ರೂಪಾ ಮತ್ತು ಪವನ್ ತಲೆಗೆ ದೀಪಕ್ ಮರ್ಡರ್ ಕೇಸ್!?
‘‘ಹೌದು, ಅದು ಹೆಣ್ಣುಮಗು. ನಾವು ಪರೀಕ್ಷೆ ಮಾಡಿಸಿದೆವು.’’
‘‘ಹಾಗಿದ್ದರೆ, ಗಂಡಿನ ಬದಲು ಹೆಣ್ಣು ಆಗಿದ್ದಕ್ಕೆ ದೀಪಕ್‌ಗೆ ಏನನ್ನಿಸಿತು?’’
‘‘ನೀನು ಊಹಿಸಬಹುದಾದ ಹಾಗೆ ಅವನಿಗೆ ನಿರಾಶೆ ಆಯ್ತು. ಆದರೆ ಇವತ್ತಲ್ಲ ನಾಳೆ ನಮಗೆ ಗಂಡಾಗುತ್ತೆ ಎಂದು ಅವನು ಆಗ ಅಂದುಕೊಂಡ ಅನ್ನಿಸುತ್ತೆ ನನಗೆ’’
ಇನ್ನೂ ಚೆನ್ನಾಗಿ ಇದನ್ನು ಕೇಳುವುದು ಹೇಗೆ? ‘‘ಹಾಗಾದರೆ, ಹೆಣ್ಣು ಮಗು ಆಗುತ್ತೆ ಅಂತ ಅವನೇನೂ ನಿನಗೆ ಹೆದರಿಸಲಿಲ್ಲವೆ?’’
‘‘ಯಾವಾಗಲೂ ಹೆದರಿಸುತ್ತಿದ್ದ. ಹೊಟ್ಟೆಯಲ್ಲಿನ ಮಗುವಿನ ಬಗ್ಗೆಯೂ ಹೆದರಿಸುತ್ತಿದ್ದ. ನೀನು ಯಾಕೆ ಅದನ್ನೆಲ್ಲ ಕೇಳುತ್ತಿದ್ದೀಯ?’’
ವಾವ್- ಈಗ ಅವಳಿಗೆ ಸಂಶಯ ಬಂದಿದೆ. ನಾನು ಒಬ್ಬ ಅಯೋಗ್ಯ ಡಿಟೆಕ್ಟಿವ್ ಅಗುವುದಕ್ಕೆ ಲಾಯಕ್! ಈ ವಿಷಯ ಬದಲಾುಸುವುದೆ ಒಳ್ಳೆಯದು. ‘‘ಏನೇ ಇರಲಿ, ಮಗು ಅಮೇರಿಕದ ಪ್ರಜೆಯಾಗುತ್ತದೆ. ನಿನಗೆ ಗ್ರೀನ್‌ಕಾರ್ಡ್ ಇದೆ ಎಂದುಕೊಳ್ತೀನಿ?’’
‘‘ಇರಬಹುದು. ನನಗೆ ಅದು ಅಷ್ಟು ಚೆನ್ನಾಗಿ ಗೊತ್ತಿಲ್ಲ.’’
‘‘ದೀಪಕ್ ಅಮೇರಿಕಾದ ಪ್ರಜೆ ಆಗಿದ್ದ. ಹಾಗಾಗಿ ಅವನು ನಿನ್ನನ್ನು ಗ್ರೀನ್‌ಕಾರ್ಡ್ ಮೇಲೆ ಮಾತ್ರ ಇಲ್ಲಿಗೆ ಕರೆತರಲು ಸಾಧ್ಯ. ಆದ್ದರಿಂದ ನಿನಗೆ ಇಮ್ಮಿಗ್ರೇಷನ್ ವಿಚಾರವಾಗಿ ಏನೂ ತೊಂದರೆ ಆಗುವುದಿಲ್ಲ. ನಾವು ಇದರ ಬಗ್ಗೆ ಆಮೇಲೆ ಯೋಚನೆ ಮಾಡೋಣ. ಮುಖ್ಯವಾದ ವಿಷಯ ಏನೆಂದರೆ, ನೀನು ಇಲ್ಲಿಯೆ ಅಮೇರಿಕಾದಲ್ಲಿ ಇರಬಹುದು, ಹಾಗೂ ಕಾಲೇಜಿಗೂ ಸೇರಿಕೊಂಡು ನಿನ್ನ ಪಿಎಚ್‌ಡಿಯನ್ನು ಮುಗಿಸಿಕೊಳ್ಳಬಹುದು.’’
