ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ ಶ್ರೀನಿವಾಸ ಕಥೆ : ಪ್ರೊಫೆಸರ್ ಜಾರ್ಜ್ ಬಟ್ಲರ್

By ಸಿಡ್ನಿ ಶ್ರೀನಿವಾಸ್
|
Google Oneindia Kannada News

Professor George Butler : A Short story
ಪ್ರೀತಿ, ಪ್ರೇಮ, ಪ್ರಣಯ, ಮದುವೆ, ಮಕ್ಕಳು, ಆನಂತರದಲ್ಲಿ ವಿಚ್ಛೇದನ. ವಿಚ್ಛೇದನ ಪ್ರೀತಿ, ಪ್ರೇಮ, ಪ್ರಣಯದಿಂದಲ್ಲ. ಮೊದಲ ಹೆಂಡತಿಯಿಂದ ಅಥವಾ ಮೊದಲ ಗಂಡನಿಂದ. ಜನಜನಿತವಾಗುತ್ತಿರುವ ಜಾಗತಿಕ ಜೀವನ ಶೈಲಿಗಳನ್ನು ಕಥಾವಸ್ತುವಾಗಿ ಇಟ್ಟುಕೊಂಡು, ಆಸ್ಟ್ರೇಲಿಯಾ ನೆಲದಲ್ಲಿ ನಿಂತು ಬರೆದ ಕಥೆ.

ಒಮ್ಮೆಗೇ ಚರ್ಚಿನ ಆರ್ಗನ್ ಸಂಗೀತ ಹೊರಹೊಮ್ಮಿತು . ವಿಖ್ಯಾತ ಬ್ರೈಡಲ್ ಮಾರ್ಚ್. ಸಭಿಕರೆಲ್ಲಾ ಎದ್ದು ನಿಂತು ಬಾಗಿಲಕಡೆ ಮುಖ ತಿರುಗಿಸಿದರು. ಮುದ್ದಾದ ಇಬ್ಬರು ಚಿಕ್ಕ ಹುಡುಗಿಯರು, ಬ್ರೈಡಲ್ ಮೈಡ್ಸ್, ಕೈಗಳಲ್ಲಿ ಹೂಗೊಂಚಲುಗಳನ್ನು ಹಿಡಿದು, ಎಚ್ಚರವಾಗಿ ಹೆಜ್ಜೆ ಇಡುತ್ತಾ ಸಭಿಕರ ಮಧ್ಯೆ ಇದ್ದ ಹಾದಿಯ ಇಕ್ಕೆಲದಲ್ಲಿ ನಡೆದರು. ಅವರ ಹಿಂದೆ ಭರ್ಜರಿ ಸೂಟು, ಬೂಟು, ಹ್ಯಾಟು ಧರಿಸಿದ್ದ ಪ್ರೊಫೆಸರ್ ಜಾರ್ಜ್ ಬಟ್ಲರ್ ನಗುತ್ತಾ ತಮ್ಮ ಮೂರನೆ ಮಗಳು ವಧು ಅನಿಟಾಳನ್ನು ಕೈಹಿಡಿದು ಸಭೆಗೆ ಕರೆದುಕೊಂಡು ಬಂದರು.

"ಎಷ್ಟು ಮುದ್ದಾಗಿದ್ದಾಳೇ ಹುಡುಗಿ" ಎನ್ನುತ್ತಾ ಎಲ್ಲರೂ ಅವಳನ್ನು ನೋಡುವವರೇ. ವೇದಿಕೆಯವರೆಗೂ ಮಗಳೊಡನೆ ಬಂದರು. ಅಲ್ಲಿ ವರ ಡೇವಿಡ್ ಹಾಫ್‍ಮನ್ ಮುಗುಳ್ನಗುತ್ತಾ ಕಾದು ನಿಂತಿದ್ದ. ಅನಿಟಾ ಒಬ್ಬಳೇ ಮೆಟ್ಟಿಲುಗಳನ್ನು ಹತ್ತಿಹೋಗಿ ಡೇವಿಡ್ಡನ ಕೈಹಿಡಿದಳು. ಪ್ರೊಫೆಸರ್ ಹೋಗಿ ತಮ್ಮ ಹೆಂಡತಿ ಮೆಲೊನಿಯ ಪಕ್ಕ ಕುಳಿತರು. ಎಲ್ಲೆಲ್ಲೂ ಸಡಗರ. ಬಿಳಿಬಟ್ಟೆಯಲ್ಲಿ ಅನಿಟಾ, ನೀಲಿಯ ಸೂಟ್‍ಧಾರಿ ಡೇವಿಡ್.

ಸಿಡ್ನಿಯಲ್ಲಿ ಸ್ತ್ರಾತ್‍ಫೀಲ್ಡ್ ಎಂಬಲ್ಲಿನ ದೊಡ್ಡ ಚರ್ಚ್ನಲ್ಲಿ ಮದುವೆ. ಪುರೋಹಿತ ಪಾದ್ರಿ ನಿಂತು ಮದುವೆಯ ಬಗ್ಗೆ ಒಂದೆರಡು ಮಾತನಾಡಿ ವಧೂವರರ ಮುಂದೆ ನಿಂತರು. ಪರಸ್ಪರ ಉಂಗುರಗಳನ್ನು ತೊಡಿಸುವಂತೆ ಸೂಚನೆ ಇತ್ತರು. ನಂತರ ಡೇವಿಡ್ಡನಿಗೆ ಹೇಳಿಕೊಟ್ಟರು :

"ಅನಿಟಾ, ನೀನು ನೋವು, ನಲಿವುಗಳಲ್ಲಿ, ಬಡತನ, ಸಿರಿತನಗಳಲ್ಲಿ, ಸುಖ, ದುಃಖಗಳಲ್ಲಿ, ಸಾವು ನಮ್ಮನ್ನು ಬೇರ್ಪಡಿಸುವ ವರೆಗೂ ಪ್ರೀತಿಯಿಂದ ನನ್ನೊಡನೆ ನನ್ನ ಹೆಂಡತಿಯಾಗಿ ಇರುತ್ತೀಯಾ?"

"ಹೌದು" ಎಂದಳು ಅನಿಟಾ.

