಿಹಾಕಿದ್ದಾರೆ. ಮೈಲೇಜ್‌ನಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ ಅದು ವಾಹನ ಪರಿಸ್ಥಿತಿ, ರಸ್ತೆ ಮತ್ತು ವಾಹನ ಬಳಕೆಯ ವಿಧಾನವನ್ನು ಅವಲಂಬಿಸಿರಲಿದೆ ಎಂದಿದ್ದಾರೆ. ಆದರೆ ಇದು ತೀವ್ರ ಚರ್ಚೆಗೆ ಕಾರಣವಾಗಿದೆ.













Click it and Unblock the Notifications