• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಥಿನ್‌ ಟಿನ್‌?

By Staff
|

ಕೆಲವು ವರ್ಷಗಳ ಹಿಂದೆ ನಾನು ಭಾರತಜಾತರಾದ ನನ್ನ ಮಿತ್ರರೊಬ್ಬರ ಸೆಮಿನಾರಿನ ಭಾಷಣವನ್ನು ಕೇಳುತ್ತಿದ್ದೆ. ಅವರು line thinning algorithms ಬಗ್ಗೆ ಮಾತನಾಡುತ್ತಿದ್ದರು. ನನ್ನ ಪಕ್ಕದಲ್ಲಿ ಕುಳಿತಿದ್ದ ಅಮೆರಿಕಜಾತರಾದ ಮತ್ತೊಬ್ಬ ಮಿತ್ರರು ನನ್ನನ್ನು 'ಇದೇನು ಹೇಳುತ್ತಿದ್ದಾರೆ ಇವರು? line tinning ಎಂದರೇನು?" ಎಂದು ಕೇಳಿದರು. ಎಷ್ಟೊ ಸಾರಿ ಭಾಷಣಕಾರರು thinning ಎಂದರೂ ಅವರಿಗೆ ಅದು tinning ಎಂದೇ ಕೇಳಿಸಿತು. ಇದರ ಬಗ್ಗೆ ಇತ್ತೀಚಿಗೆ ನೆನಪಾದಾಗ ಮೂಡಿಬಂದ ಕವನ ಇಲ್ಲಿದೆ.

ಹಂ. ಕ. ರಾಮಪ್ರಿಯನ್‌, ಕ್ಲಾರ್ಕ್ಸ್‌ವಿಲ್‌, ಮೇರಿಲೆಂಡ್‌

ramapriyan@verizon.net

ಶಿಷ್ಯನಿಂತೆಂದನು - -

ಹಿಂದೆ ನೀವು ಕಲಿಸಿಕೊಟ್ಟ ಪಾಠಗಳನು ಕಲಿತೆನು,

ಬಂದೆನಿಲ್ಲಿ ಅಮೆರಿಕದಲಿ ಅರಸೆ ಮುಂದಿನೊಳಿತನು.

ಸ್ಪಷ್ಟವಾಗಿ ಆಂಗ್ಲಪದಗಳನ್ನು ಬಿಡಿಸಿ ನುಡಿದೆನು,

ಕಷ್ಟವೆಂದರಮೆರಿಕಜರದನ್ನು ಕೇಳುತರಿಯಲು.

ಅವರ ನುಡಿಯನರಿಯಲೆನಗೆ ಸ್ವಲ್ಪ ಕಷ್ಟವಾದರೂ,

ನನ್ನ ನುಡಿಯನರಿಯಲವರು ಬಾಯಿ ಬಾಯಿ ಬಿಟ್ಟರು ! ಇ-

ದೆಂತು ಹೀಗೆ ಎನುತ ತಾವು ವಿಶದವಾಗಿ ಪೇಳ್ದೊಡೆ,

ಅಂತು ಅವರರಿಯುವ ತೆರದಿ ನುಡಿಯೆ ನಾನು ಕಲಿಯುವೆ.

ಗುರುವಿಂತೆಂದನು -

ನಿನ್ನ ತಾಯ ನುಡಿಯು ಆಂಗ್ಲವಲ್ಲವಲ್ಲ ಶಿಷ್ಯನೆ, ಅ-

ದನ್ನು ನಿನಗೆ ಕಲಿಸಿದವರ ತಾಯನುಡಿಯು ಅಂತೆಯೇ

ಕನ್ನಡದಲಿ ವಿವಿಧಶಬ್ದಗಳಿಗೆ ಕೊರತೆಯಿಲ್ಲವು, ಅ-

ವನ್ನು ಕೇಳಿ ಕಲಿತ ನಿನಗೆ ಆಂಗ್ಲ ಕಷ್ಟವಲ್ಲವು.

ಆದರಾಂಗ್ಲದಲ್ಲಿ ಹಲವು ಶಬ್ದಗಳಿವೆ ನೆನಪಿಡು,

ಅವಕೆ ನಮ್ಮ ತಾಯನುಡಿಯೊಳಿಲ್ಲವಯ್ಯ ಬಳಕೆಯು. ಅ-

ವಕ್ಕೆ ನಾವು ನಮ್ಮ ನುಡಿಯ ಸನಿಹಸಬ್ದವೊದಗಿಸೆ,

ಧಕ್ಕೆಯಾಗುತಾಂಗ್ಲಜನಕಪಾರ್ಥವಾಗಿಬಿಡುವುದು. * ಅ-

ದೆಂತು ಎಂದು ತೋರುವುದಕೆ ಹಿಂದೆ ಹೇಳಿದಂತೆಯೆ, **

ಕಂತು ಕಂತುಗಳಲಿ ನಿನಗೆ ಕಲಿಸಲೀಗ ತೊಡಗುವೆ.