ಆನಿಟಾಗೆ ಹೇಳಿಕೊಟ್ಟರು -

" ಡೇವಿಡ್, ನೀನು ನೋವು, ನಲಿವುಗಳಲ್ಲಿ, ಬಡತನ, ಸಿರಿತನಗಳಲ್ಲಿ, ಸುಖ, ದುಃಖಗಳಲ್ಲಿ, ಸಾವು ನಮ್ಮನ್ನು ಬೇರ್ಪಡಿಸುವ ವರೆಗೂ ಪ್ರೀತಿಯಿಂದ ನನ್ನೊಡನೆ ನನ್ನ ಗಂಡನಾಗಿ ಇರುತ್ತೀಯಾ?"

"ಹೌದು" ಎಂದ ಡೇವಿಡ್.

"ಈಗ ನೀವಿಬ್ಬರೂ ದಂಪತಿಗಳು ಎಂದು ಘೋಷಿಸುತ್ತೇನೆ. ಈಗ ನೀವಿಬ್ಬರೂ ಪರಸ್ಪರ ಚುಂಬಿಸಬಹುದು."

ಎಲ್ಲೆಲ್ಲೂ ಚಪ್ಪಾಳೆ, ಕೇಕೆ.

ಸಂಜೆ ಹತ್ತಿರದ ಸಭಾಂಗಣ ಒಂದರಲ್ಲಿ ರಿಸೆಪ್ಷನ್. ಹುಡುಗ, ಹುಡುಗಿ ಅವರದ್ದೇ ಎಲ್ಲಾ ವ್ಯವಸ್ಥೆ, ಅಪ್ಪ ಅಮ್ಮಂದಿರೂ ಅತಿಥಿಗಳು. ತಮಗೆ ಬೇಕಾದ ಬಂಧು, ಬಳಗ, ಸ್ನೇಹಿತರು ಎಲ್ಲಾ ಸೇರಿದ್ದಾರೆ. ಎಲ್ಲರಿಗೂ ಡ್ರಿಂಕ್ಸ್ ಆಯಿತು. ನಂತರ ಆಂಟ್ರೆ. ಮುಗಿಯಿತ್ತಿದ್ದಂತೆ MC ಹೇಳಿದ.

"ಈಗ ಕೆಲವು ಸ್ಪೀಚ್ ಗಳು. ಮೊದಲಿಗೆ ಡೇವಿಡ್‍ನ ತಂದೆ ಮತ್ತು ತಾಯಿ ಮಾತನಾಡುತ್ತಾರೆ. ಅವರಿಬ್ಬರೂ ಬಂದು ಧ್ವನಿ ವರ್ಧಕದ ಮುಂದೆ ನಿಂತು ತಾವು ಬರೆದುಕೊಂಡು ಬಂದಿದ್ದ ಭಾಷಣವನ್ನು ಓದಿ ಹೇಳಿದರು."ಅನಿಟಾ ನಮಗೆ ಹೊಸಬಳಲ್ಲ. ಅವಳ ಶಾಲಾ ದಿನಗಳಿಂದ ನಮಗೆ ತಿಳಿದ ಹುಡುಗಿ. ಅವಳು ಡೇವಿಡ್‍ನನ್ನು ಮದುವೆಯಾಗಿರುವುದು ಸಂತೋಷ. ಅವರಿಬ್ಬರಿಗೂ ಎಲ್ಲಾ ಒಳ್ಳೆಯದಾಗಲಿ"

MC ಹೇಳಿದ, "ಈಗ ಅನಿಟಾಳ ತಂದೆ ಪ್ರೊಫೆಸರ್ ಜಾರ್ಜ್ ಬಟ್ಲರ್ ಅವರು ಮಾತನಾಡುತ್ತಾರೆ."
ಪ್ರೊಫೆಸರ್ ತಮ್ಮ ಭಾಷಣಕ್ಕೆ ಸಂಗಾತಿಯನ್ನು ಜತೆಗೆ ಕರೆಯಲಿಲ್ಲ. ಎಷ್ಟಾದರೂ ಕಾಲೇಜಿನಲ್ಲಿ ಮಾತನಾಡುವ, ಉಪನ್ಯಾಸ ಮಾಡುವ ಅಭ್ಯಾಸ ಇದ್ದವರು. ಅವರಿಗೇಕೆ ಸಹಾಯ! ಪ್ರಾರಂಭಿಸಿದರು:

"ಅನಿಟಾ ಇಂದು ಡೇವಿಡ್‍ನನ್ನು ಮದುವೆಯಾಗಿರುವುದು ನನಗೆ ಮತ್ತು ಸ್ಟೆಫನಿಗೆ ಬಹಳ ಸಂತೋಷದ ವಿಷಯ."
ಸಭೆಯಲ್ಲಿ ಗುಜು ಗುಜು ಆಯಿತು. ಪ್ರತಿಯೊಬ್ಬರೂ ತಮ್ಮ ಪಕ್ಕದಲ್ಲಿದ್ದವರ ಮುಖ ನೋಡಿಕೊಂಡರು. ಅರಿವಾಯಿತು ಪ್ರೊಫೆಸರ್ ಅವರಿಗೆ. ತಕ್ಷಣ ಹೇಳಿದರು,

"ಸಾರಿ, ಸಾರಿ, ನನಗೆ ಮತ್ತು ಮೆಲೊನಿಗೆ."

ಯಾರೋ ಹಿಂದಿನಿಂದ " Absent minded professor ಎಂದು ಕೂಗಿದರು.
"ಸ್ವಲ್ಪ ಹಾಗೆಯೇ" ಎಂದು ಪ್ರೊಫೆಸರ್ ನಕ್ಕರು, ಇಲ್ಲ, ಹಲ್ಲು ಕಿರಿದರು. ನಂತರ ಏನೋ ಮಾತಾಡಿದರು, ಆದರೆ ಮಾತಿಗಿಂತ ತೊದಲೇ ಜಾಸ್ತಿ ಆಯಿತು. ತಾವು ಮಾಡಿದ ತಪ್ಪು ಅವರನ್ನು ಪೇಚಿಗೆ ಸಿಕ್ಕಿಸಿತ್ತು. ಇಲ್ಲದಿದ್ದರೆ ನಿರರ್ಗಳವಾಗಿ ಗಂಟೆಗಟ್ಟಲೆ ಮಾತಾಡುತ್ತಿದ್ದರು. ಕುಳಿತಕಡೆಯೇ ಮೆಲೊನಿ ಹಲ್ಲು ಹಲ್ಲು ಕಡೆದಳು, ಎಲ್ಲರೆದುರು ಹೆಚ್ಚು ಮಾತನಾಡುವಂತಿಲ್ಲ.

