ಬದುಕೆಂಬ ಚೆಲುವೆಯ ಮೈಮಾಟ
ಬದುಕಿನ ತಿರುವು, ಕವಲು, ನೆನಪು, ಕಷ್ಟ, ಇಷ್ಟ, ನೋವು, ನಲಿವುಗಳ ಪ್ರತಿಬಿಂಬ ಈ ಪದ್ಯದಲ್ಲಿ.
- ಪ್ರಕಾಶ್ ರಾವ್ ಪಯ್ಯಾರ್, ದುಬೈ.
ಹೆಜ್ಜೆ ಎತ್ತಿದರೆನೇರ ದಾರಿಯ ಅಕ್ಕ ಪಕ್ಕ
ಗೊತ್ತಿಲ್ಲದ ಅಂಕು ಡೊಂಕು
ತಿರುವುಗಳು
ಏರು-ತಗ್ಗು,
ಕೆರೆ,ಹಳ್ಳ ಕೊಳ್ಳಗಳು
ಹರಿವ ನದಿ
ಮುಗ್ಗರಿಸುವ ಜಲಪಾತಗಳು
ನಡೆದಷ್ಟು ದೂರ
ಸವೆದಷ್ಟು ದಾರಿ
ಕೃಷ್ಣ,ಶುಕ್ಲ ಪಕ್ಷಗಳ
ಸಂವೇದನೆ
ಹುಣ್ಣೆಮೆಯ
ಒಸರು ಬೆಳಕಿನ ಆಹ್ಲಾದ
ಅಪ್ಸರೆಯರ
ವಯ್ಯಾರದ ಗೆಜ್ಜೆ ಉಲಿತ
ಅಮಾವಾಸ್ಯೆಯ ಕಗ್ಗತ್ತಲ
ಕಾಣದ ಕಣ್ಣುಗಳು
ಗೂಬೆ ಹಾಡು
ಭೂತ ಪ್ರೇತಗಳ ನಗ್ನ ನೃತ್ಯ
ಆಷಾಡದ ಕಾರ್ಮೊಡ ಮಳೆಗಾಳಿ,
ಮಾಗಿ ಚಳಿ
ವಸಂತದ ರಂಗಿನೊಕುಳಿ
ಹೂ ಹಣ್ಣು ಚಿಗುರು
ಮುಂಜಾನೆ ಬಾಗಿಲಿಗೆ
ನೀರು ಚೆಲ್ಲಿ ರಂಗೋಲಿ ಬರೆದ
ರಕ್ತ ಪುಟಿವ
ಚಿಗುರು ಬೆರಳುಗಳು
ಕೈ ಮೇಲೆ ಹಸಿಯಾರದ
ಮ್ಹೇಂದಿ ಚಿತ್ತಾರ
ಬಾಡಿ ಬರಿದಾದ
ರೆಂಬೆ ಕೊಂಬೆಗಳು
ದೂರದಿಂದಲೆ
ದಿಕ್ಕು ಬದಲಾಯಿಸುವ
ಹಕ್ಕಿಗಳು
ಒಣಕಲು ಬೊಡ್ಡೇ ಮೇಲೆ
ಮರಕುಟುಕದ ಕೊಕ್ಕು
ಇದ್ದು ಎದ್ದು ಬಿದ್ದಷ್ಟು
ಹೊಸ ಆಟ ಇಲ್ಲಿ
ಮನಸು ಸೆರೆ ಹಿಡಿವ
ಬದುಕೆಂಬ ಚೆಲುವೆಯ
ಚೆಲ್ಲು ಚೆಲ್ಲಿನ ಮೈಮಾಟದಲ್ಲಿ












Click it and Unblock the Notifications