ವಿಜಯ್-ತ್ರಿಶಾ ಮದುವೆಯಾಗಲಿ, ನಾನು ಅವರ ಮೆಹೆಂದಿಗೆ ಹೋಗ್ತೀನಿ: ನಟಿ ರಾಖಿ ಸಾವಂತ್
ತಮಿಳು ಚಿತ್ರರಂಗದ ಮೋಸ್ಟ್ ಫೇವರೆಟ್ ಜೋಡಿಗಳಾದ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ನಡುವಿನ ಡೇಟಿಂಗ್ ವದಂತಿಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭವೊಂದರಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಇವರ ಮದುವೆಯ ಚರ್ಚೆ ಜೋರಾಗಿತ್ತು. ಇದೀಗ ಈ ವಿಚಾರದ ಬಗ್ಗೆ ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ನೀಡಿರುವ ಪ್ರತಿಕ್ರಿಯೆ ಭಾರಿ ವೈರಲ್ ಆಗುತ್ತಿದೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ರಾಖಿ ಸಾವಂತ್, ವಿಜಯ್ ಮತ್ತು ತ್ರಿಶಾ ಸಂಬಂಧಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಸಂದರ್ಶನದಲ್ಲಿ ಮಾತನಾಡುತ್ತಾ, "ನನ್ನ ಪ್ರಕಾರ ವಿಜಯ್ ಮತ್ತು ತ್ರಿಶಾ ಮದುವೆಯಾಗಬೇಕು. ಅವರಿಬ್ಬರ ಜೋಡಿ ಅದ್ಭುತವಾಗಿ ಕಾಣಿಸುತ್ತದೆ. ಒಂದು ವೇಳೆ ಅವರಿಬ್ಬರು ಮದುವೆಯಾದರೆ, ನಾವು ಖಂಡಿತವಾಗಿಯೂ ಅವರ ಮೆಹೆಂದಿ ಕಾರ್ಯಕ್ರಮಕ್ಕೆ ಹಾಜರಾಗುತ್ತೇವೆ" ಎಂದು ರಾಖಿ ಹೇಳಿದ್ದಾರೆ.

ತ್ರಿಶಾ ನಾನು ಸ್ಟ್ರಗಲ್ ಮಾಡುತ್ತಿದ್ದೆವು
ನಟಿ ತ್ರಿಶಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ರಾಖಿ, "ನನಗೆ ತ್ರಿಶಾ ಸಿನಿಮಾ ರಂಗಕ್ಕೆ ಬಂದ ಆರಂಭಿಕ ದಿನಗಳಿಂದಲೂ ಗೊತ್ತು. ನಾವಿಬ್ಬರೂ ಒಟ್ಟಿಗೆ ಸ್ಟ್ರಗಲ್ ಮಾಡುತ್ತಿದ್ದೆವು. ಅವರು ಬಾಲಿವುಡ್‌ನಿಂದ ದಕ್ಷಿಣ ಭಾರತದ ಚಿತ್ರರಂಗಕ್ಕೆ ಹೋದರು. ಅವರು ತುಂಬಾ ಒಳ್ಳೆಯ ಸ್ವಭಾವದವರು ಎಂದು ನೆನಪಿಸಿಕೊಂಡಿದ್ದಾರೆ.
ವಿಜಯ್ ಜೊತೆ ನಟಿಸುವುದು ನನ್ನ ಕನಸಾಗಿತ್ತು
ಇದೇ ವೇಳೆ ದಳಪತಿ ವಿಜಯ್ ಅವರ ಬಗ್ಗೆಯೂ ಮಾತನಾಡಿರುವ ರಾಖಿ "ನನಗೆ ವಿಜಯ್ ಅಂದರೆ ವೈಯಕ್ತಿಕವಾಗಿ ತುಂಬಾ ಇಷ್ಟ. ಅವರ ಜೊತೆ ಒಂದು ಹಾಡಿನಲ್ಲಿ ನಟಿಸಬೇಕು ಎನ್ನುವುದು ನನ್ನ ಕನಸಾಗಿತ್ತು. ಆದರೆ ಆ ಅವಕಾಶ ಸಿಗಲಿಲ್ಲ. ಈಗ ಅವರ ರಾಜಕೀಯ ಪಕ್ಷ ಸೇರಬೇಕು ಎನಿಸುತ್ತಿದೆ" ಎಂದು ತಮ್ಮ ಆಸೆಯನ್ನು ಹೊರಹಾಕಿದ್ದಾರೆ.
ವಿಜಯ್-ತ್ರಿಶಾ 'ಗಿಲ್ಲಿ', 'ತಿರುಪ್ಪಾಚಿ'ಯಂತಹ ಹಿಟ್ ಸಿನಿಮಾಗಳ ನಂತರ ಸುಮಾರು 15 ವರ್ಷಗಳ ಕಾಲ ಈ ಜೋಡಿ ಪರದೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಆದರೆ 2023ರಲ್ಲಿ ತೆರೆಕಂಡ 'ಲಿಯೋ' ಸಿನಿಮಾ ಇವರ ಕೆಮಿಸ್ಟ್ರಿಯನ್ನು ಮತ್ತೆ ಮುನ್ನೆಲೆಗೆ ತಂದಿತು. ಮತ್ತೊಂದೆಡೆ ವಿಜಯ್ ಪತ್ನಿ ಸಂಗೀತಾ ಅವರು ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿಯೊಬ್ಬರ ಜೊತೆ ಪತಿ ವಿಜಯ್ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಇತ್ತೀಚೆಗೆ ನಡೆದ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಭರ್ಜರಿ ಜಯ ಸಾಧಿಸಿದಾಗ, ತ್ರಿಶಾ ಅವರಿಗೆ ಶುಭಾಶಯ ತಿಳಿಸುವ ನೆಪದಲ್ಲಿ ಹಲವು ಗಣ್ಯರು ಈ ಜೋಡಿಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಸದ್ಯ ರಾಖಿ ಸಾವಂತ್ ಅವರ ಈ ಹೇಳಿಕೆ ವಿಜಯ್ ಅಭಿಮಾನಿಗಳ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.













Click it and Unblock the Notifications