ನಂತರ ಅನಿಟಾಳ ಗೆಳತಿಯೊಬ್ಬಳು ಮತ್ತು ಡೇವಿಡ್‍ನ ಗೆಳೆಯನೊಬ್ಬ ಮಾತನಾಡಿದರು. ಪ್ರೇಕ್ಷಕರನ್ನು ಅತ್ಯಂತ ರಂಜಿಸಿದ ಭಾಷಣಗಳು, ಡೇವಿಡ್ ಮತ್ತು ಅನಿಟಾ ಅವರ ಪ್ರೇಮೋದ್ಯೋಗ ಅವರ ಮಾತಿನ ವಸ್ತು. ಯಾರಿಗೂ ಗೊತ್ತಿಲ್ಲದ ಅನೇಕ ಸಂಗತಿಗಳು ಹೊರಬಂದವು. ಎಲ್ಲರೂ ಚಪ್ಪಾಳೆ ತಟ್ಟಿದ್ದೇ ತಟ್ಟಿದ್ದು, ಕೇಕೆ ಹಾಕಿದ್ದೇ ಹಾಕಿದ್ದು. ಇದಾದ ಮೇಲೆ ವಧು, ವರರ ಮಾತು. ಅವರಂತೂ ಒಬ್ಬರನ್ನೊಬ್ಬರು ಹಿಡಿದುಕೊಂಡೇ ಮಾತನಾಡಿದರು. ತಂದೆ ತಾಯಂದಿರನ್ನು ಹೊಗಳಿದ್ದೇ ಹೊಗಳಿದ್ದು. "ಅವರ ತ್ಯಾಗದಿಂದ ನಾವು ಇಂದು ಈ ಮಟ್ಟಕ್ಕೇರಿದ್ದೇವೆ."

ನಂತರ ಯಾರೋ ಟೋಸ್ಟ್ ಹೇಳಿದರು. ಶಾಂಪೇನ್ ಸುರಿಮಳೆ ಆಯಿತು. ಎಲ್ಲರೂ ತಂತಮ್ಮ ಗ್ಲಾಸುಗಳನ್ನೆತ್ತಿ "ಟು ಅನಿಟಾ ಅಂಡ್ ಡೇವಿಡ್" ಎಂದು ಧ್ವನಿಗೂಡಿಸಿದರು. ಬೃಹತ್ ಎನ್ನಬಹುದಾದ ಕೇಕ್ ಒಂದನ್ನು ಗಾಲಿಗಳ ಮೇಲಿರಿಸಿ ತಂದದ್ದಾಯಿತು. ಮಧುಮಕ್ಕಳು ಅದನ್ನು ಕತ್ತರಿಸಿದರು. ಒಬ್ಬರಿಗೊಬ್ಬರು ಕೇಕ್ ಚೂರನ್ನು ತಿನಿಸಿದರು. ಮತ್ತೆ ಚುಂಬನದ ಸುರಿಮಳೆ. ಆಗ M C ಹೇಳಿದ. "ದಯವಿಟ್ಟು ಎಲ್ಲಾ ವೃತ್ತಾಕಾರದಲ್ಲಿ ನಿಲ್ಲಿ. ಮಧು ಮಕ್ಕಳು ಡಾನ್ಸ್ ಆಡಲಿ". ವಿಷೇಶ ಸಂಗೀತ ಮೂಡಿ ಬಂತು. ಡೇವಿಡ್ ಮತ್ತು ಅನಿಟಾ ಪರಸ್ಪರ ಆಲಂಗಿಸಿಕೊಂಡು ಡಾನ್ಸ್ ಆರಂಭಿಸಿದರು. "ಎದೆಗೆ ಎದೆ ತಾ, ನನ್ನವಳೇ!"

ಐದೇ ನಿಮಿಷದಲ್ಲಿ ಎಲ್ಲೆಲ್ಲೂ ಡಾನ್ಸ್ ಆಡುವವರೇ! ಕೆಲವು ಹುಡುಗರು ಬಯಸಿ, ಬಯಸಿ ವಧು ಅನಿಟಾಳ ಜತೆ, ಕೆಲವು ಹುಡುಗಿಯರು ವರ ಡೇವಿಡ್‍ನ ಜತೆ; ಅಲ್ಲದೆ ಬೀಗರುಕೂಡ ಮೊದಲು ದಂಪತಿಗಳು, ನಂತರ ಗಂಡ ಹೆಂಡಿರನ್ನು ಬದಲಾಯಿಸಿಕೊಂಡು ಡಾನ್ಸ್ ಆಡಿದ್ದೇ ಆಡಿದ್ದು. ಇದಾದನಂತರ ಡಿಸ್ಕೋ. ಮುಗಿಲು ಮುಟ್ಟುವ ಸಂಗೀತ, ಬಾನಿನೆತ್ತರಕ್ಕೆ ಕುಣಿತ. ಈ ಮಧ್ಯದಲ್ಲಿ ಪ್ರೊಫೆಸರ್ ಅವರ ಸೆಕ್ರೆಟರಿ ಸ್ತೆಫ್ನಿ ಎಲ್ಲಿಂದಲೋ ಬಂದು ಅನಿಟಾಳನ್ನು ತಬ್ಬಿಕೊಂಡು ಅಲ್ಲೇ ಹತ್ತಿರವಿದ್ದ ಪ್ರೊಫೆಸರ್ ಅವರನ್ನೂ ಬರಸೆಳೆದು ಡಾನ್ಸ್ ಮಾಡಿ ಒಂದೇ ಕ್ಷಣದಲ್ಲಿ ಮಾಯವಾದಳು. ನೋಡಿದ ಮೆಲೊನಿ ಕಿಡಿಕಾರಿದಳು - "ಇವಳನ್ನು ಯಾರು ಕರೆದಿದ್ದು?"

