'ರಿಚರ್ಡ್ ಆ್ಯಂಟನಿ' ಸಿನಿಮಾ ಬರೋದು ಯಾವಾಗ, ರಕ್ಷಿತ್ ಶೆಟ್ಟಿ ತಯಾರಿ ಹೇಗಿದೆ? ಕೊನೆಗೂ ಅಪ್‌ಡೇಟ್ ಕೊಟ್ಟ ಅಜನೀಶ್
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ "ಸಪ್ತಸಾಗರದಾಚೆ ಎಲ್ಲೋ" ಸಿನಿಮಾಗಳ ಬಳಿಕ ಒಂದು ರೀತಿ ಕಣ್ಮರೆಯೇ ಆಗಿದ್ದಾರೆ. ಇನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ರಕ್ಷಿತ್‌ಗೆ ಫ್ಯಾನ್ಸ್ ಕೇಳೋದು ಅದೊಂದೇ ಪ್ರಶ್ನೆ. ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳ ಲಿಸ್ಟ್ ತೆಗೆದರೆ ಅದರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ 'ರಿಚರ್ಡ್ ಆ್ಯಂಟನಿ' (Richard Anthony) ಸಿನಿಮಾ ಮುಂಚೂಣಿಯಲ್ಲಿರುತ್ತೆ. ಚಿತ್ರ ಘೋಷಣೆಯಾಗಿ ಹಲವು ವರ್ಷಗಳೇ ಕಳೆದರೂ ರಕ್ಷಿತ್ ಮಾತ್ರ ಇದರ ಬಗ್ಗೆ ಯಾವುದೇ ಅಪ್‌ಡೇಟ್ ಕೊಡದೆ, ಫ್ಯಾನ್ಸ್ ಕೈಗೂ ಸಿಗದೆ ಒಂದು ರೀತಿ ಅಜ್ಞಾತ ಸ್ಥಳದಲ್ಲಿದ್ದಾರೆ. ಆದರೆ ಇದೇ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಕೊನೆಗೂ ರಿಚರ್ಡ್ ಆಂಟನಿ ಬಗ್ಗೆ ದೊಡ್ಡ ಬಾಂಬ್ ಸಿಡಿಸಿದ್ದಾರೆ.
ಇತ್ತೀಚೆಗೆ ನಡೆದ ಖಾಸಗಿ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ವೇದಿಕೆ ಮೇಲೆ ಮಾತನಾಡಿದ ಅಜನೀಶ್, ಸಿನಿಮಾದ ಸದ್ಯದ ಪರಿಸ್ಥತಿ ಏನು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ವೇದಿಕೆ ಮೇಲೆ 'ರಿಚರ್ಡ್ ಆ್ಯಂಟನಿ' ಅಪ್‌ಡೇಟ್ ಬಗ್ಗೆ ಎದುರಾದ ಪ್ರಶ್ನೆಗೆ ಅಜನೀಶ್ ಲೋಕನಾಥ್ ಸಖತ್ ಆಗೇ ಉತ್ತರಿಸಿದ್ದಾರೆ. ಈ ಸಿನಿಮಾಗೆ ನಾನೂ ಕಂಪ್ಲೀಟ್ ಆಗಿ ರೆಡಿಯಾಗಿದ್ದೀನಿ, ರಕ್ಷಿತ್ ಶೆಟ್ಟಿ ಕೂಡ ಅಷ್ಟೇ ಸಿದ್ಧತೆಯೊಂದಿಗೆ ಇದ್ದಾರೆ. ಇಡೀ ಚಿತ್ರತಂಡ ಹಾಗೂ ಅಭಿಮಾನಿಗಳು ಯಾವ ಕ್ಷಣದಲ್ಲಾದರೂ ಕೆಲಸ ಆರಂಭಿಸಲು ಸಜ್ಜಾಗಿದ್ದಾರೆ. ಈಗ ಕೇವಲ ಶೂಟಿಂಗ್ ಸೆಟ್‌ಗೆ ಹೋಗುವುದು ಒಂದೇ ಬಾಕಿ ಎನ್ನುವ ಮೂಲಕ ಶೂಟಿಂಗ್ ಆರಂಭದ ದಿನಗಳು ಹತ್ತಿರದಲ್ಲಿವೆ ಎಂಬ ಸುಳಿವು ನೀಡಿದ್ದಾರೆ.

