ರೂಪಾ, ಅನು ಪಾಲಿಗಿದು ಸಮಾಧಾನದ ಸುದ್ದಿ!
ಇಂಗ್ಲಿಷ್ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ
[email protected]
‘‘ಹಾಗಾದರೆ ನಾನು ಬಹುಶಃ ಎಂದು ಹೇಳುತ್ತೇನೆ. ನಿನಗೆ ರಜಾ ಸಿಗುತ್ತದೆಯೆ?’’
‘‘ಹೌದು, ಸಿಗಬಹುದು ಎಂದುಕೊಂಡಿದ್ದೇನೆ. ಕೆಲವು ದಿನಗಳಿಗೋಸ್ಕರ ಕ್ಯಾಲ್ಜಾರ್ ಬಹುಶಃ ಒಪ್ಪಿಗೆ ಕೊಡಬಹುದು. ಅಂದ ಹಾಗೆ, ಇದನ್ನು ಕೇಳಿ ನಿನಗೆ ಸಂತೋಷವಾಗಬಹುದು-ಈಗ ಆ ಕೇಸನ್ನು ಮುಚ್ಚಿಬಿಟ್ಟಿದ್ದಾರೆ. ಅದು ಮುಗಿಯಿತು.’’
‘‘ಮುಗಿಯಿತೆ? ಹೇಗೆ?’’
‘‘ಶವಪರೀಕ್ಷೆಯ ವರದಿ ಬಂದಿದೆ. ಕಾರು ಮೇಲಿಂದ ಉರುಳಿದಾಗ ತಲೆಗೆ ಪೆಟ್ಟು ಬಿದ್ದಿರುವುದರಿಂದಾಗಿ ದೀಪಕ್ ಸತ್ತಿದ್ದಾನೆ. ಅದರ ಜೊತೆಗೆ ಆ ಟೈರ್ ರಾಡಿನ ಮೇಲೆ ಯಾವುದೆ ರಕ್ತ ಅಥವ ಬೇರೆ ಸಾಕ್ಷಿ ಸಿಗದಿದ್ದರಿಂದ ಯಾವುದಕ್ಕೂ ಸಾಕಷ್ಟು ಆಧಾರಗಳಿಲ್ಲ ಎಂದು ಕೇಸನ್ನು ಮುಚ್ಚಿದರು. ಆ ಕೇಸಿನ ಮೇಲೆ ಕೆಲಸ ಮಾಡುತ್ತಿದ್ದ ಡಿಟೆಕ್ಟಿವ್‌ಗಳನ್ನು ಕ್ಯಾಲ್ಜಾರ್ ವಾಪಸು ಕರೆಸಿಕೊಂಡಿದ್ದಾನೆ. ದೀಪಕ್‌ನ ಮರಣ ಅಪಘಾತದಿಂದಾಗಿದೆ ಎಂದು ತೀರ್ಮಾನಿಸಲಾಗಿದೆ.’’
‘‘ಓ, ಎಷ್ಟೊಂದು ನೆಮ್ಮದಿ ಕೊಡುವಂತಹ ವಿಷಯ ಹೇಳಿದೆ!’’ ಇನ್ನು ಮೇಲೆ ಕೊಲೆ ಕೇಸೊಂದರಲ್ಲಿ ಶಂಕಿತನಾಗಿರದ ಪವನ್‌ನೆಡೆಗೆ ಅನು ನೋಡಿದಳು! ರೂಪ ಸಹ ಶಂಕಿತೆ ಅಲ್ಲ, ಹಾಗು ನಾನೂ ಅಲ್ಲ. ಅಲ್ಲದೆ, ದೀಪಕ್ ಯಾವುದೆ ದೊಡ್ಡ ಸೆಲೆಬ್ರಿಟಿ ಅಲ್ಲದೆ ಇರುವುದರಿಂದ ಮತ್ತೆ ಅವರು ಈ ಕೇಸಿನ ಹಿಂದೆ ಬೀಳುವುದಿಲ್ಲ. ಅವನು ಅಷ್ಟೇನೂ ಪ್ರಾಮುಖ್ಯವಿರದ ಒಬ್ಬ ಶ್ರೀಮಂತ ವಲಸಿಗ ಅಷ್ಟೆ. ಈಗ ಅವಳಿಗೆ ಬೇಕಾಗಿದ್ದದ್ದು ಏನೆಂದರೆ ಡ್ಯಾನ್ ಅಲ್ಲಿ ಅವಳ ಜೊತೆ ಇರುವುದು ಮಾತ್ರ.
‘‘ಸರಿ, ಡ್ಯಾನ್, ನನ್ನ ಭಾರತೀಯ ಟ್ರಾವೆಲ್ ಏಜೆಂಟ್‌ನ ಫೋನ್ ಸಂಖ್ಯೆ ಬರೆದುಕೊ. ಅವರಿಗೆ ಕರೆ ಮಾಡು. ಆಮೇಲೆ ಅವರೆ ಎಲ್ಲಾ ವ್ಯವಸ್ಥೆ ಮಾಡುತ್ತಾರೆ. ನಿನ್ನ ವೀಸಾಗೂ ಏರ್ಪಾಟು ಮಾಡುತ್ತಾರೆ. ಒಂದೆರಡು ದಿನ ಆದ ಮೇಲೆ ನನಗೆ ಮೈಸೂರಿಗೆ ಕರೆ ಮಾಡು. ನಾನು ನಮ್ಮ ಮನೆಯವರ ಅಲ್ಲಿನ ಸಂಖ್ಯೆಯನ್ನು ಕೊಡುತ್ತೇನೆ’.’’