ರಾತ್ರಿ ಹನ್ನೆರಡು ಹೊಡೆಯುತ್ತಿದ್ದಂತೇ M C ಹೇಳಿದ,

"ಕಾರ್ಯಕ್ರಮದ ಕೊನೆಯ ಹಂತ ಇದು. ನೀವೆಲ್ಲಾ ನಿಮ್ಮ ಪಾರ್ಟ್ನರುಗಳ ಕೈಹಿಡಿದುಕೊಂಡು ಒಂದು ಕಮಾನು ಮಾಡಿ, ಉದ್ದಕ್ಕೂ ನಿಲ್ಲಿ ಈಗ." ತಕ್ಷಣ ಗಂಡ ಹೆಂಡರು, ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ಡ್ ಗಳು ಎದುರುಬದುರು ನಿಂತು ತಮ್ಮ ಎರಡೂ ಕೈಗಳಿಂದ ಸಂಗಾತಿಯ ಎರಡೂ ಕೈಗಳನ್ನೂ ಹಿಡಿದು ಒಂದು ಸುರಂಗವನ್ನು ನಿರ್ಮಿಸಿದರು. ಡೇವಿಡ್ ಮತ್ತು ಅನಿಟಾ ಅದರ ಮಧ್ಯೆ ನಡೆದು, ಎಲ್ಲರಿಗೂ thanks ಹೇಳಿ ಹೊರಬಂದರು. ಅಲ್ಲಿ ಅವರಿಗಾಗಿ ಬಿಳಿಯ ಲಿಮೋಸಿನ್ ಕಾರು ಕಾದಿತ್ತು. ಅದರಲ್ಲಿ ಕುಳಿತು ಇಬ್ಬರೂ ತಮ್ಮ ಹನಿಮೂನ್‍ಗೆ ತೆರಳಿದರು.

ನೆರೆದಿದ್ದ ಜನ ಅಲ್ಲಿಂದ ಸರಿಯಲಾರಂಭಿಸಿದರು, ಕೆಲವರು ತಂತಮ್ಮ ಮನೆಗಳಿಗೆ, ಕೆಲವರು ಡ್ರಿಂಕ್ಸ್ ಅರಸಿ ಬಾರುಗಳತ್ತ, ಕೆಲವರು ತಮ್ಮ ಒಂಟಿಜೀವನದ ಏಕಾಂತಕ್ಕೆ! ಬಂದಿದ್ದ ಉಡುಗೊರೆಗಳನ್ನು ಡೇವಿಡ್ ಮತ್ತು ಅನಿಟಾರ ಸ್ನೇಹಿತರು ಕಾರುಗಳಲ್ಲಿ ತುಂಬಿಸಿದರು. ಪ್ರೊಫೆಸರ್ ಬಟ್ಲರ್ ಹೋಗಿ ತಮ್ಮ ಕಾರಿನಲ್ಲಿ ಕೂತರು. ಅವರ ಹೆಂಡತಿ ಮೆಲೊನಿ ಸ್ವಲ್ಪ ಗುರ್ ಗುರು ಎನ್ನುತ್ತಲೇ ಕಾರಿನೊಳಗೆ ಬಂದು ಕುಳಿತಳು. ಕಾರು ಚಲಿಸಲಾರಂಭಿಸಿತು, ಮೆಲೊನಿ ಶುರು ಮಾಡಿದಳು.

"ಏನು ಕುಡಿದಿದ್ದೆಯ ನೀನು? ಭಾಷಣ ಮಾಡುವಾಗ ಎಚ್ಚರ ಬೇಡವೆ."

ಪ್ರೊಫೆಸರ್ "ಸರಿ, ಸರಿ" ಎಂದಷ್ಟೇ ಹೇಳಿದರು. ಅವರ ಮನೆ ರೋಸ್‍ವಿಲ್‍ನಲ್ಲಿ; ಸುಮಾರು ಇಪ್ಪತ್ತು ಕಿಲೋಮೀಟರ್ ದೂರ; ಅರ್ಧ ಗಂಟೆಯ ಡ್ರೈವ್. ದಾರಿಯುದ್ದಕ್ಕೂ ಮೆಲೊನಿ ಒಂದಲ್ಲ ಒಂದು ಮಾತು ಹೇಳಿಕೊಂಡೇ ನಡೆದಳು.

"ಡೇವಿಡ್ ಎಲ್ಲಾ ಸರಿ. ಆದರೆ ಹೇರ್‍ಕಟ್ ಮಾಡಿಸ್ಕೋ ಬೇಕಾಗಿತ್ತು."

"ಅಲೀಶಾ ಗೆ ಏಷ್ಟು ಹೇಳಿದ್ದೀನಿ, ಬೇಗಬೇಗ ರೆಡಿ ಆಗಿ ಬಾ ಅಂತ, ಆದರೂ ಲೇಟಾಗಿ ಬಂದಿದ್ದಾಳೆ."

"ಡಿನ್ನರ್ ಸುಮಾರೇ ಅನ್ನ ಬೇಕು. ಹಾಗಾ ಕುಕ್ ಮಾಡೋದು? ಆ ಸರ್ವಿಸ್ಸು ಅಷ್ಟೆ. ನನಗೆ ಕೇಟರರ್ ಮೇಲೆ ಕೋಪಾನೇ ಬಂತು. ಅವನಿಗೆ ಸರಿಯಾಗಿ ಹೇಳಿದ್ದೀನಿ."

ಪ್ರೊಫೆಸರ್ ಒಂದು ಮಾತೂ ಆಡಲಿಲ್ಲ. ರೇಗಿದಳು ಮೆಲೊನಿ :

"ಅದೇನು ಕೇಳಿಸ್ಕೋತಾಇದ್ಯೊ, ಇಲ್ಲವೊ? ಅಥವಾ ಎನಾದರೂ ಯೋಚನೆ ಮಾಡ್ತಾ ಇದ್ಯೋ?"

