ರೂಪ ಏನಾದರೂ ದೀಪಕ್‌ನ ಕೊಲೆ ಮಾಡಿಬಿಟ್ಟರೆ?


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ಅಂದು ಬುಧವಾರ ಬೆಳಗ್ಗೆ. ಕೆಲಸಕ್ಕೆ ಹೋಗಲು ಬಟ್ಟೆ ಧರಿಸಿ ಸಿದ್ಧವಾಗುತ್ತ ಅನು ಬಹಳ ಉಲ್ಲಾಸದ ಮನಸ್ಥಿತಿಯಲ್ಲಿದ್ದಳು. ಅರ್ಧ ವಾರ ಮುಗಿದಿತ್ತು. ಹಾಗಾಗಿ ಅವಳು ವಾರಾಂತ್ಯವನ್ನು ಎದುರು ನೋಡುತ್ತಿದ್ದಳು. ಕೆಲಸದ ನಂತರ ಇರುವ ಯೋಗಾಭ್ಯಾಸದ ತರಗತಿಗಾಗಿ ಸ್ವಚ್ಚವಾದ ಬಟ್ಟೆಗಳನ್ನು ಹುಡುಕುತ್ತಿದ್ದಾಗ ಅವಳಿಗೆ ಪೋನು ಬಂತು.

‘‘ಅನು, ನಾನು ರೂಪ ಮಾತಾಡ್ತಾಯಿರೋದು.. ’’

ಅವಳು ಭಯಗ್ರಸ್ತಳಾಗಿರುವ ಹಾಗಿದೆ ಎಂದು ಅನು ಅಂದುಕೊಂಡಳು. ‘‘ಎಲ್ಲಾ ಸರಿಯಾಗಿದೆ ತಾನೆ?’’

‘‘ಇಲ್ಲ! ದೀಪಕ್‌ ನೆನ್ನೆ ರಾತ್ರಿ ನನ್ನನ್ನು ಬಹಳ ಹೊಡೆದಿದ್ದಾನೆ. ನನ್ನ ಮೈಮೇಲೆಲ್ಲ ಬಹಳಷ್ಟು ಗಾಯದ ಗುರುತುಗಳಿವೆ.’’

‘‘ರೂಪ, ನೀನು ಭಾರತಕ್ಕೆ ಹಿಂದಿರುಗಿ ಹೋಗಬಲ್ಲೆಯ? ಅಲ್ಲಿ ನಿನ್ನ ಮನೆಯವರು ನಿನ್ನನ್ನು ಬೆಂಬಲಿಸುತ್ತಾರಾ? ನೀನು ಹೋಗಬಲ್ಲೆಯಾದರೆ ನಾನು ನಿನಗೆ ಸಹಾಯ ಮಾಡಬಲ್ಲೆ.’’

‘‘ನಾನು ಹೋಗಬಹುದು ಎಂದು ನನಗನ್ನಿಸುವುದಿಲ್ಲ. ಅವನನ್ನೇನಾದರೂ ಬಿಟ್ಟು ಹೋದರೆ ನನ್ನನ್ನು ಕೊಲ್ಲುವುದಾಗಿ ದೀಪಕ್‌ ಹೆದರಿಸಿದ.’’

‘‘ನನಗೂ ಅವನು ಅದನ್ನೇ ಹೇಳಿದ್ದ. ನಾನು ಇನ್ನೂ ಬದುಕಿದ್ದೇನೆ, ಅಲ್ಲವೆ?’’

‘‘ಅನು, ನಾನು ನಿನಗೆ ಕರೆ ಮಾಡುತ್ತಿರುವುದನ್ನು ದಯವಿಟ್ಟು ನೀನು ಯಾರಿಗೂ ಹೇಳಬೇಡ. ದೀಪಕ್‌ಗೆ ಗೊತ್ತಾದರೆ ಬಹಳ ಹಿಂಸೆ ಕೊಡುತ್ತಾನೆ.’’