‘‘ನಾನು ನಿನ್ನ ಜೊತೆ ಬಂದು ಇರಬಹುದೆ, ಅನು?’’
‘‘ಇಲ್ಲ, ಆಗಲ್ಲ. ಡ್ಯಾನ್ ಅದಕ್ಕೆ ಒಪ್ಪುವುದಿಲ್ಲ. ನಾನು ಇಲ್ಲಿಗೆ ಬಂದಿದ್ದೆ ಎಂದು ಗೊತ್ತಾದರೂ ಸಾಕು ಅವನಿಗೆ ಬಹಳ ಕೋಪ ಬರುತ್ತದೆ.’’ ಒಳ್ಳೆಯ ಉದ್ದೇಶಕ್ಕೆ ಒಂದು ಸಣ್ಣ ಸುಳ್ಳು. ‘‘ಈಗ ನಾನು ಹೋಗಬೇಕು. ಆದರೆ ನಿನಗೆ ಸಹಾಯ ಮಾಡಲು ನಾನು ಯಾವಾಗಲು ಸಿದ್ಧ ಎಂದು ನೀನು ಚೆನ್ನಾಗಿ ತಿಳಿದುಕೊಳ್ಳಬೇಕು.’’
‘‘ಅನು, ನನಗೆ ಇಲ್ಲಿ ಒಬ್ಬಳೆ ಇರಲು ಹೆದರಿಕೆಯಾಗುತ್ತದೆ.’’
‘‘ರೂಪ, ನನಗೆ ಮೈಸೂರಿನಲ್ಲಿನ ನಮ್ಮ ಮನೆಯಿಂದ ಆಚೆ ಬರುವುದಕ್ಕೇ ಬಹಳ ಹೆದರಿಕೆಯಾಗುತ್ತಿತ್ತು. ನಾನು ಇಲ್ಲಿಗೆ ಬಂದಾಗ ಈ ದೇಶವನ್ನು ಬಹಳ ದ್ವೇಷಿಸಿದೆ. ದಿನ ಕಳೆದಂತೆ ನಾವು ಸ್ವತಂತ್ರರಾಗುತ್ತ ಹೋಗುತ್ತೇವೆ. ದೀಪಕ್‌ನ ತಂದೆತಾುಯರು ಇನ್ನು ಎರಡುಮೂರು ದಿನದಲ್ಲಿ ಇಲ್ಲಿಗೆ ಬಂದು ಬಿಡುತ್ತಾರೆ. ಇದನ್ನೆಲ್ಲ ನಿಭಾಯಿಸುವುದು ಹೇಗೆ ಎನ್ನುವುದನ್ನು ನೀನು ಬೇಗ ಕಲಿತುಕೊಳ್ಳುತ್ತೀಯ. ನನಗೆ ಗೊತ್ತು ಅದು ನಿನ್ನ ಕೈಯ್ಯಲ್ಲಿ ಆಗುತ್ತೆ ಎಂದು.’’
ಮೇಲೆದ್ದು, ರೂಪಾಳನ್ನು ಅಪ್ಪಿಕೊಂಡು, ತನ್ನ ಕೆನ್ನೆಯ ಮೇಲೆ ಇಳಿಯಲು ಆರಂಭಿಸಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತ ಅನು ಬಾಗಿಲತ್ತ ಹೆಜ್ಜೆ ಹಾಕಿದಳು. ‘‘ನೀನು ಇಷ್ಟರಲ್ಲೆ ತಾಯಿಯಾಗುತ್ತಿದ್ದೀಯ. ಆಗ ಬೇರೆಯವರು ನಿನಗಿಂತ ಹೆಚ್ಚು ಅಸಹಾಯಕರಾಗಿರುತ್ತಾರೆ ಹಾಗೂ ಆ ಮಗು ಸಂಪೂರ್ಣವಾಗಿ ನಿನ್ನನ್ನು ಅವಲಂಬಿಸಿರುತ್ತದೆ. ಹಾಗಾಗಿ ಧೈರ್ಯವಾಗಿರು.’’