ಅದಕ್ಕೂ ಉತ್ತರ ನೀಡಲಿಲ್ಲ ಪ್ರೊಫೆಸರ್. ಇದು ಮೆಲೊನಿಗೆ ಹೊಸದೇನಲ್ಲ. ಎಷ್ಟೋ ಸಲ ಆಗುತ್ತಿತ್ತು.
" ಕುಡಿದಿರೋಹಾಗಿದೆ. ಮೊದಲೇ ಇದು ಶನಿವಾರ ರಾತ್ರಿ, ಎಲ್ಲೆಲ್ಲೂ ಪೊಲೀಸರೇ. ಸುಮ್ಮನೆ ಟ್ಯಾಕ್ಸಿಯಲ್ಲಿ ಬರಬೇಕಾಗಿತ್ತು."
ಮತ್ತೆ ತಮ್ಮ ಟೇಪ್ ಹಾಕಿದಳು ಮೆಲೊನಿ.

"ಆದೇನು ಸ್ಪೀಚಾ ನೀನ್ ಮಾಡಿದ್ದು. ತೀರಾ ಸಪ್ಪೆ. ಒಂದುಸಲ ನನಗೆ ತೋರಿಸಿದ್ದರೆ ನಾನು ಸ್ಪೀಚ್ ಸರಿಮಾಡಿ ಕೊಡುತ್ತಿದ್ದೆ."
ತಡೆಯಲಾಗಲಿಲ್ಲ, ಪ್ರೊಫೆಸರ್ ಅವರಿಗೆ. ತಕ್ಷಣ ಬ್ರೇಕ್ ಹಾಕಿ ಕಾರ್ ನಿಲ್ಲಿಸಿ,

"ನಿನ್ನ ಮಾತನ್ನು ನಿಲಿಸುತ್ತೀಯೋ, ಅಥವಾ ನಾನು ಇಳಿದು ಟ್ಯಾಕ್ಸಿ ತೊಗೊಂಡು ಹೋಗಲೋ"

ಮೆಲೊನಿಗೆ ಎರಡು ತಿಂಗಳ ಹಿಂದೆ ಆದ ಘಟನೆ ನೆನಪಿಗೆ ಬಂತು. ಹೀಗೆ ಪ್ರೊಫೆಸರ್ ಡ್ರೈವ್ ಮಾಡುತ್ತಾ ಇದ್ದಾರೆ, ಮೆಲೊನಿ ಅವರನ್ನು ಖಂಡಿಸಿ ಎಡಬಿಡದೆ ಮಾತನಾಡುತ್ತಾ ಇದ್ದಾಳೆ. ರೇಗಿ ಶಿಟ್ ಎಂದ ಪ್ರೊಫೆಸರ್ ರೆಡ್ ಲೈಟಿನ ಮೂಲಕ ಹೋಗಿ ಒಂದು ಕಾರಿಗೆ ಡಿಕ್ಕಿ ಹೊಡೆದಿದ್ದರು. ಅವರ ಪುಣ್ಯ, ಯಾರಿಗೂ ಗಾಯ ಇತ್ಯಾದಿ ಆಗಲಿಲ್ಲ. ಮೆಲೊನಿ ಹೇಳಿದಳು,

"ಇಷ್ಟು ಚಿಕ್ಕ ವಿಚಾರಕ್ಕೆ ಹೀಗೆಲ್ಲಾ ಆಡಿದರೆ ನಿನಗೆ ತಲೆ ಸರಿ ಇಲ್ಲ ಅಂತ ಕಾಣುತ್ತೆ. ನಾನು ಸುಮ್ಮನಿರ್ತೀನಿ, ಬೇಗ ಮನೆ ತಲಪಿಸು."

ಅರ್ಧ ಗಂಟೆಯ ಹಾದಿ, ಇಂದು ನಾಲ್ಕಾರು ಗಂಟೆಯಂತೆ ಭಾಸವಾಯಿತು. ಅಂತೂ ಮನೆ ಬಂತು. ಮೆಲೊನಿ "ಹೋಗಿ ಗೇಟ್ ತೆಗೆಯುತ್ತೇನೆ. ನೀನು ಕಾರ್ ಒಳಗೆ ತರಬಹುದು"ಎನ್ನುತ್ತಾ ಕಾರಿನ ಬಾಗಿಲು ತೆರೆಯಹೋದಳು.

"ಗೇಟ್ ತೆಗೆಯುವ ಅಗತ್ಯವಿಲ್ಲ. ನಾನು ಎಲ್ಲೋ ಹೋಗುತ್ತಿದ್ದೇನೆ."
"ಈ ಮಧ್ಯರಾತ್ರಿ ಎಲ್ಲಿಗೆ ಹೋಗೋದು?"
"ಎಲ್ಲಿಗೆ ಅಂತ ನಾನು ನಿನಗೆ ಹೇಳಬೇಕಾಗಿಲ್ಲ."
"ಅಂದರೆ?"
"ನಮ್ಮ ಸಂಬಂಧ ಇಲ್ಲಿಗೆ ಮುಗಿಯಿತು. ಮುಂದಿನ ಮಾತುಕತೆ ಆಮೇಲೆ."
ಕಾರಿನಿಂದ ಹೊರಬಂದು ನಿಂತ ಮೆಲೊನಿಗೆ ಒಂದು ಕ್ಷಣ ದಿಕ್ಕು ತೋಚದ ಹಾಗಾಯಿತು. ತಡೆಯಲಾರದ ತಲೆನೋವು ಬೇರೆ. ಸುಮ್ಮನೆ ಮನೆಯ ಬಾಗಿಲು ತೆರೆದು ಒಳಬಂದಳು.

