ವರದಕ್ಷಿಣೆ ಪ್ರಕರಣಗಳಲ್ಲಿ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ, ಆತಂಕಕಾರಿ ಅಂಕಿಅಂಶ ಬಿಡುಗಡೆ ಮಾಡಿದ NCRB

ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಕುರಿತು ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ 'ಕ್ರೈಂ ಇನ್ ಇಂಡಿಯಾ 2024' ವರದಿಯ ಪ್ರಕಾರ, ವರದಕ್ಷಿಣೆ ನಿಷೇಧ ಕಾಯ್ದೆ 1961ರ ಅಡಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂಚೂಣಿಯಲ್ಲಿರುವ, ಆಧುನಿಕತೆಯತ್ತ ಮುಖ ಮಾಡಿರುವ ಈ ಮಹಾನಗರದಲ್ಲಿ ಇಂತಹ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತವಾಗಿರುವುದು ತೀವ್ರ ಕಳವಳಕ್ಕೆ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಪರಿಸ್ಥಿತಿಗೆ ಕಾರಣವಾಗಿದೆ.

Bengaluru

ವರದಿಯ ಅಂಕಿಅಂಶಗಳ ಪ್ರಕಾರ, 2024ನೇ ಸಾಲಿನಲ್ಲಿ ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ಒಟ್ಟು 1,008 ವರದಕ್ಷಿಣೆ ಸಂಬಂಧಿತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ, ಕೇವಲ ಬೆಂಗಳೂರು ನಗರವೊಂದರಲ್ಲೇ 878 ಪ್ರಕರಣಗಳು ವರದಿಯಾಗಿವೆ. ಅಂದರೆ ದೇಶದ ಪ್ರಮುಖ ಮಹಾನಗರಗಳಲ್ಲಿ ದಾಖಲಾದ ಒಟ್ಟು ವರದಕ್ಷಿಣೆ ಪ್ರಕರಣಗಳಲ್ಲಿ ಬರೋಬ್ಬರಿ ಶೇಕಡಾ 87ರಷ್ಟು ಪಾಲು ಕೇವಲ ಕರ್ನಾಟಕದ ರಾಜಧಾನಿಯದ್ದಾಗಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದ ಲಕ್ನೋದಲ್ಲಿ ಕೇವಲ 48 ಪ್ರಕರಣಗಳು ಮಾತ್ರ ದಾಖಲಾಗಿವೆ. ಈ ಎರಡು ನಗರಗಳ ನಡುವಿನ ಬೃಹತ್ ವ್ಯತ್ಯಾಸವನ್ನು ಗಮನಿಸಿದರೆ ಬೆಂಗಳೂರಿನ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ವರದಕ್ಷಿಣೆ ಕಿರುಕುಳ ಕೇವಲ ಪ್ರಕರಣಗಳಿಗಷ್ಟೇ ಸೀಮಿತವಾಗಿಲ್ಲ, ಅನೇಕ ಮುಗ್ಧ ಜೀವಗಳನ್ನೂ ಬಲಿ ಪಡೆಯುತ್ತಿದೆ. 2024ರಲ್ಲಿ ಬೆಂಗಳೂರಿನಲ್ಲಿ 25 ವರದಕ್ಷಿಣೆ ಸಾವುಗಳು ಸಂಭವಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ 109 ವರದಕ್ಷಿಣೆ ಸಾವುಗಳು ವರದಿಯಾಗಿದ್ದರೆ, ದಕ್ಷಿಣ ಭಾರತದ ಇತರ ಪ್ರಮುಖ ನಗರಗಳಾದ ಚೆನ್ನೈ, ಕೋಯಿಕ್ಕೋಡ್, ಕೊಚ್ಚಿ ಮತ್ತು ಕೊಯಮತ್ತೂರಿನಲ್ಲಿ 2024ರಲ್ಲಿ ಯಾವುದೇ ವರದಕ್ಷಿಣೆ ಸಾವುಗಳು ದಾಖಲಾಗಿಲ್ಲ ಎಂಬುದು ನೆಮ್ಮದಿಯ ವಿಚಾರ. ಇನ್ನು ನೆರೆಯ ಹೈದರಾಬಾದ್‌ನಲ್ಲಿ 14 ವರದಕ್ಷಿಣೆ ಸಾವುಗಳು ವರದಿಯಾಗಿವೆ. ದಕ್ಷಿಣ ಭಾರತದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿಮೀರುತ್ತಿದೆ ಎಂಬುದು ಈ ವರದಿಯಿಂದ ತಿಳಿದು ಬಂದಿದೆ.

