ವಧು ನೋಡಲು ಹೋಗೋವಾಗ್ಲೇ ಇಷ್ಟು ಕಷ್ಟ!

(ಕಥೆಯ ಮುಂದಿನ ಭಾಗ...) ರಾತ್ರಿ ಇಂಟರ್ಸಿಟಿ ಟ್ರೈನಲ್ಲಿ ಶಿವಮೊಗ್ಗಕ್ಕೆ ಬಂದಿಳಿದಾಗ ಬೆಳಗಿನ ಜಾವ ಆರಾಗಿತ್ತು. ಚೆನ್ನಾಗಿ ನಿದ್ದೆ ಮಾಡಿದ್ದರಿಂದ ಸ್ವಲ್ಪ ಆರಾಮೆನಿಸಿತ್ತು. ಅಲ್ಲೇ ಬಳಿಯಿದ್ದ ಒಂದು ಹೋಟೆಲ್ ರೂಂ ಬುಕ್ ಮಾಡಿ ಕೆಲವು ಗಂಟೆ ಮತ್ತೆ ರೆಸ್ಟ್ ಮಾಡಿ ಫ್ರೆಶ್ ಆಗಿ ಬಿಸಿ ಬಿಸಿ ಇಡ್ಲಿ-ವಡ-ಸಾಂಬಾರ್ ತಿಂದಾಗ ಅದರ ಮಜವೇ ಬೇರೆ. ಇಲ್ಲಿದ್ದಾಗ ದಿನ ಬೆಳಿಗ್ಗೆ ಸೀರಿಯಲ್ ಬಿಟ್ರೆ ಡಂಕಿನ್ ಡೋನಟ್ ನಲ್ಲಿ ಬೇಗಲ್-ಕ್ರೀಂ ಚೀಜ್ಜ್ ತಿಂದು ತಿಂದು ನಾಲಿಗೆಗೆ ಟೇಸ್ಟ್ ಹೋದಂತಾಗಿತ್ತು. ವಡ ತಿನ್ನುವಾಗಲೇ, ಅಪ್ಪ ಮಲ್ನಾಡಿನ ಹುಡುಗಿಯ ಬಗ್ಗೆ ಸ್ವಲ್ಪ ವಿವರಣೆ ಕೊಡುತ್ತಿದ್ದರು. ಸಾಗರದ ಬಳಿಯಲ್ಲಿಯ ಯಾವುದು ಒಂದು ಊರು.. ಅಲ್ಲಿಗೆ ಹೋಗಿಬರಲು ಒಂದು ಟಾಟಾ -ಸುಮೋ ಬುಕ್ಕಾಗಿತ್ತು. ಅಲ್ಲಿಗೆ ಹೋಗಿಬಂದು ರಾತ್ರಿ ಭದ್ರಾವತಿಯಲ್ಲಿನ ಅಜ್ಜಿ ಮನೆಯಲ್ಲಿ ಠಿಕಾಣಿ ಉರೋದು ಅಂತ ಡಿಸೈಡ್ ಮಾಡಿಕೊಂಡು ಸರಿ ಸುಮಾರು 11ರ ವೇಳೆಗೆ ಶಿವಮೊಗ್ಗ ಬಿಟ್ಟಿದ್ದೆವು.