ಪ್ರೊಫೆಸರ್ ಜಾರ್ಜ್ ಬಟ್ಲರ್ ಪ್ರತಿಭಾವಂತ, ಬಯೋ ಕೆಮಿಸ್ಟ್ರಿಯಲ್ಲಿ ಹೆಸರಾಂತ ವಿಜ್ಞಾನಿ. ಶಾಲಾದಿನಗಳಿಂದಲೂ ಮೇಧಾವಿ ಎನ್ನಿಸಿದ ವ್ಯಕ್ತಿ. ಓದಿದ್ದು ಸಿಡ್ನಿ ವಿಶ್ವವಿದ್ಯಾಲಯದಲ್ಲಿ. ತಮ್ಮ ಮೊದಲ ಡಿಗ್ರಿ ಮುಗಿಯುವ ಹೊತ್ತಿಗೆಲ್ಲಾ ಅವರಿದ್ದ ಬೀದಿಗೆ ಬ್ಯೂಟಿ ಕ್ವೀನ್ ಎನಿಸಿದ್ದ ಮೆಲೊನಿಯ ಪರಿಚಯವಿತ್ತು. ಆಕೆ ಇನ್ನೂ ಡಿಗ್ರಿ ವಿದ್ಯಾರ್ಥಿನಿ. ಇಬ್ಬರೂ ನೆಚ್ಚಿ ಮೆಚ್ಚಿ ಕೂಡಿದ್ದರು. ಒಂದೊಂದೇ ಮೆಟ್ಟಿಲ್ಲನ್ನೇರುತ್ತಾ ಜಾರ್ಜ್ ಪಿ ಹೆಚ್ ಡಿ ಮುಗಿಸಿದರು, ತಮ್ಮ ವಿಶ್ವವಿದ್ಯಾಲದಲ್ಲೇ ಉಪನ್ಯಾಸಕರೂ ಆದರು. ಆವೇಳೆಗೆ ಮೆಲೊನಿ ಓದು ಮುಗಿದಿತ್ತು. ಪ್ರತಿಭಾವಂತ ಜಾರ್ಜ್ ವರ್ಷ ವರ್ಷವೂ ನಾಲ್ಕಾರು ಅಂತರ ರಾಷ್ಟ್ರೀಯ ಸೆಮ್ನಾರು ಅಂತ ಅಮೆರಿಕಾ, ಯೂರೊಪುಗಳ ಪ್ರವಾಸ ಮಾಡುತ್ತಿದ್ದರು. ಜೊತೆಗೆ ಮೆಲೊನಿ.

ಹೀಗೆ ಗಂಡನೊಡನೆ ಸುಖವಾಗಿ ಇರುವ ಆಕೆಗೆ ಕೆಲಸ ಮಾಡುವ ಅಗತ್ಯ ಕಾಣಲಿಲ್ಲ. ಬದಲಾಗಿ ಅಲ್ಲಿ ಇಲ್ಲಿ ಸಂಘ ಸಂಸ್ಥೆ ಗಳಲ್ಲಿ ಸದಸ್ಯಳಾಗಿ ಲಂಚ್, ಡಿನ್ನರ್‍ಗಳಲ್ಲಿ ಕಾಲ ಕಳೆದಳು. ಮೂವರು ಹೆಣ್ಣು ಮಕ್ಕಳನ್ನೂ ಜಾರ್ಜ್ ಅವರಿಗೆ ಹೆತ್ತು ಕೊಟ್ಟಳು. ಅಲೀಶಾ, ಆನ್ ಮತ್ತು ಅನಿಟಾ. ಮಕ್ಕಳಾದ ಮೇಲೆ ಮೆಲೊನಿಯ ಗಮನವೆಲ್ಲಾ ಅವರನ್ನು ನೋಡಿಕೊಳ್ಳುವುದರ ಕಡೆ ಹರಿಯಿತು. ಅವರನ್ನು ದಿನಾ ಶಾಲೆಗೆ ಕರೆದೊಯ್ಯುವುದು, ಅವರ ಬಟ್ಟೆ ಬರೆ ಒಗೆಯುವುದು, ಇಸ್ತ್ರಿ ಮಾಡುವುದು, ಅವರಿಗೆ ಲಂಚ್ ಕಟ್ಟಿಕೊಡುವುದು, ಅವರನ್ನು ಸಂಗೀತ ತರಗತಿಗಳಿಗೆ, ಅವರು ಇಷ್ಟಪಟ್ಟ ಕ್ರೀಡಾಚಟುವಟಿಕೆಗೆ ಡ್ರೈವ್ ಮಾಡಿ ಕರೆದೊಯ್ಯುವುದು ಹೀಗೆ; ದಿನಕ್ಕೆ ಇಪ್ಪತ್ತು ನಾಲ್ಕು ಗಂಟೆ ಸಾಲದಾಯ್ತು. ಗಂಡನೊಡನೆಯ ವಿದೇಶಪ್ರಯಾಣಕ್ಕೂ ಕತ್ತರಿಬಿತ್ತು.

ಜಾರ್ಜ್ ಬಟ್ಲರ್ ಮಾತ್ರ ಏಕಾಗ್ರತೆಯಿಂದ ತಮ್ಮ ಸಂಶೋಧನೆಗಳನ್ನು ನಡೆಸಿ, ವಿಶ್ವವಿಖ್ಯಾತರಾದರು. ಪ್ರೊಫೆಸರ್ ಹುದ್ದೆಗೆ ಏರಿದರು. ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅವರ ಮಾರ್ಗದರ್ಶನ ಬಯಸಿದರು. ಎಲ್ಲರನ್ನೂ ಸಂರಕ್ಷಿಸುವ ಪ್ರಾಧ್ಯಾಪಕರಾದರು, ವಿದ್ಯಾರ್ಥಿನಿಯರತ್ತ ಸ್ವಲ್ಪ ಗಮನ ಜಾಸ್ತಿ! ತಮ್ಮ ಇಲಾಖೆಯ ಸೆಕ್ರೆಟರಿಗಳು ಮತ್ತಿತರರು ಜಾರ್ಜ್ ಬಟ್ಲರ್ ಅವರಿಗೆ ತುಂಬಾ ಹತ್ತಿರವಾದರು.

ದೂರ ಸರಿದಂತಿದ್ದ ಸ್ಟೆಫ್ ನಿ ಈಗ ಹತ್ತಿರ ಬಂದಳು. ಈಕೆ ಅವರ ಮದುವೆಗೆ ಮುಂಚಿನಿಂದ ಜಾರ್ಜ್ ಅವರನ್ನು ಬಲ್ಲವಳು. ಮೆಲೊನಿಗಿಂತ ಚಿಕ್ಕವಳು. ಜಾರ್ಜ್ ಅವರಿಗೇ ಏಟು ಹಾಕಿದ್ದಳು; ಆದರೆ ತಪ್ಪಿಹೋಗಿತ್ತು, ಗೆದ್ದಿದ್ದವಳು ಮೆಲೊನಿ. ವಿಶ್ವವಿದ್ಯಾಲಯದಲ್ಲಿಯೆ ಸೆಕ್ರೆಟರಿ ಆಗಿ ಸೇರಿಕೊಂಡಳು ಸ್ಟೆಫ್ ನಿ. ಜಾರ್ಜ್ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಜಾರ್ಜ್ ಬಟ್ಲರ್ ಪ್ರೊಫೆಸರ್ ಆದ ತಕ್ಷಣ ಓಡಿ ಬಂದಳು,

"ನಿಮಗೆ ಸೆಕ್ರೆಟರಿಯೊಬ್ಬಳು ಬೇಕೆನಿಸಿದರೆ ನಾನು ಸಿದ್ಧ."