ಆಂಗ್ಲದೊಳ್‌ 'ಟ" ವರ್ಗವಿಲ್ಲ ಇಲ್ಲವೈ 'ತ" ವರ್ಗವು,

'ಟೀ" ಗು 'ತೀ"ಗು ನಡುವೆ ಇಹುದು tee ಎಂಬ ಶಬ್ದವು,

'ಡೀ"ಗು 'ದೀ"ಗು ನಡುವೆ ಇಹುದು dee ಎಂಬ ಶಬ್ದವು,

ಮೇಲ ಹಲ್ಲ ಹಿಂದೆ ನಾಲ್ಗೆ ತುದಿಯ ಮುಟ್ಟೆ ಬರುವುವು.

tಯ hಅ ಸೇರಿಸಿಟ್ಟು ನುಡಿಯುವಂಥ ಶಬ್ದವು

ಆಂಗ್ಲ ಬಿಟ್ಟು ಬೇರೆ ಭಾಷೆಗಳಲಿ ಬರುವುದಿಲ್ಲವು.

ಹಲ್ಲ ಸಾಲ ದಾಟಿಸುತ್ತ ನಾಲಿಗೆಯಾ ತುದಿಯನು,

ಮೆಲ್ಲಗಾಳಿಯೂದಬೇಕು ಜನಕೆ thanksಅ ಹೇಳಲು.

ಅದಕೆ ಬದಲು ಥ್ಯಾಂಕ್ಸ್‌ ಎಂಬ ಪದವ ನೀನು ಹೇಳ್ದೊಡೆ

ಏಕೆ ಇವನು tanks ಎಂದನೆಂದು ಆಂಗ್ಲರೆಣಿಪರು.

ಇಂಥ ಜೋಡಿ ಪದಗಳಿಂದಪಾರ್ಥವಾಗಬಲ್ಲದು,

ಎಂತು ಎಂಬುದನ್ನು ಕೇಳೊ ಗಮನವಿಟ್ಟು ಶಿಷ್ಯನೆ.

ಮೈಯ ನಿಂತ ನೀರೊಳದ್ದಿ bathಉ ಆಯಿತೆಂಬರು,

ಕೈಯ ಬಲವ ಬಳಸಿ ಚೆಂಡ batಇನಿಂದ ಹೊಡೆವರು.

Elizabethಅ ಪುಟ್ಟದಾಗಿ Beth ಎಂದು ಕರೆವರು,

ಎಲೆಯ ಮೂರನಾಡೆ ಹಣವ betಅನಿಟ್ಟು ಕಳೆವರು.

ಎಳೆವ ಬಿಡುವ ಉಸಿರುಗಳಿಗೆ breath ಎಂದು ಹೇಳ್ವರು,

Hallidayಯ ಗೆಳೆಯರವನ Brett ಎಂದು ಕರೆವರು.

ಬೇಕೆನಿಸುವುದಿಲ್ಲದಿರುವ ಸ್ಥಿತಿಗೆ dirth ಎಂಬರು,

ಬೇಡವೆನಿಸುವಂಥ ಕೊಳೆಗೆ ಜನರು dirt ಎಂಬರು.

ಬಳಸು ಲೋಹತಿರುವಿ ರೂಪ ಕೊಡಲು lathe ಅ ಶಿಷ್ಯನೆ,

ಬಳಸುತೂರ ತಿರುಗಿ ಬರಲು ನೀನು lateಉ ಶಾಲೆಗೆ.

ಕಿರಿದು ಮಾಡಿ ಗಣಿತವನ್ನು Math ಎಂದುಬಿಡುವರು,

ಕರೆದ ಜನಕೆ ಕೂರುವುದಕೆ matಅ ಹಾಸಿಕೊಡುವರು.

ಕಟ್ಟುಕಥೆಗಳನ್ನು ಜನರು myth ಎಂದು ಕರೆವರು,

ಸುಟ್ಟು ಗಾಯವಾಗದಿರಲು ಕೈಗೆ mittಅ ಧರಿಪರು.

ಸೊಂಟವನ್ನು ಮಂಡಿಗಳಿಗೆ ಸೇರಿಸುವುವು thighಗಳು,

ಕಂಠವನ್ನಲಂಕರಿಸಲು ಬೇಕು ಜನಕೆ tieಗಳು.

ತೆಳ್ಳಗಿಹುದ ತಿಳಿಸುವುದಕೆ thin ಎಂದು ಹೇಳ್ವರು,

ಬೆಳ್ಳಗಿರುವ ಲೋಹವೊಂದ tin ಎಂದು ಕರೆವರು.

ಚಿಂತಿಸಿದನು ಎನ್ನುವುದಕೆ thought ಎಂದು ಹೇಳ್ವರು,

ಹೇಳಿಕೊಟ್ಟನೆನ್ನುವುದಕೆ taught ಎಂದು ನುಡಿವರು.