‘‘ರೂಪ, ಕೇಳು. ನನಗೆ ಒಬ್ಬ ಪೋಲಿಸು ಸ್ನೇಹಿತನಿದ್ದಾನೆ. ನಿನ್ನನ್ನು ಅಲ್ಲಿಂದ ಕರೆದುಕೊಂಡು ಬರಲು ಮತ್ತು ಸ್ತ್ರೀಯರ ಶೆಲ್ಟರ್‌ಗೆ ಸೇರಿಸಲು ಅವನು ವ್ಯವಸ್ಥೆ ಮಾಡಬಲ್ಲ. ಆಮೇಲೆ ಮುಂದೆ ಏನು ಮಾಡಬೇಕು ಎಂದು ನಾವು ಮಾತನಾಡಿ ನಿರ್ಧರಿಸೋಣ. ಸುಮ್ಮನೆ ಅಲ್ಲಿಂದ ಬಂದುಬಿಡು!’’

‘‘ನಾನು ಸುಮ್ಮನೆ ಹಾಗೆ ಬಂದುಬಿಡಲು ಸಾಧ್ಯವಿಲ್ಲ, ಅನು. ನಾನೀಗ ಗರ್ಭಿಣಿ.’’

‘‘ನನಗೆ ಇದನ್ನು ನಂಬುವುದಕ್ಕೆ ಆಗುತ್ತಿಲ್ಲ!’’ ಅನು ತನ್ನ ಅತಿಕ್ಷಿಪ್ರ ಅವಧಿಯ ಗರ್ಭವನ್ನು ನೆನೆದಳು.

‘‘ಅನು, ನನಗೆ ಒಬ್ಬಳೆ ಇರಲು ಭಯವಾಗುತ್ತಿದೆ. ನಿನಗೆ ನನ್ನನ್ನು ಬಂದು ನೋಡುವುದಕ್ಕೆ ಆಗುತ್ತದೆಯೆ?’’

‘‘ಅಲ್ಲಿಗೆ ಬರಲು ಆಗುವುದಿಲ್ಲ. ನನಗೆ ಅವನು ಅಷ್ಟೆಲ್ಲ ಮಾಡಿದ ಮೇಲೆ ಅವನ ಮನೆಗೆ ನಾನು ಬರುವುದಿಲ್ಲ. ನೀನು ಕಾರು ಓಡಿಸುತ್ತೀಯ?’’

‘‘ಇಲ್ಲ, ನನಗೆ ಓಡಿಸಲು ಬರುವುದಿಲ್ಲ. ಅವನೇ ನನ್ನನ್ನು ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಾನೆ.’’ ಅವಳನ್ನು ಏಕಾಂಗಿ ಮಾಡಲಾಗಿದೆ. ಅವಳಿಗೆ ಇಲ್ಲಿ ಯಾರೂ ಗೊತ್ತಿಲ್ಲ. ಅದರ ಜೊತೆಗೆ ಅನೂಳಿಗೆ ಹಿಂದೆ ಬಹಳವೆ ಸುಪರಿಚಿತವಾಗಿದ್ದ ಸಮಸ್ಯೆ ಈಗ ಮತ್ತೆ ಹೊಸ ರೂಪದಲ್ಲಿ ಎದುರಾಗಿದೆ. ಇದೆಲ್ಲ ನನ್ನ ಕೆಟ್ಟ ಕರ್ಮವೆ ಇರಬೇಕು. ಇದಕ್ಕೆ ಬೇರೆ ಯಾವುದೆ ವಿವರಣೆ ಇಲ್ಲ.

