ಕಾದಂಬರಿಕಾರರಿಗೆ ಅಪರೂಪದ ಅವಕಾಶ!
ಅಮೆರಿಕಾ ಕನ್ನಡ ಕೂಟಗಳ ಆಗರ 'ಅಕ್ಕ" ಮತ್ತು ವಾಷಿಂಗ್ಟನ್ ಡಿಸಿ ಮೆಟ್ರೊ ಪ್ರದೇಶದ 'ಕಾವೇರಿ" ಕನ್ನಡ ಸಂಘದ ಸಹಯೋಗದಲ್ಲಿ ನಾಲ್ಕನೇ'ಅಕ್ಕ ವಿಶ್ವಕನ್ನಡ ಸಮ್ಮೇಳನ"ವು 2006ರ ಸೆಪ್ಟೆಂಬರ್ 1, 2 ಮತ್ತು 3 ರಂದು ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯವು ಸುವರ್ಣ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರೆಲ್ಲಾ ಸೇರಿ ಕರ್ನಾಟಕ-ಕನ್ನಡ ವೈಭವವನ್ನು ಸಾರುವ ಈ ಬೃಹತ್ ಉತ್ಸವವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಹೆಮ್ಮೆ ಅಭಿಮಾನದ ಪ್ರತೀಕ.
ಈ ನಿಟ್ಟಿನಲ್ಲಿ, ಒಂದು ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅತ್ಯುತ್ತಮ ಕಾದಂಬರಿಯಾಂದನ್ನು ಪ್ರಕಟಿಸಲಾಗುವುದು. ವಿಜೇತ ಕಾದಂಬರಿಕಾರರನ್ನು ವಿಶ್ವಕನ್ನಡ ಸಮ್ಮೇಳನಕ್ಕೆ ಆಹ್ವಾನಿಸಿ, ಪುರಸ್ಕರಿಸುವ ಈಯೋಜನೆಗಳನ್ನು ಸಮ್ಮೇಳನ ಸಮಿತಿಯು ಹಮ್ಮಿಕೊಂಡಿದೆ.
ಕಾದಂಬರಿ ಸ್ಪರ್ಧೆಯ ಬಗ್ಗೆ ವಿವರಗಳು:
- ಕಾದಂಬರಿ ಕನ್ನಡದಲ್ಲಿರಬೇಕು, ಇದುವರೆಗೆ ಎಲ್ಲೂ ಯಾವ ರೂಪದಲ್ಲೂ ಅದು ಪ್ರಕಟವಾಗಿರಬಾರದು.
- ಈ ಕಾದಂಬರಿಯು ಲೇಖಕರ ಚೊಚ್ಚಲ ಕಾದಂಬರಿಯಾಗಿರಬೇಕು.
- ಈಗ ಭಾರತದಲ್ಲಿ ನೆಲೆಸಿರುವ ಕನ್ನಡಿಗರಷ್ಟೇ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆಯುತ್ತಾರೆ.
- ಕಾದಂಬರಿಯು ಸ್ವಂತದ ರಚನೆಯಾಗಿರಬೇಕು; ಅನುವಾದಿತ ಕೃತಿಗಳಿಗೆ ಅವಕಾಶವಿಲ್ಲ.
- ಕಾದಂಬರಿಯು (ಡೆಮ್ಮಿ 1/8 ಅಳತೆಯಲ್ಲಿ ಪ್ರಕಟಿತ ಪುಸ್ತಕವಾದಾಗ) ಸುಮಾರು ನೂರೈವತ್ತರಿಂದ ಇನ್ನೂರು (150 ರಿಂದ 200) ಪುಟಗಳ ಮಿತಿಯೊಳಗೆ ಇರಬೇಕು.
- ಕಾದಂಬರಿಯನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪಷ್ಟವಾಗಿ ಟೈಪ್ ಮಾಡಿ ಕಳಿಸಬೇಕು. ಸಾಧ್ಯವಾದರೆ ಇತ್ತೀಚಿನ ಆವೃತ್ತಿಯ ಬರಹ ಅಥವಾ ನುಡಿ ತಂತ್ರಾಂಶಗಳನ್ನುಪಯೋಗಿಸಿ ಕಂಪ್ಯೂಟರೀಕರಿಸಿ (ಡಿ.ಟಿ.ಪಿ. ಮಾಡಿಸಿ) ಕಳಿಸಿದರೆ ಉತ್ತಮ. ಹಾಗೆ ಕಂಪ್ಯೂಟರೀಕರಿಸಿ ಕಾದಂಬರಿಯನ್ನು ಕಳಿಸುವಾಗ, ಅದನ್ನು ಒಂದು ಸಿ.ಡಿ.ಯಲ್ಲಾಗಲಿ ಅಥವಾ ಫ್ಲಾಪಿ ಡಿಸ್ಕ್‌ನಲ್ಲಾಗಲಿ, ಮುದ್ರಿತ ಹಸ್ತಪ್ರತಿ (ಪ್ರಿಂಟ್‌ಔಟ್)ಯಾಂದಿಗೆ ಕಳುಹಿಸಿರಿ.
- ನೀವು ಅಂಚೆಯಲ್ಲಿ ರವಾನಿಸುವಾಗ ಯಾವುದಾದರೂ ಕಾರಣಕ್ಕೆ ಕಾದಂಬರಿ ಗೈರುವಿಲೆಯಾದರೆ ವ್ಯವಸ್ಥಾಪಕರು ಹೊಣೆಯಲ್ಲ. ಆದ್ದರಿಂದ ಕಾದಂಬರಿಯ ಮೂಲಪ್ರತಿಯನ್ನು ಲೇಖಕರು ತಮ್ಮ ಬಳಿಯೇ ಇರಿಸಿಕೊಂಡಿರಬೇಕು.
- ಸ್ಪರ್ಧೆಯಲ್ಲಿ ವಿಜೇತವಾದ ಕಾದಂಬರಿಯ ಸಾಕಷ್ಟು ಪ್ರತಿಗಳನ್ನು ಅಕ್ಕ ವಿಶ್ವಕನ್ನಡ ಸಮ್ಮೇಳನ ಸಮಿತಿಯು ಪ್ರಕಾಶಿಸುತ್ತದೆ; ಲೇಖಕರಿಗೆ ಐವತ್ತು (50) ಪ್ರತಿಗಳನ್ನು ಗೌರವಪೂರ್ವಕವಾಗಿ ಒದಗಿಸಲಾಗುತ್ತದೆ.
- ಬಹುಮಾನ ವಿಜೇತ ಕಾದಂಬರಿಕಾರರಿಗೆ ಸೆಪ್ಟೆಂಬರ್ 2006ರಲ್ಲಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ಪ್ರದೇಶದಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತದೆ. ಆ ವಿಜೇತ ಕಾದಂಬರಿಕಾರರಿಗೆ (ಒಬ್ಬರಿಗೆ ಮಾತ್ರ) ಪ್ರಾಯೋಜಿತ ಆಹ್ವಾನ ಪತ್ರಿಕೆಯನ್ನು ಕಳುಹಿಸಲಾಗುತ್ತದೆ. ಮತ್ತು ಅವರೊಬ್ಬರಿಗೆ ಬೆಂಗಳೂರಿನಿಂದ ವಾಷಿಂಗ್ಟನ್ ಡಿ.ಸಿ.ಗೆ ಹೋಗಿ ಬರುವ ವಿಮಾನಯಾನದ ಟಿಕೇಟ್‌ನ್ನು ಮತ್ತು ಸಮ್ಮೇಳನದಲ್ಲಿ ನೋಂದಾಯಿಸಿಕೊಳ್ಳಲು ತಗಲುವ ಶುಲ್ಕವನ್ನೂ ಸಮ್ಮೇಳನ ಸಮಿತಿಯೇ ಒದಗಿಸುತ್ತದೆ. ಆದರೆ ತಮ್ಮ ಪಾಸ್‌ಪೋರ್ಟ್, ವೀಸಾ ಮತ್ತಿತರ ಶಿಷ್ಟಾಚಾರಗಳನ್ನು ವಿಜೇತರೇ ವೈಯಕ್ತಿಕವಾಗಿ ವ್ಯವಸ್ಥೆಮಾಡಿಕೊಳ್ಳಬೇಕಾಗುತ್ತದೆ.
