Viral Video: ರೈಲ್ವೆ ನಿಲ್ದಾಣದಲ್ಲಿ ಹಸಿರು ಬಣ್ಣಕ್ಕೆ ಅದ್ದಿ ಸೌತೆಕಾಯಿ ಮಾರಾಟ: ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ, 9 ಜನರ ಬಂಧನ

ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳಿರುತ್ತವೆ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ಆದರೆ, ನಾವು ಪ್ರತಿದಿನ ತಾಜಾ ಎಂದು ನಂಬಿ ಖರೀದಿಸುವ ಹಣ್ಣು ಮತ್ತು ತರಕಾರಿಗಳು ಕೂಡ ಯಾವಾಗಲೂ ನೈಸರ್ಗಿಕ ಹಾಗೂ ಸುರಕ್ಷಿತವಾಗಿರುವುದಿಲ್ಲ ಎಂಬುದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ 'ಎಕ್ಸ್' (X) ನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸ್ಪಷ್ಟ ಉದಾಹರಣೆಯಾಗಿದೆ.

ಬಿಹಾರದ ಕಟಿಹಾರ್ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ವ್ಯಾಪಾರಿಯೊಬ್ಬಳು ಸೌತೆಕಾಯಿಗಳನ್ನು ತಾಜಾವಾಗಿ ಕಾಣುವಂತೆ ಮಾಡಲು ಹಸಿರು ಬಣ್ಣದ ದ್ರವವೊಂದರಲ್ಲಿ ಅದ್ದುತ್ತಿರುವ ದೃಶ್ಯ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

Viral Video

ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ಸೌತೆಕಾಯಿಗಳನ್ನು ತಾಜಾ ಮತ್ತು ಅಗ್ಗದ ತಿಂಡಿ ಎಂದು ಖರೀದಿಸಿ ತಿನ್ನುತ್ತಾರೆ. ಆದರೆ ಕಟಿಹಾರ್ ನಿಲ್ದಾಣದಲ್ಲಿ, ಸಿಪ್ಪೆ ಸುಲಿದು ಮಂಕಾದಂತಿದ್ದ ಸೌತೆಕಾಯಿಗಳನ್ನು ಜಾರ್ ಒಂದರಲ್ಲಿದ್ದ ಕಡು ಹಸಿರು ಬಣ್ಣದ ದ್ರವದಲ್ಲಿ ಮಹಿಳೆಯೊಬ್ಬಳು ಮುಳುಗಿಸಿ ತೆಗೆಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆಘಾತಕಾರಿ ಸಂಗತಿಯೆಂದರೆ, ಈ ಅಕ್ರಮ ಮತ್ತು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಕೃತ್ಯವು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೇ ಯಾವುದೇ ಭಯವಿಲ್ಲದೆ ಬಹಿರಂಗವಾಗಿ ನಡೆಯುತ್ತಿತ್ತು. ಕೃತಕ ಬಣ್ಣಗಳನ್ನು ಬಳಸಿ ಮಾರಾಟ ಮಾಡಲಾಗುವ ಇಂತಹ ತರಕಾರಿಗಳು ಪ್ರಯಾಣಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, 'ರೈಲ್ವೆ ಸೇವಾ' ಎಕ್ಸ್ ಖಾತೆಯು ಸ್ಪಂದಿಸಿದ್ದು, "ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಲಾಗಿದೆ ಮತ್ತು ಅಗತ್ಯ ಕ್ರಮಕ್ಕಾಗಿ ಸೂಚಿಸಲಾಗಿದೆ" ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ಕಟಿಹಾರ್‌ನ ರೈಲ್ವೆ ರಕ್ಷಣಾ ಪಡೆ (RPF) ಕಾರ್ಯಾಚರಣೆ ನಡೆಸಿದೆ.

ಕಟಿಹಾರ್ ಆರ್‌ಪಿಎಫ್ ಇನ್‌ಸ್ಪೆಕ್ಟರ್ ವಿಕ್ರಮ್ ಅವರು ನೀಡಿರುವ ಮಾಹಿತಿ ಪ್ರಕಾರ, ಈ ರೀತಿ ಸೌತೆಕಾಯಿಗಳನ್ನು ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿದ್ದ ಒಂಬತ್ತು ಮಂದಿ ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯೂ ಈ ಒಂಬತ್ತು ಜನರಲ್ಲಿ ಸೇರಿದ್ದಾಳೆ.

ವಿಚಾರಣೆ ವೇಳೆ, ಮದುವೆ ಸಮಾರಂಭಗಳಲ್ಲಿ ಸಿಹಿತಿಂಡಿಗಳನ್ನು ತಯಾರಿಸಲು ಬಳಸುವಂತಹ ಹಸಿರು ಬಣ್ಣವನ್ನೇ ತಾನು ಬಳಸುತ್ತಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಸದ್ಯ ಅಧಿಕಾರಿಗಳು ಈ ಬಣ್ಣದ ರಾಸಾಯನಿಕ ಸಂಯೋಜನೆ ಏನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಈ ಘಟನೆಯು ಆನ್‌ಲೈನ್ ಬಳಕೆದಾರರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಹಾರ ಸುರಕ್ಷತೆ ಮತ್ತು ಅಧಿಕಾರಿಗಳ ಹೊಣೆಗಾರಿಕೆಯ ಕುರಿತು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. "ಕಾನೂನು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪ್ರಾರಂಭಿಸಿದರೆ ಮಾತ್ರ ಇಂತಹ ಕೃತ್ಯಗಳು ನಿಲ್ಲುತ್ತವೆ; ಇಲ್ಲದಿದ್ದರೆ, ಇದು ಮುಂದುವರಿಯುತ್ತದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುವ ವಸ್ತುಗಳ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಖಚಿತಪಡಿಸಿಕೊಳ್ಳುವುದು ರೈಲ್ವೆ ಅಧಿಕಾರಿಗಳ ಜವಾಬ್ದಾರಿ ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.

"ಇದು ಪ್ರಯಾಣಿಕರ ಜೀವದೊಂದಿಗೆ ಆಟವಾಡಿದಂತೆ" ಎಂದು ಇನ್ನೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ತಾಜಾ ಆಗಿ ಕಾಣುವ ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚಾಗಿ ಇದೇ ರೀತಿ ಕಲಬೆರಕೆಯಾಗಿರುತ್ತವೆ, ಬೇರೆ ನಿಲ್ದಾಣಗಳಲ್ಲೂ ಇಂತಹ ದೃಶ್ಯಗಳನ್ನು ನೋಡಬಹುದು ಎಂದು ಹಲವರು ಆರೋಪಿಸಿದ್ದಾರೆ.

ಈ ಘಟನೆಯು ಆಹಾರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಎಚ್ಚರಿಕೆಯ ಗಂಟೆಯಾಗಿದ್ದು, ಪ್ರಯಾಣದ ವೇಳೆ ಸಿಗುವ ಆಹಾರ ಪದಾರ್ಥಗಳನ್ನು ಖರೀದಿಸುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+