ಡ್ಯಾನ್ ನೀಡಿದ ಮುತ್ತಿನ ಮತ್ತಿನಲ್ಲಿ ಅನು!
ಇಂಗ್ಲಿಷ್ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ
[email protected]
ಶನಿವಾರ ಬೆಳಗ್ಗೆ ಅನು ಹೊಸ ನವೋಲ್ಲಾಸದೊಂದಿಗೆ ಎದ್ದಳು. ಡ್ಯಾನ್ ಜೊತೆ ಹೋಗಲು ನಾನು ಇಂದು ಬಹಳ ಕಾತರಳಾಗಿದ್ದೇನೆ. ಅವಳು ತನ್ನ ಕಿಟಕಿಯ ಬ್ಲೈಂಡ್‌ಗಳನ್ನು ತೆರೆದಾಗ ಬೈಕ್ ಸವಾರಿಗೆ ಪ್ರಶಸ್ತವಾದ ಹವಾಮಾನ, ಸುಂದರವಾದ ವಸಂತಕಾಲ ಹೊರಗೆ ಕಾಣಿಸುತ್ತಿತ್ತು. ಭಾರತದಲ್ಲಿ ಲೈಸೆನ್ಸ್ ಇಲ್ಲದೆಯೂ ಸ್ನೇಹಿತರ ಬೈಕ್‌ಗಳನ್ನು ಓಡಿಸುತ್ತಿದ್ದಂತೆ ಇಲ್ಲಿ ಮಾಡಲು ಡ್ಯಾನ್ ಎಂದೂ ಅವಳನ್ನು ಬಿಡುವುದಿಲ್ಲ.
ಹ್ಞುಂ, ಭಾರತದಲ್ಲಿನ 100 ಸಿ.ಸಿ. ಹೋಂಡಾ ಬೈಕುಗಳಿಗಿಂತ ಹತ್ತು ಪಟ್ಟು ದೊಡ್ಡದು ಡ್ಯಾನ್‌ನ ಬೈಕು. ಅವಳೇನಾದರೂ ಒಂದು ಸಣ್ಣ ಬೈಕನ್ನು ಕೊಂಡುಕೊಂಡರೆ ಬಹುಶ: ಡ್ಯಾನ್ ಅವಳಿಗೆ ಅದನ್ನು ಓಡಿಸಲು ಕಲಿಸಬಹುದು. ಅದು ಎಷ್ಟೊಂದು ಮಜವಾಗಿರುತ್ತದೆ! ನಾನು ಲೈಸೆನ್ಸ್ ತೆಗೆದುಕೊಳ್ಳಬೇಕು. ಆದರೆ ಅಮ್ಮನಿಗೆ ಮಾತ್ರ ಯಾವತ್ತೂ ಹೇಳುವುದಿಲ್ಲ. ನನ್ನ ಹತ್ತಿರ ಮೋಟಾರ್ ಬೈಕು ಇರುವುದು ಅವಳಿಗೇನಾದರೂ ಗೊತ್ತಾದರೆ ಅವಳಿಗೆ ತಲೆ ಕೆಟ್ಟು ಹೋಗುತ್ತದೆ.
ಪೋನು ರಿಂಗುಣಿಸಿತು. ಅದು ಡ್ಯಾನ್ ಇರಬೇಕು ಎಂದುಕೊಂಡು ಉತ್ತರಿಸಲು ತ್ವರೆ ಮಾಡಿದಳು. ಮೊದಲ ಸಲ ನಾನು ಬೇಗ ಸಿದ್ದಳಾಗಿದ್ದೇನೆ. ‘‘ಗುಡ್ ಮಾರ್ನಿಂಗ್!’’
‘‘ಅನು, ನಾನು ರೂಪಾ ಮಾತಾಡ್ತಾಯಿರೋದು. ನನಗೆ ನಿಜವಾಗಲೂ ಭಯವಾಗುತ್ತಾ ಇದೆ. ದೀಪಕ್ ಹತ್ತಿರ ಗನ್ ಇದೆ. ಕಳೆದ ರಾತ್ರಿ ಅವನು ಅದನ್ನು ನನ್ನೆಡೆಗೆ ಗುರಿ ಇಟ್ಟು, ‘ನೀನು ಅನೂಳ ತರಹ ಎಂದೂ ಓಡಿ ಹೋಗಲು ಸಾಧ್ಯವಿಲ್ಲ. ನಿನ್ನನ್ನು ಕೊಂದು ಹಾಕಿ ಬಿಡುತ್ತೇನೆ,’ ಎಂದು ಹೇಳಿದ’’,
‘‘ಅವನು ಈಗ ಎಲ್ಲಿದ್ದಾನೆ, ರೂಪ?’’
‘‘ಅವನೀಗ ಹೊರಗೆ ಓಡಲು ಹೋಗಿದ್ದಾನೆ. ಪ್ರತಿ ಶನಿವಾರ ಒಂದೆರಡು ಗಂಟೆ ಓಡುತ್ತಾನೆ.’’
