ಅಮ್ಮನಾಗುವ ಖುಷಿ.. ಕೆಲ ಕ್ಷಣಗಳಲ್ಲಿಯೇ ಆಘಾತ!

ಅವಳು ಹೌದೆಂದು ತಲೆಯಾಡಿಸಿದಳು. ಡ್ಯಾನ್‌ ಅವಳ ಪಕ್ಕಕ್ಕೆ ಸರಿದು ಕುಳಿತ. ಅವನು ತನ್ನ ಸೆಲ್‌ ಪೋನಿನಲ್ಲಿ ಯಾರಿಗೊ ಮನೆಯ ವಿಳಾಸ ಮತ್ತು ವಿವರಗಳನ್ನು ಕೊಡುತ್ತಿದ್ದ. ''ಹಾಗೆ ಇರು, ಅನು. ಆ್ಯಂಬ್ಯುಲನ್ಸ್‌ ಬರುತ್ತಿದೆ."" ಅವಳ ಮುಖದ ಮೇಲೆ ಅಡ್ಡ ಬಂದಿದ್ದ ನೀಳ ಕಪ್ಪು ಕೂದಲನ್ನು ಅವನು ನಯವಾಗಿ ಹಿಂದೆ ಸರಿಸಿದ. ''ನಿನಗೇನೂ ಆಗುವುದಿಲ್ಲ, ಅನು. ಎಲ್ಲಾ ಸರಿಹೋಗುತ್ತೆ. ಶಾಂತವಾಗಿರು.""

ನಾನು ಸಾಯುತ್ತಿದ್ದೇನೆಯೆ? ತೀವ್ರವಾದ, ಹೊಟ್ಟೆಯಲ್ಲಿ ತಿವಿಯುತ್ತಿರುವಂತಹ ನೋವಿನಿಂದ ನೆಟ್ಟಗೆ ಕೂರಲಾಗದೆ ಅವಳು ಅವನಿಗೆ ಒರಗಿಕೊಂಡು ಅಲ್ಲಿಯೇ ಕುಳಿತಳು. ರಕ್ತದ ದೃಶ್ಯ ಅವಳನ್ನು ಅಸ್ವಸ್ಥಳನ್ನಾಗಿ ಮಾಡಿಬಿಟ್ಟಿತ್ತು. ಚರ್ಮವೆಲ್ಲ ಅಂಟಂಟಾದಂತೆ ಅನ್ನಿಸಿತು. ಅವಳು ತಲೆ ಎತ್ತಿ ಕಣ್ಣುಬಿಟ್ಟರೆ ಸುತ್ತಮುತ್ತ ಹೊಳೆಯುತ್ತಿರುವ ಬೂದಿ ಬಣ್ಣದ ಮಂಜು ಕಾಣಿಸುತ್ತಿತ್ತು. ದೂರದಲ್ಲಿ ಸೈರನ್‌ ಶಬ್ಧ ಕೇಳಿಸಿತು. ಅವಳ ಮನೆಯ ಬಳಿಗೆ ಬರುತ್ತಿರುವ ಆ್ಯಂಬ್ಯುಲನ್ಸ್‌ ಮೇಲೆ ಮಿಣುಕುತ್ತಿದ್ದ ದೀಪಗಳನ್ನು ನೋಡಿದಳು.

ಅರೆವೈದ್ಯರು ಅವಳನ್ನು ಸ್ಟ್ರೆಚರಿನ ಮೇಲೆ ಎತ್ತಿ ಮಲಗಿಸಿ ಅವಳ ಮುಖಕ್ಕೆ ಅಮ್ಲಜನಕದ ಮಾಸ್ಕ್‌ ಅನ್ನು ಹಾಕಿದರು. ಡ್ಯಾನ್‌ ಆ್ಯಂಬ್ಯುಲನ್ಸ್‌ನ ಡ್ರೈವರ್‌ ಜೊತೆ ಮಾತನಾಡುತ್ತಿದ. ''ನಾನು ನನ್ನ ಕಾರಿನಲ್ಲಿ ನಿಮ್ಮನ್ನು ಹಿಂಬಾಲಿಸುತ್ತೇನೆ.""