"ಇದು ಸಿನಿಮಾವಲ್ಲ, ನ್ಯೂಕ್ಲಿಯರ್ ಬಾಂಬ್"
ಚಿತ್ರದ ಕಥೆ ಹಾಗೂ ಔಟ್‌ಪುಟ್ ಯಾವ ರೇಂಜ್‌ಗೆ ಇರಲಿದೆ ಎಂಬುದಕ್ಕೆ ಅಜನೀಶ್ ಒಂದು ಖಡಕ್ ಉದಾಹರಣೆ ಕೊಟ್ಟಿದ್ದಾರೆ. ನನಗೆ ಈ ಪ್ರಾಜೆಕ್ಟ್ ಮೇಲೆ ನೂರಕ್ಕೆ ನೂರರಷ್ಟು ನಂಬಿಕೆಯಿದೆ. 'ರಿಚರ್ಡ್ ಆ್ಯಂಟನಿ' ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಾಗ ಅದು ಕೇವಲ ಒಂದು ಸಿನಿಮಾ ಆಗಿರಲ್ಲ, ಇಡೀ ಸ್ಯಾಂಡಲ್‌ವುಡ್‌ನಲ್ಲಿ ಧೂಳೆಬ್ಬಿಸಲಿರೋ 'ನ್ಯೂಕ್ಲಿಯರ್ ಬಾಂಬ್' ನಂತೆ ಇರಲಿದೆ. ರಕ್ಷಿತ್ ಶೆಟ್ಟಿ ಚಿತ್ರಕಥೆ ಹೆಣೆದಿದ್ದಾರೆ ಎಂದು ಹಿಂಟ್ ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದ 'ಉಳಿದವರು ಕಂಡಂತೆ' ಸಿನಿಮಾದ ಮುಂದುವರಿದ ಭಾಗವಾಗಿ ಈ 'ರಿಚರ್ಡ್ ಆ್ಯಂಟನಿ' ಮೂಡಿಬರಲಿದೆ. ಕರಾವಳಿ ಹಿನ್ನೆಲೆಯ ಕಥೆಯಲ್ಲಿ ಮೂಡಿಬಂದಿದ್ದ ರಿಚ್ಚಿ ಎಂಬ ಐಕಾನಿಕ್ ಕ್ಯಾರೆಕ್ಟರ್ ಅನ್ನು ಮುಂದಿಟ್ಟುಕೊಂಡು ಈ ಹೊಸ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ತೆರೆಗೆ ತರಲು ರಕ್ಷಿತ್ ಶೆಟ್ಟಿ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಜನೀಶ್ ಲೋಕನಾಥ್ ನೀಡಿರುವ ಈ ಮಾಸ್ ಅಪ್‌ಡೇಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿದೆ. ರಕ್ಷಿತ್ ಇನ್ನಾದರೂ ಮೌನ ಮುರಿಯಬೇಕು ಎನ್ನುತ್ತಿದ್ದಾರೆ ಫ್ಯಾನ್ಸ್.
ಸಿನಿಮಾ ವಿಳಂಬಕ್ಕೆ ಅಸಲಿ ಕಾರಣವೇನು?
ಚಿತ್ರ ಘೋಷಣೆಯಾಗಿ ಇಷ್ಟು ವರ್ಷಗಳಾದರೂ ಶೂಟಿಂಗ್ ಆರಂಭವಾಗದಿರಲು ರಕ್ಷಿತ್ ಶೆಟ್ಟಿ ಅವರು ಕಾರಣ ನೀಡಿಲ್ಲ. ರಕ್ಷಿತ್ ಶೆಟ್ಟಿ ಅವರು ಮೊದಲು ಒಪ್ಪಿಕೊಂಡಿದ್ದ '777 ಚಾರ್ಲಿ' ಹಾಗೂ 'ಸಪ್ತ ಸಾಗರದಾಚೆ ಎಲ್ಲೋ' (Side A & Side B) ಚಿತ್ರಗಳ ಕೆಲಸಗಳು ಮುಗಿಯುವವರೆಗೆ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಳ್ಳಲು ಇಷ್ಟಪಡಲಿಲ್ಲ. ಈ ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿದ್ದರಿಂದ ರಕ್ಷಿತ್ ಅವರ ಸಂಪೂರ್ಣ ಗಮನ ಈಗ 'ರಿಚರ್ಡ್ ಆ್ಯಂಟನಿ' ಮೇಲಿದೆ. "ಉಳಿದವರು ಕಂಡಂತೆ" ಚಿತ್ರದಲ್ಲಿ ಉಡುಪಿ, ಮಂಗಳೂರು ಮತ್ತು ಮಲ್ಪೆಯ ಕಡಲ ತೀರಗಳನ್ನು ಅದ್ಭುತವಾಗಿ ತೋರಿಸಲಾಗಿತ್ತು. ಈ ಬಾರಿ ಕೂಡ ಚಿತ್ರದ ಬಹುತೇಕ ಭಾಗವನ್ನು ಕರಾವಳಿ ತೀರದಲ್ಲೇ ಚಿತ್ರೀಕರಿಸಲು ಲೊಕೇಶನ್ ಹಂಟ್ ಪೂರ್ಣಗೊಂಡಿದೆ ಎನ್ನಲಾಗಿದೆ. ಎಲ್ಲ ಅಂತೆಕಂತೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.












Click it and Unblock the Notifications