ಅನು ಬೆಟ್ಟದಿಂದ ಕಾರು ಓಡಿಸಿಕೊಂಡು ಕೆಳಗೆ ಬಂದಳು. ತನ್ನ ಸೆಲ್‌ಫೋನಿಗೆ ಸಿಗ್ನಲ್ ಸಿಕ್ಕ ತಕ್ಷಣ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದಳು. ಈಗ ಅವಳು ವರದಿ ಒಪ್ಪಿಸಬೇಕಿದೆ!
ಅತ್ತ ಡ್ಯಾನ್ ಉತ್ತರಿಸಿದ. ‘‘ಒಂದು ನಿಮಿಷ ಇರು,’’ ಅವನು ಹೇಳಿದ. ‘‘ನಾನು ನನ್ನ ಕ್ಯೂಬಿಕಲ್‌ನಲ್ಲಿ ಕುಳಿತು ಮಾತನಾಡಲು ಆಗುವುದಿಲ್ಲ. ಆಚೆಗೆ ಹೋಗಿ ನಾನೆ ನಿನಗೆ ತಕ್ಷಣ ಕರೆ ಮಾಡುತ್ತೇನೆ.’’
ತಾನು ಪೋಲಿಸ್ ಠಾಣೆಯಲ್ಲಿ ನೋಡಿದ ಆ ವಿಶಾಲವಾದ ರೂಮಿನಲ್ಲಿ ಅವನು ನಡೆಯುತ್ತಿರುವುದನ್ನು ಅನು ಕಲ್ಪಿಸಿಕೊಂಡಳು. ಒಂದೆರಡು ನಿಮಿಷಗಳಲ್ಲಿಯೆ ಅವನು ವಾಪಸು ಕರೆ ಮಾಡಿದ.
‘‘ನನ್ನ ಕೆಲಸ ಆಯಿತು. ನಾನೀಗ ಬೆಟ್ಟದಿಂದ ಕೆಳಗೆ ಇಳಿದು ಬಂದಿದ್ದೇನೆ.’’
‘‘ಏನು ಗೊತ್ತಾಯಿತು?’’
‘‘ಅವಳಿಂದ ಏನಾದರು ವಿಷಯ ಗೊತ್ತಾಯಿತು ಅಂತೇನೂ ನನಗೆ ಅನ್ನಿಸುತ್ತಿಲ್ಲ... ಬಹಳಷ್ಟು ನಾನು ನಿರೀಕ್ಷಿಸಿದ್ದದ್ದೆ. ಈ ಹುಡುಗಿ ನಿಜವಾಗಲೂ ಕೊಲೆ ಮಾಡುವ ಪ್ಲಾನ್ ಮಾಡಿಲ್ಲ. ದೀಪಕ್‌ನ ತಾಯಿತಂದೆಗೆ ಕರೆ ಮಾಡಿ ವಿಷಯ ತಿಳಿಸುವುದನ್ನೂ ಅವಳಿಂದ ನಿಭಾಯಿಸಲು ಆಗಲಿಲ್ಲ. ಅವಳಿಗೆ ದಿಕ್ಕೇ ತೋಚದಂತಾಗಿದೆ.’’
‘‘ಅನು, ನೀನು ನನಗೆ ಹುಚ್ಚು ಹಿಡಿಸುತ್ತಿದ್ದೀಯ. ನಾನು ನಿನ್ನನ್ನು ಕೇಳು ಎಂದಿದ್ದ ವಿಷಯದ ಬಗ್ಗೆ ಅವಳು ಏನು ಹೇಳಿದಳು? ನಾನು ಪ್ರೀನಪ್ ಬಗ್ಗೆ ಹೇಳಿದ್ದು ನೆನಪಿತ್ತೆ ನಿನಗೆ?’’