ಯಾರು ಬೇಡವೆನ್ನುತ್ತಾರೆ? ಮೆಲೊನಿ ಅಂತೆಯೇ ರೂಪವಂತೆ. ಆದರೆ ಮೆಲೊನಿಗೆ ಮೂರು ಮಕ್ಕಳಾಗಿ ಅವಳು ವಯಸ್ಕಳಾಗಿ ಕಾಣುತ್ತಾಳೆ. ಇವಳಿಗೋ ಮದುವೆ ಇಲ್ಲ, ಮಕ್ಕಳಿಲ್ಲ. ಕಾಲೇಜು ಮತ್ತಿತರ ಕಡೆ ಓಡಾಡುವಾಗ ಕಣ್ಣು ಹಾಯಿಸಿ ಆಕೆಯನ್ನು ನೋಡಿದ್ದರು. ಸಂತೋಷವಾಗಿ ಆಕೆಯನ್ನು ಸೆಕ್ರೆಟರಿ ಆಗಿ ನೇಮಿಸಿಕೊಂಡರು.

ಕಾಲಕ್ರಮೇಣ ಜಾರ್ಜ್ ಮನೆಗೆ ಬರುವುದು ತಡವಾಗಲಾರಂಭಿಸಿತು. ಸ್ಟೆಫ್ ನಿಗೆ ಹೆಚ್ಚು ದುಡ್ಡು ನೀಡದಿದ್ದರೂ ಓವರ್ ಟೈಮ್ ಕೆಲಸ ನೀಡುತ್ತಿದ್ದರು. ಮನೆಯಲ್ಲಿ ಮೆಲೊನಿ ಬಗ್ಗೆ ತಾತ್ಸಾರವೂ ಅಂಕುರಿಸಿತು. ಸ್ಟೆಫ್ ನಿಗೆ ತನ್ನ ಕೆಲಸವನ್ನು ಅತಿ ದಕ್ಷಳಾಗಿ ನಿರ್ವಹಿಸಿದಳು. ಜಾರ್ಜ್ ಮೊದಲೇ ರಸಿಕ ಮಹಾಶಯ. ಸೆಕ್ರೆಟರಿಯನ್ನು ಮುಟ್ಟದೇ ಇರುತ್ತಾನೆಯೇ? ಅವಳೂ ಅದಕ್ಕಾಗಿ ಹಲವಾರು ವರ್ಷಗಳ ಕಾಲ ಕಾದಿದ್ದಳು. ಅವರಿಬ್ಬರು ಒಟ್ಟಿಗೆ ಹೋಗಿ ಕಾಫಿ ಕುಡಿಯುವುದು, ವಿಶ್ವವಿದ್ಯಾಲಯದಲ್ಲಿ ವಾಯುವಿಹಾರ ಮಾಡುವುದು ಸಾಮಾನ್ಯವಾಗಿಹೋಯಿತು.

ಯೋಚನೆ ಮಾಡಿದರು ಜಾರ್ಜ್. ಒಬ್ಬರೇ ವಿದೇಶಿ ಕಾನ್ ಫರೆನ್ಸುಗಳಿಗೆ ಹೋಗಿ ಬರುವುದು ಕಷ್ಟ. ತಮ್ಮ ಸಹಾಯಕ್ಕಾಗಿ ಸ್ಟೆಫ್ನಿಯನ್ನು ಕರೆದೊಯ್ಯಲಾರಂಭಿಸಿದರು. ಸಂತೋಷದಿಂದಲೇ ಬಂದಳು ಅವಳು. ಪ್ರೊಫೆಸರ್ ಖರ್ಚಿನಲ್ಲಿ ಸಾಕಷ್ಟು ದೇಶಗಳನ್ನು ನೋಡಡುವುದು ಯಾರಿಗೆ ಬೇಡ! ಮಿಕ್ಕ ಅಧ್ಯಾಪಕ ವೃಂದಕ್ಕೆ, ಅವರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಇದು ತಿಳಿದ ವಿಷಯವೇ. ಮಾತಾಡಿಕೊಳ್ಳುವುದಕ್ಕೆ ಉಪ್ಪಿನಕಾಯಿ ಈ ವಿಚಾರ ಅಲ್ಲವೇ?

ಸುಮಾರು ಹತ್ತು ವರ್ಷ ಹೀಗೇ ನಡೆದುಕೊಂಡು ಬಂತು. ಈ ಮಧ್ಯದಲ್ಲಿ ಅಲಿಶಾ ಮತ್ತು ಆನ್ ಅವರುಗಳ ಮದುವೆಗಳೂ ಆದವು. ಅವರವರ ಆಯ್ಕೆ, ಅವರವರ ನಿರ್ಧಾರ; ಸಲೀಸಾಗಿಯೇ ನರವೇರಿದವು. ಸ್ಟೆಫ್ನಿ ಕೇಳಲು ಪ್ರಾರಂಭಿಸಿದಳು -
"ನನ್ನನ್ನ ಈ ತರಹ ಏಕೆ ಇಟ್ಟಿದ್ದೀರಿ? ಎಲ್ಲಾ ರೀತಿಯಲ್ಲೂ ನಾನು ನಿಮ್ಮ ಹೆಂಡತಿ ತರಹ ಇದ್ದೇನೆ. ಮದುವೆಯನ್ನೂ ಮಾಡಿಕೊಳ್ಳೋಣ."

