ಹಂ. ಕ. ರಾಮಪ್ರಿಯನ್, ಕ್ಲಾರ್ಕ್ಸ್‌ವಿಲ್, ಮೇರಿಲೆಂಡ್
ಹಿತ್ತಲ ಗಿಡ

- ಹಂ. ಕ. ರಾಮಪ್ರಿಯನ್, ಕ್ಲಾರ್ಕ್ಸ್‌ವಿಲ್, ಮೇರಿಲೆಂಡ್
[email protected]
ಪಕ್ಕದೂರಿಂ ಬಂದುದೆಲ್ಲವ ಪೊಗಳಿ ಬಳಸುತಲಿರುವನು,
ಹೆಮ್ಮೆಯಿಂದಲಿ ನೆರೆಯ ಮರಗಳ ಹಣ್ಗಳನು ಕದ್ದುಂಬನು,
ತನ್ನ ಹಿತ್ತಲಿನಲ್ಲಿ ಬೆಳೆಯುವ ಗಿಡವು ಮದ್ದಲ್ಲೆಂಬನು.
ವಿದ್ಯೆ ಕಲಿಯಲು ಹುಡುಗನೆಲ್ಲೆಡೆ ಗುರುವನರಸುತ ದಣಿವನು,
ಅಜ್ಞಡಂಭಾಚಾರಿಯೊಬ್ಬನ ತಜ್ಞನೆಂದವನರಿವನು,
‘‘ದಡ್ಡ ನಾ ನಿಮಗಡ್ಡಬೀಳುವೆ ದೊಡ್ಡಗುರುಗಳೆ’’ ಎಂಬನು,
ವಿಶ್ವದೊಳೆ ವಿಖ್ಯಾತನಾಗಿರುವಪ್ಪನಿಂದವ ಕಲಿಯನು.
ಪರರ ನಾಡಿನ ನುಡಿಯನೀತನು ಕಷ್ಟದಿಂದಲೆ ಕಲಿವನು,
ನುಡಿಯೆ ಬರದಿಹ ಶಬ್ದಗಳನವ ನುಡಿಸೆ ಹೆಣಗುತಲಿರುವನು,
ಅನ್ಯರೀತನ ಮಾತ ಪೊಗಳಿರೆ ಧನ್ಯ ನಾನೀಗೆಂಬನು,
ಮೆದುಳೊಳಿನ್ನೆಡೆಯಿಲ್ಲವೆನ್ನುತ ಮಾತೃಭಾಷೆಯ ಮರೆವನು.
ಮದುವೆ ಮನೆಗಳಿಗೂಟಕೋಸುಗ ಕರೆಯದಿದ್ದರು ಪೋಪನು,
ವಧುವ ವರನನು ಹರಸ ಮರೆವನು ಮೊದಲ ಪಂಕ್ತಿಯೊಳುಂಬನು,
ಹೋಟಲೂಟವ ತಿಂದು ತೇಗುತ ‘‘ಮನೆಯ ರುಚಿಯಿದು’’ ಎಂಬನು,
ಮಡದಿ ರಸದೌತಣವ ಬಡಿಸಿರೆ ರುಚಿಯನದರಲಿ ಕಾಣನು.
ದೇಶದೇಶಗಳಲ್ಲಿ ತಿರುಗುತ ನೋಟಗಳನವ ನೋಳ್ಪನು,
ವೇಷಭೂಷಣಗಳನು ನೋಡುತಲಲ್ಲಿ ಅಚ್ಚರಿಗೊಳ್ವನು,
ಲೇಶಮಾತ್ರವು ತನ್ನ ನೆರೆಹೊರೆ ದೃಶ್ಯಗಳನವ ನೋಡನು,
ನಮ್ಮ ದೇಶದೊಳಂಥ ಸೊಗಸನು ಕಾಣೆವೆನ್ನುತ ಬಯ್ವನು.
ಬೇನೆಯಾಗಿರೆ ತಾನೆ ತನ್ನ ಚಿಕಿತ್ಸೆ ಮಾಡಲು ನೋಳ್ಪನು, (ಅದು)
ಮತ್ತೆ ಹೆಚ್ಚಿರೆ ಸುತ್ತಮುತ್ತಲ ಜನರ ಸಲಹೆಯ ಕೇಳ್ವನು,
ಪಕ್ಕದೂರಿನ ಚಿಕ್ಕವೈದ್ಯಗೆ ರೊಕ್ಕವೀಯುತ ದಣಿವನು,
ತನ್ನ ಮಗ ಹಿರಿವೈದ್ಯನಾದರು ತನ್ನನವನಿಗೆ ತೋರನು.
ದಿನವು ದೇಗುಲಕವನು ಪೋಪನು ಸುತ್ತಿ ಬರುವನು ನಮಿಪನು,
ಮನದ ದುಗುಡವ ಕಳೆಯಲೋಸುಗ ಹರಿಕಥೆಗಳನು ಕೇಳ್ವನು,
ಶಾಂತಿ ಪೊಂದುವ ಭ್ರಾಂತಿಯಿಂದಲಿ ತೀರ್ಥಯಾತ್ರೆಯ ಮಾಳ್ಪನು,
ತನ್ನ ಹೃದಯದಿ ಸತತ ನೆಲೆಸಿಹ ದೇವದೇವನ ಮರೆವನು.











Click it and Unblock the Notifications