‘‘ಹೌದು. ಆದರೆ ನಾನು ಅಂದುಕೊಂಡ ಹಾಗೆ ಅವಳಿಗೆ ಪ್ರೀನಪ್ ಅಂದರೆ ಏನು ಅಂತಲೇ ತಿಳಿದಿರಲಿಲ್ಲ. ಆಮೇಲೆ, ತಾನು ಯಾವಾಗಲು ದೀಪಕ್‌ಗೊಸ್ಕರ ಡ್ರೆಸ್ ಮಾಡಿಕೊಂಡು ಸಿದ್ಧವಾಗಿರುತ್ತಿದೆ ಎಂದು ಹೇಳಿದಳು. ಅವನು ಅದನ್ನು ಬಯಸುತ್ತಿದ್ದ.’’ ಅನೂಳ ಮಾತು ಕಹಿಯಾಯಿತು. ‘‘ನಾನು ಮೊದಲೆ ಹೇಳಿದ ಹಾಗೆ.’’
‘‘ನಾನು ಮೊದಲು ಹೇಳಿದ ಹಾಗೆಯೇ ಆಯಿತು ಎನ್ನುವುದರ ಬಗ್ಗೆ ಗಮನ ಬಿಟ್ಟು ಜೈಲಿಗೆ ಹೋಗದೆ ಇರುವುದು ಹೇಗೆ ಎನ್ನುವುದರ ಬಗ್ಗೆ ಗಮನ ಕೊಡು.’’
ಅನೂಳಿಗೆ ರೇಗುತ್ತಿತ್ತು. ‘‘ನಿನಗೆ ಇದನ್ನು ಹೇಳಬೇಕೊ ಬೇಡವೊ?’’
‘‘ಹೌದು, ಹೌದು. ಮಗುವಿನ ಬಗ್ಗೆ ಹೇಳು?’’
ಅವಳಿಗೆ ಬೇಸರವಾಯಿತು. ‘‘ಅದರ ಬಗ್ಗೆ ಬಹಳ ಕೇಳಲಾಗಲಿಲ್ಲ. ಅವನಿಗೆ ಅದು ಹೆಣ್ಣು ಮಗು ಎಂದು ತಿಳಿದಿತ್ತು ಹಾಗೂ ಅವನಿಗೆ ಅದರಿಂದ ನಿರಾಶೆ ಆಗಿತ್ತು ಅಂತ ಹೇಳಿದಳು. ಆ ವಿಚಾರವಾಗಿ ಅವಳನ್ನು ಯಾವಾಗಲೂ ಹೆದರಿಸುತ್ತಿದ್ದನಂತೆ. ಅವನು ಗರ್ಭಪಾತ ಮಾಡಿಸಬೇಕೆಂದುಕೊಂಡಿದ್ದನೆ ಎಂದು ಕೇಳಲು ನನ್ನಿಂದಾಗಲಿಲ್ಲ. ಹಾಗೆ ಕೇಳಿದ್ದರೆ ಅವಳಿಗೆ ನನ್ನ ಮಾತು ಯಾಕೊ ಸಂಶಯಾಸ್ಪದವಾಗಿದೆ ಎನ್ನಿಸುತ್ತಿತ್ತು. ದೀಪಕ್ ಅದನ್ನು ಜನರ ಮುಂದೆ ಹೇಳಿದ್ದರ ಬಗ್ಗೆ ನನಗೆ ನಿಜವಾಗಲೂ ಆಶ್ಚರ್ಯವಾಗುತ್ತಿದೆ. ಅವನು ಕುಡಿದಿದ್ದರೂ ಅದನ್ನು ಹೇಗೆ ತಾನೆ ಹೇಳಿದ?’’
‘‘ಹೇಳಿದ್ದಾನೆ. ಲ್ಯಾಬ್ ರಿಪೋರ್ಟ್ ಬಂದಿದೆ. ಅವನ ರಕ್ತದಲ್ಲಿ 0.05 ರಷ್ಟು ಆಲ್ಕೋಹಾಲ್ ಪ್ರಮಾಣ ಇತ್ತು ಎಂದು ಅದರಲ್ಲಿದೆ. ಅದು ಇರಬೇಕಾದ ಗರಿಷ್ಠ ಮಿತಿಗಿಂತ ಜಾಸ್ತಿ. ಅಷ್ಟು ಇರುವಾಗ ಅವನು ಸ್ಪಷ್ಟವಾಗಿ ಗಾಡಿಯನ್ನು ಓಡಿಸಲೆ ಬಾರದಿತ್ತು. ಅದರ ಜೊತೆಗೆ ಇನ್ನೊಂದಿದೆ.’’ ಡ್ಯಾನ್ ಗುಟ್ಟು ಹೇಳುವವನಂತೆ ತನ್ನ ಸ್ವರವನ್ನು ತಗ್ಗಿಸಿದ. ‘‘ಟೈರಿನ ಮಾರ್ಕುಗಳು ಕಾರು ರಿವರ್ಸ್‌ನಲ್ಲಿ ಹೋಗಿ ರಸ್ತೆಯಿಂದ ಉರುಳಿದಂತೆ ಕಾಣಿಸುತ್ತಿವೆ.’’