‘‘ಈಗ ಎಲ್ಲಿ ಇದ್ದೀಯ ನೀನು?’’
ಅವನು ಬನಾರಸ್‌ನ ಬಗ್ಗೆ ತಿಳಿದುಕೊಳ್ಳುವುದು ಬೇಕಾಗಿಲ್ಲ. ‘‘ನನಗೆ ಸರಿಯಾಗಿ ಕೇಳಿಸುತ್ತಿಲ್ಲ. ನಿನಗೆ ನಿನ್ನ ವಿಮಾನದ ವಿವರಗಳು ಗೊತ್ತಾದ ತಕ್ಷಣ ನನಗೆ ಕರೆಮಾಡು. ನಾನು ನಿನ್ನನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಭೇಟಿಯಾಗುತ್ತೇನೆ.’’
‘‘ಬೈ, ಚಿನ್ನ. ನಾನು ನಿನ್ನನ್ನು ಪ್ರೀತಿಸುತ್ತೇನೆ.’’
‘‘ನಿನಗೂ ಸಹ.’’ ಭಾರತದಲ್ಲಿ ನಾವು ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳುವುದಿಲ್ಲ. ಅದರಲ್ಲೂ ಬಯಲಿನಲ್ಲಿರುವ ಪೇ-ಫೋನಿನಿಂದಂತೂ ಇಲ್ಲವೆ ಇಲ್ಲ. ಆದರೆ ಅದನ್ನು ಎಲ್ಲರೂ ಕೇಳಿಸಿಕೊಂಡರೂ ಅದಕ್ಕೆ ಯಾಕೆ ಅವಳು ಕೇರ್ ಮಾಡಬೇಕು? ನಾನು ಅವನನ್ನು ಪ್ರೀತಿಸುತ್ತೇನೆ! ಅದನ್ನು ಹಿಂಜರಿಯದೆ ಮುಕ್ತವಾಗಿ ಹೇಳಲು ನಾನು ಶ್ರಮಿಸಬೇಕು.
ಮುಕ್ತಾಯಕ್ಕೆ ಮುನ್ನ
ರೂಪಾಳ ಹೆರಿಗೆ ಮುಗಿಯುವವರೆಗೂ ಅನು ಅವಳ ಪಕ್ಕದಲ್ಲೆ ಇದ್ದಳು. ಹೆರಿಗೆ ಬೇನೆಯ ಸಮಯದಲ್ಲಿ ಅನು ಅವಳ ಕಿವಿಯಲ್ಲಿ ಪಿಸುಗುಟ್ಟಿದಳು. ‘‘ನಿನಗಾಗಿ ಹಾಗು ನಿನ್ನ ಮಗಳಿಗಾಗಿ ಪವನ್ ಕಾಯುತ್ತ ಇದ್ದಾನೆ. ಅವನು ಅದ್ಭುತವಾದ ವ್ಯಕ್ತಿ. ನಿನ್ನನ್ನು ಅವನು ಪ್ರೀತಿಸುತ್ತಾನೆ.’’ ರೂಪಾಳ ಮುಖದಲ್ಲಿ ನೆಮ್ಮದಿಯ ಭಾವ ಮಾತ್ರವಲ್ಲ, ಸಂತೋಷದ ನಗುವೂ ಕಂಡಿತು.
ಅನೂಳ ಸಹಾಯದಿಂದ ಸಮ್ಮಿಟ್ ರಸ್ತೆಯಲ್ಲಿನ ಆ ಮನೆ ಬೇಗನೆ ಮಾರಾಟವಾಯಿತು. ರೂಪ ತನ್ನ ಹಸುಗೂಸಿನೊಂದಿಗೆ ಸ್ಯಾನ್ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನ ಹತ್ತುತ್ತಿರುವಾಗ ಅನೂಳಿಗೆ ಕೈಯಾಡಿಸಿ ಶುಭವಿದಾಯ ಕೋರಿದಳು.
ಇನ್ನೂ ಬೆಳಕು ಹರಿದಿರದ ಮುಂಜಾವಿನಲ್ಲಿ ಲುಫ್ತಾನ್ಸಾ 354 ವಿಮಾನ ಇಳಿಯುವುದನ್ನೆ ಎದುರುನೋಡುತ್ತ, ಪವನ್ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತಾಳ್ಮೆಯಿಂದ ಕಾಯುತ್ತ ನಿಂತಿದ್ದನು.
(ಧಾರಾವಾಹಿ ಮುಗಿಯಿತು)












Click it and Unblock the Notifications