‘‘ರೂಪ...’’ ಆದರೆ ಅವಳು ಅಷ್ಟೊತ್ತಿಗೆ ಪೋನನ್ನು ಇಟ್ಟುಬಿಟ್ಟಿದಳು. ಅವಳು ಅವನ ಜೊತೆ ಇರಬೇಕು ಎಂದುಕೊಂಡರೆ ಅವಳಿಗೆ ನಾನು ಸಹಾಯ ಮಾಡಲು ಸಾಧ್ಯವಿಲ್ಲ. ನಾನು ಗರ್ಭಿಣಿ ಆಗಿದ್ದಾಗ ಅವನು ನನಗೆ ಏನು ಮಾಡಿದ್ದರಿಂದ ಏನಾಯಿತು ಎನ್ನುವುದರ ಅರಿವಾಗಿ ಅದರಿಂದ ಪಾಠ ಕಲಿತಿದ್ದಾನೆ ಮತ್ತು ಹಾಗಾಗಿ ರೂಪಾಳನ್ನು ಹೊಡೆಯುವುದನ್ನು ನಿಲ್ಲಿಸುತ್ತಾನೆ ಎಂದು ಆಶಿಸುತ್ತೇನೆ.

ಅವಳ ಉಲ್ಲಾಸಭರಿತವಾಗಿದ್ದ ಮನಸ್ಸು ಮುದುಡಿತು. ಅನು ತನ್ನ ಕಾರನ್ನು ಡ್ರೈವ್‌ವೇಯಿಂದ ಹೊರಗೆ ತೆಗೆದಳು. ಅವಳಿಗೆ ವಿಪರೀತ ಗೊಂದಲವಾಗಿ ತಾನು ತಾಳ್ಮೆಯ ಅಂಚು ಮುಟ್ಟಿದ ಭಾವನೆ ಬಂದಿತು. ಇಲ್ಲ, ನಾನು ಇದಕ್ಕೆ ಡ್ಯಾನ್‌ನನ್ನು ಎಳೆಯುವುದಿಲ್ಲ. ಈಗ ಅವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹವಿದೆ. ಹಾಗಾಗಿ, ಮೊದಲು ದೀಪಕ್‌, ಆಮೇಲೆ ಪವನ್‌ನ ತಾಯಿ, ಈಗ ರೂಪ, ಹೀಗೆ ಇವಳ ಜೀವನ ಎಂದೂ ಮುಗಿಯದ ಕತೆ ಎಂದು ಡ್ಯಾನ್‌ ಭಾವಿಸುವುದು ಅವಳಿಗೆ ಬೇಕಿರಲಿಲ್ಲ. ಆದರೆ ರೂಪ ಗರ್ಭಿಣಿಯಾಗಿದ್ದಾಳೆ. ಅವಳಿಗೆ ಬೇರೆಲ್ಲಿಗೂ ಹೋಗುವ ಅವಕಾಶ ಇದ್ದಂತಿಲ್ಲ. ಅನೂಳಿಗೆ ಏಕಕಾಲದಲ್ಲಿ ಅಸಂತೋಷ ಹಾಗು ಪಾಪಪ್ರಜ್ಞೆ ಮೂಡಿತು. ಇಲ್ಲ, ಬೇರೆ ಯಾರಿಗಾದರೂ ಏನಾದರೂ ಆಗಿದ್ದರೆ ಅದಕ್ಕೆ ಅವಳು ಜವಾಬ್ದಾರಳಲ್ಲ. ನನಗೆ ಸಹಾಯ ಮಾಡಲು ಆದರೆ ಸಹಾಯ ಮಾಡುತ್ತೇನೆ. ಆದರೆ ನಾನು ನನ್ನ ಜೀವನದೊಂದಿಗೂ ಮುಂದುವರಿಯಬೇಕು.

ಅವಳ ಸೆಲ್‌ ಪೋನು ಶಬ್ದ ಮಾಡಿತು. ಅದರ ತೆರೆಯ ಮೇಲೆ ಡ್ಯಾನ್‌ ಎಂದು ಕಾಣಿಸಿದ್ದು ಅವಳನ್ನು ಸ್ವಲ್ಪ ಮಟ್ಟಿಗೆ ಉಲ್ಲಸಿತಳನ್ನಾಗಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+