ಅನೂಗೆ ಅದನ್ನು ನಂಬಲಾಗಲಿಲ್ಲ. ‘‘ಅದು ಹೇಗೆ?’’
‘‘ನನಗೆ ಗೊತ್ತಿಲ್ಲ. ಆದರೆ ಇಲ್ಲಿ ನಮ್ಮವರು ಏನು ಅಂದುಕೊಳ್ಳುತ್ತಿದ್ದಾರೆಂದರೆ, ಹೇಗೋ ನೀನು ಮತ್ತು ರೂಪ ಅವನು ಹೀಗೆ ಹಿಂದೆ ಹೋಗುವ ಹಾಗೆ ಮಾಡಿದ್ದೀರಿ ಎಂದು. ನಿಮ್ಮಲ್ಲಿ ಯಾರೊ ಒಬ್ಬರು ಅಲ್ಲಿ ಕಾಯುತ್ತಿದ್ದು, ಅವನು ಬಂದು ನಿಲ್ಲಿಸಿದಾಗ ಅವನ ತಲೆಗೆ ಹೊಡೆಡಿದ್ದೀರ. ಅದಾದ ಮೇಲೆ ಅವನನ್ನು ಮತ್ತೆ ಕಾರಿಗೆ ಹಾಕಿ, ಗಾಡಿಯನ್ನು ನ್ಯೂಟ್ರಲ್ ಗೇರ್‌ಗೆ ಹಾಕಿ, ಅದು ಹಿಂದಕ್ಕೆ ಚಲಿಸಿ ಉರುಳಿಬಿದ್ದಿದೆ ಎಂದು ಅಂದುಕೊಳ್ಳುತ್ತಿದ್ದಾರೆ.’’
ಅನೂಳಿಗೆ ತನ್ನ ಮೈಯಲ್ಲಿನ ರಕ್ತ ಹೆಪ್ಪುಗಟ್ಟಿದಂತಾಯಿತು. ‘‘ನೀನು ಇದನ್ನು ಗಂಭೀರವಾಗಿ ಹೇಳುತ್ತಿಲ್ಲ ಅಲ್ಲವೆ, ಡ್ಯಾನ್?’’
‘‘ಹೇ, ಇದು ನನ್ನ ಥಿಯರಿ ಅಲ್ಲ! ಈ ಕೇಸು ಹೇಗೇಗೆ ಹೋಗಬಹುದು ಎನ್ನುವುದನ್ನಷ್ಟೆ ನಾನು ನಿನಗೆ ಹೇಳುತ್ತಿರುವುದು. ಅವರೇನಾದರೂ ನಿನ್ನ ಕಾರನ್ನು ಪರೀಕ್ಷಿಸಲು ಸರ್ಚ್ ವಾರಂಟ್‌ನೊಂದಿಗೆ ಬಂದಾಗ ಆಶ್ಚರ್ಯ ಪಡಬೇಡ. ಅವರು ಈಗಾಗಲೆ ಅದಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ನನಗೆ ಗೊತ್ತು. ಹಾಗೆಯೆ ನಿನ್ನ ಮನೆ, ಸೆಲ್, ಕಛೇರಿಯ ಫೋನ್ ದಾಖಲೆಗಳಿಗೂ ಸಹ ಮನವಿ ಸಲ್ಲಿಸಿದ್ದಾರೆ. ಓಹ್, ಇನ್ನೊಂದು ಮರೆತಿದ್ದೆ.’’
‘‘ಏನು?’’ ಅನು ಬಹಳ ಜಾಗರೂಕತೆಯಿಂದ ಕೇಳಿದಳು.