ಅನು ಅವನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ''ಡ್ಯಾನ್‌, ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡ. ನನಗೆ ಈ ದೇಶದಲ್ಲಿ ನನ್ನ ಕುಟುಂಬದವರೆನ್ನುವವರು ಯಾರೂ ಇಲ್ಲ.""

''ನಾನು ನನ್ನ ಕಾರಿನಲ್ಲಿ ನಿನ್ನ ಹಿಂದೆಯೆ ಇರುತ್ತೇನೆ."" ಒಲ್ಲದ ಮನಸ್ಸಿನಿಂದ ಅವನು ಅವಳು ಗಟ್ಟಿಯಾಗಿ ಹಿಡಿದಿದ್ದ ತನ್ನ ಕೈಯನ್ನು ಬಿಡಿಸಿಕೊಂಡ.

ಸುತ್ತ ಏನು ಆಗುತ್ತಿದ್ದೆ ಎಂದು ಅನೂಗೆ ತಕ್ಕಮಟ್ಟಿಗೆ ಗೊತ್ತಾಗುತ್ತಿತ್ತು. ಎಮರ್ಜೆನ್ಸಿ ಕೋಣೆಯಲ್ಲಿದ್ದ ಜನ ಅವಳಿಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಹಾಗಾಗಿ ಅವರಿಗೆ ತಕ್ಷಣ ಸಮಸ್ಯೆ ಏನೆಂದು ಗೊತ್ತಾಯಿತು.

''ಶ್ರೀಮತಿ ಸತ್ಯನ್‌. ನೀವು ಗರ್ಭಿಣಿಯಾಗಿದ್ದೀರ. ನಾವು ನಿಮ್ಮನ್ನು ಹುಷಾರಾಗಿ ನೋಡಿಕೊಳ್ಳುತ್ತೇವೆ.""

ಅವಳ ಮನಸ್ಸಿನಲ್ಲಿ ಆ ವಿಷಯ ಎಂದೂ ಸುಳಿದಿರಲಿಲ್ಲ. ಅದನ್ನು ಕೇಳಿ ಆಘಾತವಾಗಿ ಅವಳು ಸುಮ್ಮನೆ ಮಲಗಿದ್ದಳು. ವೈದ್ಯರು ಅವರ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಮುಂದುವರಿಸುತ್ತಲೆ ಇದ್ದರು. ಇದೆಲ್ಲ ಹೇಗಾಯಿತು? ಯಾವಾಗಾಯಿತು?

ಅವಳು ಭಾರತದಲ್ಲಿ ಹೆಂಗಸರು ತಮ್ಮ ಮಕ್ಕಳನ್ನು ಸಾಲುಸಾಲಾಗಿ ಹೆರುವುದನ್ನು ನೋಡಿದ್ದು ಬಿಟ್ಟರೆ ಗರ್ಭಿಣಿ ಅಥವ ತಾಯ್ತನದ ಬಗ್ಗೆ ತಿಳಿದುಕೊಳ್ಳಲು ಇದಕ್ಕೆ ಮುಂಚೆ ಎಂದೂ ಸಮಯ ತೆಗೆದುಕೊಂಡಿರಲಿಲ್ಲ. ಅಲ್ಲಿ ಜನರಿಗೆ ಮದುವೆಯಾದ ವರ್ಷಕ್ಕೆಲ್ಲ ಮಕ್ಕಳಾಗಿರುತ್ತದೆ. ಅದರ ಬಗ್ಗೆ ತಿಳಿದುಕೊಳ್ಳಲು ಅದರಲ್ಲಿ ಅಷ್ಟೇನೂ ವಿಶೇಷವಾದ ವಿಜ್ಞಾನ ಇದ್ದಂತಿರಲಿಲ್ಲ. ನಾನು ಅದು ಹೇಗೆ ಇಷ್ಟೊಂದು ಮೂರ್ಖಳಾದೆ? ನನಗೆ ಇಂಜಿನಿಯರ್‌ ಆಗಿರುವುದು ಬಿಟ್ಟು ಬೇರೇನೂ ಗೊತ್ತಿಲ್ಲ.