‘‘ರೂಪ, ಈಗಲೆ ಅಲ್ಲಿಂದ ಹೊರಡು! 911 ಗೆ ಕರೆ ಮಾಡಿ ಅವರಿಗೆ ನಿನ್ನ ವಿಳಾಸ ಕೊಡು. ಈ ದೇಶದಲ್ಲಿ ನಿನಗೆ ಸಹಾಯ ಸಿಗುತ್ತದೆ. ನಮ್ಮನ್ನು ಕಾಪಾಡಲು ಭಾರತದಲ್ಲಿದ್ದಂತೆ ನಮ್ಮ ಮನೆಯವರು ಅನ್ನುವವರು ಯಾರೂ ನಮಗೆ ಈ ದೇಶದಲ್ಲಿ ಇಲ್ಲ. ಆದರೆ... ’’
‘‘ನಮ್ಮ ಮನೆಯವರು ಬಹಳ ಸಂಪ್ರದಾಯವಾದಿಗಳು ಹಾಗು ಬಡವರು. ನಾನು ಅವರ ಬಳಿಗೆ ವಾಪಸು ಹೋಗಲು ಸಾಧ್ಯವಿಲ್ಲ.’’
‘‘ನೀನು ಹೋಗುವುದು ಬೇಕಾಗಿಲ್ಲ. ನಾವು ಏನೋ ಒಂದು ದಾರಿ ಹುಡುಕೋಣ. ಸುಮ್ಮನೆ 911 ಗೆ ಕರೆ ಮಾಡು. ನಿನ್ನನ್ನು ಕರೆದುಕೊಂಡು ಹೋಗಲು ಪೋಲಿಸಿನವರು ಬರುತ್ತಾರೆ... ’’ ಅನೂಳಿಗೆ ಡ್ರೈವ್‌ವೇನಲ್ಲಿ ಮೋಟಾರ್ ಬೈಕಿನ ಇಂಜಿನ್ ಶಬ್ದ ಕೇಳಿಸಿತು. ಡ್ಯಾನ್ ಏನಾದರೂ ಕರೆ ಮಾಡಲು ಮರೆತನೆ? ’’ರೂಪ, ಬಾಗಿಲ ಹತ್ತಿರ ಯಾರೋ ಬಂದಿದ್ದಾರೆ. ಒಂದು ನಿಮಿಷ ಕಾಯ್ತೀಯ? ’’
‘‘ಇಲ್ಲ! ನಾನು ಹೋಗಬೇಕು.’’ ಪೋನ್ ಕರೆ ತುಂಡಾಯಿತು.
ಥತ್! ಅನು ಕಿಟಕಿಯ ದೊಡ್ಡ ಗಾಜಿನ ಮುಖಾಂತರ ಹೊರಗೆ ನೋಡಿದಳು. ಡ್ಯಾನ್ ತನ್ನ ಬೈಕನ್ನು ಪರೀಕ್ಷಿಸುತ್ತಿದ್ದ. ಅವನು ಅದರ ಅಂಗುಲಂಗುಲವನ್ನೂ ಗೀಚಿದ ಗೆರೆಗಳಿಗಾಗಿ ಪರೀಕ್ಷಿಸುತ್ತ ಒಂದು ಸುತ್ತು ಹಾಕಿದ. ಈ ದೇಶದಲ್ಲಿ ಗಂಡಸರು ತಮ್ಮ ಬೈಕುಗಳ ಬಗ್ಗೆ ಬಹಳ ಹುಚ್ಚು ಬೆಳೆಸಿಕೊಂಡಿರುತ್ತಾರೆ ಹಾಗೂ ಅವನ್ನು ಎಳೆಯ ಮಕ್ಕಳ ತರಹ ನೋಡಿಕೊಳ್ಳುತ್ತಾರೆ ಎಂದು ಕೇಳಿದ್ದೇನೆ.
ಅನು ಹೊರಗೆ ನೋಡುತ್ತ, ನಿಟ್ಟುಸಿರು ಬಿಡುತ್ತ ಸೋಫಾದ ಮೇಲೆ ಕುಳಿತಳು. ನಾನು ಈ ಹಿಂದೆ ಏನು ಮಿಸ್ ಮಾಡಿಕೊಂಡಿದ್ದೆ? ಅಲ್ಲಿ ಎಲ್ಲ ರೀತಿಯಿಂದಲೂ ಅವಳಿಗೆ ಪರಿಪೂರ್ಣನಾಗಿದ್ದ ಡ್ಯಾನ್ ಇದ್ದ. ಆದರೆ ಸುಲಲಿತವಾದ ಕನ್ನಡ ಮಾತನಾಡುತ್ತಾನೆಂದ ಮಾತ್ರಕ್ಕೆ ದೀಪಕ್‌ನನ್ನು ಮದುವೆಯಾಗಲು ಅವಳು ಆತುರಪಟ್ಟಿದ್ದಳು. ನಾನೇನು ಮಂದಬುದ್ಧಿಯವಳೆ ಅಥವ ಡ್ಯಾನ್‌ನನ್ನು ಮೊದಲ ಸಲ ಭೇಟಿಯಾದ ಸಮಯಕ್ಕೆ ಹೋಲಿಸಿದರೆ ಈಗ ಹೆಚ್ಚು ಪ್ರಬುದ್ಧವಾಗಿ ವಿಕಾಸಗೊಂಡಿದ್ದೇನೆಯೆ?











Click it and Unblock the Notifications