‘‘ನಾನು ಇದಕ್ಕೆ ಮುಂಚೆ ನಿನಗೆ ಕರೆ ಮಾಡಿದ್ದು ನೀನು ಎಲ್ಲಿದ್ದೀಯ ಎಂದು ಪರೀಕ್ಷಿಸಲು ಅಲ್ಲ. ನಿನಗೆ ಏನೋ ಹೇಳಬೇಕಿತ್ತು, ಅದಕ್ಕೆ ಕರೆ ಮಾಡಿದ್ದೆ.’’
‘‘ಓಹ್, ನಿಮ್ಮವರು ನನ್ನ ಮೇಲೆ ಕಣ್ಣಿಟ್ಟಿದ್ದಾರೆ, ಹಿಂಬಾಲಿಸುತ್ತಿದ್ದಾರೆ ಎಂದುಕೊಂಡಿದ್ದೆ.’’
‘‘ಇನ್ನೂ ಇಲ್ಲ,’’ ಡ್ಯಾನ್ ವ್ಯಂಗ್ಯವಾಗಿ ಹೇಳಿದ. ‘‘ಅವರು ಪವನ್‌ನನ್ನು ಹುಡುಕಲು ಆರಂಭಿಸಿದ್ದಾರೆ. ಹೇಳಬೇಕೆಂದರೆ ಅದು ನಿನಗೆ ನಿಜವಾಗಲೂ ಒಳ್ಳೆಯ ಸುದ್ದಿ.’’
ಅದನ್ನು ಕೇಳಿ ಅವಳ ಮುಖ ಬಿಳಿಚಿಕೊಂಡಿತು. ‘‘ಪವನ್ ಎಲ್ಲಿದ್ದಾನೆ ಎಂದು ಅವರಿಗೆ ಗೊತ್ತೆ?’’ ಜಾಗರೂಕತೆಯಿಂದ ಕೇಳಿದಳು. ‘‘ಹಾಗೂ ಅದು ಹೇಗೆ ನನಗೆ ಒಳ್ಳೆಯ ಸುದ್ದಿ?’’
‘‘ಸಾರಿ, ಇದನ್ನು ನಾನು ಮನೆಗೆ ಬಂದ ಮೇಲೆ ಹೇಳಬೇಕಿತ್ತು. ನನ್ನ ಮಾತಿನ ಅರ್ಥ ಏನೆಂದರೆ, ಅವರೀಗ ನಿನ್ನನ್ನು ಮತ್ತು ರೂಪಾಳನ್ನಷ್ಟೇ ಅಲ್ಲದೆ ಬೇರೆ ಸಾಧ್ಯತೆಗಳ ಬಗ್ಗೆಯೂ ಯೋಚಿಸುತ್ತಿದಾರೆ ಎಂದು. ನಾನೀಗ ಹೋಗಬೇಕು, ಹನಿ. ರಾತ್ರಿಗೆ ಮಾತನಾಡೋಣ.’’
ಅನು ಫೋನ್ ಕಟ್ ಮಾಡಿ ಅಲ್ಲಿಯೆ ಕುಳಿತಳು. ಪೋಲಿಸರು ಅವಳಿಗೆ ಮತ್ತು ರೂಪಾಳಿಗೆ ಬದಲಾಗಿ ಪವನ್‌ನ ಮೇಲೆ ಅಪವಾದ ಹೊರೆಸಲು ಯತ್ನಿಸುತ್ತಿರುವುದಕ್ಕೆ ಅವಳು ಸಂತೋಷ ಪಡಬೇಕಿತ್ತೆ? ಸಂದರ್ಭದ ಗಂಭೀರತೆ ಅವಳನ್ನು ಅಪ್ಪಳಿಸಿತು. ಕಾರನ್ನು ಸ್ಟಾರ್ಟ್ ಮಾಡಲು ಇಗ್ನಿಷನ್ ತಿರುಗಿಸುತ್ತಿದ್ದಾಗ ತನ್ನ ಕೈಗಳು ನಡುಗುತ್ತಿರುವುದನ್ನು ಗಮನಿಸಿದಳು. ದುಃಸ್ವಪ್ನವೊಂದು ನಿಜವಾಗಿಬಿಡುವ ಹಾಗೆ ಕಾಣಿಸುತ್ತಿದೆ. ಈಗ ಪವನ್ ಎಲ್ಲಿದ್ದಾನೆ?












Click it and Unblock the Notifications