ಚಿಕ್ಕವನಿದ್ದಾಗಿಂದ ಯಾಕೋ ನಂಗೆ ಮಲೆನಾಡು ಅಂದರೆ ಬಹಳ ಇಷ್ಟ. ಅಲ್ಲಿನ ಹಸಿರುಕಾಡು, ಗುಡ್ಡ-ಬೆಟ್ಟಗಳು, ಪ್ರಕೃತಿಯ ವಿಹಂಗಮ ನೋಟ, ವಿಶ್ವ ಪ್ರಸಿದ್ದ ಜೋಗದ ಜಲಪಾತ ಒಂದೇ ಎರಡೇ ವರ್ಣಿಸಲು! ಅದರಲ್ಲೂ ಈಗ ಹೆಣ್ಣು ನೋಡಲಿಕ್ಕೆ ಹೊರಟಿರುವುದು ಅದೇ ಮಲೆನಾಡಿಗೆ. ಆಗ ಗುನುಗಿದ್ದೆ.. "ಮಲೆನಾಡ ಹೆಣ್ಣ ಮೈ ಬಣ್ಣ - ಬಲು ಚೆನ್ನ ಲಲಲಲಲಾ..." ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ವಿಷ್ಣುವರ್ಧನ್ ಹೇಳೋ ಈ ಹಾಡನ್ನ (ಪಕ್ಕದಲ್ಲಿರೋರಿಗೆ ಕೇಳದಂತೆ). ಈ ಹುಡುಗಿ ಏನಾದರು ಈ ಹಾಡಿಗೆ ತಕ್ಕಂತೆ ಇರಬಹುದಾ ಅಂತ ಯೋಚಿಸುತ್ತ ಸುತ್ತ-ಮುತ್ತಲ ಪ್ರಕೃತಿಯ ಕಡೆಗೆ ಕಣ್ಣಾಯಿಸಿ ಕೂತಿದ್ದೆ. ಅಲ್ಲಿಯವರೆಗೂ ಇದ್ದ ಸೂರ್ಯ ಇದ್ದಕಿದ್ದಂತೆ ಮಾಯ. ನೋಡಿದರೆ ಆಗಸದಲ್ಲಿ ಕಪ್ಪು ಮೋಡಗಳು. ಓಹ್ ಓಹ್ ಅಂತ ಹೇಳೋದರಲ್ಲಿ ಪಟ ಪಟ ಅಂತ ಮಳೆ ಹನಿಗಳು ಆರಂಭವಾಗಿಯೇ ಬಿಟ್ಟವು. ಮಳೆಯಲ್ಲೇ ಸಾಗರಕ್ಕೆ ಹೋಗಿ ಸೇರಿದಾಗ ಮಧ್ಯಾನ್ಹ ಎರಡಾಗಿತ್ತು. ಅಲ್ಲೇ ಹೋಟೆಲ್ನಲ್ಲಿ ಸ್ವಲ್ಪ ಏನೋ ತಿಂದು ಇನ್ನು 20 ಮೈಲಿ ದೂರವಿದ್ದ ಆ ಊರಿಗೆ ಸಾಗಿತ್ತು ಪಯಣ. ಹೇಳಿ ಕೇಳಿ ಮಲೆನಾಡು. ಜೀ ಅಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಜೋರಾಗಿ ಬೀಸುತ್ತಿರುವ ಗಾಳಿ. ಕಿರಿದಾದ ಮಣ್ಣು-ದಿನ್ನೆಯ ರಸ್ತೆ, ಅಲ್ಲಲ್ಲಿ ಜೋರಾಗಿ ಬೀಸಿದ ಗಾಳಿಗೆ ಬಿದ್ದ ಸಣ್ಣ ಸಣ್ಣ ರಂಬೆಗಳು. ಹೋಗಿ ತಲುಪುತ್ತಿವೋ ಇಲ್ಲ ಅಂತ ಅನುಮಾನ ಆಗತೊಡಗಿತ್ತು.

ಇನ್ನೇನು 1 ಮೈಲಿ ದೂರ ಇದೆ ಅನ್ನುವಾಗ ರೋಡಲ್ಲಿ ಯಾರೋ ಇಬ್ಬರು ಕೈ ಮಾಡಿ ಗಾಡಿ ನಿಲ್ಲಿಸಿದಾಗ, ಏನೆಂದು ವಿಚಾರಿಸಿದರೆ ತಿಳಿಯಿತು. ಮುಂದೆ ಒಂದು ದೊಡ್ಡ ಮರ ಬಿದ್ದು ಆ ಮಣ್ಣಿನ ರಸ್ತೆ ಬ್ಲಾಕ್ ಆಗಿದೆ ಎಂದು. ನಂತರ ಅವರಿಬ್ಬರಲ್ಲಿ ಒಬ್ಬರು ಹುಡುಗಿಯ ಚಿಕ್ಕಪ್ಪ, ಮತ್ತೊಬ್ಬ ಅವರ ಮನೆ ಕೆಲಸದವ ಅಂತ ಗೊತ್ತಾಯಿತು. ಪಾಪ ನಮ್ಮನ್ನು ಕರೆದೊಯ್ಯಲು ಅವರು ಆ ಮಳೆ-ಗಾಳಿಯಲ್ಲಿ ತೋಯ್ದು ನಿಂತಿದ್ದರು. ಬೇರೆ ದಾರಿ ಇಲ್ಲದೆ ಟಾಟಾ ಸುಮೋ ಅಲ್ಲೇ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಹೊರಟೆವು. ಅಷ್ಟೊತ್ತಿಗೆ ಮಳೆ ಸ್ವಲ್ಪ ನಿಂತಿತ್ತು. ದಟ್ಟ ಕಾಡಿನ ಮಧ್ಯೆ ಅಲ್ಲೊಂದು ಇಲ್ಲೊಂದು ಮನೆಗಳು, ತೆಂಗು-ಅಡಿಕೆ ತೋಟಗಳು, ಹಚ್ಚ ಹಸಿರಿಂದ ಕಾಣುತ್ತಿದ್ದ ಬತ್ತದ ಗದ್ದೆಗಳು, ಅಲ್ಲಲ್ಲಿ ಕಂಡು ಬಂದ ನವಿಲು, ಮುಂಗುಸಿ ಮೊದಲಾದ ಸಣ್ಣ ಸಣ್ಣ ಪ್ರಾಣಿಗಳು. ನೋಡಲು ನಯನ ಮನೋಹರವಾಗಿತ್ತು. ವಧು ನೋಡಲು ಹೋಗಲಿಕ್ಕೆ ಇಷ್ಟೊಂದು ಕಷ್ಟ ಆದರೆ, ಮದುವೆ ಆದ ಮೇಲೆ ಇನ್ನೇನು ಗತಿನೋ ಅನ್ನೋ ಒಂದು ಸಣ್ಣ ಆಲೋಚನೆಯೂ ಆಗೇ ಬಂದು ಹೋಗಿತ್ತು ಮನದಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+