ಕೇವಲ ವರದಕ್ಷಿಣೆ ಮಾತ್ರವಲ್ಲದೆ, ವಿಶೇಷ ಮತ್ತು ಸ್ಥಳೀಯ ಕಾಯ್ದೆಗಳ (ಎಸ್‌ಎಲ್‌ಎಲ್) ಅಡಿಯಲ್ಲಿ ದಾಖಲಾದ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲೂ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಈ ಕಾಯ್ದೆಯಡಿ ಮಹಾನಗರದಲ್ಲಿ ಒಟ್ಟು 1,051 ಘಟನೆಗಳು ವರದಿಯಾಗಿವೆ. ಅದೇ ರೀತಿ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಗಳಲ್ಲೂ ಸಿಲಿಕಾನ್ ಸಿಟಿ ಮುಂದಿದೆ. 2024ರಲ್ಲಿ ಬೆಂಗಳೂರಿನಲ್ಲಿ ಇಂತಹ 897 ಪ್ರಕರಣಗಳು ದಾಖಲಾಗಿದ್ದು, 857 ಪ್ರಕರಣಗಳನ್ನು ಹೊಂದಿರುವ ಮುಂಬೈ ಮಹಾನಗರ ಎರಡನೇ ಸ್ಥಾನದಲ್ಲಿದೆ.

ಇನ್ನು ಪತಿ ಅಥವಾ ಅತ್ತೆ-ಮಾವಂದಿರಿಂದ ಪತ್ನಿಯ ಮೇಲಿನ ಕ್ರೌರ್ಯ (Cruelty against wives) ಪ್ರಕರಣಗಳ ಕುರಿತು ನೋಡುವುದಾದರೆ, ಕರ್ನಾಟಕ ರಾಜ್ಯಾದ್ಯಂತ ಒಟ್ಟು 2,947 ಪ್ರಕರಣಗಳು ದಾಖಲಾಗಿವೆ. ಈ ವಿಭಾಗದಲ್ಲಿ ಬರೋಬ್ಬರಿ 21,266 ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ (10,578) ಮತ್ತು ಮಹಾರಾಷ್ಟ್ರ (10,538) ನಂತರದ ಸ್ಥಾನಗಳಲ್ಲಿವೆ.

ಇಂದು ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿದ್ದರೂ ವರದಕ್ಷಿಣೆ ಎಂಬ ಭೂತ ಅವರನ್ನು ಕಾಡುತ್ತಲೇ ಇರುವುದು ವಿಪರ್ಯಾಸ. ಐಟಿ-ಬಿಟಿ ಉದ್ಯೋಗಿಗಳು ಹೆಚ್ಚಾಗಿರುವ ಬೆಂಗಳೂರಿನಲ್ಲಿ ಸುಶಿಕ್ಷಿತ ಕುಟುಂಬಗಳೇ ವರದಕ್ಷಿಣೆಗಾಗಿ ಬೇಡಿಕೆ ಇಡುತ್ತಿರುವುದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ. ಮಹಿಳಾ ಸುರಕ್ಷತೆ ಮತ್ತು ವರದಕ್ಷಿಣೆಯಂತಹ ಪಿಡುಗುಗಳನ್ನು ತಡೆಗಟ್ಟುವಲ್ಲಿ ಸರ್ಕಾರ ಹಾಗೂ ಕಟ್ಟುನಿಟ್ಟಿನ ಪೊಲೀಸ್ ವ್ಯವಸ್ಥೆ ಇನ್ನಷ್ಟು ಜಾಗೃತವಾಗಬೇಕಾದ ತುರ್ತು ಅಗತ್ಯವಿದೆ ಎಂಬುದನ್ನು ಎನ್‌ಸಿಆರ್‌ಬಿಯ ಈ ವರದಿ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+