ಮೂರ ನೀನು ಹೇಳುವುದಕೆ three ಎನ್ನಬೇಕೆಲೊ,

ಮರದ ಬಗ್ಗೆ ಸುದ್ದಿ ಕೊಡಲು tree ಎಂದು ನುಡಿಯೆಲೊ.

ಒಡನೆ ಇರುವುದನ್ನು ತಿಳಿಸೆ with ಎಂದು ನುಡಿವರು,

ಒಡನೆ ನುಡಿದ ಹಾಸ್ಯನುಡಿಯ wit ಎಂದು ಕರೆವರು.

ಸ್ನಾನಮಾಡಿರೆನ್ನುವುದಕೆ bathe ಎಂದು ಹೇಳ್ವರು,

ಆಣತಿಯನು ಕೊಟ್ಟನೆನಲು bade ಎಂದು ಹೇಳ್ವರು.

ಕೆಲಸಕಾಗದಿರುವ ಹರಟೆಗಿರುವ ಹೆಸರು blatherಉ,

ಹೊಲಸ ದೇಹದಿಂದ ತೊಲಸುವಂಗವೊಂದು bladderಉ.

ಉಸಿರನಾಡು ಎನಲು ಜನರು breathe ಎಂದು ನುಡಿವರು,

ಬಸಿರನಾಗಿಪಂಥ ಪರಿಗೆ breed ಎಂದು ಹೇಳ್ವರು.

ಅಪ್ಪನನ್ನು ಪಾದ್ರಿಯನ್ನು father ಎಂದು ಕರೆವರು,

ತೆಪ್ಪನುಂಬ ದನಕೆ ಮೇಯೆ fodder ಅನ್ನು ಕೊಡುವರು.

ಬೆಳೆಯೆ ಕೋಪ ತಾಪದಿಂದ seathe ಆದನೆಂಬರು,

ಬೆಳೆಯ ಬೆಳೆಯೆ ಭೂಮಿಯಲ್ಲಿ seedಉಗಳನು ನೆಡುವರು.

ಆಗ ಎಂದು ಹೇಳುವುದಕೆ then ಎನ್ನೊ ಶಿಷ್ಯನೆ,

ಈಗ ಕೂರೊ ಬಂದು ನಮ್ಮ denಇನಲ್ಲಿ ಬೇಗನೆ.

ದೂರದೆಡೆಗೆ ಬೆರಳ ತೋರಿ there ಎಂದು ಹೇಳ್ವರು,

ಧೀರತನವ ತೋರುವುದಕೆ dare ಎಂದು ಹೇಳ್ವರು.

ಜನರ ತೋರಿ ದೂರದಲ್ಲಿ they ಎಂದು ಹೇಳ್ವರು,

ದಿನದಿ ರವಿಯ ಬೆಳಕ ನೋಡಿ day ಎಂದು ಕರೆವರು.

ಹಳೆಯ ಆಂಗ್ಲದಲ್ಲಿ ನಿನ್ನದೆನಲು thine ಎಂಬರು,

ಹಿರಿಯ ಊಟಮಾಡು ಎನಲು ಜನರು thine ಎನುವರು.

ಆದರೂ ಎನ್ನುವುದಕೆ though ಎಂದು ನುಡಿವರು,

ನೀರ ಹಾಕಿ ಹಿಟ್ಟ ಕಲಸಿ doughವನಾಗಿಸಿಡುವರು.

ಫಲಶ್ರುತಿ (ಎಚ್ಚರಿಕೆ - ಮೇಲಿನ ಗತಿಗೂ ಕೆಳಗಿನ ಗತಿಗೂ ವ್ಯತ್ಯಾಸವುಂಟು)

ಇಂಥ ಪದಗಳ ನುಡಿಯುತಿರೆ ನೀ ಹಿಂದೆ ಕಲಿತಿಹ ತೆರದಲಿ,

ಅರ್ಥವಾಗಲು ಕಷ್ಟವಾಗುವುದಯ್ಯ ಆಂಗ್ಲರ ನಾಡಲಿ.

ಇಂತು ' tha"ತ ' ta" ಟ ಗಳಿಗೆ ಇರುವಹ ಭೇದಗಳ ನೀ ಕಲಿತಿರೆ,

ಅಂತೆ ' tha" ದ ' da" ಡ ಶಬ್ದಗಳಿಗೂ ಭೇದ ತೋರ್ಪುದನರಿತಿರೆ,

ಸಂತತವು ನೀನಂಥ ಪದಗಳನರಿಯುವಂತುಚ್ಚರಿಸುವೆ,

ತೊಂದರೆಯ ನೀ ಕಡಿಮೆ ಮಾಡುತಲಾಂಗ್ಲಜನಕುಪಕರಿಸುವೆ.

***

*ಧಕ್ಕೆಯಾಗುತ ಆಂಗ್ಲ-ಜನಕೆ ಅಪಾರ್ಥವಾಗಿಬಿಡುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more