ಹೋಕೆ - ಹೋಕ

Jayaram Udupa, Pensilvaniaಯಾರೋ ಹಾಕಿದ ದಾರಿ, ಯಾಕೋ ಹೂಡಿದ ದಾರಿ;
ಯಾರ್ಯಾರೋ ಹೋಕರು ಓಡಿ ಆಡುವ ದಾರಿ.
ಏನದೋ ಸರಕು ಸಿರಿ, ಯಾವುದೋ ತರಾತುರಿ.
ಯಾವ ಹೋಕೆಗೆ ತಿಳಿಯೆ ಹೋಕನಾ ಬದುಕು ಗುರಿ?

ಉತ್ತಮೋತ್ತಮರೆಲ್ಲ ನಡೆದು ತೋರಿದ ತರದಿ,
ಮೊತ್ತಮೊದಲಲಿ ರಚಿಸಿ ಮತ್ತೆ ತಿದ್ದಿದ ಹಾದಿ.
ಮತ್ತ ಮನುಜನ ಮತಿಗೆ ಅರ್ಥ ಸಿಗದಿಹ ತೆರದಿ,
ಗುತ್ತು ಗಲಭೆಯ ಸುಳಿಗೆ ಛಿದ್ರವಾಗುವ ಹಾದಿ.

ಸಮದಾರಿ ಹಿರಿದಾರಿ ಭವ್ಯ ದರ್ಶನ ದಾರಿ,
ಅಸಮಾನ ಆಸ್ಪದದ ಹರವು ಹೆದ್ದಾರಿ.
ಶ್ರಮಿಕ ಉಸಿಕರಿಗಿರುವ ಭಾಗ್ಯ ರೇಖೆಯ ದಾರಿ;
ಸೋಮಾರಿ ಹುಸಿಕರಿಗೆ ವ್ಯರ್ಥ ಭೋಗ್ಯದ ದಾರಿ.

ಎಷ್ಟೋ ಹೋಕರ ರೀತಿ, ಅಷ್ಟೇ ವಿಧ ವಿಧ ವೀಧಿ,
ಕಷ್ಟ ಕುಟಿಲವನೆಲ್ಲ ಸಾಗಿಸುವ ಜೀವನ ನದಿ.
ನೋಟ ನೆಗಪುವ ನೆಪದಿ ಓಟ ಕೆಡಿಸುವ ವಿಧದಿ,
ವೋಟು ಗಿಟ್ಟಿಸಲೆಂದೆ ಕಟ್ಟಿಸುವ ಹದಿ ಹಾದಿ.

ಕಿರಿ ದಾರಿ, ಬಲು ವೈರಿ, ತಿರುವು ಮುರುವಿನ ಕೇರಿ,
ಗುರಿ ತಪ್ಪಿ ಜಾರಿದರೆ ಹಳುವು ಮುಳುವಿನ ಕಮರಿ.
ಏರುಪೇರಲಿ ಏಗಿ, ಕುಂಡ ಕೊಂಡವ ಎಗರಿ,
ಮೇರೆ ಸೇರುವುದರಲಿ ಬೆಂದು ಬಾಡುವ ಪರಿ.

ವೃತ್ತ ಕವಲಿನ ದಾರಿ, ಚಿತ್ತ ಭ್ರಮಿಸುವ ಬವರಿ,
ಅತ್ತಿತ್ತ ಸುತ್ತಿಸುತ ಅಲೆಸಿ ಮರೆಸುವ ತಿಗುರಿ.
ತಪ್ಪು ಗುರುತಿನ ದಾರಿ, ನೆಪ್ಪು ನೀಡದು ತೋರಿ,
ಸತ್ಪಥವ ಮರೆಮಾಡಿ ಬಡಿದು ಬಳಸುವ ಬುಗುರಿ.

ಜೀವನದ ಕೊನೆ ತನಕ ಕುರುಡು ಕೊನೆ ಸಿಗದಿರಲು,
ತನುಮನವ ಕಾಯಕಕೆ ಎರೆವ ಯೋಗಿಗೆ ಗೆಲುವು.
ಪಥವು ಹೇಗೇ ಇರಲು, ಪಥಿಕರಿಲ್ಲದೆ ಇರಲು,
ಸತತ ಲಕ್ಷವ ಹಿಡಿವ ಸಹಸಿಗೇತರ ಸೋಲು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+