- ಸ್ಪರ್ಧೆಗೆ ಕಾದಂಬರಿಯನ್ನು ಸಲ್ಲಿಸುವಾಗ, 'ಈ ಕಾದಂಬರಿ ತಮ್ಮ ಸ್ವಂತ ಕೃತಿ; ಇದು ತಮ್ಮ ಮೊಟ್ಟಮೊದಲ ಕಾದಂಬರಿ ಮತ್ತು ಇದು ಯಾವ ರೂಪದಲ್ಲೂ, ಎಲ್ಲೂ ಈ ಮೊದಲು ಪ್ರಕಟವಾಗಿಲ್ಲ"- ಎಂಬುದನ್ನು ಕಾದಂಬರಿಯಾಂದಿಗೆ ಲಗತ್ತಿಸಿದ ಕಾಗದದಲ್ಲಿ ಬರೆದು ತಿಳಿಸಿರಬೇಕು. ತಮ್ಮ ಇತ್ತೀಚಿನ ಭಾವಚಿತ್ರದ ಒಂದು ಪ್ರತಿ ಮತ್ತು ಕನ್ನಡದಲ್ಲಿ ಬರೆದ ಸ್ವಂತ-ಪರಿಚಯವನ್ನು ಜೊತೆಗೆ ಕಳಿಸಬೇಕು. ತಮ್ಮ ಅಂಚೆ ವಿಳಾಸವನ್ನು ಮತ್ತು ಫೋನ್ ನಂಬರ್/ಗಳನ್ನು (ಇದ್ದರೆ, ಇ-ಮೇಲ್ ವಿಳಾಸವನ್ನೂ) ತಪ್ಪದೆ ಬರೆದು ತಿಳಿಸಿರಬೇಕು.
- ಸ್ಪರ್ಧೆಯ ನಿಯಮ, ನಿರ್ಬಂಧನೆ ಮತ್ತು ನಿರ್ವಹಣೆಯಲ್ಲಿ 'ಅಕ್ಕ ವಿಶ್ವಕನ್ನಡಸಮ್ಮೇಳನ ಸಮಿತಿ" ಯ ನಿರ್ಧಾರವೇ ಅಂತಿಮವಾಗಿರುತ್ತದೆ.
- ಸ್ಪರ್ಧೆಗೆ ಕಾದಂಬರಿಗಳನ್ನು ನಮಗೆ ತಲುಪಿಸಲು ಕೊನೆಯ ದಿನಾಂಕ: ಏಪ್ರಿಲ್30, 2006.
ಸಂಪರ್ಕ ವಿಳಾಸ:
1. ಕಾದಂಬರಿಯ ಹಸ್ತಪ್ರತಿ ಅಥವಾ ಕಂಪ್ಯೂಟರೀಕೃತ ಪ್ರತಿ (ಸಿ.ಡಿ. ಅಥವಾ ಫ್ಲಾಪಿ ಡಿಸ್ಕ್) ಗಳನ್ನು ಇಲ್ಲಿಗೆ ಕಳಿಸಬೇಕು:
ಕನ್ನಡ ಕಾದಂಬರಿ ಸ್ಪರ್ಧೆ ವಿಭಾಗ,
ಅಕ್ಕ ವಿಶ್ವಕನ್ನಡ ಸಮ್ಮೇಳನ,
ಅಂಚೆ ಪೆಟ್ಟಿಗೆ ಸಂಖ್ಯೆ 31,
ಸರಸ್ವತೀಪುರಂ, ಮೈಸೂರು-570 009
2. ಈ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನೇನಾದರೂ ಇ-ಮೇಲ್ ಮುಖಾ0ತರ ತಿಳಿದುಕೊಳ್ಳುವುದಿದ್ದರೆ ಅದಕ್ಕೆ ಸಂಪರ್ಕ ವಿಳಾಸ : [email protected]
3. ವಿಶ್ವಕನ್ನಡ ಸಮ್ಮೇಳನದ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಈ ಅ0ತರ್ಜಾಲ ತಾಣಗಳಿಗೆ ಭೇಟಿಕೊಡಿ: www.akkaonline.org/2006












Click it and Unblock the Notifications