ಇರುಳು ಒತ್ತಿ ಒತ್ತಿ ಒಸರಿದ ನೀರಿಗೆ
ಕೆರೆ ಉಕ್ಕಿ ತುಂಬಿ ಕಟ್ಟೆ ಒಡೆದು
ಕೆಸರು ಮಣ್ಣು ಸರಸರನೆ ಹರಿದು ಬತ್ತಿ
ಋತುಮತಿಯರ ಸ್ನಾನದ ಗುಂಡಿ
ತೇವ ರಹಿತ ತಳ ಒಡೆದ ಬಿರುಕು
ಮುಂಜಾನೆ ಎರಡು ದಾರಿ ಜೋಡುವಲ್ಲಿ
ಬೆರೆಸಿ ಕುಂಕುಮ ಅರಸಿನ ಚೆಲ್ಲಿ
ಹಸಿ ಕುಂಬಳ ನಡು ಸೀಳಿ ಹೊಲಸು
ಒಡೆದ ದೀವಿಗೆ ಉರಿದು ಆರಿದ ಬತ್ತಿ
ಕಪ್ಪು ಕುಡಿಕೆ ಮೇಲೆ ಹಿಟ್ಟು ಬೊಟ್ಟು
ಸರಳ ರೇಖೆಯ ಕೈ, ಕಾಲು, ಬೆನ್ನು
ಅಳತೆ ತಿಳಿಯದ ಉಡಿದಾರ
ಆಳ ಬಾವಿ ಕೊಡಪಾನ ಸ್ವಲ್ಪ ನೀರು
ಅಕ್ಕ ಪಕ್ಕ ಜಜ್ಜಿ ಸುರಿವ ತೂತು
ಹಬ್ಬಿದ ಪೊದೆ, ಗೂಡು, ಮೊಟ್ಟೆ, ಮರಿ
ತುಂಡು ಹಗ್ಗ ಮುರಿದ ರಾಟೆ
ದಂಡೆ ಮೇಲೆ ದೀಪ ವೀಳ್ಯ ಅಡಿಕೆ
ಕತ್ತಲಲ್ಲಿ ಬಲೆ ; ಕಾದು ಕುಳಿತ ಜೇಡ!