"ನಾನೂ ಈ ವಿಚಾರ ಯೋಚನೆ ಮಾಡಿದ್ದೀನಿ. ಇನ್ನು ಎರಡು ವರ್ಷಕ್ಕೆ ರಿಟೈರ್ ಆಗ್ತಾಇದೀನಿ, ಅನಿಟಾ ಮದುವೆ ಆಗಿಬಿಡಲಿ. ಆಮೇಲೆ ನಾನು ಮೆಲೊನಿಯಿಂದ ಸೆಪರೇಷನ್ ತೆಗೆದುಕೊಂಡು ನಿನ್ನನ್ನು ಮದುವೆ ಆಗ್ತೀನಿ."

ಆ ಮಾತನ್ನು ಇಂದು ಅನಿಟಾ ಮದುವೆಯನಂತರ ನಡೆಸಿಕೊಟ್ಟಿದ್ದರು ಪ್ರೊಫೆಸರ್ ಜಾರ್ಜ್ ಬಟ್ಲರ್.

ಮನೆಯೊಳಗೆ ಬಂದ ಮೆಲೊನಿ ಸ್ವಲ್ಪ ಹೊತ್ತು ಅತ್ತಳು. ಆಮೇಲೆ ಏನೋ ರೋಷ ಬಂದಹಾಗಾಯಿತು. "ಹೋದರೆ ಹೋದ" ಎಂದು ನೈಟ್ ಬಟ್ಟೆ ಉಟ್ಟು ಹಾಸಿಗೆಯಮೇಲೆ ಮಲಗಿದಳು. ನಿದ್ದೆ ಹತ್ತಲಿಲ್ಲ. ಮೂವತ್ತು ವರ್ಷಗಳ ಕಾಲ ನಡೆದು ಬಂದಿದ್ದ ಬಾಂಧವ್ಯ, ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ. ಬೆಳಗಾಯಿತು. ಯಾರಿಗಾದರೂ ಫೋನ್ ಮಾಡಬೇಕು. ಹತ್ತು ಗಂಟೆ ಆಗುವವರೆಗೂ ಕಾದಳು. ತನ್ನ ಅಕ್ಕನಿಗೆ ಫೋನ್ ಮಾಡುವುದೇ ಬೇಡವೆ ಯೋಚಿಸಿದಳು. ಅಯ್ಯೋ ಅವಳೇ ಇದೀಗ ಎರಡನೆ ಮದುವೆಯಾಗಿದ್ದಾಳೆ. ಬೇಡ, ಮಗಳಿಗೆ ಮಾಡೋಣ ಎಂದು ಅಲೀಶಾಗೆ ಫೋನ್ ಮಾಡಿ ವಿಷಯ ತಿಳಿಸಿದಳು. ಮಾತನಾಡುವಾಗ ಅಳುವನ್ನು ತಡೆದುಕೊಳ್ಳಲಾಗಲಿಲ್ಲ.

"ಸಮಾಧಾನ ಮಾಡಿಕೊ, ಮಮ್. ಏನು ಇಂತಹ ಕೆಲಸ ಮಾಡಿಬಿಟ್ಟ, ಜಾರ್ಜ್. ಅನಿಟಾ ಮದುವೆ ಆಗಲಿ ಅಂತ ಕಾಯ್ತಾಇದ್ದನೇನೋ. ಬೇಕಾದರೆ ನಮ್ಮ ಮನೇಗೆ ಬಾ ಮಮ್, ಸ್ವಲ್ಪ ದಿನ ಇಲ್ಲಿ ಇದ್ದು ಹೋಗು. ಅಥವಾ ನಿನ್ನ ಅಕ್ಕನ ಮನೇಗಾದರೂ ಹೋಗು."

ತನ್ನ ಅಪ್ಪನ ವಿಚಾರ ಅಲೀಶಾಳಿಗೂ ಗೊತ್ತಿತ್ತು. ಅವಳಿಗೂ ಸ್ವಲ್ಪ ಬೇಜಾರೇ ಆಯಿತು.

"ಈ ಗಂಡಸರೇ ಹೀಗೆ, ಮಮ್, ನಮ್ಮ ಹಾಗಲ್ಲ ಅವರು."

"ನನಗೆ ಗೊತ್ತಿಲ್ಲವೇ ಅಲಿಶಾ. ನಿಮ್ಮ ಅಪ್ಪನ ಬಗ್ಗೆ ನನಗೆ ತೀರಾ ಗುಮಾನಿ ಇತ್ತು. ಇತ್ತೀಚೆಗೆ ಅವನ ಚರ್ಯೆ ಬಹಳ ಬದಲಾಗಿತ್ತು."
"ಸರೀ ಬಿಡು ಹಾಗಾದರೆ."

"ನಿಜ ಹೇಳಬೇಕು ಅಂದರೆ, ಅಲೀಶಾ, ಇದರಲ್ಲಿ ಯಾವ ಆಶ್ಚರ್ಯಾನೂ ಇಲ್ಲ. ಜಾರ್ಜ್‍ ನ ಸ್ನೇಹಿತರು ಎಷ್ಟುಜನ ಹೀಗೆ ಮಾಡಿಲ್ಲ! ಇಂದಲ್ಲ ನಾಳೆ ಹೀಗಾಗಬಹುದು ಅಂದುಕೊಂಡೇ ಇದ್ದೆ."

"ಅದೇನ್ ಬಿಡು, ಮಮ್, ಪ್ರೈಮ್ ಮಿನಿಸ್ಟರ್ ಬಾಬ್ ಹಾಕ್ ಮಾಡಿದ್ದೇನು? ಕೀಟಿಂಗ್ ಮಾಡಿದ್ದೇನು. ಗಂಡಸರು ಕಾಯ್ತಾ ಇರ್ತಾರೆ."

"ನಿಜ ಹೇಳಬೇಕಾದರೆ ಇದು ಒಳ್ಳೇದೇ ಆಯ್ತು. ಅವನ ಸಿಟ್ಟು, ಕೋಪ, ರಾದ್ಧಾಂತ, ಅವನ ವಿಚಿತ್ರ ವರ್ತನೆ ನನಗೆ ಸಾಕಾಗಿ ಹೋಗಿತ್ತು. ನನಗೆ ಬೇರೆ ನರಕ ಬೇಕಾಗಿರಲಿಲ್ಲ. ಇನ್ನು ನಾನು ಒಬ್ಬಳೇ ಹಾಯಾಗಿ ಇರಬಹುದು."

English summary
Professor George Butler : A Short story unfolds Australian life styles and endangered family values.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X