ವೈದ್ಯರು ಅವಳಿಗೆ ಹಲವಾರು ವಿಷಯಗಳನ್ನು ವಿವರಿಸಲು ಪ್ರಯತ್ನಿಸುತ್ತಿದರು. ಆದರೆ ಅವಳು ಯಾಂತ್ರಿಕವಾಗಿ ತಲೆಯಾಡಿಸುತ್ತ ತನ್ನ ಒಪ್ಪಿಗೆಯನ್ನು ಸೂಚಿಸುತ್ತಿದ್ದಳು. ಅವಳಿಗೆ ಆಸ್ಪತ್ರೆಗಳೆಂದರೆ ಆಗುತ್ತಿರಲಿಲ್ಲ. ಡ್ಯಾನ್‌ ಹೊರಗೆ ಕಾಯುತ್ತಿದ್ದಾನಾ? ಅವಳಿಗೆ ಇದೆಲ್ಲ ಆದಷ್ಟು ಬೇಗ ಮುಗಿದು ಮನೆಗೆ ಹೋದರೆ ಸಾಕಿತ್ತು.

ಯುಗಗಳೇ ಆಗಿಬಿಟ್ಟಿತು ಎನ್ನಿಸಿದಷ್ಟು ಹೊತ್ತಾದ ಮೇಲೆ ವೈದ್ಯರು ಕೆಲವು ಅಲ್ಟ್ರಾಸೌಂಡ್‌ ಚಿತ್ರಗಳ ಜೊತೆ ಹಿಂದಿರುಗಿದರು.

''ಶ್ರೀಮತಿ ಸತ್ಯನ್‌, ಕೆಲವು ಸಲ ಗರ್ಭಿಣಿಯ ಕಿಬ್ಬೊಟ್ಟೆಯ ಮೇಲೆ ಬಿದ್ದ ಏಟುಗಳಿಂದಾಗಿ ಅವಳ ಹೊಟ್ಟೆಯಲ್ಲಿನ ಭ್ರೂಣಕ್ಕೆ ಅಪಾಯವಾಗಬಹುದು. ಒಳ್ಳೆಯ ಸುದ್ದಿ ಏನೆಂದರೆ.... ನಿಮ್ಮ ಗರ್ಭಕೋಶ ಮತ್ತು ಅದರ ಸುತ್ತಮುತ್ತಲ ಅಂಗಗಳು ಸರಿಯಾಗಿರುವ ಹಾಗೆ ಕಾಣುತ್ತದೆ. ಆದರೆ ನಿಮ್ಮ ಗರ್ಭಾವಸ್ಥೆ ಇನ್ನೂ ಮೊದಲ ಹಂತದಲ್ಲಿ ಇರುವುದರಿಂದಾಗಿ ಏನನ್ನೂ ಖಚಿತವಾಗಿ ಹೇಳುವುದು ಕಷ್ಟ. ನಿಮ್ಮ ಯೋನಿನಾಳದಲ್ಲಾದ ರಕ್ತಸ್ರಾವ ನಿಮ್ಮ ಕಿಬ್ಬೊಟ್ಟೆಗೆ ಆದ ಆಘಾತದಿಂದಾಗಿ ಆದದ್ದು. ನಾವು ಅದಕ್ಕೆ ಚಿಕಿತ್ಸೆ ಕೊಡುತ್ತೇವೆ. ಹೊಟ್ಟೆಯಲ್ಲಿನ ಭ್ರೂಣವನ್ನು ಕಾಪಾಡಲು ನಮ್ಮ ಕೈಲಾದದ್ದನ್ನೆಲ್ಲ ಮಾಡುತ್ತೇವೆ, ಆದರೆ ಅದಕ್ಕೆ ಇನ್ನೂ ಕೆಲವೊಂದು ಪರೀಕ್ಷೆಗಳನ್ನು ಮಾಡಬೇಕು.""

ಅರ್ಥವಾಗದ ಶಬ್ದಗಳನ್ನೆಲ್ಲ ನನ್ನ ಮೇಲೆ ಎಸೆಯುತ್ತ ಇವರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ?

ಮುಂದೆ ಓದಿ »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+